SOCIAL MEDIA

Newsletter

PARTNER SITES
Select Language Select State

ಸರಿಯಾದ ಸಮಯಕ್ಕೆ ITR ಫೈಲ್‌ ಮಾಡಿದ್ರೂ ಇನ್ನೂ ರೀಫಂಡ್‌ ಬಂದಿಲ್ವಾ? ನಿಮ್ಮ ಹಣ ಎಲ್ಲಿ ಸಿಲುಕಿದೆ ಗೊತ್ತಾ? ಈ ರೀತಿ ಪತ್ತೆ ಹಚ್ಚಿ!

ತುಂಬಾ ಜನ ಸರಿಯಾದ ಸಮಯಕ್ಕೆ ಆದಾಯ ತೆರಿಗೆ ಪಾವತಿ ಮಾಡಿರುತ್ತಾರೆ. ಆದರೆ ರೀಫಂಡ್ ಬಂದಿರುವುದಿಲ್ಲ. ಹಾಗೆ ರೀಫಂಡ್ ಅನ್ನು ತಡೆಹಿಡಿದಿಡಲು ಹಲವು ಕಾರಣಗಳು ಇರುತ್ತವೆ. ಹಾಗೆಯೇ ಸುಲಭದಲ್ಲಿ ರೀಫಂಡ್ ಪಡೆಯುವುದಕ್ಕೂ ಮಾರ್ಗೋಪಾಯಗಳು ಇರುತ್ತವೆ. ಅವುಗಳ ಬಗ್ಗೆ ತಿಳಿಯಿರಿ.

Reported By Yashaswini V Written By Yashaswini V
Published: Sep 14, 2026, 01:05 PM IST | Updated: Sep 17, 2026, 03:28 PM IST
Join

ಪ್ರತಿ ವರ್ಷ ಮಿಲಿಯನ್‌ಗಟ್ಟಲೆ ಭಾರತೀಯರು ITR ಸಲ್ಲಿಕೆ ಮಾಡಿರುತ್ತಾರೆ. ಆದಾಯ ತೆರಿಗೆ ಇಲಾಖೆಯ ಮಾಹಿತಿಗಳು ಹೇಳುವ ಪ್ರಕಾರ 2026-27ರ ಮೌಲ್ಯಮಾಪನ (ಹಣಕಾಸು ವರ್ಷ 2025-26) ವರ್ಷಕ್ಕೆ ಆಗಸ್ಟ್ 31 ರವರೆಗೆ 78 ಮಿಲಿಯನ್‌ಗಿಂತಲೂ ಹೆಚ್ಚು ಜನ ITR ಸಲ್ಲಿಕೆ ಮಾಡಿದ್ದಾರೆ. ಇದಲ್ಲದೆ ಆಡಿಟ್ ಪ್ರಕರಣಗಳನ್ನು ಹೊಂದಿರುವವರಿಗೆ ITR ಸಲ್ಲಿಸಲು ಇದೇ ಅಕ್ಟೋಬರ್ 31ರವರೆಗೆ ಸಮಯಾವಕಾಶ ನೀಡಲಾಗಿದೆ. ಅಂದರೆ ITR ಸಲ್ಲಿಕೆ ಮಾಡುವವರ ಸಂಖ್ಯೆ ಈ ವರ್ಷ ಇನ್ನಷ್ಟು ಜಾಸ್ತಿಯಾಗಲಿದೆ. ಕಳೆದ ವರ್ಷದ ಅಂತಿಮ ದಿನಾಂಕದೊಳಗೆ  ITR ಸಲ್ಲಿಕೆ ಮಾಡಿದ್ದವರ ಸಂಖ್ಯೆ 73 ಮಿಲಿಯನ್ ಜನ.

ಆದಾಯ ಇಲಾಖೆ ಮೂಲಗಳು ತಿಳಿಸುವ ಮಾಹಿತಿಯ ಪ್ರಕಾರ, ಇದೇ ಜುಲೈ 31ರೊಳೆಗೆ ದೇಶದಲ್ಲಿ 59 ಮಿಲಿಯನ್ ಜನ ಐಟಿಆರ್-1 ಮತ್ತು ಐಟಿಆರ್-2 ಅನ್ನು ಸಲ್ಲಿಕೆ ಮಾಡಿದ್ದಾರೆ. ಇದಲ್ಲದೆ, ಆಗಸ್ಟ್ ಅಂತ್ಯದ ವೇಳೆಗೆ ವೃತ್ತಿಪರ ಮತ್ತು ವ್ಯವಹಾರ ಆದಾಯ ಹೊಂದಿರುವ ಆಡಿಟ್ ಅಲ್ಲದ ತೆರಿಗೆದಾರರು ಗಣನೀಯ ಸಂಖ್ಯೆಯಲ್ಲಿ ITR ಸಲ್ಲಿಕೆ ಮಾಡಿದ್ದಾರೆ. ಇದರಿಂದ ದೇಶದಲ್ಲಿ ಸಂಬಳ ಪಡೆಯುವ ಉದ್ಯೋಗಿಗಳ ಸಂಖ್ಯೆ ಮತ್ತು ಆಡಿಟ್ ಅಲ್ಲದ ವ್ಯವಹಾರ ನಡೆಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದೆ ಎನ್ನುವುದು ಬಹಳ ಸ್ಪಷ್ಟವಾಗಿ ಗೊತ್ತಾಗುತ್ತದೆ. ಹಾಗೆಯೇ ಈ ಬಾರಿ ದಾಖಲೆಯ ಪ್ರಮಾಣದಲ್ಲಿ ತೆರಿಗೆದಾರರು ITR ಸಲ್ಲಿಕೆ ಮಾಡಿದ್ದಾರೆ ಎನ್ನುವುದು ಖಚಿತವಾಗುತ್ತದೆ. ಆದರೆ ಸಮಯಕ್ಕೆ ತಕ್ಕಂತೆ ITR ಸಲ್ಲಿಕೆ ಮಾಡಿದ್ರೂ ಸಕಾಲಕ್ಕೆ ರಿಫಂಡ್ ಪಡೆಯುತ್ತಿದ್ದಾರಾ ಎನ್ನುವುದನ್ನು ನೋಡಿದರೆ ಇಲ್ಲ ಎನ್ನುವ ಉತ್ತರ ಸಿಗುತ್ತದೆ.

ITR ಸಲ್ಲಿಕೆ ಮಾಡಿದ್ರೂ ರೀಫಂಡ್‌ ಏಕೆ ಬರುವುದಿಲ್ಲ?
ನೀವು ಸಮಯಕ್ಕೆ ತಕ್ಕಂತೆ ಮತ್ತು ನಿಯಮಾನುಸಾರವೇ ITR ಸಲ್ಲಿಕೆ ಮಾಡಿದ್ರೂ ಅದು ಇ-ಪರಿಶೀಲನೆಯ ನಂತರ ರೀಫಂಡ್ ಮಾಡುವ ಉದ್ದೇಶಕ್ಕೋಸ್ಕರ ನಿಮ್ಮ ಬ್ಯಾಂಕ್ ಖಾತೆಗಳನ್ನು ತಲುಪಲು ನಾಲ್ಕರಿಂದ ಐದು ವಾರ ಸಮಯವಾಗುತ್ತದೆ. ಮುಂಗಡ ತೆರಿಗೆ ಅಥವಾ TDS ಪಾವತಿಸಿದ ನಿಜವಾದ ಹೊಣೆಗಾರಿಕೆಯನ್ನು ಮೀರಿದಾಗ ಮಾತ್ರ ತೆರಿಗೆ ಮರುಪಾವತಿಗಳನ್ನು ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ITR ಸಲ್ಲಿಕೆ ಮಾಡಿದ್ರೂ ರೀಫಂಡ್‌ ಬಾರದಿದ್ದರೆ ಮೊದಲು ಆನ್‌ಲೈನ್‌ ಮೂಲಕ ನಿಮ್ಮ ಖಾತೆಯ ಸ್ಥಿತಿಯನ್ನು ಪರಿಶೀಲಿಸಬೇಕಾಗುತ್ತದೆ.

