SOCIAL MEDIA

Newsletter

PARTNER SITES
Select Language Select State

ಚಿನ್ನದ ಮಾರುಕಟ್ಟೆಯಲ್ಲಿ ಊಹಿಸಲಾಗದ ಟ್ವಿಸ್ಟ್‌! ಇನ್ನೂ 15 ದಿನದಲ್ಲಿ ಮತ್ತಷ್ಟು ಕುಸಿಯುತ್ತಾ ಬಂಗಾರದ ಬೆಲೆ?

ವರ್ಷದ ಆರಂಭದಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿತ್ತು. ಆದರೆ ನವೆಂಬರ್ ತಿಂಗಳಿನಲ್ಲಿ ಮಾರುಕಟ್ಟೆಯ ಚಿತ್ರಣವೇ ಬದಲಾಗಿದೆ. ಬೆಲೆ ಗಣನೀಯವಾಗಿ ಕುಸಿದಿರುವುದರಿಂದ ಹೂಡಿಕೆದಾರರು ಮಾತ್ರವಲ್ಲದೆ ಮದುವೆ ಹಾಗೂ ಶುಭ ಸಮಾರಂಭಗಳಿಗಾಗಿ ಚಿನ್ನ ಖರೀದಿಸಲು ಯೋಜಿಸುತ್ತಿರುವವರೂ ಮಾರುಕಟ್ಟೆಯತ್ತ ಗಮನ ಹರಿಸುತ್ತಿದ್ದಾರೆ.

Written By Chetana Devarmani
Published: Nov 28, 2026, 09:41 IST | Updated: Nov 28, 2026, 09:42 IST
Join

ಮದುವೆ ಸೀಸನ್ ಆರಂಭವಾಗಿರುವ ಬೆನ್ನಲ್ಲೇ ಚಿನ್ನದ ಮಾರುಕಟ್ಟೆಯಲ್ಲಿ ಭಾರೀ ಏರಿಳಿತ ಕಂಡುಬರುತ್ತಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದ್ದು, ಆಭರಣ ಖರೀದಿಸಲು ಕಾಯುತ್ತಿದ್ದವರಿಗೆ ಇದು ತುಸು ನೆಮ್ಮದಿ ನೀಡಿದೆ. ಆದರೆ ಇತ್ತೀಚೆಗೆ ಚಿನ್ನದ ಬೆಲೆ ಮತ್ತೆ ಸುಮಾರು ಶೇ.3ರಷ್ಟು ಏರಿಕೆಯಾಗಿರುವುದು ಗ್ರಾಹಕರಲ್ಲಿ ಗೊಂದಲ ಮೂಡಿಸಿದೆ. ಹಾಗಾದರೆ ಮುಂದಿನ 15 ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಇಳಿಕೆಯಾಗಲಿದೆಯೇ? ಅಥವಾ ಮತ್ತೆ ಏರಿಕೆಯ ಹಾದಿ ಹಿಡಿಯಲಿದೆಯೇ ಎಂಬ ಕುತೂಹಲ ಶುರುವಾಗಿದೆ.

ವರ್ಷದ ಆರಂಭದಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿತ್ತು. ಆದರೆ ನವೆಂಬರ್ ತಿಂಗಳಿನಲ್ಲಿ ಮಾರುಕಟ್ಟೆಯ ಚಿತ್ರಣವೇ ಬದಲಾಗಿದೆ. ಬೆಲೆ ಗಣನೀಯವಾಗಿ ಕುಸಿದಿರುವುದರಿಂದ ಹೂಡಿಕೆದಾರರು ಮಾತ್ರವಲ್ಲದೆ ಮದುವೆ ಹಾಗೂ ಶುಭ ಸಮಾರಂಭಗಳಿಗಾಗಿ ಚಿನ್ನ ಖರೀದಿಸಲು ಯೋಜಿಸುತ್ತಿರುವವರೂ ಮಾರುಕಟ್ಟೆಯತ್ತ ಗಮನ ಹರಿಸುತ್ತಿದ್ದಾರೆ.

ನವೆಂಬರ್ ಆರಂಭದಿಂದ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು ₹14,300ರಷ್ಟು ಇಳಿಕೆಯಾಗಿದೆ ಎಂದು ವರದಿಯಾಗಿದೆ. ನವೆಂಬರ್ 23ರಂದು 10 ಗ್ರಾಂ ಚಿನ್ನದ ಬೆಲೆ ಸುಮಾರು ₹1,26,021ರಷ್ಟಿದ್ದರೆ, ನವೆಂಬರ್ 25ರ ವೇಳೆಗೆ ಅದು ₹1,20,684ಕ್ಕೆ ಇಳಿದಿತ್ತು. ಇದರಿಂದ ಅಲ್ಪಾವಧಿಯಲ್ಲಿ ಚಿನ್ನದ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಕಂಡುಬಂದಿದೆ.

ಆದರೆ ಬೆಲೆ ಇಳಿಕೆಯಾಗುತ್ತಿದ್ದಂತೆಯೇ ಮತ್ತೆ ಏರಿಕೆಯ ಲಕ್ಷಣಗಳು ಕಾಣಿಸಿಕೊಂಡಿವೆ. ಹೀಗಾಗಿ ಇನ್ನಷ್ಟು ಬೆಲೆ ಕುಸಿತವಾಗಬಹುದು ಎಂದು ಕಾಯುತ್ತಿರುವ ಗ್ರಾಹಕರು ಈಗ ಖರೀದಿ ನಿರ್ಧಾರವನ್ನು ಮರುಪರಿಶೀಲಿಸುವಂತಾಗಿದೆ.

ಮುಂದಿನ 15 ದಿನಗಳು ಚಿನ್ನದ ಬೆಲೆಗೆ ನಿರ್ಣಾಯಕ!

ಮುಂಬರುವ ಎರಡು ಪ್ರಮುಖ ದಿನಾಂಕಗಳು ಚಿನ್ನದ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಡಿಸೆಂಬರ್ 4ರಂದು ಅಮೆರಿಕದ ಉದ್ಯೋಗ ಮಾರುಕಟ್ಟೆಗೆ ಸಂಬಂಧಿಸಿದ ಪ್ರಮುಖ ಅಂಕಿಅಂಶಗಳು ಬಿಡುಗಡೆಯಾಗಲಿವೆ. ದೇಶದಲ್ಲಿ ಎಷ್ಟು ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ ಮತ್ತು ನಿರುದ್ಯೋಗ ಪ್ರಮಾಣ ಎಷ್ಟಿದೆ ಎಂಬ ಮಾಹಿತಿ ಜಾಗತಿಕ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಬಹುದು.

ಇದರ ಬೆನ್ನಲ್ಲೇ ಡಿಸೆಂಬರ್ 9ರಂದು ಅಮೆರಿಕದ ಫೆಡರಲ್ ರಿಸರ್ವ್ (ಫೆಡ್) ತನ್ನ ಹಣಕಾಸು ನೀತಿ ನಿರ್ಧಾರವನ್ನು ಪ್ರಕಟಿಸಲಿದೆ. ಈ ನಿರ್ಧಾರವು ಚಿನ್ನದ ಬೆಲೆಯ ಮುಂದಿನ ಚಲನೆಗೆ ಪ್ರಮುಖ ಕಾರಣವಾಗಬಹುದು.

ಅಮೆರಿಕದ ಬಡ್ಡಿದರ ನಿರ್ಧಾರ ಚಿನ್ನದ ಬೆಲೆ ಮೇಲೆ ಪರಿಣಾಮ ಬೀರಲಿದೆಯೇ?

ಸಾಮಾನ್ಯವಾಗಿ ಅಮೆರಿಕದಲ್ಲಿ ಬಡ್ಡಿದರಗಳು ಹೆಚ್ಚಾಗಿದ್ದರೆ ಅಥವಾ ಹೆಚ್ಚಿನ ಮಟ್ಟದಲ್ಲಿಯೇ ಮುಂದುವರಿದರೆ ಚಿನ್ನದ ಮೇಲಿನ ಹೂಡಿಕೆಯ ಆಕರ್ಷಣೆ ಕಡಿಮೆಯಾಗಬಹುದು. ಏಕೆಂದರೆ ಚಿನ್ನದಿಂದ ಬಡ್ಡಿ ಆದಾಯ ದೊರೆಯುವುದಿಲ್ಲ. ಆದರೆ ಬಡ್ಡಿದರ ಕಡಿತದ ನಿರೀಕ್ಷೆ ಹೆಚ್ಚಾದಾಗ ಚಿನ್ನದ ಹೂಡಿಕೆ ಹೆಚ್ಚು ಆಕರ್ಷಕವಾಗುವ ಸಾಧ್ಯತೆಯಿದೆ.

ಅಮೆರಿಕದ ಡಾಲರ್ ಮೌಲ್ಯದಲ್ಲಿನ ಬದಲಾವಣೆ ಕೂಡ ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಆರ್ಥಿಕ ಅಂಕಿಅಂಶಗಳು ಮತ್ತು ಫೆಡ್‌ನ ನಿರ್ಧಾರವನ್ನು ಜಾಗತಿಕ ಹೂಡಿಕೆದಾರರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ಜನವರಿ 2027 ರ ವರೆಗೆ ಚಿನ್ನದ ಬೆಲೆ ಇಳಿಯುತ್ತಾ?

ಕೆಲವು ಮಾರುಕಟ್ಟೆ ವಿಶ್ಲೇಷಣೆಗಳ ಪ್ರಕಾರ, ಜನವರಿ 2027ರವರೆಗೂ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಇಳಿಕೆ ಕಂಡುಬರುವ ಸಾಧ್ಯತೆಯಿದೆ. ಆದರೆ ದೀರ್ಘಾವಧಿಯಲ್ಲಿ ಚಿನ್ನದ ಮಾರುಕಟ್ಟೆಯ ಬಗ್ಗೆ ಸಕಾರಾತ್ಮಕ ನಿರೀಕ್ಷೆಗಳೂ ಇವೆ. ಜಾಗತಿಕ ಆರ್ಥಿಕ ಪರಿಸ್ಥಿತಿ, ಡಾಲರ್ ಮೌಲ್ಯ, ಬಡ್ಡಿದರಗಳಲ್ಲಿನ ಬದಲಾವಣೆ ಹಾಗೂ ವಿವಿಧ ದೇಶಗಳ ನಡುವಿನ ರಾಜಕೀಯ ಉದ್ವಿಗ್ನತೆಗಳು ಚಿನ್ನದ ಬೆಲೆಯನ್ನು ನಿರ್ಧರಿಸುವ ಪ್ರಮುಖ ಅಂಶಗಳಾಗಿವೆ.

ಚಿನ್ನದ ಬೆಲೆ ಮತ್ತಷ್ಟು ಇಳಿಕೆಯಾಗುತ್ತದೆ ಎಂಬ ಖಚಿತತೆ ಇಲ್ಲ. ಅದೇ ರೀತಿ ಮುಂದಿನ ದಿನಗಳಲ್ಲಿ ಬೆಲೆ ಏರಿಕೆಯಾಗುವುದಿಲ್ಲ ಎಂದೂ ಹೇಳಲು ಸಾಧ್ಯವಿಲ್ಲ. ಹೀಗಾಗಿ ಒಂದೆರಡು ದಿನಗಳ ಬೆಲೆ ಬದಲಾವಣೆಯನ್ನು ಗಮನಿಸಿ ಆತುರದಲ್ಲಿ ಖರೀದಿ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತವಲ್ಲ. ಮದುವೆ ಅಥವಾ ಇತರ ಶುಭ ಸಮಾರಂಭಗಳಿಗಾಗಿ ಚಿನ್ನ ಖರೀದಿಸುವವರು ತಮ್ಮ ಅಗತ್ಯ ಮತ್ತು ಬಜೆಟ್‌ಗೆ ಅನುಗುಣವಾಗಿ ಖರೀದಿ ಯೋಜನೆ ರೂಪಿಸಬಹುದು. ಹೂಡಿಕೆ ಉದ್ದೇಶದಿಂದ ಚಿನ್ನ ಖರೀದಿಸುವವರು ಜಾಗತಿಕ ಮಾರುಕಟ್ಟೆಯ ಬೆಳವಣಿಗೆಗಳು ಮತ್ತು ಬಡ್ಡಿದರಗಳ ನಿರ್ಧಾರಗಳನ್ನು ಗಮನಿಸುವುದು ಉತ್ತಮ. ಮುಂದಿನ 15 ದಿನಗಳ ಬೆಳವಣಿಗೆ ಚಿನ್ನದ ಮಾರುಕಟ್ಟೆಯ ದಿಕ್ಕಿನ ಬಗ್ಗೆ ಮಹತ್ವದ ಸುಳಿವು ನೀಡಬಹುದು.
 

Add Zee News as a Preferred Source
TAGS:

About the Author

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."
Read More

ZEENEWS TRENDING STORIES