ಸಿಕ್ರೇಟ್ ಆಗಿ ಚಿನ್ನದ ಭೇಟೆಯಾಡುತ್ತಿದೆ ಡ್ರ್ಯಾಗನ್ ದೇಶ : 1,000 ಟನ್ ಬಂಗಾರ ಖರೀದಿಸಿದ್ದೇಕೆ ಗೊತ್ತೆ ಚೀನಾ..?
ಚೀನಾ ಕೇವಲ 8 ತಿಂಗಳಲ್ಲಿ ಬರೋಬ್ಬರಿ 1,000 ಟನ್ಗೂ ಹೆಚ್ಚು ಚಿನ್ನವನ್ನು ಗುಳುಂ ಮಾಡಿದೆ. ಅಮೆರಿಕದ ಬಾಂಡ್ಗಳನ್ನು ಕಸದಂತೆ ಬಿಸಾಕಿ ಡ್ರ್ಯಾಗನ್ ದೇಶ ನಡೆಸಿರುವ ಈ ಮಹಾನ್ ಸ್ವರ್ಣ ಬೇಟೆಯ ಅಸಲಿ ರಹಸ್ಯವೇನು.. ದಸರಾ-ದೀಪಾವಳಿಯ ಹತ್ತಿರ ಬರುತ್ತಿರುವ ಹೊತ್ತಿನಲ್ಲಿ ಇದು ಭಾರತೀಯ ಗ್ರಾಹಕರ ಮೇಲೆ ಎಷ್ಟು ಪ್ರಭಾವ ಬೀರುತ್ತೆ..? ಶಾಕಿಂಗ್ ವರದಿ ಇಲ್ಲಿದೆ..
China Gold Rush : ಒಂದೆಡೆ ಜಾಗತಿಕ ಮಾರುಕಟ್ಟೆಯಲ್ಲಿ ಅಮೆರಿಕಾದ ಡಾಲರ್ನ ದರ್ಪ ಮತ್ತು ಬಡ್ಡಿದರದ ಬಿಸಿ.. ಮತ್ತೊಂದೆಡೆ ಸ್ವದೇಶದಲ್ಲೇ ರಿಯಲ್ ಎಸ್ಟೇಟ್ ಕುಸಿತ, ಷೇರು ಮಾರುಕಟ್ಟೆ ಪಾತಾಳಕ್ಕೆ ಕುಸಿದು ಆರ್ಥಿಕ ಮಂದಗತಿಯಲ್ಲಿ ಕಂಗಾಲಾಗಿರುವ ಡ್ರ್ಯಾಗನ್ ದೇಶ.. ಆದರೆ, ಜಗತ್ತಿಗೆ ಗೊತ್ತಿಲ್ಲದಂತೆ ತೆರೆಮರೆಯಲ್ಲಿ ಸದ್ದಿಲ್ಲದೆ ನಡೆಯುತ್ತಿದೆ ಜಾಗತಿಕ ಇತಿಹಾಸದಲ್ಲೇ ಹಿಂದೆಂದೂ ಕಾಣದ ಬೃಹತ್ ಸ್ವರ್ಣ ಬೇಟೆ..
ಹೌದು, ಚೀನಾ ಕೇವಲ 8 ತಿಂಗಳಲ್ಲಿ ಬರೋಬ್ಬರಿ 1,000 ಟನ್ಗೂ ಹೆಚ್ಚು ಚಿನ್ನವನ್ನು ಆಮದು ಮಾಡಿಕೊಂಡು ಜಗತ್ತಿಗೇ ಶಾಕ್ ಕೊಟ್ಟಿದೆ.. ಸತತ 23 ತಿಂ ಗಳುಗಳಿಂದ ಒಂದೇ ಸಮನೆ ಚಿನ್ನದ ಬಿಸ್ಕತ್ತುಗಳನ್ನು ತನ್ನ ನೆಲಮಾಳಿಗೆಗೆ ತುಂಬಿಸಿಕೊಳ್ಳುತ್ತಿರುವ ಚೀನಾ ಸೆಂಟ್ರಲ್ ಬ್ಯಾಂಕ್.. ಅಮೆರಿಕಾದ ಖಜಾನೆ ಬಾಂಡ್ಗಳನ್ನು ಕಸದಂತೆ ಬಿಸಾಕಿ, ಡಾಲರ್ ಮುಕ್ತ ಪ್ರಪಂಚ ನಿರ್ಮಿಸಲು ಹೊಂಚು ಹಾಕಿರುವ ಬೀಜಿಂಗ್ನ ಅಸಲಿ ಆಟವೇನು..? ಇತ್ತ ದಸರಾ ಮತ್ತು ದೀಪಾವಳಿ ಹೊಸ್ತಿಲಲ್ಲಿರುವ ಭಾರತೀಯ ಗ್ರಾಹಕರಿಗೆ, ಚಿನ್ನದ ಬೆಲೆ ಇಳಿಯುವ ನಿರಾಳತೆಯೇ.. ಅಥವಾ ಚಿನ್ನ ಇನ್ನು ಗಗನಕುಸುಮವಾಗುವ ಆತಂಕವೇ..? ಚೀನಾದ ಈ ಸ್ವರ್ಣ ಕ್ರಾಂತಿಯ ಸಂಪೂರ್ಣ ಜಾತಕ ಇಲ್ಲಿದೆ..
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಳಿತ ಕಾಣುತ್ತಿದ್ದರೂ, ಚೀನಾ ಮಾತ್ರ ಎಗ್ಗಿಲ್ಲದೆ ಚಿನ್ನವನ್ನು ಗುಳುಂ ಮಾಡುತ್ತಿದೆ. ಚೀನಾದ ಕೇಂದ್ರೀಯ ಬ್ಯಾಂಕ್ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ (PBOC) ಸತತ 23 ತಿಂಗಳುಗಳಿಂದ ಒಂದೇ ಸಮನೆ ಚಿನ್ನದ ಮೀಸಲನ್ನು ಹೆಚ್ಚಿಸುತ್ತಲೇ ಬಂದಿದೆ. ಕಸ್ಟಮ್ಸ್ ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ, 2026ರ ಕೇವಲ ಮೊದಲ ಎಂಟು ತಿಂಗಳುಗಳಲ್ಲೇ ಚೀನಾ ಬರೋಬ್ಬರಿ 158.8 ಬಿಲಿಯನ್ ಡಾಲರ್ ವೆಚ್ಚ ಮಾಡಿ 1,000 ಟನ್ಗೂ ಅಧಿಕ ಚಿನ್ನವನ್ನು ಆಮದು ಮಾಡಿಕೊಂಡಿದೆ. ಇದು ಇಡೀ 2025 ರ ಒಟ್ಟು ಆಮದಾಗಿದ್ದ 96.5 ಬಿಲಿಯನ್ ಡಾಲರ್ ಮತ್ತು 886 ಟನ್ಗಳ ದಾಖಲೆಯನ್ನೇ ಅಳಿಸಿಹಾಕಿದೆ. ಸೆಪ್ಟೆಂಬರ್ ತಿಂಗಳೊಂದರಲ್ಲೇ 23 ಟನ್ ಚಿನ್ನವನ್ನು ತನ್ನ ಖಜಾನೆಗೆ ತುಂಬಿಸಿಕೊಂಡಿರುವ ಚೀನಾ, ಜಾಗತಿಕವಾಗಿ ಚಿನ್ನದ ದರ ಸಂಪೂರ್ಣ ನೆಲಕಚ್ಚದಂತೆ ಭದ್ರ ತಳಹದಿ ನಿರ್ಮಿಸಿದೆ.
ಚೀನಾದ ಈ ಭಾರಿ ಚಿನ್ನದ ಖರೀದಿಯ ಹಿಂದೆ ಅತ್ಯಂತ ಗಂಭೀರವಾದ ಭೌಗೋಳಿಕ ರಾಜಕೀಯ ಮತ್ತು ಆರ್ಥಿಕ ರಣತಂತ್ರ ಅಡಗಿದೆ. 2022ರಲ್ಲಿ ರಷ್ಯಾ-ಉಕ್ರೇನ್ ಯುದ್ಧ ಆರಂಭವಾದಾಗ, ಅಮೆರಿಕಾ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದ ಕೇಂದ್ರೀಯ ಬ್ಯಾಂಕ್ನ ವಿದೇಶಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡವು. ಡಾಲರ್ ಆಸ್ತಿಗಳನ್ನು ವಿದೇಶಗಳಲ್ಲಿ ಇಡುವುದು ಎಷ್ಟು ಅಪಾಯಕಾರಿ ಎಂಬುದು ಇದರಿಂದ ಚೀನಾಕ್ಕೆ ಮನವರಿಕೆಯಾಯಿತು. ಹೀಗಾಗಿ ಅಮೆರಿಕದ ಡಾಲರ್ನ 'ಶಸ್ತ್ರೀಕರಣ'ದಿಂದ (Weaponization) ತಪ್ಪಿಸಿಕೊಳ್ಳಲು, ಚೀನಾ ತನ್ನ ಬಳಿಯಿದ್ದ ಯುಎಸ್ ಖಜಾನೆ ಬಾಂಡ್ಗಳನ್ನು ಕಸದಂತೆ ಮಾರಿ, 18 ವರ್ಷಗಳ ಕನಿಷ್ಠ ಮಟ್ಟವಾದ 618 ಬಿಲಿಯನ್ ಡಾಲರ್ಗೆ ಇಳಿಸಿದೆ. ಸ್ವಂತ ನೆಲದ ನೆಲಮಾಳಿಗೆಯಲ್ಲಿ ಶೇಖರಿಸಿಟ್ಟ ಚಿನ್ನವನ್ನು ಯಾವ ಅಮೆರಿಕವೂ ಮುಟ್ಟುಗೋಲು ಹಾಕಲು ಅಥವಾ ಬ್ಯಾನ್ ಮಾಡಲು ಸಾಧ್ಯವಿಲ್ಲ ಎಂಬುದು ಚೀನಾದ ಲೆಕ್ಕಾಚಾರ.
ಕೇವಲ ಚೀನಾ ಸರ್ಕಾರ ಮಾತ್ರವಲ್ಲ, ಇತ್ತ ಚೀನಾದ ಸಾಮಾನ್ಯ ಜನತೆ ಮತ್ತು ಕಾರ್ಪೊರೇಟ್ ಕಂಪನಿಗಳು ಕೂಡ ಚಿನ್ನದ ಖರೀದಿಗೆ ಮುಗಿಬಿದ್ದಿವೆ. ಇದಕ್ಕೆ ಕಾರಣ ಚೀನಾದ ಆಂತರಿಕ ಆರ್ಥಿಕ ಬಿಕ್ಕಟ್ಟು. ಚೀನಾದ ಮಧ್ಯಮ ವರ್ಗದ ಜನರ ಜೀವಮಾನದ ಉಳಿತಾಯವಾಗಿದ್ದ ರಿಯಲ್ ಎಸ್ಟೇಟ್ ಮಾರುಕಟ್ಟೆ ಸಂಪೂರ್ಣ ಕುಸಿದುಬಿದ್ದಿದೆ. ಷೇರು ಮಾರುಕಟ್ಟೆ ಶೇಕಡಾ 8ರಷ್ಟು ನೆಲಕಚ್ಚಿದೆ. ಬ್ಯಾಂಕ್ಗಳಲ್ಲಿ ಇಟ್ಟ ಹಣಕ್ಕೆ ಕೇವಲ 1.2% ಮಾತ್ರ ಬಡ್ಡಿ ಸಿಗುತ್ತಿದೆ (ಅಮೆರಿಕದಲ್ಲಿ ಇದು 4.46% ಇದೆ). ಹೀಗಾಗಿ ತಮ್ಮ ಉಳಿತಾಯವನ್ನು ರಕ್ಷಿಸಿಕೊಳ್ಳಲು ಚೀನಿಯರಿಗೆ ಚಿನ್ನಕ್ಕಿಂತ ಸುರಕ್ಷಿತ ಆಸ್ತಿ ಇನ್ನೊಂದಿಲ್ಲದಂತಾಗಿದೆ. ಸೆಪ್ಟೆಂಬರ್ನಲ್ಲಿ ಜಾಗತಿಕ ಚಿನ್ನದ ದರ 8% ಕುಸಿದಾಗ, ಚೀನಾ ಇದನ್ನು ಎಚ್ಚರಿಕೆಯ ಬದಲಾಗಿ ಚಿನ್ನವನ್ನು ಅಗ್ಗವಾಗಿ ಬಾಚಿಕೊಳ್ಳುವ ಸುವರ್ಣ ಪ್ರವೇಶಾವಕಾಶವೆಂದು ಪರಿಗಣಿಸಿ ದಾಸ್ತಾನು ಹೆಚ್ಚಿಸಿಕೊಂಡಿದೆ.
ವಿಶ್ವ ಚಿನ್ನ ಮಂಡಳಿ (World Gold Council) ಬಿಡುಗಡೆ ಮಾಡಿರುವ ವರದಿ ಮತ್ತಷ್ಟು ರೋಚಕವಾಗಿದೆ. ಜಗತ್ತಿನ 74 ಕೇಂದ್ರೀಯ ಬ್ಯಾಂಕ್ಗಳಲ್ಲಿ ಶೇಕಡಾ 45ರಷ್ಟು ಬ್ಯಾಂಕ್ಗಳು ಮುಂದಿನ ಒಂದು ವರ್ಷದಲ್ಲಿ ತಮ್ಮ ಚಿನ್ನದ ದಾಸ್ತಾನನ್ನು ಹೆಚ್ಚಿಸಲು ನಿರ್ಧರಿಸಿವೆ. 2018ರ ನಂತರ ಇದೇ ಮೊದಲ ಬಾರಿಗೆ ಇಷ್ಟೊಂದು ಸಂಖ್ಯೆಯ ದೇಶಗಳು ಚಿನ್ನದ ಮೊರೆ ಹೋಗಿವೆ. ಚೀನಾ ಬಳಿ 3.4 ಟ್ರಿಲಿಯನ್ ಡಾಲರ್ ವಿದೇಶಿ ವಿನಿಮಯ ನಿಧಿ ಇದ್ದರೂ, ಅದರಲ್ಲಿ ಚಿನ್ನದ ಪಾಲು ಕೇವಲ 9% ಕ್ಕಿಂತ ಕಡಿಮೆಯಿದೆ. ಅದೇ ಅಮೆರಿಕ, ಜರ್ಮನಿ, ಫ್ರಾನ್ಸ್ ದೇಶಗಳಲ್ಲಿ ಚಿನ್ನದ ಪಾಲು ಬರೋಬ್ಬರಿ 80% ರಷ್ಟಿದೆ. ಈ ಅಂತರವನ್ನು ಮುಚ್ಚಲು ಚೀನಾ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾವಿರಾರು ಟನ್ ಚಿನ್ನವನ್ನು ನುಂಗಿಹಾಕುವುದರಲ್ಲಿ ಯಾವುದೇ ಅನುಮಾನವಿಲ್ಲ.
ದಸರಾ ಮತ್ತು ದೀಪಾವಳಿ ಹಬ್ಬ ಸಮೀಪಿಸುತ್ತಿದ್ದು, ಭಾರತೀಯ ಗ್ರಾಹಕರಲ್ಲಿ ಚಿನ್ನದ ದರ ಇಳಿಯುವುದೇ ಎಂಬ ಭಾರಿ ನಿರೀಕ್ಷೆಯಿದೆ. ಆದರೆ ಕಟು ಸತ್ಯವೇನೆಂದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ 25% ಕುಸಿದಿದ್ದರೂ, ಭಾರತದಲ್ಲಿ ಗ್ರಾಹಕರಿಗೆ ಸಿಕ್ಕಿರುವುದು ಕೇವಲ 16% ರಷ್ಟು ಮಾತ್ರ ಪರಿಹಾರ. ಏಕೆಂದರೆ ಭಾರತವು ಶೇಕಡಾ 80ರಷ್ಟು ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ. ಡಾಲರ್ ಎದುರು ರೂಪಾಯಿ ದುರ್ಬಲಗೊಂಡಿರುವುದು ಮತ್ತು ಭಾರತ ಸರ್ಕಾರ ವಿಧಿಸಿರುವ 15% ಆಮದು ಸುಂಕ ಹಾಗೂ 3% ಜಿಎಸ್ಟಿ ಬೆಲೆ ಇಳಿಕೆಯ ಲಾಭವನ್ನು ನುಂಗಿಹಾಕಿವೆ. ಆರ್ಥಿಕ ತಜ್ಞ ನರೇನ್ ಅಗರ್ವಾಲ್ ಪ್ರಕಾರ, ಕೇಂದ್ರ ಸರ್ಕಾರವು ಆಮದು ಸುಂಕವನ್ನು 15% ರಿಂದ 6% ಕ್ಕೆ ಇಳಿಸಿದರೆ ಮಾತ್ರ ಜನಸಾಮಾನ್ಯರಿಗೆ ಪ್ರತಿ 10 ಗ್ರಾಂಗೆ 12,000 ರೂಪಾಯಿ ಉಳಿತಾಯವಾಗಲಿದೆ. ಅಲ್ಲಿಯವರೆಗೆ ಹಬ್ಬದ ಖರೀದಿದಾರರು ಸಂಪೂರ್ಣ ಕುಸಿತಕ್ಕಾಗಿ ಕಾಯದೆ, ಹಂತ-ಹಂತವಾಗಿ ಖರೀದಿ ಮಾಡುವುದು ಜಾಣತನ.
ಒಟ್ಟಿನಲ್ಲಿ, ಜಾಗತಿಕ ಆರ್ಥಿಕತೆಯಲ್ಲಿ ತಲ್ಲಣ ಸೃಷ್ಟಿಸಿರುವ ಚೀನಾದ ಈ ಮಹಾನ್ ಸ್ವರ್ಣ ಬೇಟೆ ಕೇವಲ ಹೂಡಿಕೆಯಲ್ಲ, ಅದು ಅಮೆರಿಕದ ಡಾಲರ್ ಪ್ರಾಬಲ್ಯವನ್ನು ಹೊಸಕಿಹಾಕಲು ಹೆಣೆದಿರುವ ಜಿಯೋಪಾಲಿಟಿಕಲ್ ಬ್ರಹ್ಮಾಸ್ತ್ರ..! ತನ್ನ ಆಂತರಿಕ ಆರ್ಥಿಕ ಬಿಕ್ಕಟ್ಟನ್ನು ಮರೆಮಾಚಿ, ಭವಿಷ್ಯದ ಆರ್ಥಿಕ ನಿರ್ಬಂಧಗಳಿಂದ ರಕ್ಷಣೆ ಪಡೆಯಲು ಬೀಜಿಂಗ್ ಸಜ್ಜುಗೊಳಿಸಿರುವ ಈ ಸ್ವರ್ಣ ಕವಚ ಜಾಗತಿಕ ಚಿನ್ನದ ಬೆಲೆಗೆ ಗಟ್ಟಿ ತಳಹದಿ ಹಾಕಿದೆ.. ಇತ್ತ ಹಬ್ಬದ ಸಡಗರದಲ್ಲಿರುವ ಭಾರತೀಯ ಗ್ರಾಹಕರು, ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಇಳಿದ ತಕ್ಷಣ ಭಾರತದಲ್ಲೂ ದರ ಕುಸಿಯುತ್ತದೆ ಎಂಬ ಭ್ರಮೆಯಲ್ಲಿ ಕೂರದೆ, ದುರ್ಬಲ ರೂಪಾಯಿ ಮತ್ತು ಆಮದು ಸುಂಕದ ಸಮೀಕರಣವನ್ನು ಅರ್ಥಮಾಡಿಕೊಂಡು ಚತುರತೆಯಿಂದ ಹೆಜ್ಜೆ ಇಡಬೇಕಿದೆ.. ಚಿನ್ನದ ಈ ಜಾಗತಿಕ ರಣರಂಗದಲ್ಲಿ ಡ್ರ್ಯಾಗನ್ ಹಾರಾಟಕ್ಕೆ ಅಮೆರಿಕದ ಪ್ರತ್ಯುತ್ತರ ಹೇಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ.