Bigg Boss Kannada Season 13: ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಸ್ಪರ್ಧಿ ಮಂಜ ಅವರ ವರ್ತನೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಇದೀಗ ಅವರನ್ನು ಮನೆಯಿಂದ ಹೊರಗೆ ಕಳುಹಿಸಲಾಗಿದೆ. ವಿಪರ್ಯಾಸ ಎಂದರೆ ಮಾಡರನ್ ಮಹಾಕವಿ ಮಂಜ ಅವರ ಹುಟ್ಟು ಹಬ್ಬದಂದೇ ಇಂಥದ್ದೊಂದು ಶಾಕ್ ನೀಡಲಾಗಿದೆ. ಸಹಸ್ಪರ್ಧಿಗಳ ಜೊತೆ ಜಗಳವಾಡುವ ಸಂದರ್ಭದಲ್ಲಿ ಅಸಭ್ಯ ಭಾಷೆ ಬಳಸಿದ್ದ ಮಂಜಗೆ ಬಿಗ್ ಬಾಸ್ ಖಡಕ್ ಆದೇಶ ನೀಡಿದ್ದಾರೆ. ಈ ಕುರಿತ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.
ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಜಗಳ, ವಾಗ್ವಾದಗಳು ಹೆಚ್ಚಾಗುತ್ತಿವೆ. ಟಾಸ್ಕ್‌ಗಳ ವಿಚಾರವಾಗಿ ಆರಂಭವಾಗುವ ಮಾತಿನ ಚಕಮಕಿ ಕೆಲವೊಮ್ಮೆ ವೈಯಕ್ತಿಕ ನಿಂದನೆಗಳ ಹಂತಕ್ಕೂ ತಲುಪುತ್ತಿದೆ. ಅದರಲ್ಲೂ ಮಂಜ ಅವರು ಯಶಸ್, ಸೌಂದರ್ಯಾ ಶೆಟ್ಟಿ ಸೇರಿದಂತೆ ಇತರ ಸ್ಪರ್ಧಿಗಳ ಜೊತೆ ಜಗಳವಾಡುವಾಗ ಕೀಳುಮಟ್ಟದ ಭಾಷೆ ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಮಂಜ ಅವರ ಈ ವರ್ತನೆಗೆ ಮನೆಯೊಳಗೆ ಮಾತ್ರವಲ್ಲದೆ ವೀಕ್ಷಕರಿಂದಲೂ ವಿರೋಧ ವ್ಯಕ್ತವಾಗಿತ್ತು. ಇದೀಗ ಬಿಗ್ ಬಾಸ್ ಈ ವಿಚಾರದಲ್ಲಿ ಕಠಿಣ ನಿರ್ಧಾರ ಕೈಗೊಂಡಿರುವುದನ್ನು ಪ್ರೋಮೋದಲ್ಲಿ ತೋರಿಸಲಾಗಿದೆ.
ಮನೆಯ ಸದಸ್ಯರ ಜೊತೆ ವಾಗ್ವಾದ ನಡೆಸುವಾಗ ಮಂಜ ಅಸಭ್ಯವಾಗಿ ಮಾತನಾಡಿದ್ದಾರೆ ಎಂಬ ಕಾರಣಕ್ಕೆ ಬಿಗ್ ಬಾಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಲವು ಬಾರಿ ಎಚ್ಚರಿಕೆ ನೀಡಿದ ನಂತರವೂ ಮನೆಯ ಸದಸ್ಯರ ವ್ಯಕ್ತಿತ್ವದ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಪ್ರೋಮೋದಲ್ಲಿ ಬಿಗ್ ಬಾಸ್, ಮನೆಯ ನಿಯಮಗಳನ್ನು ಉಲ್ಲಂಘಿಸುವ ವರ್ತನೆಯನ್ನು ಸಹಿಸುವುದಿಲ್ಲ ಎಂಬ ಸಂದೇಶ ನೀಡಿದ್ದಾರೆ. ಸ್ಪರ್ಧಿಗಳು ತಮ್ಮ ಮಾತು ಮತ್ತು ನಡವಳಿಕೆಯ ಮೇಲೆ ನಿಯಂತ್ರಣ ಹೊಂದಿರಬೇಕು ಎಂಬುದನ್ನು ಈ ನಿರ್ಧಾರದ ಮೂಲಕ ಸ್ಪಷ್ಟಪಡಿಸಲಾಗಿದೆ.
ಮಂಜ ಅವರ ವರ್ತನೆಯ ಕುರಿತು ಬಿಗ್ ಬಾಸ್ ಕಠಿಣ ಎಚ್ಚರಿಕೆ ನೀಡಿದ್ದು, ಮನೆಯ ಮೂಲ ನಿಯಮ ಉಲ್ಲಂಘಿಸಿದ ಕಾರಣದಿಂದ ಅವರನ್ನು ಹೊರಗೆ ಕಳುಹಿಸುವ ಆದೇಶ ನೀಡಿದ್ದಾರೆ ಎಂದು ಪ್ರೋಮೋದಲ್ಲಿ ತೋರಿಸಲಾಗಿದೆ. ಇದರ ಬೆನ್ನಲ್ಲೇ ಬಿಗ್ ಬಾಸ್ ಮನೆಯ ಮುಖ್ಯದ್ವಾರ ತೆರೆಯಲಾಗಿದ್ದು, ಮಂಜ ಆ ದ್ವಾರದ ಮೂಲಕ ಹೊರಗೆ ತೆರಳಿದ್ದಾರೆ. ಈ ದೃಶ್ಯ ಇದೀಗ ಬಿಗ್ ಬಾಸ್ ವೀಕ್ಷಕರ ಗಮನ ಸೆಳೆದಿದೆ.
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಜಗಳ ನಡೆಯುವುದು ಸಾಮಾನ್ಯವಾದರೂ, ಅಸಭ್ಯ ಭಾಷೆ ಮತ್ತು ವೈಯಕ್ತಿಕ ನಿಂದನೆಗಳಿಗೆ ಅವಕಾಶವಿದೆಯೇ ಎಂಬ ಪ್ರಶ್ನೆ ಮತ್ತೆ ಚರ್ಚೆಗೆ ಬಂದಿದೆ. ಮಂಜ ಅವರನ್ನು ಹೊರಗೆ ಕಳುಹಿಸಿರುವ ಕ್ರಮವು ಮನೆಯ ನಿಯಮಗಳ ಪಾಲನೆಯ ಮಹತ್ವವನ್ನು ಎತ್ತಿ ತೋರಿಸಿದೆ.