ಆನ್‌ಲೈನ್‌ ಮೂಲಕ  ITR ಸಲ್ಲಿಕೆ ಮಾಡಿದ್ರೂ ರೀಫಂಡ್‌ ಬಾರದ ಪ್ರಕರಣಗಳನ್ನು ಪರಿಶೀಲಿಸಿದರೆ ರಿಫಂಡ್ ಆಗಲು ಇನ್ನೆಷ್ಟು ಸಮಯ ಬೇಕಾಗುತ್ತದೆ? ನಿಮಗೆ ರಿಫಂಡ್ ಆಗಬೇಕಿದ್ದ ಹಣ ಎಲ್ಲಿ ಮತ್ತು  ಏಕೆ ಸಿಲುಕಿಕೊಂಡಿದೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಆದ್ದರಿಂದ ಆದಾಯ ತೆರಿಗೆ ಇಲಾಖೆಯ ಅಧಿಕೃತ ಇ-ಫೈಲಿಂಗ್ ಪೋರ್ಟಲ್ ನಲ್ಲಿ ಪರಿಶೀಲನೆ ಮಾಡುವುದು ಅತ್ಯಗತ್ಯವಾಗಿದೆ.

ಆದಾಯ ಇಲಾಖೆ ಮೂಲಗಳ ಪ್ರಕಾರ, ತೆರಿಗೆದಾರರು ತಮ್ಮ ITR ಅನ್ನು ಯಶಸ್ವಿಯಾಗಿ ಇ-ಪರಿಶೀಲನೆಗೆ ಒಳಪಡಿಸಬೇಕು. ಏಕೆಂದರೆ ಆದಾಯ ತೆರಿಗೆ ನಿಯಮಗಳ ಪ್ರಕಾರ  ITR ಅನ್ನು ಇ-ಪರಿಶೀಲನೆಗೆ ಒಳಪಡಿಸುವುದು ಕಡ್ಡಾಯ. ಪರಿಶೀಲನೆಗೆ ಒಳಪಡಿಸಿದನಂತರವೇ ರಿಫಂಡ್ ಪ್ರಕ್ರಿಯೆ ಶುರುವಾಗುತ್ತದೆ.  ರಿಟರ್ನ್ ಪ್ರಕ್ರಿಯೆಗೊಳಿಸಲು ಮತ್ತು ಮರುಪಾವತಿ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲು ಸಾಮಾನ್ಯವಾಗಿ ನಾಲ್ಕರಿಂದ ಐದು ವಾರಗಳು ಬೇಕಾಗುತ್ತದೆ. ಈ ಅವಧಿಯೊಳಗೆ ಇಲಾಖೆಯಿಂದ ಇಮೇಲ್, SMS ಅಥವಾ ಅಧಿಸೂಚನೆಯನ್ನು ಸ್ವೀಕರಿಸದಿದ್ದರೆ ಆನ್‌ಲೈನ್ ದಾಖಲೆಗಳನ್ನು ಪರಿಶೀಲಿಸಬೇಕು.

ಕೆಲವೊಂದು ಪ್ರಕರಣಗಳಲ್ಲಿ ನಿಮಗೆ ರಿಫಂಡ್ ಮಾಡಲಾಗಿದೆ ಎನ್ನುವ ಅಧಿಸೂಚನೆ ಅಥವಾ ಮೆಸೇಜ್ ಅಧಿಕೃತವಾಗಿ ಇಲಾಖೆಗೆ ಬಂದಿರುತ್ತದೆ. ಆದರೆ ಹಣ ಮಾತ್ರ ನಿಮ್ಮ ಖಾತೆಗೆ ಬಂದಿರುವುದಿಲ್ಲ. ಹಲವಾರು ರೀತಿಯ ತಾಂತ್ರಿಕ ಕಾರಣಗಳಿಂದ ಅಥವಾ ನೀವು ಖಾತೆ ಹೊಂದಿರುವ ಬ್ಯಾಂಕಿನ ಆಂತರಿಕ (ಉದಾಹರಣೆ ಸರ್ವರ್ ಸ್ಲೋ) ಕಾರಣಗಳಿಂದ ನಿಮಗೆ ರಿಫಂಡ್ ಆಗಿಲ್ಲದಿರುವ ಸಾಧ್ಯತೆ ಇರುತ್ತದೆ. ಇದಲ್ಲದೆ ಪೂರ್ವ-ಮೌಲ್ಯಮಾಪನ ಮಾಡದ ಬ್ಯಾಂಕ್ ಖಾತೆ ಇದ್ದರೆ ಆದಾಯ ತೆರಿಗೆ ಪೋರ್ಟಲ್‌ನಲ್ಲಿ ಪೂರ್ವ-ಮೌಲ್ಯಮಾಪನ ಮಾಡಲಾದ ಮತ್ತು EVC ಸೌಲಭ್ಯವನ್ನು ಸಕ್ರಿಯಗೊಳಿಸಲಾದ ಬ್ಯಾಂಕ್ ಖಾತೆಗೆ ಮಾತ್ರ ರಿಫಂಡ್ ಆಗುತ್ತದೆ.

ಯಾವ ಕಾರಣಕ್ಕೆ ರಿಫಂಡ್ ಪಡೆಯಲು ಸಮಸ್ಯೆಯಾಗಬಹುದು?
1. ಹೆಸರು ಅಥವಾ ವಿವರಗಳಲ್ಲಿ ವ್ಯತ್ಯಾಸ ಇದ್ದರೆ:
ನಿಮ್ಮ ಪ್ಯಾನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯಲ್ಲಿ ದಾಖಲಾಗಿರುವ ಹೆಸರು, ಜನ್ಮ ದಿನಾಂಕ ಅಥವಾ ಕಾಗುಣಿತದಲ್ಲಿ ಸ್ವಲ್ಪ ವ್ಯತ್ಯಾಸವಿದ್ದರೂ ಬ್ಯಾಂಕುಗಳು ರಿಫಂಡ್ ಮಾಡುವ ವ್ಯವಸ್ಥೆಯನ್ನು ತಿರಸ್ಕರಿಸುತ್ತವೆ.

2. ಬ್ಯಾಂಕ್ ಖಾತೆಯಲ್ಲಿ ಯಾವುದಾದರೂ ಸಮಸ್ಯೆ ಇದ್ದರೆ:
ನಿಮ್ಮ ಬ್ಯಾಂಕ್ ಖಾತೆ ನಿಷ್ಕ್ರಿಯವಾಗಿದ್ದರೆ, ಸ್ಥಗಿತಗೊಂಡಿದ್ದರೆ ಅಥವಾ ಮುಚ್ಚಿದ್ದರೆ ಅಂತಹ ಸಂದರ್ಭಗಳಲ್ಲಿ ಆದಾಯ ತೆರಿಗೆ ಇಲಾಖೆಯು ರಿಫಂಡ್ ಮೊತ್ತವನ್ನು ನಿಮ್ಮ ಬ್ಯಾಂಕಿಗೆ ಕಳುಹಿಸಿದ್ದರು ಬ್ಯಾಂಕ್ ಅದನ್ನು ನಿಮಗೆ ಕೊಡುವುದಿಲ್ಲ. ಬದಲಿಗೆ ಆದಾಯ ತೆರಿಗೆ ಇಲಾಖೆಗೆ ವಾಪಸ್ ಕಳುಹಿಸುತ್ತದೆ.

3. ಬ್ಯಾಂಕ್ ವಿಲೀನದಿಂದ ಗ್ರಾಹಕ ವಿಲವಿಲ:
ಬ್ಯಾಂಕುಗಳ ವಿಲೀನ ಅಥವಾ ಬ್ಯಾಂಕಿನ ಶಾಖೆಗಳ ವಿಲೀನ ಆಗಿದ್ದರೆ, ಅಥವಾ ಬದಲಾವಣೆಯ ಕಾರಣದಿಂದಾಗಿ ನೀವು ಹಳೆಯ IFSC ಕೋಡ್ ಅನ್ನು ನಮೂದು ಮಾಡಿದ್ದರೆ ಆಗ ವಹಿವಾಟು ವಿಫಲಗೊಳ್ಳುತ್ತದೆ. ಅದರಿಂದ ಕೂಡ ರಿಫಂಡ್ ಪಡೆಯಲು ತೊಡಕಾಗುತ್ತದೆ.

4. ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡದಿದ್ದರೆ:
ತೆರಿಗೆದಾರರು ಪ್ಯಾನ್ ಮತ್ತು ಆಧಾರ್ ಕಾರ್ಡುಗಳನ್ನು ಲಿಂಕ್ ಮಾಡಿಸುವುದು ಕಡ್ಡಾಯ. ಹಾಗೆಯೇ ನಿಮ್ಮ ಬ್ಯಾಂಕ್ ಖಾತೆಗೆ ಪ್ಯಾನ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸುವುದು ಕೂಡ ಕಡ್ಡಾಯ. ಒಂದೊಮ್ಮೆ ಪ್ಯಾನ್ ಮತ್ತು ಆಧಾರ್ ಕಾರ್ಡ್ ಯಾವುದಾದರೊಂದು ಲಿಂಕ್ ಆಗಿಲ್ಲದಿದ್ದರೆ, ಅಥವಾ ಅವು ಕಾರ್ಯನಿರ್ವಹಿಸದಿದ್ದರೆ ಆಗ ಮರುಪಾವತಿಯನ್ನು ಸ್ಥಗಿತಗೊಳಿಸಲಾಗುತ್ತದೆ.

5. ಹಳೆಯ ತೆರಿಗೆ ಬಾಕಿಗಳ ವಿರುದ್ಧ ಹೊಂದಾಣಿಕೆ: 
ಹಿಂದಿನ ಯಾವುದೇ ಹಣಕಾಸು ವರ್ಷದಲ್ಲಿ ತೆರಿಗೆ ಪಾವತಿಯನ್ನು ಬಾಕಿ ಉಳಿಸಿಕೊಂಡಿದ್ದರೆ ಆದಾಯ ತೆರಿಗೆ ಇಲಾಖೆಯು ಸೆಕ್ಷನ್ 245 ರ ಅಡಿಯಲ್ಲಿ ಆ ಹಳೆಯ ಬಾಕಿ ಹಣಕ್ಕೆ ಹೊಸ ರಿಫಂಡ್ ಮೊತ್ತವನ್ನು ಜಮಾ ಮಾಡಿಕೊಳ್ಳಬಹುದು. 

6. ಡೇಟಾದಲ್ಲಿ ಹೊಂದಾಣಿಕೆಯಾಗದಿರುವುದು: 
ನೀವು ITR ಸಲ್ಲಿಕೆ ವೇಳೆ ದಾಖಲಿಸಲಾದ TDS ಅಂಕಿಅಂಶಗಳು ಮತ್ತು AIS ಅಥವಾ ಫಾರ್ಮ್ 26 AS ನಡುವೆ ವ್ಯತ್ಯಾಸವಿದ್ದರೆ ಹೆಚ್ಚಿನ ಪರಿಶೀಲನೆ ನಡೆಸಿ ರಿಫಂಡ್ ಬಿಡುಗಡೆ ಮಾಡಬೇಕು ಎನ್ನುವ ಕಾರಣಕ್ಕೆ  ತಡೆಹಿಡಿಯಲಾಗುತ್ತದೆ.

