SOCIAL MEDIA

Newsletter

PARTNER SITES
Select Language Select State

ಕನ್ನಡಿಗರ ಕ್ಷಮೆ ಕೇಳಿದ ಖ್ಯಾತ ಗಾಯಕ ಸೋನು ನಿಗಮ್: ವಿವಾದಕ್ಕೆ ತೆರೆ ಎಳೆದ ಕರವೇ

ಖ್ಯಾತ ಗಾಯಕ ಸೋನು ನಿಗಮ್, ಇದೀಗ ಕೊನೆಗೂ ತಮ್ಮ ತಪ್ಪು ಅರಿತು ಕನ್ನಡಿಗರ ಕ್ಷಮೆ ಕೋರಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ ಜೊತೆ ದೂರವಾಣಿಯಲ್ಲಿ ಮಾತನಾಡಿ ಬೇಷರತ್ತಾಗಿ ಕ್ಷಮೆಯಾಚಿಸಿರುವ ಸೋನು ನಿಗಮ್, ಈ ಮೂಲಕ ರಾಜ್ಯದಲ್ಲಿ ಕೆಲವು ಕಾಲದಿಂದ ಇದ್ದ ವಿವಾದಕ್ಕೆ ತೆರೆ ಎಳೆದಿದ್ದಾರೆ.. ಅಸಲಿಗೆ ಅಂದಿನ ದಿನ ಆಗಿದ್ದೇನು.. ಈಗ ಸೋನು ಕ್ಷಮೆ ಕೇಳಿದ್ದೇಕೆ.. ಇಲ್ಲಿದೆ ವರದಿ..

Written By Krishna NK
Published: Oct 20, 2026, 03:09 PM IST | Updated: Oct 20, 2026, 03:11 PM IST
Image Credit: Sonu Nigam news
Join

ಬೆಂಗಳೂರು: ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಅವರು ಕನ್ನಡಿಗರ ಕ್ಷಮೆ ಕೇಳಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ಈ ಹಿಂದೆ ತಾವು ಆಡಿದ ಮಾತಿನಿಂದ ಕನ್ನಡಿಗರಿಗೆ ಉಂಟಾದ ನೋವಿಗೆ ಬೇಷರತ್ತಾಗಿ ಕ್ಷಮೆಯಾಚಿಸುವುದಾಗಿ ತಿಳಿಸಿದ್ದಾರೆ. ಈ ಬೆಳವಣಿಗೆಯೊಂದಿಗೆ ಸೋನು ನಿಗಮ್ ಅವರ ಕಾರ್ಯಕ್ರಮದ ಮೇಲಿದ್ದ ವಿವಾದ ಹಾಗೂ ಪ್ರತಿಭಟನೆಗೆ ತಾತ್ಕಾಲಿಕ ತೆರೆ ಬಿದ್ದಿದೆ.

ಘಟನೆ ಹಿನ್ನೆಲೆ ಮತ್ತು ಕನ್ನಡಿಗರ ಆಕ್ರೋಶ
2025ರ ಏಪ್ರಿಲ್ 25 ರಂದು ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಸೋನು ನಿಗಮ್ ಅವರು ಪ್ರದರ್ಶನ ನೀಡುತ್ತಿದ್ದರು.  ಈ ಸಂದರ್ಭದಲ್ಲಿ ಅಲ್ಲಿದ್ದ ವಿದ್ಯಾರ್ಥಿಯೊಬ್ಬರು ಸತತವಾಗಿ "ಕನ್ನಡ ಹಾಡು" ಹಾಡುವಂತೆ ಗಟ್ಟಿಯಾಗಿ ಒತ್ತಾಯಿಸಿದ್ದರು. ಇದಕ್ಕೆ ಹಿಂದಿಯಲ್ಲಿ ಪ್ರತಿಕ್ರಿಯಿಸಿದ್ದ ಸೋನು ನಿಗಮ್, "ಯಹಿ ಕಾರಣ ಹೈ, ಪಹಲ್ಗಾಮ್ ಮೇ ಜೋ ಹುವಾ ಹೈ ನಾ..." (ನೀವು ಮಾಡುತ್ತಿರುವ ಇಂತಹ ವರ್ತನೆಯೇ ಪಹಲ್ಗಾಮ್ ಉಗ್ರರ ದಾಳಿಗೆ ಕಾರಣ) ಎಂದು ಹೇಳಿದ್ದರು. ಕನ್ನಡ ಹಾಡಿನ ಬೇಡಿಕೆಯನ್ನು ಜಮ್ಮು-ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದನಾ ದಾಳಿಗೆ ಹೋಲಿಸಿದ ಗಾಯಕನ ನಡೆಗೆ ಕನ್ನಡಿಗರು ಮತ್ತು ಕನ್ನಡಪರ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಈ ಬಗ್ಗೆ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು ಮತ್ತು ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ (KFCC) ಕೂಡ ಅವರನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಂಡಿತ್ತು.

ಸುಮಾರು 18 ತಿಂಗಳ ಬಳಿಕ, ಅಕ್ಟೋಬರ್ 24, 2026 ರಂದು ಬೆಂಗಳೂರಿನ 'ಭಾರತೀಯ ಮಾಲ್'ನಲ್ಲಿ ಸೋನು ನಿಗಮ್ ಅವರ ಮತ್ತೊಂದು ಸಂಗೀತ ಕಾರ್ಯಕ್ರಮ (The Revolution India Tour) ಆಯೋಜನೆಗೊಂಡಿತ್ತು. ಈ ವೇಳೆ ಹಳೆಯ ವಿವಾದವನ್ನು ನೆನಪಿಸಿದ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ. ಎ. ನಾರಾಯಣಗೌಡ ಅವರು, ಗಾಯಕನಿಗೆ ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ನೀಡಬಾರದು ಎಂದು ಪೊಲೀಸ್ ಕಮಿಷನರ್‌ಗೆ ಪತ್ರ ಬರೆದು ರಾಜ್ಯಾದ್ಯಂತ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದರು.

ದೂರವಾಣಿ ಸಂಭಾಷಣೆ ಮತ್ತು ಟಿ.ಎ. ನಾರಾಯಣಗೌಡರ ಸ್ಪಷ್ಟನೆ
ಸೋನು ನಿಗಮ್ ಕ್ಷಮೆ ಕೋರಿದ ಕುರಿತು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ತಮ್ಮ ಅಧಿಕೃತ ಎಕ್ಸ್ (X) ಖಾತೆ ಮೂಲಕ ಸಂಪೂರ್ಣ ವಿವರ ಹಂಚಿಕೊಂಡಿದ್ದಾರೆ. "ಗಾಯಕ ಸೋನು ನಿಗಮ್ ಇಂದು ನನ್ನೊಂದಿಗೆ ಮಾತನಾಡಿದರು. ತಾವು ಹಿಂದೆ ಆಡಿದ ಒಂದು ಮಾತು ಕನ್ನಡಿಗರನ್ನು ಹೇಗೆ ನೋಯಿಸಿದೆ ಎಂಬುದು ಅವರಿಗೆ ಈಗ ಅರ್ಥವಾಗಿದೆ. ಯಾವುದೇ ಷರತ್ತುಗಳಿಲ್ಲದೆ ಬೇಷರತ್ತಾಗಿ ಕ್ಷಮೆ ಯಾಚಿಸುವುದಾಗಿ ಅವರು ಹೇಳಿದರು" ಎಂದು ನಾರಾಯಣಗೌಡ ತಿಳಿಸಿದ್ದಾರೆ.

ಮುಂದುವರಿದು ಮಾತನಾಡುತ್ತಾ, "ನಾವೆಲ್ಲರೂ ಸೋನು ನಿಗಮ್ ಅವರ ಸುಮಧುರ ಧ್ವನಿಯ ಹಾಡುಗಳನ್ನು ಇಷ್ಟಪಟ್ಟವರೇ. ಅವರ ಕುರಿತು ನಮಗೆ ಯಾವುದೇ ವೈಯಕ್ತಿಕ ದ್ವೇಷ ಅಥವಾ ಮುನಿಸು ಇರಲಿಲ್ಲ. ಆದರೆ, ಅಂದು ಅವರು ಆಡಿದ ಮಾತನ್ನು ಅರಗಿಸಿಕೊಳ್ಳಲು ಕನ್ನಡಿಗರಿಂದ ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ನಮ್ಮ ಪ್ರತಿಭಟನೆ ಹಾಗೂ ಆಕ್ರೋಶ ಸಹಜವಾಗೇ ಇತ್ತು" ಎಂದಿದ್ದಾರೆ.

