‘ಶ್ರೀರಾಮಚಂದ್ರ’ನಾದ ರವಿ ಅಣ್ಣ..! ಪೋಸ್ಟರ್ ಮೂಲಕ ಗಮನಸೆಳೆದ ಶನೀಲ್ ಹೊಸ ಸಿನಿಮಾ
‘ಸು ಫ್ರಮ್ ಸೋ’ ಖ್ಯಾತಿಯ ಜನಪ್ರಿಯ ನಟ ಶನೀಲ್ ಗೌತಮ್ ಅವರ ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ, ಅವರ ಹೊಸ ಚಿತ್ರವಾದ ‘ಶ್ರೀರಾಮಚಂದ್ರ’ದ ಶೀರ್ಷಿಕೆ ಹಾಗೂ ಆಕರ್ಷಕ ಪೋಸ್ಟರ್ ಅಧಿಕೃತವಾಗಿ ಅನಾವರಣಗೊಂಡಿದೆ. ಕೌಟುಂಬಿಕ ಮನರಂಜನೆ ಮತ್ತು ಭಾವನಾತ್ಮಕ ಕಥಾಹಂದರವನ್ನು ಹೊಂದಿರುವ ಈ ಚಿತ್ರದ ಮೂಲಕ ಶನೀಲ್ ಗೌತಮ್ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.
Shaneel Gautham New movie : ‘ಸು ಫ್ರಮ್ ಸೋ’ ಚಿತ್ರದ ಮೂಲಕ ಭರ್ಜರಿ ಗಮನ ಸೆಳೆದಿದ್ದ ನಟ ಶನೀಲ್ ಗೌತಮ್ ಈಗ ಹೊಸ ಸಿನಿಮಾದೊಂದಿಗೆ ಬಂದಿದ್ದಾರೆ. ಅವರ ಹುಟ್ಟುಹಬ್ಬದ ಸಂಭ್ರಮದಲ್ಲೇ ಅವರ ಮುಂದಿನ ಚಿತ್ರವಾದ ‘ಶ್ರೀರಾಮಚಂದ್ರ’ ಸಿನಿಮಾದ ಶೀರ್ಷಿಕೆ ಮತ್ತು ಆಕರ್ಷಕ ಪೋಸ್ಟರ್ ಅನ್ನು ಚಿತ್ರತಂಡ ಅಧಿಕೃತವಾಗಿ ರಿಲೀಸ್ ಮಾಡಿದೆ. ಈ ಸಿನಿಮಾವನ್ನು ‘ಪೊಗರು’ ಖ್ಯಾತಿಯ ಬಿ.ಕೆ. ಗಂಗಾಧರ್ ನಿರ್ಮಿಸುತ್ತಿದ್ದು, ‘ಫಾರೆಸ್ಟ್’ ಖ್ಯಾತಿಯ ಚಂದ್ರಮೋಹನ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಕೌಟುಂಬಿಕ ಕಥೆ, ನಗು ಹಾಗೂ ಸೆಂಟಿಮೆಂಟ್
ಇದು ಕೇವಲ ಮಾಸ್ ಸಿನಿಮಾವಲ್ಲ, ಸಂಪೂರ್ಣ ಕೌಟುಂಬಿಕ ಮನರಂಜನೆಯ ಚಿತ್ರ. ಕುಟುಂಬದ ನಂಟು, ಭಾವನೆಗಳು, ಅಣ್ಣ-ತಂಗಿ ನಡುವಿನ ಮುದ್ದು ಜಗಳ ಹಾಗೂ ಕಾಮಿಡಿಗೆ ಚಿತ್ರದಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಪ್ರೇಕ್ಷಕರನ್ನು ನಗಿಸುವುದರ ಜೊತೆಗೆ, ಕಥೆಯು ಮನಸ್ಸಿಗೆ ಹತ್ತುವಂತಹ ಭಾವನಾತ್ಮಕ ಸನ್ನಿವೇಶಗಳನ್ನೂ ಹೊಂದಿದೆ. ವಿಭಿನ್ನವಾದ ಕಥೆಯೊಂದಿಗೆ ಜನರಿಗೆ ಹೊಸ ಅನುಭವ ನೀಡುವುದು ಚಿತ್ರತಂಡದ ಮುಖ್ಯ ಉದ್ದೇಶ.
ಉದಯ್ ಕೆ ಮೆಹ್ತ ಅವರು ಈ ಚಿತ್ರದ ಮೂಲ ಕಥೆಯನ್ನು ಸಿದ್ಧಪಡಿಸಿದ್ದಾರೆ. ನಿರ್ದೇಶಕ ಚಂದ್ರಮೋಹನ್ ಹಾಗೂ ನಾಯಕ ಶನೀಲ್ ಗೌತಮ್ ಒಟ್ಟಾಗಿ ಚಿತ್ರಕಥೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶೇಷ ಅಂದರೆ, ಕಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ರೂಪುಗೊಳಿಸಲು ಸುಮಾರು ಐದಾರು ತಿಂಗಳುಗಳ ಕಾಲ ಮಂಗಳೂರಿನಲ್ಲೇ ಕುಳಿತು ಚಿತ್ರಕಥೆ ಸಿದ್ಧಪಡಿಸಲಾಗಿದೆ. ನಿರ್ಮಾಪಕ ಬಿ.ಕೆ. ಗಂಗಾಧರ್ ಅವರು ಹಲವು ಕಥೆಗಳನ್ನು ಕೇಳಿ, ಅಂತಿಮವಾಗಿ ಈ ಕಥೆ ಇಷ್ಟವಾಗಿ ಎಲ್ಲ ತಯಾರಿ ಮಾಡಿಕೊಂಡು ಶೂಟಿಂಗ್‌ಗೆ ಇಳಿದಿದ್ದಾರೆ.
ತಾರಾಗಣ ಮತ್ತು ತಂತ್ರಜ್ಞರು
ಈ ಚಿತ್ರದಲ್ಲಿ ಉಡುಪಿ ಮೂಲದ ಪರಿಪೂರ್ಣ ಚಂದ್ರಶೇಖರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಇವರಿಗೆ ಇದು ಮೊದಲ ಕನ್ನಡ ಸಿನಿಮಾವಾಗಿದ್ದು, ಈಗಾಗಲೇ ಇTರ ಭಾಷೆಗಳಲ್ಲಿ ನಟಿಸಿದ ಅನುಭವವಿದೆ. ಇವರೊಂದಿಗೆ "ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ" ಖ್ಯಾತಿಯ ಪ್ರವೀಣ್, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಾಣಾಜೆ ಸೇರಿದಂತೆ ಸಾಕಷ್ಟು ಪ್ರತಿಭಾವಂತ ಕಲಾವಿದರು ಚಿತ್ರದಲ್ಲಿದ್ದಾರೆ.
‘ಸು ಫ್ರಮ್ ಸೋ’ ಚಿತ್ರದ ಬಳಗದ ಶೇಕಡಾ 80ರಷ್ಟು ಕಲಾವಿದರು ಮತ್ತು ತಂತ್ರಜ್ಞರು ಇಲ್ಲೂ ಒಟ್ಟಿಗೆ ಕೆಲಸ ಮಾಡುತ್ತಿರುವುದು ವಿಶೇಷ. ಚಂದ್ರಸೇಖರನ್ ಛಾಯಾಗ್ರಹಣವಿದ್ದರೆ, ಲಿಖಿತ್ ಪ್ರಸಾದ್ ಶೆಟ್ಟಿ ಸಂಗೀತವಿದ್ದು, ಸಿನಿಮಾದಲ್ಲಿ ಒಟ್ಟು ಐದು ಹಾಡುಗಳಿರಲಿವೆ.
ಸದ್ಯ ಸಿನಿಮಾ ಶೂಟಿಂಗ್ ಕೊನೆಯ ಹಂತದಲ್ಲಿದ್ದು, ಇನ್ನೇನು ಕೆಲವೇ ದಿನಗಳಲ್ಲಿ (ಸುಮಾರು 20 ದಿನಗಳಲ್ಲಿ) ಚಿತ್ರೀಕರಣ ಮುಕ್ತಾಯಗೊಳ್ಳಲಿದೆ. ಶನೀಲ್ ಗೌತಮ್ ನಟನೆಯ ಈ ಹೊಸ ಕೌಟುಂಬಿಕ ಸಿನಿಮಾ ಪ್ರೇಕ್ಷಕರನ್ನು ಯಾವ ರೀತಿ ರಂಜಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.