Anirudh Ravichander–Kavya Maran Wedding: ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡದ ಸಿಇಒ ಕಾವ್ಯಾ ಮಾರನ್ ಅವರ ಮದುವೆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಸುದ್ದಿಗಳು ಹರಿದಾಡುತ್ತಿವೆ. ಇಬ್ಬರೂ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ವರದಿಗಳು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿವೆ. ಗ್ರೀಸ್ನಲ್ಲಿ ಅದ್ಧೂರಿ ಡೆಸ್ಟಿನೇಶನ್ ವೆಡ್ಡಿಂಗ್ ನಡೆಯಲಿದೆ ಹಾಗೂ ನವೆಂಬರ್ 21ರಂದು ಆರತಕ್ಷತೆ ಆಯೋಜಿಸಲಾಗುತ್ತದೆ ಎಂಬ ಮಾಹಿತಿಯೂ ಹರಿದಾಡುತ್ತಿದೆ. ಆದರೆ ಈ ಮದುವೆ ಕುರಿತ ಸುದ್ದಿಗಳಿಗೆ ಸಂಬಂಧಿಸಿದಂತೆ ಇಬ್ಬರ ಕಡೆಯಿಂದಲೂ ಅಧಿಕೃತ ದೃಢೀಕರಣದ ಮಾಹಿತಿ ಲಭ್ಯವಿಲ್ಲ.
ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮ ಸಂಗೀತದ ಮೂಲಕ ದೊಡ್ಡ ಅಭಿಮಾನಿ ಬಳಗ ಹೊಂದಿರುವ ಅನಿರುದ್ಧ್ ರವಿಚಂದರ್ ಹಾಗೂ ಕ್ರಿಕೆಟ್ ಮತ್ತು ಉದ್ಯಮ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಕಾವ್ಯಾ ಮಾರನ್ ಇಬ್ಬರೂ ತಮ್ಮದೇ ಆದ ಸ್ಥಾನಮಾನ ಹೊಂದಿದ್ದಾರೆ. ಹೀಗಾಗಿ ಇವರ ಮದುವೆ ಕುರಿತ ವದಂತಿಗಳು ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿವೆ.
ಅನಿರುದ್ಧ್–ಕಾವ್ಯಾ ವಯಸ್ಸಿನ ಅಂತರ ಎಷ್ಟು?
ಈ ಜೋಡಿಯ ಕುರಿತು ಹೆಚ್ಚು ಹುಡುಕಲಾಗುತ್ತಿರುವ ಪ್ರಶ್ನೆಗಳಲ್ಲಿ ವಯಸ್ಸಿನ ಅಂತರವೂ ಒಂದು. ಅನಿರುದ್ಧ್ ರವಿಚಂದರ್ ಅವರು 1990ರ ಅಕ್ಟೋಬರ್ 16ರಂದು ಜನಿಸಿದ್ದು, 2026ರ ಅಕ್ಟೋಬರ್ನಲ್ಲಿ 36ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಕಾವ್ಯಾ ಮಾರನ್ ಅವರು 1992ರಲ್ಲಿ ಜನಿಸಿರುವುದರಿಂದ ಇಬ್ಬರ ನಡುವೆ ಸುಮಾರು ಎರಡು ವರ್ಷಗಳ ವಯಸ್ಸಿನ ಅಂತರವಿದೆ ಎಂದು ವರದಿಗಳು ತಿಳಿಸಿವೆ. ಅನಿರುದ್ಧ್ ಸಂಗೀತ ಕ್ಷೇತ್ರದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದರೆ, ಕಾವ್ಯಾ ಮಾರನ್ ಕ್ರೀಡೆ ಮತ್ತು ಮಾಧ್ಯಮ ಉದ್ಯಮದ ನಿರ್ವಹಣೆಯಲ್ಲಿ ಗುರುತಿಸಿಕೊಂಡಿದ್ದಾರೆ. ಇಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಯಶಸ್ಸು ಗಳಿಸಿರುವ ಕಾರಣ ಈ ಜೋಡಿಯ ಕುರಿತ ಸುದ್ದಿ ಅಭಿಮಾನಿಗಳಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿದೆ.
ಕಾವ್ಯಾ ಮಾರನ್ ಯಾರು?
ಕಾವ್ಯಾ ಮಾರನ್ ಅವರು ಸನ್ ಗ್ರೂಪ್ ಅಧ್ಯಕ್ಷ ಕಲಾನಿಧಿ ಮಾರನ್ ಅವರ ಪುತ್ರಿ. ಅವರು ಸನ್ರೈಸರ್ಸ್ ಹೈದರಾಬಾದ್ ತಂಡದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಐಪಿಎಲ್ ಪಂದ್ಯಗಳ ಸಂದರ್ಭದಲ್ಲಿ ತಂಡವನ್ನ ಪ್ರೋತ್ಸಾಹಿಸುವ ಮೂಲಕವೂ ಅವರು ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಸನ್ ಗ್ರೂಪ್ನ ಮಾಧ್ಯಮ ಮತ್ತು ಕ್ರೀಡಾ ವ್ಯವಹಾರಗಳೊಂದಿಗೆ ಕಾವ್ಯಾ ಅವರ ಹೆಸರು ಗುರುತಿಸಿಕೊಂಡಿದೆ. ಅವರ ವೈಯಕ್ತಿಕ ಆಸ್ತಿಯ ಮೌಲ್ಯ ಕುರಿತು ಕೆಲವು ವರದಿಗಳಲ್ಲಿ ನೂರಾರು ಕೋಟಿ ರೂಪಾಯಿಗಳ ಅಂದಾಜುಗಳು ಪ್ರಕಟವಾಗಿದ್ದರೂ, ನಿಖರವಾದ ನಿವ್ವಳ ಆಸ್ತಿಯ ಮೊತ್ತವನ್ನ ಅಧಿಕೃತವಾಗಿ ದೃಢಪಡಿಸಲಾಗಿಲ್ಲ.
ಅನಿರುದ್ಧ್ ರವಿಚಂದರ್ ಸಂಗೀತದ ಯಶಸ್ಸು
ಅನಿರುದ್ಧ್ ರವಿಚಂದರ್ ದಕ್ಷಿಣ ಭಾರತದ ಜನಪ್ರಿಯ ಸಂಗೀತ ನಿರ್ದೇಶಕರಲ್ಲಿ ಒಬ್ಬರು. Why This Kolaveri Di ಹಾಡಿನ ಮೂಲಕ ದೊಡ್ಡ ಮಟ್ಟದಲ್ಲಿ ಪ್ರಸಿದ್ಧಿ ಪಡೆದ ಅವರು, ಬಳಿಕ ಹಲವು ಯಶಸ್ವಿ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ತಮಿಳು ಚಿತ್ರರಂಗದ ಜೊತೆಗೆ ಇತರ ಭಾಷೆಗಳ ಸಿನಿಮಾಗಳಲ್ಲಿಯೂ ಕೆಲಸ ಮಾಡಿ ತಮ್ಮ ಅಭಿಮಾನಿ ಬಳಗವನ್ನ ವಿಸ್ತರಿಸಿದ್ದಾರೆ. ಅವರ ಸಂಗೀತ, ಹಿನ್ನೆಲೆ ಸಂಗೀತ ಮತ್ತು ಲೈವ್ ಕಾರ್ಯಕ್ರಮಗಳು ಯುವಜನರಲ್ಲಿ ವಿಶೇಷ ಜನಪ್ರಿಯತೆ ಗಳಿಸಿವೆ. ಪ್ರತಿ ಚಿತ್ರಕ್ಕೆ ಅವರು ಪಡೆಯುವ ಸಂಭಾವನೆ ಮತ್ತು ಅವರ ವೈಯಕ್ತಿಕ ಆಸ್ತಿಯ ಕುರಿತು ವಿವಿಧ ಅಂದಾಜುಗಳು ಪ್ರಕಟವಾಗುತ್ತಿದ್ದರೂ, ಅವುಗಳನ್ನ ಅಧಿಕೃತ ಅಂಕಿಅಂಶಗಳೆಂದು ಪರಿಗಣಿಸಲಾಗದು.
ನವೆಂಬರ್ 21ರಂದು ಆರತಕ್ಷತೆ?
ಇತ್ತೀಚಿನ ವರದಿಗಳ ಪ್ರಕಾರ, ಕಾವ್ಯಾ ಮಾರನ್ ಅವರ ಪೋಷಕರು ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಅವರನ್ನ ಭೇಟಿಯಾಗಿ ಮದುವೆಯ ಆರತಕ್ಷತೆಗೆ ಆಹ್ವಾನ ನೀಡಿದ್ದಾರೆ. ಚೆನ್ನೈನಲ್ಲಿ ನವೆಂಬರ್ 21ರಂದು ಆರತಕ್ಷತೆ ನಡೆಯಲಿದೆ ಎಂಬ ಮಾಹಿತಿಯನ್ನ ತೆಲಂಗಾಣ ಮುಖ್ಯಮಂತ್ರಿ ಕಚೇರಿಯ ಸಾರ್ವಜನಿಕ ಪ್ರಕಟಣೆಯೂ ಉಲ್ಲೇಖಿಸಿದೆ. ಇನ್ನು ಮದುವೆಯ ಮುಖ್ಯ ಸಮಾರಂಭ ಗ್ರೀಸ್ನಲ್ಲಿ ನಡೆಯಲಿದೆ ಎಂಬ ವರದಿಗಳೂ ಪ್ರಕಟವಾಗಿವೆ. ಆದರೆ ಸಮಾರಂಭದ ಸ್ಥಳ ಮತ್ತು ಇತರ ವಿವರಗಳನ್ನ ಸಂಬಂಧಪಟ್ಟವರು ಅಧಿಕೃತವಾಗಿ ಪ್ರಕಟಿಸಿರುವುದನ್ನ ಪರಿಶೀಲಿಸಬೇಕಿದೆ.
ಈ ಜೋಡಿಯ ಮದುವೆ ಬಗ್ಗೆ ಈಗಾಗಲೇ ಅನೇಕ ಪೋಸ್ಟ್ಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ಆದರೆ ಇಬ್ಬರ ಕಡೆಯಿಂದಲೂ ಯಾವುದೇ ರೀತಿಯ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಒಟ್ನಲ್ಲಿ ಅನಿರುದ್ಧ್ ರವಿಚಂದರ್ ಮತ್ತು ಕಾವ್ಯಾ ಮಾರನ್ ಅವರ ಮದುವೆ ಸುದ್ದಿ ಈಗ ಮನರಂಜನಾ ವಲಯದಲ್ಲಿ ಪ್ರಮುಖ ಚರ್ಚೆಯಾಗಿದೆ. ಇಬ್ಬರ ವಯಸ್ಸಿನ ಅಂತರ, ಆಸ್ತಿ ಮತ್ತು ಮದುವೆಯ ಸ್ಥಳದ ಕುರಿತು ಅಭಿಮಾನಿಗಳು ಕುತೂಹಲದಿಂದ ಮಾಹಿತಿ ಹುಡುಕುತ್ತಿದ್ದಾರೆ.