ಕ್ಷಮಿಸುವುದು ಕನ್ನಡಿಗರ ಔದಾರ್ಯ
ಕನ್ನಡಿಗರ ಗುಣ ಹಾಗೂ ಸಂಸ್ಕೃತಿಯ ಬಗ್ಗೆ ಮಾತನಾಡಿದ ನಾರಾಯಣಗೌಡರು, "ಘಂಟಸಾಲ, ಪಿ.ಬಿ. ಶ್ರೀನಿವಾಸ್, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಯೇಸುದಾಸ್, ಎಸ್. ಜಾನಕಿ, ವಾಣಿ ಜಯರಾಮ್, ಕೆ.ಎಸ್. ಚಿತ್ರಾ ಹೀಗೆ ಅನೇಕ ದಿಗ್ಗಜ ಗಾಯಕರು ಕನ್ನಡಿಗರಲ್ಲದಿದ್ದರೂ, ಅವರನ್ನು ನಾವು ಅಪಾರವಾಗಿ ಪ್ರೀತಿಸಿದ್ದೇವೆ. ಅವರು ನಮ್ಮ ಕನ್ನಡ ಚಿತ್ರಸಂಗೀತವನ್ನು ಶ್ರೀಮಂತಗೊಳಿಸಿದ ಮಹಾನುಭಾವರು. ಆ ಕೃತಜ್ಞತೆ ಕನ್ನಡಿಗರಿಗೆ ಸದಾ ಇರುತ್ತದೆ. ಸೋನು ನಿಗಮ್ ಕೂಡ ಅದೇ ಸಾಲಿನಲ್ಲಿ ಬರುವ ಮಹಾ ಗಾಯಕರಲ್ಲಿ ಒಬ್ಬರು. ಈಗ ಅವರು ತಮ್ಮ ತಪ್ಪು ಅರಿತು ಕ್ಷಮೆ ಕೇಳಿದ್ದಾರೆ. ಕ್ಷಮೆ ಕೇಳಿದವರನ್ನು ಕ್ಷಮಿಸುವುದು ಕನ್ನಡಿಗರ ಔದಾರ್ಯ ಮತ್ತು ಸಂಸ್ಕಾರ. ಹೀಗಾಗಿ ಈ ಕಹಿಘಟನೆಯನ್ನು ಇಲ್ಲಿಗೆ ಮರೆತುಬಿಡೋಣ. ಕರವೇ ಈ ಹೋರಾಟವನ್ನು ಇಲ್ಲಿಗೆ ನಿಲ್ಲಿಸುತ್ತದೆ" ಎಂದು ಸ್ಪಷ್ಟಪಡಿಸಿದ್ದಾರೆ.

ಅಕ್ಟೋಬರ್ 24ರ ಸೋನು ನಿಗಮ್ ಸಂಗೀತ ಕಾರ್ಯಕ್ರಮ
ಈ ಹಿಂದೆ ಸೋನು ನಿಗಮ್ ಅವರ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಎಂದು ಕರವೇ ತೀವ್ರ ಎಚ್ಚರಿಕೆ ನೀಡಿತ್ತು. ಆದರೆ, ಪ್ರಸ್ತುತ ಅವರು ಕನ್ನಡಿಗರ ಕ್ಷಮೆ ಕೇಳಿರುವ ಹಿನ್ನೆಲೆಯಲ್ಲಿ, ಮುಂಬರುವ ಅಕ್ಟೋಬರ್ 24ರಂದು ಥಣಿಸಂದ್ರದ ಭಾರತೀಯ ಮಾಲ್‌ನಲ್ಲಿ (Bharatiya Mall) ನಡೆಯಲಿರುವ ಸೋನು ನಿಗಮ್ ಅವರ ಸಂಗೀತ ಕಾರ್ಯಕ್ರಮಕ್ಕೆ (Show) ಕರವೇ ಯಾವುದೇ ವಿರೋಧ ಮಾಡುವುದಿಲ್ಲ ಎಂದು ತಿಳಿಸಿದೆ. ಈ ಮೂಲಕ ಎಲ್ಲರಿಗೂ ಒಂದು ಸ್ಪಷ್ಟ ಸಂದೇಶ ರವಾನೆಯಾಗಿದ್ದು, ಇನ್ನು ಮುಂದೆ ಕನ್ನಡಿಗರ ಪರಂಪರೆ ಮತ್ತು ಭಾಷೆಗೆ ಗೌರವ ನೀಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಸಂಘಟನೆ ತಿಳಿಸಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES