Maimata album song : ರ‍್ಯಾಪರ್ ಚಂದನ್ ಶೆಟ್ಟಿ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ತಮ್ಮ ‘ಮೈಮಾಟ’ ಆಲ್ಬಂ ಸಾಂಗ್ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಪ್ರೀತಿ, ಬ್ರೇಕಪ್, ಮೋಸ, ನೋವು.. ಹೀಗೆ ಪ್ರೇಮ ವೈಫಲ್ಯದ ಒಂದೊಂದು ಭಾವನೆಯನ್ನೂ ಹಾಡಿನ ಸಾಲುಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಹಾಡು ಕೇಳಿದವರಿಗೆ ಇದು ಚಂದನ್ ಶೆಟ್ಟಿಯವರ ಸ್ವಂತ ಕಥೆಯೇ ಇರಬಹುದಾ ಅನ್ನೋ ಅನುಮಾನವೂ ಮೂಡಿದೆ. ಹಾಗಾದ್ರೆ, ‘ಮೈಮಾಟ’ ಹಾಡಿನ ಹಿಂದಿನ ಕಥೆಯೇನು? ಸ್ವತಃ ಚಂದನ್ ಶೆಟ್ಟಿ ಹೇಳಿದ್ದೇನು? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
ಮತ್ತೆ ಕಮ್ ಬ್ಯಾಕ್ ಮಾಡಿದ ಹಳೆಯ ಚಂದನ್ ಶೆಟ್ಟಿ
ಚಂದನ್ ಶೆಟ್ಟಿ ಅಂದ್ರೆ ನೆನಪಾಗೋದೇ ವಿಭಿನ್ನ ಶೈಲಿಯ ರ‍್ಯಾಪ್ ಸಾಂಗ್ಸ್. ಇದೀಗ ‘ಮೈಮಾಟ’ ಆಲ್ಬಂ ಸಾಂಗ್ ಮೂಲಕ ಮತ್ತೆ ತಮ್ಮದೇ ಸ್ಟೈಲ್‌ನಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಸುಮಾರು 3 ನಿಮಿಷ 14 ಸೆಕೆಂಡ್‌ಗಳ ಈ ಹಾಡಿನಲ್ಲಿ ಪ್ರೀತಿಯ ಹೆಸರಿನಲ್ಲಿ ಎದುರಾದ ನೋವು, ನಂಬಿಕೆ ದ್ರೋಹ ಮತ್ತು ಬ್ರೇಕಪ್‌ನ ಕಹಿ ಅನುಭವಗಳನ್ನ ಪದಗಳ ಮೂಲಕ ಬಿಚ್ಚಿಟ್ಟಿದ್ದಾರೆ.ಹಾಡು ಕೇಳಿದ ಅಭಿಮಾನಿಗಳು ಕೂಡ ಫುಲ್ ಖುಷಿಯಾಗಿದ್ದಾರೆ. ‘ನಮ್ಮ ಹಳೆಯ ಚಂದನ್ ಶೆಟ್ಟಿ ವಾಪಸ್ ಬಂದಿದ್ದಾರೆ’, ‘ಒಂದೊಂದು ಸಾಲೂ ಬೆಂಕಿ’ ಅಂತ ಹಾಡನ್ನ ಮೆಚ್ಚಿಕೊಂಡಿದ್ದಾರೆ. ‘ಮೈಮಾಟ ಅಂದ್ರೆ ಬರೀ ಮಾತಲ್ಲ, ಯುವಕರ ಎದೆಯೊಳಗಿನ ಕಿಚ್ಚು’ ಅನ್ನುವ ರೀತಿಯ ಪ್ರತಿಕ್ರಿಯೆಗಳೂ ವ್ಯಕ್ತವಾಗಿವೆ.
ಒಂದೊಂದು ಸಾಲಲ್ಲೂ ಬ್ರೇಕಪ್ ನೋವು!
‘ನೀ ಬಂದು ಕಿತ್ತೋಗೆದೆ ಇದ್ದೊಂದ್ ಹಾರ್ಟ್’.. ಈ ಸಾಲು ಕೇಳಿದ್ರೆ ಪ್ರೀತಿಯಲ್ಲಿ ಮನಸ್ಸು ಕಳೆದುಕೊಂಡವರ ನೋವು ನೆನಪಾಗುತ್ತೆ. ಆರಂಭದಲ್ಲಿ ಪ್ರೀತಿಯಿಂದ ಹತ್ತಿರ ಬಂದವರು, ಕೊನೆಗೆ ದೂರವಾದಾಗ ಆಗುವ ತಳಮಳವನ್ನ ಚಂದನ್ ಶೆಟ್ಟಿ ಹಾಡಿನಲ್ಲಿ ಕಟ್ಟಿಕೊಟ್ಟಿದ್ದಾರೆ.‘ನನ್ನವಳು ಅಂತ ನಾ ಮರೀತಾ ಇದ್ದೆ, ನನ್ನ ಮುಗಿಸಾ ಪ್ಲಾನ್ ಬರೀತಾ ಇದ್ದೆ’ ಅನ್ನುವ ಸಾಲುಗಳು ಪ್ರೀತಿಯಲ್ಲಿ ನಂಬಿಕೆ ಕಳೆದುಕೊಂಡವರ ಮನದ ಮಾತಿನಂತಿವೆ. ಪ್ರೀತಿಗಾಗಿ ಎಲ್ಲವನ್ನೂ ಕೊಟ್ಟರೂ, ಕೊನೆಗೆ ನೋವು ಉಳಿದಾಗ ಆಗುವ ಸಂಕಟವನ್ನ ಈ ಹಾಡು ಬಿಂಬಿಸುತ್ತದೆ.ಇಷ್ಟೇ ಅಲ್ಲ, ಪ್ರೀತಿಯ ಆರಂಭದಲ್ಲಿ ಒಂದು ರೀತಿ ಇದ್ದವರು, ದಿನ ಕಳೆದಂತೆ ಬದಲಾಗುವ ರೀತಿಯನ್ನೂ ಹಾಡಿನಲ್ಲಿ ಹೇಳಿದ್ದಾರೆ. ಹೀಗಾಗಿಯೇ ‘ಮೈಮಾಟ’ ಹಾಡು ಯುವಕರ ಗಮನ ಸೆಳೆಯುತ್ತಿದೆ.
ಇದು ಚಂದನ್ ಶೆಟ್ಟಿಯ ರಿಯಲ್ ಲೈಫ್ ಸ್ಟೋರಿನಾ?
‘ಮೈಮಾಟ’ ಹಾಡಿನ ಸಾಲುಗಳನ್ನ ಕೇಳಿದ್ರೆ ಇದು ಚಂದನ್ ಶೆಟ್ಟಿಯವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ್ದಾ ಅನ್ನೋ ಪ್ರಶ್ನೆ ಮೂಡೋದು ಸಹಜ. ಯಾಕಂದ್ರೆ, ಹಾಡಿನಲ್ಲಿರುವ ನೋವು, ಪ್ರೀತಿಯ ವೈಫಲ್ಯ ಮತ್ತು ಮನದೊಳಗಿನ ಆಕ್ರೋಶ ಅಷ್ಟೊಂದು ಸಹಜವಾಗಿ ಮೂಡಿಬಂದಿವೆ. ಆದರೆ ಚಂದನ್ ಶೆಟ್ಟಿ ಖಾಸಗಿ ಮಾಧ್ಯಮವೊಂದರಲ್ಲಿ ಮಾತನಾಡಿದ್ದು, ಚಂದನ್ ಶೆಟ್ಟಿ ಇದು ತಮ್ಮ ರಿಯಲ್ ಲೈಫ್ ಕಥೆಯಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ. ಹಾಗಾಗಿಯೇ ಹಾಡಿನ ಪ್ರಾರಂಭದಲ್ಲಿ ಡಿಸ್ಕ್ಲೈಮರ್ ಕೂಡ ಹಾಕಿರುವುದಾಗಿ ಹೇಳಿದ್ದಾರೆ.ಹೀಗಾಗಿ, ಹಾಡಿನ ಸಾಲುಗಳನ್ನ ಅವರ ವೈಯಕ್ತಿಕ ಬದುಕಿಗೆ ನೇರವಾಗಿ ಹೋಲಿಕೆ ಮಾಡುವುದು ಸರಿಯಲ್ಲ. ಇದು ಪ್ರೇಮ ವೈಫಲ್ಯದ ಭಾವನೆಗಳನ್ನ ಆಧರಿಸಿದ ಹಾಡು ಅನ್ನೋದು ಇಲ್ಲಿ ಮುಖ್ಯ.
ಇದು ಸೋಲಲ್ಲ ಆರಂಭ ಅಷ್ಟೇ
‘ನೀ ಹೋದ್ಮೇಲೆ ನಾ ಸೋತಿಲ್ಲ’.. ‘ನೀ ಬಿಟ್ಟು ಹೋದ ಜಾಗ ಈಗ ಖಾಲಿ ಇಲ್ಲ, ಅಲ್ಲಿ ಬರೀ ನನ್ನ ಕನಸುಗಳೇ ತುಂಬಿವೆ’.. ಈ ಸಾಲುಗಳು ಹಾಡಿನ ಮತ್ತೊಂದು ಮುಖವನ್ನ ತೋರಿಸುತ್ತವೆ.ಪ್ರೀತಿ ಮುರಿದು ಬಿದ್ದಿರಬಹುದು. ಆದರೆ, ಬದುಕೇ ಮುಗಿದುಹೋಯ್ತು ಅಂತಲ್ಲ. ಕಳೆದುಕೊಂಡ ಪ್ರೀತಿಯ ನೋವಿನಿಂದ ಹೊರಬಂದು, ಸ್ವಂತ ಕನಸುಗಳನ್ನ ನನಸಾಗಿಸಿಕೊಳ್ಳುವ ಛಲವನ್ನ ಈ ಸಾಲುಗಳು ಹೇಳುತ್ತವೆ. ‘ನನ್ನ ಕಥೆ ಮುಗಿತು ಅಂತ ನೀ ಅಂದುಕೊಂಡೆ, ಅಸಲಿ ಆಟ ಇನ್ನೂ ಶುರುನೇ ಆಗಿಲ್ಲ’ ಅನ್ನುವ ಅರ್ಥದ ಸಾಲುಗಳು ಹಾಡಿಗೆ ಮತ್ತಷ್ಟು ತೂಕ ನೀಡಿವೆ.
ವಿಭಿನ್ನ ರೀತಿಯಲ್ಲಿ ಶೂಟಿಂಗ್
‘ಮೈಮಾಟ’ ಹಾಡಿನ ಸಾಹಿತ್ಯ ಮಾತ್ರವಲ್ಲ, ಚಿತ್ರೀಕರಣವೂ ಗಮನ ಸೆಳೆಯುತ್ತಿದೆ. ಶ್ರೀರಂಗಪಟ್ಟಣದ ಹಳೆಯ ಸ್ಮಶಾನದಲ್ಲಿ ಹಾಗೂ ಕಾರ್ ಗುಜರಿಯಲ್ಲೂ ಹಾಡಿನ ಚಿತ್ರೀಕರಣ ನಡೆಸಲಾಗಿದೆ. ಹಾಡಿನ ಭಾವನೆಗೆ ತಕ್ಕಂತೆ ವಿಭಿನ್ನ ಹಿನ್ನೆಲೆಯನ್ನ ಬಳಸಿಕೊಂಡಿರುವುದು ವಿಶೇಷವಾಗಿದೆ.
ಒಟ್ಟಿನಲ್ಲಿ, ಪ್ರೀತಿ, ನೋವು, ಬ್ರೇಕಪ್ ಮತ್ತು ಸೋಲಿನಿಂದ ಮತ್ತೆ ಎದ್ದು ನಿಲ್ಲುವ ಛಲ.. ಇವೆಲ್ಲವನ್ನೂ ‘ಮೈಮಾಟ’ ಹಾಡಿನಲ್ಲಿ ಚಂದನ್ ಶೆಟ್ಟಿ ಕಟ್ಟಿಕೊಟ್ಟಿದ್ದಾರೆ. ಇದು ಅವರ ರಿಯಲ್ ಲೈಫ್ ಕಥೆಯಲ್ಲ ಅಂತ ಸ್ಪಷ್ಟನೆ ಸಿಕ್ಕಿದ್ದರೂ, ಹಾಡಿನ ಸಾಲುಗಳು ಮಾತ್ರ ಪ್ರೇಮ ವೈಫಲ್ಯ ಅನುಭವಿಸಿದವರ ಮನಸ್ಸಿಗೆ ಹತ್ತಿರವಾಗಿವೆ.ಪ್ರೀತಿ ಹೋಯ್ತು.. ಹೃದಯ ಒಡೆಯಿತು.. ಆದ್ರೆ ಬದುಕು ನಿಲ್ಲಲಿಲ್ಲ! ಚಂದನ್ ಶೆಟ್ಟಿಯ ‘ಮೈಮಾಟ’ ಈಗ ಬ್ರೇಕಪ್ ನೋವಿನ ಹೊಸ ರ‍್ಯಾಪ್ ಅಲೆಯಾಗಿದೆ.