₹3 ಲಕ್ಷ ಹೂಡಿಕೆ..4 ವರ್ಷದಲ್ಲಿ ಕೋಟ್ಯಾಧಿಪತಿಗಳು! ಕಾರ್ಪೊರೇಟ್ ಕೆಲಸ ಬಿಟ್ಟು ಸೀರೆ ಉದ್ಯಮದಲ್ಲಿ ದಂಪತಿ ಸಾಧಿಸಿದ ಯಶಸ್ಸಿನ ಕಥೆ
couples drop corporate job start saree business with 3 lakh investment builds : ಈ ದಂಪತಿಗೆ ತಮ್ಮ ಅಜ್ಜಿಯ ಸೀರೆ ವಿನ್ಯಾಸಗಳಿಂದ ವ್ಯವಹಾರದ ಕಲ್ಪನೆ ಬಂದಿತು. ಅವರು 3 ಲಕ್ಷ ಹೂಡಿಕೆ ಮಾಡಿದರು, ಕಾರ್ಪೊರೇಟ್ ಉದ್ಯೋಗಗಳನ್ನು ತೊರೆದರು, 4 ವರ್ಷಗಳಲ್ಲಿ ಕೋಟ್ಯಾಧಿಪತಿಗಳಾದರು, ಅವರ ವ್ಯವಹಾರ ರಹಸ್ಯವೇನು?
ಸಾಮಾನ್ಯವಾಗಿ ಅಜ್ಜಿಯ ಹಳೆಯ ಸೀರೆಗಳನ್ನು ಮನೆಯವರು ನೆನಪಿಗಾಗಿ ಜೋಪಾನವಾಗಿ ಇಟ್ಟುಕೊಳ್ಳುತ್ತಾರೆ. ಆದರೆ ಇಲ್ಲೊಂದು ದಂಪತಿ ಇದೇ ಹಳೆಯ ಸೀರೆಗಳ ವಿನ್ಯಾಸವನ್ನೇ ದೊಡ್ಡ ಉದ್ಯಮವನ್ನಾಗಿ ಪರಿವರ್ತಿಸಿದ್ದಾರೆ. ಕೈಯಲ್ಲಿದ್ದದ್ದು ಕೇವಲ 3 ಲಕ್ಷ ರೂಪಾಯಿ ಉಳಿತಾಯ. ಬಿಟ್ಟಿದ್ದು ಲಕ್ಷಾಂತರ ರೂಪಾಯಿ ಸಂಬಳ ತರುತ್ತಿದ್ದ ಕಾರ್ಪೊರೇಟ್ ಉದ್ಯೋಗ. ಆದರೆ ಇಂದು ಇವರ ಕಂಪನಿ ತಿಂಗಳಿಗೆ ಬರೋಬ್ಬರಿ 1 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ. ಅಷ್ಟಕ್ಕೂ ಅಜ್ಜಿಯ ಸೀರೆಗಳಿಂದ ಕೋಟ್ಯಂತರ ರೂಪಾಯಿ ಗಳಿಸುವ ಹಾದಿ ಕಂಡುಕೊಂಡ ಈ ದಂಪತಿ ಯಾರು? ಇವರ ಯಶಸ್ಸಿನ ಹಿಂದಿರುವ ಉದ್ಯಮದ ಗುಟ್ಟೇನು? ನೋಡೋಣ ಈ ಸ್ಟೋರಿ.
ಕೆಲವು ಕನಸುಗಳು ದೊಡ್ಡ ಹೂಡಿಕೆಯಿಂದ ಶುರುವಾಗುವುದಿಲ್ಲ. ಬದಲಿಗೆ ಒಂದು ಸಣ್ಣ ಆಲೋಚನೆಯಿಂದಲೇ ದೊಡ್ಡ ಯಶಸ್ಸಿನ ಹಾದಿ ತೆರೆದುಕೊಳ್ಳುತ್ತವೆ. ಇದಕ್ಕೆ ಸಾಕ್ಷಿ ಪೂಜಾ ನಾಡಿಗ್ ಮತ್ತು ಶಶಾಂಕ್ ಶಿವರಪುರಪು ದಂಪತಿ. ಅಜ್ಜಿಯ ಕಾಲದ ಸೀರೆಗಳ ವಿನ್ಯಾಸ, ಬಣ್ಣಗಳ ಸಂಯೋಜನೆ ಮತ್ತು ಸಾಂಪ್ರದಾಯಿಕ ನೇಯ್ಗೆಯಿಂದ ಸ್ಫೂರ್ತಿ ಪಡೆದ ಈ ಜೋಡಿ, ಅದನ್ನೇ ಉದ್ಯಮವನ್ನಾಗಿ ರೂಪಿಸಲು ನಿರ್ಧರಿಸಿತು.
ಪೂಜಾ ಅವರು ಟಿಸಿಎಸ್‌ನಲ್ಲಿ ಸುಮಾರು ಐದು ವರ್ಷಗಳ ಕಾಲ ಸಾಫ್ಟ್‌ವೇರ್ ಟೆಸ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಶಶಾಂಕ್ ಕೂಡ ಎಂಬಿಎ ಮುಗಿಸಿ ಮಾರಾಟ ಮತ್ತು ಸ್ಟಾರ್ಟ್‌ಅಪ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳುತ್ತಿದ್ದರು. ಆದರೆ ಸ್ವಂತ ಉದ್ಯಮ ಆರಂಭಿಸಬೇಕೆಂಬ ಪೂಜಾ ಅವರ ಕನಸಿಗೆ ಶಶಾಂಕ್ ಸಾಥ್ ನೀಡಿದರು. 2020ರ ಲಾಕ್‌ಡೌನ್ ಸಂದರ್ಭದಲ್ಲಿ ಇಬ್ಬರೂ ತಮ್ಮ ಕಾರ್ಪೊರೇಟ್ ಉದ್ಯೋಗಗಳಿಗೆ ಗುಡ್‌ಬೈ ಹೇಳಿ ಉದ್ಯಮದತ್ತ ಹೆಜ್ಜೆ ಇಟ್ಟರು. ಆರಂಭದಲ್ಲಿ ಇವರ ಕೈಯಲ್ಲಿದ್ದ ಬಂಡವಾಳ ಕೇವಲ 3 ಲಕ್ಷ ರೂಪಾಯಿ. ಕುಟುಂಬದಲ್ಲೂ ಯಾವುದೇ ವ್ಯಾಪಾರದ ಹಿನ್ನೆಲೆ ಇರಲಿಲ್ಲ. ಹೀಗಾಗಿ ಎಲ್ಲವನ್ನೂ ಶೂನ್ಯದಿಂದಲೇ ಕಲಿಯಬೇಕಾಯಿತು. ಪೂಜಾ ಅವರೇ ಸೀರೆಗಳನ್ನು ಧರಿಸಿ ಮಾಡೆಲಿಂಗ್ ಮಾಡುತ್ತಿದ್ದರು. ಶಶಾಂಕ್ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಜವಾಬ್ದಾರಿ ಹೊತ್ತಿದ್ದರು. ಹೆಚ್ಚುವರಿ ಹಣಕ್ಕಾಗಿ ಪೂಜಾ ಜುಂಬಾ ತರಬೇತುದಾರರಾಗಿಯೂ ಕೆಲಸ ಮಾಡಿದರು. ಮತ್ತೊಂದೆಡೆ ಶಶಾಂಕ್ ನೇಕಾರರು ಮತ್ತು ಕುಶಲಕರ್ಮಿಗಳಿಂದ ಜವಳಿ ಉದ್ಯಮದ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಹೀಗೆ ಹುಟ್ಟಿಕೊಂಡಿದ್ದೇ 'ನೆರಿಗೆ ಸ್ಟೋರಿ' ಬ್ರ್ಯಾಂಡ್. 1950ರ ದಶಕದ ಸಾಂಪ್ರದಾಯಿಕ ಸೀರೆಗಳ ವಿನ್ಯಾಸ, ಹಳೆಯ ಕಾಲದ ಬಣ್ಣಗಳ ಸಂಯೋಜನೆ ಮತ್ತು ವಿಶಿಷ್ಟ ಬಟ್ಟೆಗಳಿಗೆ ಹೊಸ ರೂಪ ನೀಡುವುದು ಇವರ ವಿಶೇಷತೆ. ಹಳೆಯ ಸಂಪ್ರದಾಯಕ್ಕೆ ಆಧುನಿಕ ಸ್ಪರ್ಶ ನೀಡಿ ಗ್ರಾಹಕರ ಮುಂದೆ ತಂದಿದ್ದು ಇವರ ಉದ್ಯಮದ ಯಶಸ್ಸಿನ ಪ್ರಮುಖ ರಹಸ್ಯ.
ಆರಂಭದ ಸಣ್ಣ ಪ್ರಯತ್ನ ಇಂದು ದೊಡ್ಡ ಉದ್ಯಮವಾಗಿ ಬೆಳೆದಿದೆ. 2021ರಲ್ಲಿ ಸುಮಾರು 30 ಲಕ್ಷ ರೂಪಾಯಿ ವಾರ್ಷಿಕ ಲಾಭ ದಾಖಲಿಸಿದ್ದ ಈ ಸಂಸ್ಥೆ, 2025ರ ವೇಳೆಗೆ ತಿಂಗಳಿಗೆ 1 ಕೋಟಿ ರೂಪಾಯಿ ವಹಿವಾಟು ನಡೆಸುವ ಸಾಮರ್ಥ್ಯ ಬೆಳೆಸಿಕೊಂಡಿದೆ. ಈಗಾಗಲೇ 60 ಸಾವಿರಕ್ಕೂ ಹೆಚ್ಚು ಗ್ರಾಹಕರನ್ನು ತಲುಪಿದ್ದು, ವಿದೇಶಗಳಿಗೂ ಸೀರೆಗಳನ್ನು ರಫ್ತು ಮಾಡುತ್ತಿದೆ.
ಕೇವಲ 3 ಲಕ್ಷ ರೂಪಾಯಿಗಳಿಂದ ವ್ಯವಹಾರ ಆರಂಭಿಸುವುದು
ಈ ದಂಪತಿಗಳ ಕುಟುಂಬಕ್ಕೆ ಯಾವುದೇ ವ್ಯಾಪಾರ ಹಿನ್ನೆಲೆ ಇರಲಿಲ್ಲ. ಆದ್ದರಿಂದ, ಅವರು ಆರಂಭದಲ್ಲಿ ಅನೇಕ ವಿಷಯಗಳನ್ನು ಕಲಿಯಬೇಕಾಗಿತ್ತು. ಅವರು ತಮ್ಮ ಉಳಿತಾಯದಿಂದ 3 ಲಕ್ಷ ರೂಪಾಯಿಗಳನ್ನು ವ್ಯವಹಾರದಲ್ಲಿ ಹೂಡಿಕೆ ಮಾಡಿದರು. ಆರಂಭದಲ್ಲಿ, ಪೂಜಾ ಸ್ವತಃ ಸೀರೆಗಳನ್ನು ಮಾಡೆಲಿಂಗ್ ಮಾಡುತ್ತಿದ್ದರು. ಶಶಾಂಕ್ ಛಾಯಾಗ್ರಹಣ ಮತ್ತು ವಿಡಿಯೋಗ್ರಫಿಯ ಜವಾಬ್ದಾರಿಯನ್ನು ಹೊಂದಿದ್ದರು.
ಒಟ್ಟಿನಲ್ಲಿ, ಅಜ್ಜಿಯ ಸೀರೆಗಳಲ್ಲಿದ್ದ ನೆನಪುಗಳನ್ನೇ ಉದ್ಯಮದ ಬಂಡವಾಳವನ್ನಾಗಿ ಮಾಡಿಕೊಂಡ ಈ ದಂಪತಿ, ಕೇವಲ 3 ಲಕ್ಷ ರೂಪಾಯಿಯಿಂದ ಯಶಸ್ಸಿನ ಸಾಮ್ರಾಜ್ಯ ಕಟ್ಟಿದ್ದಾರೆ. ದೊಡ್ಡ ಸಂಬಳದ ಕೆಲಸಕ್ಕಿಂತ ಸ್ವಂತ ಕನಸಿನ ಮೇಲಿಟ್ಟ ನಂಬಿಕೆಯೇ ಇಂದು ಇವರನ್ನು ಕೋಟ್ಯಂತರ ವಹಿವಾಟಿನ ಉದ್ಯಮಿಗಳನ್ನಾಗಿ ಮಾಡಿದೆ. ಅಜ್ಜಿಯ ಸೀರೆಯಿಂದ ಶುರುವಾದ ಈ ಕಥೆ, ಈಗ ಸಾವಿರಾರು ಉದ್ಯಮ ಕನಸುಗಳಿಗೆ ಸ್ಫೂರ್ತಿಯಾಗಿದೆ.