ಹನುಮಾನ್ ಅಂಶ್ ಮಾದರಿಯಲ್ಲಿ ಸಿದ್ಧವಾಯ್ತು ಸಾಯಿಬಾಬಾ ಭಕ್ತರ ಸಿನಿಮಾ! ರಾಧಾಕೃಷ್ಣ ಸ್ವಾಮೀಜಿ ಜೀವನಗಾಥೆ ತೆರೆಗೆ
ಸಾಯಿಬಾಬಾ ಅವರ ತತ್ವ, ಆದರ್ಶಗಳನ್ನ ಜನರಿಗೆ ತಲುಪಿಸಿದ ಮಹಾನ್ ಆಧ್ಯಾತ್ಮಿಕ ಗುರು ರಾಧಾಕೃಷ್ಣ ಸ್ವಾಮೀಜಿ ಅವರ ಜೀವನಗಾಥೆ ಇದೀಗ ಸಿನಿಮಾ ರೂಪದಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.
ಸಾಯಿಬಾಬಾ ಅವರ ತತ್ವ, ಆದರ್ಶಗಳನ್ನ ಜನರಿಗೆ ತಲುಪಿಸಿದ ಮಹಾನ್ ಆಧ್ಯಾತ್ಮಿಕ ಗುರು ರಾಧಾಕೃಷ್ಣ ಸ್ವಾಮೀಜಿ ಅವರ ಜೀವನಗಾಥೆ ಇದೀಗ ಸಿನಿಮಾ ರೂಪದಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. ಸಾಯಿಬಾಬಾ ಅವರ ಅನುಯಾಯಿಗಳೇ ಸೇರಿ ನಿರ್ಮಿಸಿರುವ ಈ ಚಿತ್ರಕ್ಕೆ ಪ್ರೇಮರೂಪ ಸಾಯಿಪಾದಾನಂದ ಎಂದು ಹೆಸರಿಡಲಾಗಿದೆ. ಕನ್ನಡ, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಮೂಡಿಬಂದಿರುವ ಈ ಸಿನಿಮಾ ಸದ್ಯದಲ್ಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಪ್ರದರ್ಶನ ಹಾಗೂ ಸುದ್ದಿಗೋಷ್ಠಿಯಲ್ಲಿ ಸಂಸದ ಡಾ. ಸಿ.ಎನ್. ಮಂಜುನಾಥ್ ಭಾಗಿಯಾಗಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಸಾಯಿಬಾಬಾ ಅವರ ತತ್ವಗಳನ್ನ ನಾಡಿನಾದ್ಯಂತ ಪಸರಿಸಿದ ಆಧ್ಯಾತ್ಮಿಕ ಗುರು ರಾಧಾಕೃಷ್ಣ ಸ್ವಾಮೀಜಿ. ಅಪಾರ ಸಂಖ್ಯೆಯ ಶಿಷ್ಯರನ್ನ ಹೊಂದಿದ್ದ ಅವಧೂತ ಸಾಯಿ ಪಾದಾನಂದ ರಾಧಾಕೃಷ್ಣ ಸ್ವಾಮೀಜಿ ಅವರ ಜೀವನದ ಕಥೆಯೇ ಈಗ ಬೆಳ್ಳಿತೆರೆಗೆ ಬರ್ತಿದೆ. ಅದುವೇ ಪ್ರೇಮರೂಪ ಸಾಯಿಪಾದಾನಂದ ಸಿನಿಮಾ. ಸ್ವಾಮೀಜಿಯವರ ಶಿಷ್ಯರಾದ ಟಿ. ಕೃಷ್ಣಕುಮಾರ್ ಅವರು ಖ್ಯಾತ ನಿರ್ಮಾಣ ಸಂಸ್ಥೆ ಸತ್ಯಜ್ಯೋತಿ ಫಿಲ್ಮ್ಸ್ ಸಹಕಾರದೊಂದಿಗೆ ಈ ಸಿನಿಮಾವನ್ನ ನಿರ್ಮಿಸಿದ್ದಾರೆ. ಬಿ. ನಿತ್ಯಾನಂದ ನಿರ್ದೇಶನದ ಈ ಚಿತ್ರದಲ್ಲಿ ಆನಂದ್ ಮೌಳಿ ಅವರು ಸ್ವಾಮೀಜಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಷೇಕ್ ರಾಜು ಸಂಗೀತ ನಿರ್ದೇಶನ ಮಾಡಿದ್ದು, ತಮಿಳುನಾಡು, ಬೆಂಗಳೂರು ಸೇರಿದಂತೆ ಹಲವು ಸ್ಥಳಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ.
ಇನ್ನು ಚಿತ್ರದ ಪ್ರದರ್ಶನ ಹಾಗೂ ಸುದ್ದಿಗೋಷ್ಠಿಯಲ್ಲಿ ಸಂಸದ ಡಾ. ಸಿ.ಎನ್. ಮಂಜುನಾಥ್ ಭಾಗಿಯಾಗಿ ಚಿತ್ರತಂಡಕ್ಕೆ ಶುಭ ಹಾರೈಸಿದ್ರು. ಕರ್ನಾಟಕದಲ್ಲಿ ಸಾಯಿಬಾಬಾ ಅವರ ತತ್ವಗಳನ್ನ ಪ್ರಚಾರ ಮಾಡಿದ ರಾಧಾಕೃಷ್ಣ ಸ್ವಾಮೀಜಿ ಅವರ ಜೀವನದ ಸಂದೇಶವನ್ನ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಸಾಯಿಬಾಬಾ ಅವರ ತತ್ವಗಳನ್ನ ಜನರಿಗೆ ತಲುಪಿಸಿದ ಕೀರ್ತಿ ಸ್ವಾಮೀಜಿಗೆ ಸಲ್ಲಬೇಕು. ಈ ಸಿನಿಮಾದಿಂದ ಕಲಿಯಬೇಕಾದದ್ದು ಬಹಳಷ್ಟಿದೆ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಸ್ವಾಮೀಜಿ ಅವರೊಂದಿಗಿನ ಒಡನಾಟವನ್ನ ನೆನಪಿಸಿಕೊಂಡ ನಿರ್ಮಾಪಕ ಟಿ. ಕೃಷ್ಣಕುಮಾರ್ ಭಾವುಕರಾಗಿ ಕಣ್ಣೀರಿಟ್ಟರು. ಕಾರ್ಯಕ್ರಮದಲ್ಲಿ ಸಾಯಿ ಆಧ್ಯಾತ್ಮಿಕ ಕೇಂದ್ರದ ಅಧ್ಯಕ್ಷ ಶ್ರೀ ಶ್ರೀಚಂದ್ ರಾಜ್‌ಪಾಲ್, ಕನ್ನಡ ಸಾಯಿ ಸಚ್ಚರಿತೆಯ ಬರಹಗಾರ ಅನಂತ ರಾಮು ಸೇರಿದಂತೆ ಹಲವರು ಭಾಗಿಯಾಗಿದ್ದರು.
ಒಟ್ಟಿನಲ್ಲಿ, ಆಧ್ಯಾತ್ಮಿಕ ಗುರು ರಾಧಾಕೃಷ್ಣ ಸ್ವಾಮೀಜಿ ಅವರ ಜೀವನ, ಸಾಯಿಬಾಬಾ ಅವರ ತತ್ವಗಳು ಹಾಗೂ ಭಕ್ತಿಯ ಸಂದೇಶವನ್ನ ಜನರಿಗೆ ತಲುಪಿಸುವ ಉದ್ದೇಶದಿಂದ ಸಿದ್ಧವಾಗಿರುವ ಪ್ರೇಮರೂಪ ಸಾಯಿಪಾದಾನಂದ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಕನ್ನಡ, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಮೂಡಿಬಂದಿರುವ ಈ ಚಿತ್ರವನ್ನ ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.