ಈ ಹಿನ್ನೆಲೆಯಲ್ಲಿ ನೀವು ಸಮಯಕ್ಕೆ ಸರಿಯಾಗಿ ITR ಸಲ್ಲಿಸುವುದು, ಸರಿಯಾದ ರೀತಿಯಲ್ಲಿ ITR ಸಲ್ಲಿಕೆ ಮಾಡುವುದು ಬಹಳ ಮುಖ್ಯ. ಅದಕ್ಕಾಗಿ ITR  ಸಲ್ಲಿಕೆ ಮಾಡಲು ಮತ್ತು ಮಾಡಿದ ಬಳಿಕ ನಮಗೆ ಬರಬೇಕಾದ ರಿಫಂಡ್ ಅನ್ನು ಪಡೆದುಕೊಳ್ಳಲು ಸುಲಭವಾದ ಮತ್ತು ಸಮರ್ಪಕವಾದ ಮಾರ್ಗವನ್ನು ತಿಳಿದುಕೊಳ್ಳಲೇಬೇಕು.

ರಿಫಂಡ್ ಬಂದಿಲ್ಲದಿದ್ದರೆ ಸುಲಭವಾಗಿ Status ಚೆಕ್ ಮಾಡುವುದು ಹೇಗೆ?
1 ಆದಾಯ ತೆರಿಗೆ ಇಲಾಖೆಯ ಅಧಿಕೃತವಾದ ಇ-ಫೈಲಿಂಗ್ ಪೋರ್ಟಲ್‌ಗೆ incometax.gov.inಗೆ ಭೇಟಿ ನೀಡಿ.
2 ಪೋರ್ಟಲ್ ಮುಖಪುಟದ ಮೇಲಿನ ಬಲ ಮೂಲೆಯಲ್ಲಿರುವ 'ಲಾಗಿನ್' ಬಟನ್ ಅನ್ನು ಕ್ಲಿಕ್ ಮಾಡಿ.
3 ನಿಮ್ಮ ಬಳಕೆದಾರ ಐಡಿ (ಪ್ಯಾನ್ ಸಂಖ್ಯೆ) ಮತ್ತು ಪಾಸ್‌ವರ್ಡ್ ಅನ್ನು ನಮೂದಿಸುವ ಮೂಲಕ ಲಾಗಿನ್ ಆಗಿ.
4  ಲಾಗಿನ್ ಆದ ಬಳಿಕ ಮುಖ್ಯ ಡ್ಯಾಶ್‌ಬೋರ್ಡ್‌ನ ಟಾಸ್ಕ್‌ಬಾರ್‌ಗೆ ಹೋಗಿ.
5 ಟಾಸ್ಕ್‌ಬಾರ್ ನಲ್ಲಿರುವ 'ಇ-ಫೈಲ್' ಮೆನುವಿನ ಅಡಿಯಲ್ಲಿ, 'ಆದಾಯ ತೆರಿಗೆ ರಿಟರ್ನ್‌ಗಳು' ಎನ್ನುವ ಕಡೆ ಕ್ಲಿಕ್ ಮಾಡಿ.
6 ನೀವು ITR ಸಲ್ಲಿಸಿರುವ ಮಾಹಿತಿಯನ್ನು ‘ರಿಟರ್ನ್‌ಗಳನ್ನು ವೀಕ್ಷಿಸಿ' ಎನ್ನುವುದನ್ನು ಆಯ್ಕೆಮಾಡಿ.
7 ಪರದೆಯ ಮೇಲೆ ನೀವು ಸಲ್ಲಿಸಿರುವ ಎಲ್ಲಾ ಹಳೆಯ ಮತ್ತು ಹೊಸ ರಿಟರ್ನ್‌ಗಳ ಟೈಮ್‌ಲೈನ್ ಬರುತ್ತದೆ. ಅದನ್ನು ಮೌಲ್ಯಮಾಪನ ವರ್ಷದಿಂದ ಆಯೋಜಿಸಲಾಗಿದೆ. 2026-27ರ ಮೌಲ್ಯಮಾಪನ ವರ್ಷವನ್ನು ಪರಿಶೀಲಿಸಿ. 
8 ರಿಟರ್ನ್ ಫೈಲಿಂಗ್, ಇ-ಪರಿಶೀಲನೆ, ಪ್ರಕ್ರಿಯೆ ಮತ್ತು ಮರುಪಾವತಿ ಪ್ರಕ್ರಿಯೆ ಯಾವ ಸ್ಥಿತಿಯಲ್ಲಿದೆ ಎನ್ನುವ ಮಾಹಿತಿಯನ್ನು ಪರಿಶೀಲಿಸಿ.


ಬಹಳ ಮುಖ್ಯ ಸಂಗತಿಗಳು: 

1 ITRನ ಡಿಜಿಟಲ್ ಪರಿಶೀಲನೆ ಪೂರ್ಣಗೊಳ್ಳುವವರೆಗೆ ಆದಾಯ ತೆರಿಗೆ ಇಲಾಖೆಯು ರಿಫಂಡ್ ಪ್ರಕ್ರಿಯೆಯನ್ನು ಪ್ರಾರಂಭ ಮಾಡುವುದಿಲ್ಲ

2 ಇ-ಫೈಲಿಂಗ್ ಪೋರ್ಟಲ್ ನಲ್ಲಿ 'ನನ್ನ ಬ್ಯಾಂಕ್ ಖಾತೆ' ವಿಭಾಗಕ್ಕೆ ಹೋಗಿ ಹೆಸರು ಮತ್ತು ಪ್ಯಾನ್ ಸಂಖ್ಯೆಯನ್ನು ಲಿಂಕ್ ಮಾಡಬಹುದು.

3 ಪೋರ್ಟಲ್‌ನಲ್ಲಿ ಮರುಪಾವತಿ ಸ್ಥಿತಿಯು 'ಮರುಪಾವತಿ ವಿಫಲವಾಗಿದೆ' ಎಂದು ತೋರಿಸಿದರೆ ತೆರಿಗೆದಾರರು ತಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಮರು-ಸರಿಪಡಿಸಿ ಅದನ್ನು ಪೂರ್ವ-ಮೌಲ್ಯಮಾಪನ ಮಾಡಿದ ನಂತರ 'ಸೇವೆಗಳು' ಟ್ಯಾಬ್ ಅಡಿಯಲ್ಲಿ ಹೊಸ 'ಮರುಪಾವತಿ ಮರು-ವಿತರಣೆ' ವಿನಂತಿಯನ್ನು ಸಲ್ಲಿಸಬೇಕು.

4 ಲೆಕ್ಕಪರಿಶೋಧನೆಗೆ ಒಳಪಡುವ ವ್ಯವಹಾರಗಳಿಗೆ ರಿಟರ್ನ್ಸ್ ಸಲ್ಲಿಕೆ ಮಾಡಲು ಇಲಾಖೆ ನಿಗಧಿ ಪಡಿಸಿರುವ ಕಡೆಯ ದಿನ ಇದೇ ಅಕ್ಟೋಬರ್  31.

5 ಸಮಯಕ್ಕೆ ಸರಿಯಾಗಿ ರಿಟರ್ನ್ ಸಲ್ಲಿಸಿದರೆ ಮೌಲ್ಯಮಾಪನ ವರ್ಷದ ಏಪ್ರಿಲ್ 1 ರಿಂದ ಮರುಪಾವತಿ ನೀಡುವ ದಿನಾಂಕದವರೆಗೆ ತಿಂಗಳಿಗೆ 0.5% ದರದಲ್ಲಿ ಬಡ್ಡಿಯನ್ನು ಪಡೆಯಬಹುದು.

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES