ಕಾವ್ಯ ಮಾರನ್ - ಅನಿರುದ್ಧ್ ಮದುವೆ.. ಇಬ್ಬರ ಆಸ್ತಿ ಲೆಕ್ಕಚಾರ ಕೇಳಿದ್ರೆ ನಿಮ್ಮ ತಲೆ ಗಿರ್ ಅನ್ನುತ್ತೆ!
ಅನಿರುದ್ಧ್ ರವಿಚಂದರ್ ಕಾವ್ಯಾ ಮಾರನ್ ಅವರ ಮದುವೆ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ, ಈ ತಾರಾ ಜೋಡಿಯು ನವೆಂಬರ್ 11, 2026 ರಂದು ಗ್ರೀಸ್ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದು, ಮಾಧ್ಯಮ ಹಾಗೂ ಉದ್ಯಮ ವಲಯದಲ್ಲಿ ಈ ಜೋಡಿಯ ಸಂಪತ್ತು ಮತ್ತು ಹಿನ್ನೆಲೆ ಕುರಿತು ಭಾರೀ ಚರ್ಚೆ ನಡೆಯುತ್ತಿದೆ.. ಸಂಪೂರ್ಣ ವಿವರ ಇಲ್ಲಿದೆ..
Kavya Maran Anirudh wedding : ಸೌತ್ ಸಿನಿ ಇಂಡಸ್ಟ್ರಿಯ ಸ್ಟಾರ್ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮತ್ತು ಐಪಿಎಲ್ನ ಸನ್ರೈಸರ್ಸ್ ಹೈದರಾಬಾದ್ ತಂಡದ ಸಹ-ಮಾಲಕಿ ಕಾವ್ಯಾ ಮಾರನ್ ಅವರ ಮದುವೆಯ ಸುದ್ದಿಯು ಈಗ ಸಿನಿರಂಗ ಹಾಗೂ ಕ್ರೀಡಾ ಲೋಕದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಈ ಜೋಡಿಯ ವಿವಾಹ ಮುಂಬರುವ ನವೆಂಬರ್ 11, 2026ರಂದು ಗ್ರೀಸ್ನಲ್ಲಿ ನಡೆಯಲಿದೆ ಎಂದು ವರದಿಗಳು ತಿಳಿಸಿವೆ. ಇದರ ಬೆನ್ನಲ್ಲೇ ಅನಿರುದ್ಧ್ ಹಾಗೂ ಕಾವ್ಯಾ ಅವರ ಕುರಿತು ಅಂತರ್ಜಾಲದಲ್ಲಿ ನೆಟ್ಟಿಗರು ಹಲವಾರು ವಿಚಾರವಾಗಿ ಹುಡುಕಾಟ ನಡೆಸಿದ್ದಾರೆ.. ಇದರಲ್ಲಿ ಆಸ್ತಿ ವಿಚಾರವೂ ಒಂದು..
ತಮಿಳು ಚಿತ್ರರಂಗದಿಂದ ತಮ್ಮ ವೃತ್ತಿಜೀವನ ಆರಂಭಿಸಿದ ಅನಿರುದ್ಧ್ ರವಿಚಂದರ್, ಅತ್ಯಂತ ಕಡಿಮೆ ವಯಸ್ಸಿನಲ್ಲೇ ಅಪಾರ ಜನಪ್ರಿಯತೆ ಗಳಿಸಿದ್ದಾರೆ. 2012ರಲ್ಲಿ ಬಿಡುಗಡೆಯಾದ ‘3’ ಸಿನಿಮಾದ ‘ವೈ ದಿಸ್ ಕೊಲವೆರಿ ಡಿ’ ಹಾಡಿನ ಮೂಲಕ ಇವರು ಇಡೀ ದೇಶದ ಗಮನ ಸೆಳೆದರು. ಆ ಬಳಿಕ ‘ಜೈಲರ್’, ‘ಜವಾನ್’, ‘ವಿಕ್ರಮ್’ ಸೇರಿದಂತೆ ಹಲವು ಬ್ಲಾಕ್ಬಸ್ಟರ್ ಸಿನಿಮಾಗಳಿಗೆ ಅದ್ಭುತ ಸಂಗೀತ ನೀಡಿ ದಕ್ಷಿಣ ಭಾರತದ ನಂಬರ್ ಒನ್ ಮ್ಯೂಸಿಕ್ ಡೈರೆಕ್ಟರ್ ಎನಿಸಿಕೊಂಡಿದ್ದಾರೆ. ಸದ್ಯ ಇವರ ಸಂಗೀತಕ್ಕೆ ಕೋಟ್ಯಂತರ ಅಭಿಮಾನಿಗಳಿದ್ದಾರೆ.
ಮಾಧ್ಯಮ ಸಾಮ್ರಾಜ್ಯದ ಉತ್ತರಾಧಿಕಾರಿ ಕಾವ್ಯಾ ಮಾರನ್
ಮತ್ತೊಂದೆಡೆ ಕಾವ್ಯಾ ಮಾರನ್ ಅವರು ಭಾರತದ ಅತ್ಯಂತ ದೊಡ್ಡ ಮಾಧ್ಯಮ ಸಂಸ್ಥೆಗಳಲ್ಲಿ ಒಂದಾದ 'ಸನ್ ಗ್ರೂಪ್'ನ ಮುಖ್ಯಸ್ಥ ಕಲಾನಿದಿ ಮಾರನ್ ಅವರ ಪುತ್ರಿ. ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ (SRH) ತಂಡದ ಸಹ-ಮಾಲಕಿಯಾಗಿ ಕ್ರೀಡಾ ಪ್ರೇಮಿಗಳಿಗೂ ಇವರು ಚಿರಪರಿಚಿತರು. ತಮ್ಮ ವ್ಯವಹಾರಿಕ ಚಾತುರ್ಯ ಹಾಗೂ ಜವಾಬ್ದಾರಿಯಿಂದ ದೊಡ್ಡ ಮಟ್ಟದ ಗುರುತಿಸಿಕೊಳ್ಳುವಿಕೆಯ ಜತೆಗೆ, ಉದ್ಯಮ ವಲಯದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಜೋಡಿಯ ಆಸ್ತಿ ಮತ್ತು ಸಂಪತ್ತಿನ ವಿವರ
ಮಾಧ್ಯಮಗಳ ವರದಿ ಪ್ರಕಾರ, ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರ ವೈಯಕ್ತಿಕ ನಿವ್ವಳ ಸಂಪತ್ತು ಸುಮಾರು ₹50 ಕೋಟಿಗಳಷ್ಟಿದೆ. ಇವರು ಒಂದು ಸಿನಿಮಾಗೆ ಅಂದಾಜು ₹8 ರಿಂದ ₹10 ಕೋಟಿಗಳವರೆಗೆ ಸಂಭಾವನೆ ಪಡೆಯುತ್ತಾರೆ. ಇದರೊಂದಿಗೆ ಲೈವ್ ಕನ್ಸರ್ಟ್ಗಳು, ಮ್ಯೂಸಿಕ್ ಆಲ್ಬಮ್ಗಳು ಮತ್ತು ಬ್ರಾಂಡ್ ಎಂಡೋರ್ಸ್ಮೆಂಟ್ಗಳ ಮೂಲಕವೂ ಕೋಟ್ಯಂತರ ರೂಪಾಯಿ ಆದಾಯ ಗಳಿಸುತ್ತಾರೆ.
ಇನ್ನು ಕಾವ್ಯಾ ಮಾರನ್ ಅವರ ವೈಯಕ್ತಿಕ ನಿವ್ವಳ ಸಂಪತ್ತು ₹400 ರಿಂದ ₹500 ಕೋಟಿಗಳ ನಡುವೆ ಇದೆ ಎಂದು ಅಂದಾಜಿಸಲಾಗಿದೆ. ಇವರ ಒಟ್ಟು ಕುಟುಂಬದ ಮಾಧ್ಯಮ ಸಾಮ್ರಾಜ್ಯವಾದ ಸನ್ ಗ್ರೂಪ್ನ ನಿವ್ವಳ ಮೌಲ್ಯವು ₹19,000 ಕೋಟಿಗಳಿಗೂ ಅಧಿಕವಾಗಿದೆ. ಸದ್ಯ ಈ ಇಬ್ಬರು ದಿಗ್ಗಜರ ಮದುವೆಯ ಸುದ್ದಿಯು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಅಧಿಕೃತ ಘೋಷಣೆಗಾಗಿ ಎಲ್ಲರೂ ಕಾದುನೋಡುತ್ತಿದ್ದಾರೆ.