ಮಂಗಳೂರಿನ ಈ ಹೋಟೆಲ್‌ನಲ್ಲಿ ಸಾಮಾನ್ಯನಂತೆ ಊಟ ಸವಿದ ನಟ ರಾಜ್ ಬಿ ಶೆಟ್ಟಿ
ರಾಜ್ ಬಿ. ಶೆಟ್ಟಿ ಮಂಗಳೂರಿನ ಹೋಟೆಲ್‌ವೊಂದರಲ್ಲಿ ಸಾಮಾನ್ಯ ವ್ಯಕ್ತಿಯಂತೆ ಕುಳಿತು ಊಟ ಮಾಡುತ್ತಲೇ ತಮ್ಮ ಸಿನಿಮಾದ ಚಿತ್ರಕಥೆ ಕೆಲಸದಲ್ಲಿ ತೊಡಗಿಸಿಕೊಂಡಿರುವ ದೃಶ್ಯವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯ ಮೂಲಕ ಗುರುತಿಸಿಕೊಂಡಿರುವ ನಟ ಹಾಗೂ ನಿರ್ದೇಶಕ ರಾಜ್ ಬಿ. ಶೆಟ್ಟಿ ಮತ್ತೊಮ್ಮೆ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಯಾವುದೇ ಸ್ಟಾರ್‌ಡಮ್ ಪ್ರದರ್ಶಿಸದೆ ಮಂಗಳೂರಿನ ಹೋಟೆಲ್‌ವೊಂದರಲ್ಲಿ ಸಾಮಾನ್ಯ ವ್ಯಕ್ತಿಯಂತೆ ಕುಳಿತು ಊಟ ಮಾಡುತ್ತಲೇ ತಮ್ಮ ಸಿನಿಮಾದ ಚಿತ್ರಕಥೆ ಕೆಲಸದಲ್ಲಿ ತೊಡಗಿಸಿಕೊಂಡಿರುವ ದೃಶ್ಯವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜನಪ್ರಿಯತೆಯ ನಡುವೆಯೂ ಸರಳವಾಗಿ ಬದುಕುವ ಅವರ ಸ್ವಭಾವಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಸಿನಿಮಾ ನಟರು ಸಾರ್ವಜನಿಕ ಸ್ಥಳಗಳಿಗೆ ಬಂದಾಗ ಅವರ ಸುತ್ತ ಅಭಿಮಾನಿಗಳ ಗುಂಪು, ಕ್ಯಾಮೆರಾಗಳು ಮತ್ತು ಭದ್ರತಾ ಸಿಬ್ಬಂದಿ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ರಾಜ್ ಬಿ. ಶೆಟ್ಟಿ ಅವರ ವಿಚಾರದಲ್ಲಿ ಕಂಡುಬಂದ ದೃಶ್ಯ ವಿಭಿನ್ನವಾಗಿತ್ತು. ಮಂಗಳೂರಿನ ಹೋಟೆಲ್‌ನಲ್ಲಿ ಊಟ ಮಾಡುತ್ತಿದ್ದ ನಟ ರಾಜ್ ಬಿ. ಶೆಟ್ಟಿ, ತಮ್ಮ ಮುಂದಿನ ಸಿನಿಮಾದ ಸ್ಕ್ರಿಪ್ಟ್ ಕೆಲಸದಲ್ಲಿಯೂ ನಿರತರಾಗಿದ್ದರು ಎನ್ನಲಾಗಿದೆ. ಅವರ ಈ ಸರಳ ನಡವಳಿಕೆಯನ್ನು ಗಮನಿಸಿದ ಅಭಿಮಾನಿಯೊಬ್ಬರು ಆ ಕ್ಷಣವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಊಟದ ನಡುವೆಯೂ ಸಿನಿಮಾ ಕಥೆಯತ್ತ ಗಮನ ಕೊಟ್ಟ ರಾಜ್ ಬಿ. ಶೆಟ್ಟಿ :
ಮಂಗಳೂರಿನ ಹೋಟೆಲ್‌ಗೆ ತೆರಳಿದ್ದ ಪೂಜಾರಿ ಯತೀಶ್ ಎಂಬುವವರಿಗೆ ತಮ್ಮ ಎದುರಿನ ಆಸನದಲ್ಲಿ ರಾಜ್ ಬಿ. ಶೆಟ್ಟಿ ಕುಳಿತಿರುವುದು ಅಚ್ಚರಿ ಮೂಡಿಸಿತ್ತು. ಯಾವುದೇ ವಿಶೇಷ ಸೌಲಭ್ಯ ಅಥವಾ ಆಡಂಬರಕ್ಕೆ ಒತ್ತು ನೀಡದೆ, ತಮ್ಮ ಊಟವನ್ನು ಸವಿಯುತ್ತಲೇ ಅವರು ಚಿತ್ರಕಥೆಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು ಎಂದು ಯತೀಶ್ ತಮ್ಮ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.
ಸಾಮಾನ್ಯವಾಗಿ ಸೆಲೆಬ್ರಿಟಿಗಳನ್ನು ಭೇಟಿಯಾದಾಗ ಅವರ ಜನಪ್ರಿಯತೆ ಮತ್ತು ವ್ಯಕ್ತಿತ್ವದ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಮೂಡುತ್ತದೆ. ಆದರೆ ಈ ಸಂದರ್ಭದಲ್ಲಿ ರಾಜ್ ಬಿ. ಶೆಟ್ಟಿ ಅವರ ಕೆಲಸದ ಮೇಲಿನ ಏಕಾಗ್ರತೆ ಮತ್ತು ಸಹಜ ನಡವಳಿಕೆ ತಮ್ಮ ಗಮನ ಸೆಳೆಯಿತು ಎಂಬುದು ಅಭಿಮಾನಿಯ ಅಭಿಪ್ರಾಯ.
ಇನ್‌ಸ್ಟಾಗ್ರಾಮ್‌ನಲ್ಲಿ ಈ ಅನುಭವವನ್ನು ಹಂಚಿಕೊಂಡಿರುವ ಯತೀಶ್, ಸಾಮಾನ್ಯವಾಗಿ ಊಟಕ್ಕೆಂದು ಹೋದಾಗ ಇಂತಹ ಸ್ಮರಣೀಯ ಕ್ಷಣ ಎದುರಾಗಬಹುದು ಎಂದು ನಿರೀಕ್ಷಿಸಿರಲಿಲ್ಲ ಎಂದು ಬರೆದುಕೊಂಡಿದ್ದಾರೆ. ನಟನ ಜನಪ್ರಿಯತೆಗಿಂತಲೂ ಅವರ ಸರಳತೆ ಮತ್ತು ಸಿನಿಮಾದ ಕೆಲಸದ ಬಗ್ಗೆ ತೋರುವ ಶ್ರದ್ಧೆ ಹೆಚ್ಚು ಪ್ರಭಾವ ಬೀರಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದ್ದಂತೆ, ರಾಜ್ ಬಿ. ಶೆಟ್ಟಿ ಅವರ ಅಭಿಮಾನಿಗಳು ಅವರ ವ್ಯಕ್ತಿತ್ವವನ್ನು ಕೊಂಡಾಡುತ್ತಿದ್ದಾರೆ. ಕಲಾವಿದನ ನಿಜವಾದ ವಿಶೇಷತೆ ಜನಪ್ರಿಯತೆಯಲ್ಲಷ್ಟೇ ಅಲ್ಲ, ತನ್ನ ಕೆಲಸದ ಬಗ್ಗೆ ಹೊಂದಿರುವ ಬದ್ಧತೆಯಲ್ಲಿಯೂ ಇದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
‘ಒಂದು ಮೊಟ್ಟೆಯ ಕಥೆ’ ಮೂಲಕ ಆರಂಭವಾದ ವಿಶಿಷ್ಟ ಪಯಣ
ನಟ ರಾಜ್ ಬಿ. ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವಿಭಿನ್ನ ಗುರುತು ಮೂಡಿಸಿಕೊಂಡಿರುವ ಕಲಾವಿದರಲ್ಲಿ ಒಬ್ಬರು. ಸಾಂಪ್ರದಾಯಿಕ ನಾಯಕನ ಕಲ್ಪನೆಗೆ ಸೀಮಿತವಾಗದೆ, ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಅವರು ಪ್ರೇಕ್ಷಕರ ಗಮನ ಸೆಳೆದಿದ್ದಾರೆ. 2017 ರಲ್ಲಿ ತೆರೆಕಂಡ ‘ಒಂದು ಮೊಟ್ಟೆಯ ಕಥೆ’ ಸಿನಿಮಾ ಅವರ ವೃತ್ತಿಜೀವನಕ್ಕೆ ಮಹತ್ವದ ತಿರುವು ನೀಡಿತು. ಈ ಚಿತ್ರದ ಮೂಲಕ ಅವರು ನಿರ್ದೇಶಕರಾಗಿ ಮತ್ತು ನಾಯಕ ನಟನಾಗಿ ರಾಜ್ ಬಿ. ಶೆಟ್ಟಿ ಗಮನ ಸೆಳೆದರು. ಬಾಹ್ಯ ಸೌಂದರ್ಯಕ್ಕಿಂತ ವ್ಯಕ್ತಿಯ ಭಾವನೆಗಳು, ಆತ್ಮವಿಶ್ವಾಸ ಮತ್ತು ಬದುಕಿನ ಸವಾಲುಗಳಿಗೆ ಆದ್ಯತೆ ನೀಡಿದ ಕಥೆ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಯಿತು. ಹಾಸ್ಯ ಹಾಗೂ ಭಾವುಕತೆಯನ್ನು ಬೆರೆಸಿದ ನಿರೂಪಣೆ ಚಿತ್ರದ ಪ್ರಮುಖ ಆಕರ್ಷಣೆಯಾಗಿತ್ತು.
‘ಗರುಡ ಗಮನ ವೃಷಭ ವಾಹನ’ದಿಂದ ದೇಶದಾದ್ಯಂತ ಚರ್ಚೆ
2021 ರಲ್ಲಿ ಬಿಡುಗಡೆಯಾದ ‘ಗರುಡ ಗಮನ ವೃಷಭ ವಾಹನ’ ರಾಜ್ ಬಿ. ಶೆಟ್ಟಿ ಅವರ ಸಿನಿಪಯಣದ ಮತ್ತೊಂದು ಪ್ರಮುಖ ಘಟ್ಟವಾಯಿತು. ಮಂಗಳೂರಿನ ಹಿನ್ನೆಲೆಯಲ್ಲಿನ ಕಥೆ, ವಿಭಿನ್ನ ಪಾತ್ರಗಳ ವಿನ್ಯಾಸ ಮತ್ತು ತೀವ್ರವಾದ ನಿರೂಪಣೆಯ ಮೂಲಕ ಈ ಚಿತ್ರ ಪ್ರೇಕ್ಷಕರ ಹಾಗೂ ವಿಮರ್ಶಕರ ಗಮನ ಸೆಳೆಯಿತು.
ಚಿತ್ರದಲ್ಲಿ ಶಿವನ ಪಾತ್ರದಲ್ಲಿ ಕಾಣಿಸಿಕೊಂಡ ರಾಜ್ ಬಿ. ಶೆಟ್ಟಿ ಅವರ ಅಭಿನಯ ವ್ಯಾಪಕ ಮೆಚ್ಚುಗೆ ಗಳಿಸಿತು. ಕಥೆ ಹೇಳುವ ವಿಧಾನ, ಪಾತ್ರಗಳ ಮನಸ್ಥಿತಿಯನ್ನು ತೆರೆದಿಡುವ ರೀತಿ ಮತ್ತು ಸ್ಥಳೀಯ ಸಂಸ್ಕೃತಿಯ ಬಳಕೆ ಈ ಸಿನಿಮಾವನ್ನು ಕನ್ನಡದ ಗಮನಾರ್ಹ ಚಿತ್ರಗಳ ಸಾಲಿಗೆ ಸೇರಿಸಿತು. ಆ ನಂತರ ಬಂದ ಸು ಫ್ರಮ್ ಸೋ ಸಿನಿಮಾ ಅಂತೂ ಸಿನಿಪ್ರಿಯರ ಮನದಲ್ಲಿ ಅಚ್ಚಳಿಯದೇ ಉಳಿಯಿತು.
ರಾಜ್ ಬಿ. ಶೆಟ್ಟಿ ಅವರ ಸಿನಿಮಾಗಳನ್ನು ಗಮನಿಸಿದರೆ, ವಿಭಿನ್ನ ಕಥೆಗಳಿಗೆ ಅವರು ನೀಡುವ ಆದ್ಯತೆ ಸ್ಪಷ್ಟವಾಗುತ್ತದೆ. ನಿರ್ದೇಶನ, ನಟನೆ ಮತ್ತು ಚಿತ್ರಕಥೆಯ ವಿಚಾರದಲ್ಲಿ ತಮ್ಮದೇ ಆದ ದೃಷ್ಟಿಕೋನ ಹೊಂದಿರುವ ಅವರು, ಕನ್ನಡದ ಸ್ಥಳೀಯ ಕಥನಗಳಿಗೆ ಹೊಸ ಆಯಾಮ ನೀಡಿದ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಮಂಗಳೂರಿನ ಹೋಟೆಲ್‌ನಲ್ಲಿ ಊಟ ಮಾಡುತ್ತಲೇ ಸ್ಕ್ರಿಪ್ಟ್ ಕೆಲಸದಲ್ಲಿ ತೊಡಗಿಸಿಕೊಂಡಿರುವ ಅವರನ್ನು ಕಂಡ ಜನರು ಕೆಲಸದ ಬದ್ಧತೆಯನ್ನು ಮೆಚ್ಚಿದ್ದಾರೆ. ಸೆಲೆಬ್ರಿಟಿಯೊಬ್ಬರ ದೈನಂದಿನ ಬದುಕಿನ ಸರಳ ದೃಶ್ಯವೇ ಅಭಿಮಾನಿಗಳಲ್ಲಿ ಇಷ್ಟೊಂದು ಆಸಕ್ತಿ ಮೂಡಿಸಿರುವುದು ಗಮನಾರ್ಹ.