ಸಿಂಗಲ್ ಸ್ಲೀವ್ ಬಟ್ಟೆ ಧರಿಸಿದ್ದಕ್ಕೆ ಪಬ್ಲಿಕ್‌ನಲ್ಲೇ ಹೊಡೆದಿದ್ದ ಮಾಜಿ ಪ್ರೇಮಿ! ಕರಾಳ ಅನುಭವ ಬಿಚ್ಚಿಟ್ಟ ಬಿಗ್ ಬಾಸ್ ಸ್ಪರ್ಧಿ
Bigg Boss Contestant Love Story: ಮಾಜಿ ಪ್ರಿಯಕರ ತಮ್ಮ ಮೇಲೆ ನಿರಂತರವಾಗಿ ನಿಗಾ ಇಡುತ್ತಿದ್ದ. ಯಾವುದೇ ಮುನ್ಸೂಚನೆ ನೀಡದೆ ಕಾಲೇಜಿನ ತರಗತಿಗೆ ಬಂದು ಕಿರುಕುಳ ನೀಡುತ್ತಿದ್ದ ಎಂದು ಬಿಗ್ ಬಾಸ್ ಸ್ಪರ್ಧಿ ಹೇಳಿದ್ದಾರೆ.
ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿ ಕನಿಕಾ ಮಾನ್ ತಮ್ಮ ಹಿಂದಿನ ಪ್ರೇಮ ಸಂಬಂಧದ ಆಘಾತಕಾರಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಮಾಜಿ ಪ್ರಿಯಕರನಿಂದ ಅನುಭವಿಸಿದ ಹಿಂಸೆ, ಬೆದರಿಕೆ ಹಾಗೂ ಕಿರುಕುಳದ ಘಟನೆಗಳನ್ನು ವಿವರಿಸಿದ್ದು, ಅವರ ಮಾತುಗಳು ಮನೆಯ ಇತರ ಸ್ಪರ್ಧಿಗಳಲ್ಲಿ ಆತಂಕ ಮೂಡಿಸಿವೆ. ಸಲ್ಮಾನ್ ಖಾನ್ ನಿರೂಪಣೆಯ ‘ಬಿಗ್ ಬಾಸ್ 20’ ಕಾರ್ಯಕ್ರಮದಲ್ಲಿ ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ ಕನಿಕಾ ಮಾನ್, ಹಿಂದಿನ ಸಂಬಂಧದಲ್ಲಿ ತಾವು ಎದುರಿಸಿದ ಮಾನಸಿಕ ಮತ್ತು ದೈಹಿಕ ಹಿಂಸೆಯ ಬಗ್ಗೆ ವಿವರಿಸಿದ್ದಾರೆ.
ಕಾಲೇಜಿನ ಮೊದಲ ವರ್ಷದಲ್ಲಿ ಕನಿಕಾ ತಮ್ಮ ಮೊದಲ ಪ್ರಿಯಕರನನ್ನು ಭೇಟಿಯಾಗಿದ್ದರು. ಕುಟುಂಬದ ಕಟ್ಟುನಿಟ್ಟಿನ ವಾತಾವರಣದಿಂದ ಬೆಳೆದಿದ್ದ ಅವರಿಗೆ ಕಾಲೇಜು ಜೀವನದಲ್ಲಿ ಇತರ ವಿದ್ಯಾರ್ಥಿನಿಯರ ಸ್ವಾತಂತ್ರ್ಯ ಕಂಡು ತಮಗೂ ಒಬ್ಬ ಸಂಗಾತಿ ಇರಬೇಕೆಂಬ ಆಸೆ ಮೂಡಿತ್ತಂತೆ. ಈ ಹಿನ್ನೆಲೆಯಲ್ಲಿ ಫೇಸ್‌ಬುಕ್ ಖಾತೆ ತೆರೆದ ಅವರು, ಅಲ್ಲಿ ಪರಿಚಯವಾದ ಯುವಕನೊಂದಿಗೆ ಸ್ನೇಹ ಬೆಳೆಸಿಕೊಂಡರು. ಆದರೆ ಆರಂಭದಲ್ಲಿ ಚೆನ್ನಾಗಿದ್ದ ಈ ಪರಿಚಯ ಕ್ರಮೇಣ ಸಮಸ್ಯಾತ್ಮಕ ಸಂಬಂಧವಾಗಿ ಬದಲಾಯಿತು ಎಂದು ಕನಿಕಾ ತಿಳಿಸಿದ್ದಾರೆ.
ಉಡುಪಿನ ವಿಚಾರಕ್ಕೆ ಸಾರ್ವಜನಿಕವಾಗಿ ಹಲ್ಲೆ
ಮಾಜಿ ಪ್ರಿಯಕರ ತಮ್ಮ ಮೇಲೆ ನಿರಂತರವಾಗಿ ನಿಗಾ ಇಡುತ್ತಿದ್ದ. ಯಾವುದೇ ಮುನ್ಸೂಚನೆ ನೀಡದೆ ಕಾಲೇಜಿನ ತರಗತಿಗೆ ಬಂದು ಕಿರುಕುಳ ನೀಡುತ್ತಿದ್ದ ಎಂದು ಅವರು ಹೇಳಿದ್ದಾರೆ. ಒಮ್ಮೆ ಸಿಂಗಲ್ ಸ್ಟ್ರಾಪ್ ಉಡುಪು ಧರಿಸಿದ್ದಕ್ಕೆ ಎಲ್ಲರ ಎದುರೇ ಕಪಾಳಮೋಕ್ಷ ಮಾಡಿದ್ದನಂತೆ. ಇದರಿಂದ ಕಿವಿಗೆ ಗಾಯವಾಗಿ ರಕ್ತಸ್ರಾವವಾಗಿತ್ತು. ಘಟನೆ ನಡೆದ ಸಂದರ್ಭದಲ್ಲಿ ಸುತ್ತಮುತ್ತಲಿದ್ದವರು ಯಾರೂ ಸಹಾಯಕ್ಕೆ ಬರಲಿಲ್ಲ ಎಂದು ಕನಿಕಾ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ಸಣ್ಣಪುಟ್ಟ ವಿಚಾರಗಳಿಗೂ ತಂದೆಗೆ ಕರೆ ಮಾಡಿ ದೂರು ನೀಡುವುದಾಗಿ ಆತ ಬೆದರಿಸುತ್ತಿದ್ದ ಎಂದು ತಿಳಿಸಿದ್ದಾರೆ.
ಚಾಕು ತೋರಿಸಿ ಬೆದರಿಕೆ ಹಾಕಿದ ಘಟನೆ
ಈ ಸಂಬಂಧದಿಂದ ಹೊರಬರಲು ಕನಿಕಾ ಕಾನೂನು ಅಧ್ಯಯನ ಆರಂಭಿಸಿದ್ದು, ಇದರಿಂದ ತಮ್ಮ ಹಕ್ಕುಗಳು ಮತ್ತು ಕಾನೂನು ಕ್ರಮಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಯಿತು ಎಂದಿದ್ದಾರೆ. ಒಂದು ದಿನ ಕಾಲೇಜಿನ ವಿಭಾಗದ ಬಳಿ ಮಾಜಿ ಪ್ರಿಯಕರ ಅವರನ್ನು ತಡೆದು ಕೈ ಹಿಡಿದು ಎಳೆದಿದ್ದ. ಬಳಿಕ ತನ್ನ ಬಳಿ ಇದ್ದ ಚಾಕುವನ್ನು ಹೊರತೆಗೆದು ಬೆದರಿಕೆ ಹಾಕಿದ್ದ. ಈ ಘಟನೆಯ ವೇಳೆ ಆತ ತನ್ನ ಕೈಗೆ ಗಾಯ ಮಾಡಿಕೊಂಡು, ಆ ರಕ್ತದಿಂದಲೇ ಕನಿಕಾ ಅವರ ಹಣೆಗೆ ಸಿಂಧೂರ ಇಡುವುದಾಗಿ ಹೇಳಿದ್ದ ಎಂದು ಅವರು ವಿವರಿಸಿದ್ದಾರೆ. ಪರಿಸ್ಥಿತಿ ಗಂಭೀರವಾಗುತ್ತಿರುವುದನ್ನು ಅರಿತ ಕನಿಕಾ ತಕ್ಷಣ ಅಲ್ಲಿದ್ದ ವ್ಯಕ್ತಿಯೊಬ್ಬರಿಗೆ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ಯುವಕನನ್ನು ವಶಕ್ಕೆ ಪಡೆದಿದ್ದರು. ಆತ ಕೆಲವು ದಿನಗಳ ಕಾಲ ಜೈಲಿನಲ್ಲಿದ್ದ ಎಂದು ಕನಿಕಾ ತಿಳಿಸಿದ್ದಾರೆ.
ಕುಟುಂಬದ ಬೆಂಬಲದಿಂದ ಹೊರಬಂದ ಕನಿಕಾ
ಈ ಘಟನೆಗಳ ಬಗ್ಗೆ ಆರಂಭದಲ್ಲಿ ಕುಟುಂಬದವರಿಗೆ ಹೇಳಲು ಕನಿಕಾ ಭಯಪಟ್ಟಿದ್ದರು. ಆದರೆ ಕೊನೆಗೆ ಎಲ್ಲವನ್ನೂ ತಿಳಿಸಿದಾಗ ಕುಟುಂಬದವರು ಅವರಿಗೆ ಸಂಪೂರ್ಣ ಬೆಂಬಲ ನೀಡಿದರು ಎಂದು ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಕನಿಕಾ ಹಂಚಿಕೊಂಡ ಈ ಅನುಭವವು ಪ್ರೇಕ್ಷಕರ ಗಮನ ಸೆಳೆದಿದೆ. ಸಂಬಂಧಗಳಲ್ಲಿ ಗೌರವ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸುರಕ್ಷತೆಯ ಮಹತ್ವವನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.