SOCIAL MEDIA

Newsletter

PARTNER SITES
Select Language Select State

ದರ್ಶನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಸ್ಯಾಂಡಲ್‌ವುಡ್‌ನ ಇಬ್ಬರು ಸ್ಟಾರ್‌ ನಟರಿಗೆ ಕೋರ್ಟ್ ನೋಟಿಸ್

ರೇಣುಕಾಸ್ವಾಮಿ ಪ್ರಕರಣದ ನ್ಯಾಯಾಂಗ ವಿಚಾರಣೆಯಲ್ಲಿ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಪ್ರದೋಷ್ ಮಾಫಿ ಸಾಕ್ಷಿಯಾಗಿ ನೀಡಿದ ಹೇಳಿಕೆ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ, ಸ್ಯಾಂಡಲ್‍ವುಡ್‌ನ ಇಬ್ಬರು ಜನಪ್ರಿಯ ನಟರಿಗೆ ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯ ಅಧಿಕೃತವಾಗಿ ಸಮನ್ಸ್ ಜಾರಿ ಮಾಡಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

Reported By Krishna NK Written By Krishna NK
Published: Oct 08, 2026, 08:22 PM IST | Updated: Oct 08, 2026, 08:26 PM IST
Image Credit: Actor Darshan case
Join

Renukaswamy Case updates : ರಾಜ್ಯಾದ್ಯಂತ ತೀವ್ರ ಕುತೂಹಲ ಮತ್ತು ಸಂಚಲನ ಮೂಡಿಸಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ನ್ಯಾಯಾಂಗ ವಿಚಾರಣೆ ಇದೀಗ ಹೊಸ ಮೈಲಿಗಲ್ಲು ತಲುಪಿದೆ. ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯದಲ್ಲಿ ಪ್ರಸ್ತುತ ವಿಚಾರಣೆ ಭರದಿಂದ ನಡೆಯುತ್ತಿದ್ದು, ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಪ್ರದೋಷ್ ಮಾಫಿ ಸಾಕ್ಷಿಯಾಗಿ (Approver) ಬದಲಾಗಿ ತನ್ನ ಹೇಳಿಕೆಯನ್ನು ಯಶಸ್ವಿಯಾಗಿ ದಾಖಲಿಸಿದ್ದಾನೆ. ಈ ಪ್ರಮುಖ ಬೆಳವಣಿಗೆಯ ಬೆನ್ನಲ್ಲೇ, ಪ್ರಕರಣದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷ ಸಾಕ್ಷಿಗಳಾಗಿರುವ ಸ್ಯಾಂಡಲ್‍ವುಡ್‌ ಪ್ರಸಿದ್ಧ ನಟರಿಗೆ ನ್ಯಾಯಾಲಯವು ಅಧಿಕೃತವಾಗಿ ಸಮನ್ಸ್ ಜಾರಿ ಮಾಡಿದೆ.  

ಸಮನ್ಸ್ ಮತ್ತು ಕಡ್ಡಾಯ ಹಾಜರಿಗೆ ಸೂಚನೆ
ತನಿಖಾ ತಂಡವು ನ್ಯಾಯಾಲಯಕ್ಕೆ ಸಲ್ಲಿಸಿರುವ ಸಾಕ್ಷಿಗಳ ಪಟ್ಟಿಯಲ್ಲಿ ನಟ ಚಿಕ್ಕಣ್ಣ ಅವರನ್ನು CW-80 ಹಾಗೂ ನಟ ಯಶಸ್ ಸೂರ್ಯ ಅವರನ್ನು CW-98 ಎಂದು ಗುರುತಿಸಿದೆ. ಈ ಹಿನ್ನೆಲೆಯಲ್ಲಿ ಇಬ್ಬರೂ ನಟರು ಅಕ್ಟೋಬರ್ 13ರಂದು ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆಗಳನ್ನು ದಾಖಲಿಸುವುದು ಕಡ್ಡಾಯವಾಗಿದೆ. ನ್ಯಾಯಾಧೀಶರ ಮುಂದೆ ನೀಡುವ ಈ ಸಾಕ್ಷ್ಯಗಳು ವಿಚಾರಣೆಯ ಪ್ರಮುಖ ಭಾಗವಾಗಲಿದ್ದು, ದರ್ಶನ್ ಹಾಗೂ ಇತರ ಆರೋಪಿಗಳ ವಿರುದ್ಧದ ಸಾಕ್ಷ್ಯಾಧಾರಗಳನ್ನು ಮತ್ತಷ್ಟು ಬಲಪಡಿಸಲಲಿವೆ.

ಸ್ಟೋನಿ ಬ್ರೂಕ್ ಪಾರ್ಟಿ ಬಗ್ಗೆ ಮಾಹಿತಿ
ವಿಚಾರಣೆಯ ವೇಳೆ ಬೆಳಕಿಗೆ ಬಂದ ಪ್ರಮುಖ ಮಾಹಿತಿಯ ಪ್ರಕಾರ, ಕೊಲೆ ನಡೆದ ದಿನದಂದು ಬೆಂಗಳೂರಿನ ಆರ್‌ಆರ್‌ ನಗರದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ನಟ ದರ್ಶನ್ ಹಾಗೂ ಅವರ ಆಪ್ತ ಬಳಗ ವಿಶೇಷ ಪಾರ್ಟಿಯೊಂದನ್ನು ಆಯೋಜಿಸಿತ್ತು. ಈ ಪಾರ್ಟಿಯಲ್ಲಿ ನಟರಾದ ಚಿಕ್ಕಣ್ಣ ಮತ್ತು ಯಶಸ್ ಸೂರ್ಯ ಸಹ ಭಾಗಿಯಾಗಿದ್ದರು. ಪಾರ್ಟಿ ನಡೆಯುತ್ತಿದ್ದ ಮಧ್ಯದಲ್ಲೇ ದರ್ಶನ್ ಶೆಡ್‌ಗೆ ತೆರಳಿ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳಿದ್ದು, ಪಾರ್ಟಿಯಲ್ಲಿ ನಡೆದ ಸಂಭಾಷಣೆಗಳು, ಕೃತ್ಯದ ಮುನ್ಸೂಚನೆ ಹಾಗೂ ಅಲ್ಲಿ ಹಾಜರಿದ್ದವರ ವರ್ತನೆಯ ಕುರಿತು ಈ ನಟರಿಂದ ನ್ಯಾಯಾಲಯ ಮಹತ್ವದ ಮಾಹಿತಿ ಪಡೆಯಲಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಪೂರ್ಣ ಹಿನ್ನೆಲೆ
2024ರ ಜೂನ್ ತಿಂಗಳಿನಲ್ಲಿ ಚಿತ್ರದುರ್ಗದ ಫಾರ್ಮಸಿಸ್ಟ್ ರೇಣುಕಾಸ್ವಾಮಿ, ನಟಿ ಪವಿತ್ರಾ ಗೌಡ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ ಎಂಬ ಆರೋಪ ಕೇಳಿಬಂದಿತ್ತು. ಇದರಿಂದ ಕೆರಳಿದ ನಟ ದರ್ಶನ್ ಬೆಂಬಲಿಗರು ಜೂನ್ 8, 2024 ರಂದು ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿ ಬೆಂಗಳೂರಿನ ಪಟ್ಟಣಗೆರೆಯ ಶೆಡ್‌ಗೆ ಕರೆತಂದಿದ್ದರು. ಅಲ್ಲಿ ಆತನಿಗೆ ತೀವ್ರವಾಗಿ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು.

ಜೂನ್ 9ರಂದು ಬೆಂಗಳೂರಿನ ಸುಮ್ಮನಹಳ್ಳಿಯ ರಾಜಕಾಲುವೆ ಬಳಿ ಶವ ಪತ್ತೆಯಾದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಆರಂಭದಲ್ಲಿ ಕೆಲವರು ಅಪರಾಧವನ್ನು ತಮ್ಮ ತಲೆಗೆ ಹಾಕಿಕೊಳ್ಳಲು ಯತ್ನಿಸಿದರೂ, ತನಿಖಾಧಿಕಾರಿಗಳು ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳನ್ನು ಬಂಧಿಸಿದ್ದರು. ಪ್ರಸ್ತುತ ಸಾವಿರಾರು ಪುಟಗಳ ದೋಷಾರೋಪ ಪಟ್ಟಿಯ ಆಧಾರದ ಮೇಲೆ ಸಿಸಿಎಚ್ ನ್ಯಾಯಾಲಯದಲ್ಲಿ ದಿನನಿತ್ಯದ ವಿಚಾರಣೆ ಮುಂದುವರಿದಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES