SOCIAL MEDIA

Newsletter

PARTNER SITES
Select Language Select State

SSLC ವಿದ್ಯಾರ್ಥಿಗಳಿಗೆ ಬಿಗ್ ಅಪ್‌ಡೇಟ್: ಪರೀಕ್ಷೆ-1ರ ಅಂತಿಮ ವೇಳಾಪಟ್ಟಿ ಪ್ರಕಟ; ಮಾರ್ಚ್ 22ರಿಂದ ಪರೀಕ್ಷೆ ಆರಂಭ!

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2026-27ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿ ಪ್ರಕಟಿಸಿದೆ. ಮಾರ್ಚ್ 22ರಂದು ಪ್ರಥಮ ಭಾಷೆ ಪರೀಕ್ಷೆಯೊಂದಿಗೆ ಆರಂಭವಾಗಲಿರುವ ಪರೀಕ್ಷೆಗಳು ಏಪ್ರಿಲ್ 5ರಂದು ಸಮಾಜ ವಿಜ್ಞಾನ ಪರೀಕ್ಷೆಯೊಂದಿಗೆ ಮುಕ್ತಾಯಗೊಳ್ಳಲಿವೆ. ಮಾರ್ಚ್ 25ರಂದು ವಿಜ್ಞಾನ, 27ರಂದು ದ್ವಿತೀಯ ಭಾಷೆ, 30ರಂದು ಗಣಿತ ಹಾಗೂ ಏಪ್ರಿಲ್ 2ರಂದು ತೃತೀಯ ಭಾಷೆ ಪರೀಕ್ಷೆ ನಡೆಯಲಿದೆ. ವಿಷಯವಾರು ಪರೀಕ್ಷಾ ಸಮಯವನ್ನೂ ಮಂಡಳಿ ಪ್ರಕಟಿಸಿದೆ.

Written By Puttaraj K Alur
Published: Oct 30, 2026, 06:34 AM IST | Updated: Oct 30, 2026, 06:45 AM IST
Image Credit: SSLC Exam
Join

Karnataka SSLC Exam 2026-27: ಕರ್ನಾಟಕದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. 2026-27ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿಯನ್ನ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಗುರುವಾರ ಅಧಿಕೃತವಾಗಿ ಪ್ರಕಟಿಸಿದೆ. ಪರಿಷ್ಕೃತ ವೇಳಾಪಟ್ಟಿಯಂತೆ ಮಾರ್ಚ್ 22ರಿಂದ ಪರೀಕ್ಷೆಗಳು ಆರಂಭವಾಗಲಿದ್ದು, ಏಪ್ರಿಲ್ 5ರವರೆಗೆ ನಡೆಯಲಿವೆ. ಪ್ರಥಮ ಭಾಷೆಯ ಪರೀಕ್ಷೆಯೊಂದಿಗೆ ಆರಂಭವಾಗುವ ಪರೀಕ್ಷೆ-1, ಸಮಾಜ ವಿಜ್ಞಾನ ವಿಷಯದ ಪರೀಕ್ಷೆಯೊಂದಿಗೆ ಮುಕ್ತಾಯಗೊಳ್ಳಲಿದೆ.

ತಾತ್ಕಾಲಿಕ ವೇಳಾಪಟ್ಟಿಯ ಬಳಿಕ ಅಂತಿಮ ಪಟ್ಟಿ ಬಿಡುಗಡೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ಕ್ಕೆ ಸಂಬಂಧಿಸಿದಂತೆ ಮಂಡಳಿಯು ಈ ಹಿಂದೆ ತಾತ್ಕಾಲಿಕ ವೇಳಾಪಟ್ಟಿಯನ್ನ ಪ್ರಕಟಿಸಿತ್ತು. ಆ ವೇಳಾಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಇದೀಗ ಆ ಪ್ರಕ್ರಿಯೆಯ ಬಳಿಕ ಪರೀಕ್ಷಾ ಮಂಡಳಿಯು ಅಂತಿಮ ವೇಳಾಪಟ್ಟಿಯನ್ನ ಬಿಡುಗಡೆ ಮಾಡಿದೆ. ಯಾವ ದಿನಾಂಕದಂದು ಯಾವ ವಿಷಯದ ಪರೀಕ್ಷೆ ನಡೆಯಲಿದೆ ಎಂಬ ಮಾಹಿತಿಯನ್ನ ಪ್ರಕಟಿಸಿರುವ ಮಂಡಳಿ, ಪರೀಕ್ಷೆಗಳ ಸಮಯವನ್ನೂ ನಿಗದಿಪಡಿಸಿದೆ.

ಮಾರ್ಚ್ 22ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ

ಅಂತಿಮ ವೇಳಾಪಟ್ಟಿಯ ಪ್ರಕಾರ, ಮಾರ್ಚ್ 22ರಂದು ಪ್ರಥಮ ಭಾಷೆಯ ಪರೀಕ್ಷೆ ನಡೆಯಲಿದೆ. ಕನ್ನಡ, ತೆಲುಗು, ಹಿಂದಿ, ಇಂಗ್ಲಿಷ್ ಸೇರಿದಂತೆ ವಿವಿಧ ಪ್ರಥಮ ಭಾಷಾ ವಿಷಯಗಳ ಪರೀಕ್ಷೆಗಳು ಅಂದು ನಡೆಯಲಿವೆ. ಇದರೊಂದಿಗೆ 2026-27ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಅಧಿಕೃತವಾಗಿ ಆರಂಭವಾಗಲಿದೆ.

ಮಾರ್ಚ್ 25ರಂದು ವಿಜ್ಞಾನ ವಿಷಯದ ಪರೀಕ್ಷೆಯನ್ನ ನಿಗದಿಪಡಿಸಲಾಗಿದೆ. ಇದೇ ದಿನ ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ ಹಾಗೂ ಕರ್ನಾಟಕ ಸಂಗೀತ ವಿಷಯಗಳ ಪರೀಕ್ಷೆಗಳೂ ನಡೆಯಲಿವೆ. ಮಾರ್ಚ್ 26ರಂದು ಗುಡ್ ಫ್ರೈಡೆ ಹಿನ್ನೆಲೆಯಲ್ಲಿ ಯಾವುದೇ ಪರೀಕ್ಷೆ ಇರುವುದಿಲ್ಲವೆಂದು ವೇಳಾಪಟ್ಟಿಯಲ್ಲಿ ತಿಳಿಸಲಾಗಿದೆ. ಮಾರ್ಚ್ 27ರಂದು ದ್ವಿತೀಯ ಭಾಷೆಯ ಪರೀಕ್ಷೆ ನಡೆಯಲಿದೆ. ಈ ದಿನ ಇಂಗ್ಲಿಷ್ ಮತ್ತು ಕನ್ನಡ ದ್ವಿತೀಯ ಭಾಷಾ ವಿಷಯಗಳ ಪರೀಕ್ಷೆಗಳನ್ನ ನಡೆಸಲಾಗುತ್ತದೆ. ನಂತರ ಮಾರ್ಚ್ 30ರಂದು ಗಣಿತ ಮತ್ತು ಸಮಾಜಶಾಸ್ತ್ರ ವಿಷಯಗಳ ಪರೀಕ್ಷೆಗಳು ನಡೆಯಲಿವೆ.

ಏಪ್ರಿಲ್ 5ರಂದು ಕೊನೆಯ ಪರೀಕ್ಷೆ

ಮಾರ್ಚ್ ತಿಂಗಳ ಪರೀಕ್ಷೆಗಳ ಬಳಿಕ ಏಪ್ರಿಲ್ 2ರಂದು ತೃತೀಯ ಭಾಷೆಯ ಪರೀಕ್ಷೆ ನಡೆಯಲಿದೆ. ಏಪ್ರಿಲ್ 3ರಂದು ಅರ್ಥಶಾಸ್ತ್ರ ಹಾಗೂ ಜೆಟಿಎಸ್ ವಿಷಯಗಳಿಗೆ ಸಂಬಂಧಿಸಿದ ಪರೀಕ್ಷೆಗಳನ್ನ ನಿಗದಿಪಡಿಸಲಾಗಿದೆ. ಅಂತಿಮವಾಗಿ ಏಪ್ರಿಲ್ 5ರಂದು ಸಮಾಜ ವಿಜ್ಞಾನ ವಿಷಯದ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಯೊಂದಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ವೇಳಾಪಟ್ಟಿ ಪೂರ್ಣಗೊಳ್ಳಲಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ವಿಷಯವಾರು ವೇಳಾಪಟ್ಟಿ

- ಮಾರ್ಚ್ 22: ಕನ್ನಡ, ತೆಲುಗು, ಹಿಂದಿ, ಇಂಗ್ಲಿಷ್ ಸೇರಿದಂತೆ ಪ್ರಥಮ ಭಾಷಾ ವಿಷಯಗಳು.
- ಮಾರ್ಚ್ 25: ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ ಮತ್ತು ಕರ್ನಾಟಕ ಸಂಗೀತ.
- ಮಾರ್ಚ್ 26: ಗುಡ್ ಫ್ರೈಡೆ ಹಿನ್ನೆಲೆಯಲ್ಲಿ ಪರೀಕ್ಷೆ ಇಲ್ಲ.
- ಮಾರ್ಚ್ 27: ದ್ವಿತೀಯ ಭಾಷೆ – ಇಂಗ್ಲಿಷ್ ಮತ್ತು ಕನ್ನಡ.
- ಮಾರ್ಚ್ 30: ಗಣಿತ ಮತ್ತು ಸಮಾಜಶಾಸ್ತ್ರ.
- ಏಪ್ರಿಲ್ 2: ತೃತೀಯ ಭಾಷೆಯ ಪರೀಕ್ಷೆ.
- ಏಪ್ರಿಲ್ 3: ಅರ್ಥಶಾಸ್ತ್ರ ಮತ್ತು ಜೆಟಿಎಸ್ ವಿಷಯಗಳು.
- ಏಪ್ರಿಲ್ 5: ಸಮಾಜ ವಿಜ್ಞಾನ.

ಪರೀಕ್ಷೆಯ ಸಮಯದಲ್ಲೂ ವ್ಯತ್ಯಾಸ: ಯಾವ ವಿಷಯಕ್ಕೆ ಎಷ್ಟು ಗಂಟೆ?

ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿಯಲ್ಲಿ ವಿಷಯಗಳಿಗೆ ಅನುಗುಣವಾಗಿ ಪರೀಕ್ಷೆಯ ಸಮಯವನ್ನ ನಿಗದಿಪಡಿಸಲಾಗಿದೆ. ಪ್ರಥಮ ಭಾಷೆ, ಕೋರ್ ವಿಷಯಗಳು ಹಾಗೂ ಜೆಟಿಎಸ್ ವಿಷಯಗಳ ಪರೀಕ್ಷೆಗಳು ಬೆಳಗ್ಗೆ 10 ಗಂಟೆಗೆ ಆರಂಭವಾಗಿ ಮಧ್ಯಾಹ್ನ 1:15ರವರೆಗೆ ನಡೆಯಲಿವೆ. ಈ ಪರೀಕ್ಷೆಗಳಿಗೆ ಒಟ್ಟು ಮೂರು ಗಂಟೆ 15 ನಿಮಿಷಗಳ ಅವಧಿ ನಿಗದಿಯಾಗಿದೆ. 

ದ್ವಿತೀಯ ಭಾಷೆ ಮತ್ತು ತೃತೀಯ ಭಾಷೆಯ ಪರೀಕ್ಷೆಗಳು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿವೆ. ಈ ಎರಡು ಭಾಷಾ ವಿಭಾಗಗಳ ಪರೀಕ್ಷೆಗಳಿಗೆ ಮೂರು ಗಂಟೆಗಳ ಸಮಯ ನಿಗದಿಪಡಿಸಲಾಗಿದೆ. ಇನ್ನು ಎನ್‌ಎಸ್‌ಕ್ಯೂಎಫ್ ವಿಷಯಗಳ ಪರೀಕ್ಷೆಗಳು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12:15ರವರೆಗೆ ನಡೆಯಲಿವೆ. ಈ ಪರೀಕ್ಷೆಗಳಿಗೆ ಎರಡು ಗಂಟೆ 15 ನಿಮಿಷಗಳ ಅವಧಿಯನ್ನು ನಿಗದಿಪಡಿಸಲಾಗಿದೆ.

ಸಂಗೀತ ಪರೀಕ್ಷೆಗಳು ಮಧ್ಯಾಹ್ನದ ಅವಧಿಯಲ್ಲಿ

ಸಾಮಾನ್ಯ ವಿಷಯಗಳ ಪರೀಕ್ಷೆಗಳು ಬೆಳಗಿನ ಅವಧಿಯಲ್ಲಿ ನಡೆಯಲಿದ್ದರೆ, ಹಿಂದೂಸ್ಥಾನಿ ಸಂಗೀತ ಮತ್ತು ಕರ್ನಾಟಕ ಸಂಗೀತ ವಿಷಯಗಳ ಪರೀಕ್ಷೆಗಳನ್ನ ಮಧ್ಯಾಹ್ನದ ಅವಧಿಯಲ್ಲಿ ನಡೆಸಲು ವೇಳಾಪಟ್ಟಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಒಟ್ಟಾರೆ 2026-27ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿಯನ್ನ ಮಂಡಳಿ ಪ್ರಕಟಿಸಿದ್ದು, ಮಾರ್ಚ್ 22ರಿಂದ ಏಪ್ರಿಲ್ 5ರವರೆಗೆ ವಿವಿಧ ವಿಷಯಗಳ ಪರೀಕ್ಷೆಗಳು ನಡೆಯಲಿವೆ. ವಿಷಯವಾರು ದಿನಾಂಕಗಳು ಹಾಗೂ ಪರೀಕ್ಷಾ ಸಮಯದ ವಿವರಗಳನ್ನ ಅಂತಿಮ ವೇಳಾಪಟ್ಟಿಯಲ್ಲಿ ನೀಡಲಾಗಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES