SOCIAL MEDIA

Newsletter

PARTNER SITES
Select Language Select State

ಭಾರತದ ಆರ್ಥಿಕತೆಗೆ ಟ್ರಂಪ್ ಫಿದಾ! 7% ಜಿಡಿಪಿ ಬೆಳವಣಿಗೆ ಉಲ್ಲೇಖಿಸಿ ಅಮೆರಿಕದ ಫೆಡ್‌ಗೆ ಖಡಕ್ ಸಂದೇಶ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಶೇ.7ರ ಜಿಡಿಪಿ ಬೆಳವಣಿಗೆಯನ್ನ ಉಲ್ಲೇಖಿಸಿ, ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ಕಡಿತಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. ಭಾರತದಲ್ಲಿ ಕಡಿಮೆ ಬಡ್ಡಿದರದ ನಡುವೆಯೂ ಉತ್ತಮ ಆರ್ಥಿಕ ಬೆಳವಣಿಗೆ ದಾಖಲಾಗುತ್ತಿದೆ ಎಂದಿರುವ ಅವರು, ಅಮೆರಿಕದಲ್ಲೂ ಬಡ್ಡಿದರ ಇಳಿಸಿದರೆ ಜಿಡಿಪಿ ಬೆಳವಣಿಗೆ ಶೇ.15ರಿಂದ 20ಕ್ಕೆ ಏರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಫೆಡರಲ್ ರಿಸರ್ವ್‌ನ ಬಡ್ಡಿದರ ನೀತಿಗಳ ವಿರುದ್ಧವೂ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Written By Puttaraj K Alur
Published: Nov 22, 2026, 19:21 IST | Updated: Nov 22, 2026, 19:39 IST
Image Credit: India GDP
Join

India GDP Growth: ಭಾರತದ ಆರ್ಥಿಕತೆಯನ್ನ ಈ ಹಿಂದೆ 'ಡೆಡ್ ಎಕಾನಮಿ' ಎಂದು ಟೀಕಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಭಾರತದ ಜಿಡಿಪಿ ಬೆಳವಣಿಗೆಯನ್ನ ಉಲ್ಲೇಖಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತದ ಶೇ.7ರಷ್ಟು ಆರ್ಥಿಕ ಬೆಳವಣಿಗೆಯನ್ನ ಉದಾಹರಣೆಯಾಗಿ ಮುಂದಿಟ್ಟಿರುವ ಅವರು, ಅಮೆರಿಕದ ಕೇಂದ್ರೀಯ ಬ್ಯಾಂಕ್ ಆಗಿರುವ ಫೆಡರಲ್ ರಿಸರ್ವ್ ಬಡ್ಡಿದರಗಳನ್ನ ಕಡಿತಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ಬಡ್ಡಿದರಗಳನ್ನ ಇಳಿಸಿದರೆ ಅಮೆರಿಕದ ಆರ್ಥಿಕತೆ ಶೇ.15ರಿಂದ 20ರವರೆಗೆ ಬೆಳೆಯುವ ಸಾಮರ್ಥ್ಯ ಹೊಂದಿದೆ ಎಂಬುದು ಟ್ರಂಪ್ ಅವರ ವಾದವಾಗಿದೆ.

ಶುಕ್ರವಾರ ಮಾತನಾಡಿದ ಟ್ರಂಪ್, ಅಮೆರಿಕದ ಫೆಡರಲ್ ರಿಸರ್ವ್ ಅನುಸರಿಸುತ್ತಿರುವ ಬಡ್ಡಿದರ ನೀತಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಭಾರತದ ಆರ್ಥಿಕ ಬೆಳವಣಿಗೆ ಮತ್ತು ಅಲ್ಲಿನ ಕಡಿಮೆ ಬಡ್ಡಿದರಗಳನ್ನ ಹೋಲಿಕೆ ಮಾಡಿದ ಅವರು, ಅಮೆರಿಕದಲ್ಲಿಯೂ ಸಾಲದ ಮೇಲಿನ ಬಡ್ಡಿದರಗಳನ್ನ ಕಡಿಮೆ ಮಾಡಿದರೆ ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ಸಿಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಶೇ.7ರ ಜಿಡಿಪಿ ಬೆಳವಣಿಗೆ ಉಲ್ಲೇಖಿಸಿದ ಟ್ರಂಪ್

ಭಾರತದಲ್ಲಿ ಬಡ್ಡಿದರಗಳು ಕಡಿಮೆ ಇರುವುದರ ಜೊತೆಗೆ ಜಿಡಿಪಿ ಬೆಳವಣಿಗೆ ಶೇ.7ರಷ್ಟಿದೆ ಎಂಬುದನ್ನ ಟ್ರಂಪ್ ತಮ್ಮ ಮಾತಿನಲ್ಲಿ ಪ್ರಸ್ತಾಪಿಸಿದ್ದಾರೆ. ಇದೇ ರೀತಿಯ ಬಡ್ಡಿದರ ನೀತಿಯನ್ನ ಅಮೆರಿಕದಲ್ಲಿಯೂ ಅನುಸರಿಸಿದರೆ ಆರ್ಥಿಕ ಬೆಳವಣಿಗೆಯನ್ನ ಮತ್ತಷ್ಟು ಹೆಚ್ಚಿಸಬಹುದು ಎಂದು ಅವರು ಹೇಳಿದ್ದಾರೆ. ಅಮೆರಿಕದ ಆರ್ಥಿಕತೆಯ ಬೆಳವಣಿಗೆ ಪ್ರಸ್ತುತ ಶೇ.4ರ ಮಟ್ಟದಲ್ಲಿದ್ದರೆ, ಬಡ್ಡಿದರಗಳನ್ನ ಕಡಿತಗೊಳಿಸುವ ಮೂಲಕ ಅದನ್ನ ಶೇ.14, 15 ಅಥವಾ 20ರವರೆಗೆ ಕೊಂಡೊಯ್ಯಬಹುದು ಎಂಬ ಲೆಕ್ಕಾಚಾರವನ್ನ ಟ್ರಂಪ್ ಮುಂದಿಟ್ಟಿದ್ದಾರೆ. ಈ ಮೂಲಕ ದೇಶದ ಆರ್ಥಿಕತೆಯ ವಿಸ್ತರಣೆಗೆ ಫೆಡರಲ್ ರಿಸರ್ವ್‌ನ ನೀತಿಗಳೇ ಅಡ್ಡಿಯಾಗುತ್ತಿವೆ ಎಂದು ಆರೋಪಿಸಿದ್ದಾರೆ.

'ಉತ್ತಮ ಆರ್ಥಿಕ ಅಂಕಿಅಂಶಗಳಿದ್ದಾಗ ಬಡ್ಡಿದರ ಇಳಿಸಬೇಕು'

ದೇಶದ ಆರ್ಥಿಕ ಅಂಕಿಅಂಶಗಳು ಉತ್ತಮವಾಗಿರುವ ಸಂದರ್ಭದಲ್ಲಿ ಸಾಲದ ಮೇಲಿನ ಬಡ್ಡಿದರಗಳನ್ನ ಹೆಚ್ಚಾಗಿ ಇರಿಸುವ ಬದಲು ಕಡಿಮೆ ಮಾಡಬೇಕು ಎಂಬುದು ಟ್ರಂಪ್ ಅವರ ವಾದವಾಗಿದೆ. ಬಲಿಷ್ಠ ಆರ್ಥಿಕತೆ ಮತ್ತು ಉತ್ತಮ ಹಣಕಾಸಿನ ಸ್ಥಿತಿ ಅಮೆರಿಕವನ್ನ ಹೆಚ್ಚು ವಿಶ್ವಾಸಾರ್ಹ ಸಾಲಗಾರನನ್ನಾಗಿ ಮಾಡುತ್ತದೆ ಎಂದು ಅವರು ಹೇಳಿದ್ದಾರೆ. ಬಡ್ಡಿದರಗಳು ಕಡಿಮೆಯಾದರೆ ಉದ್ಯಮಗಳು ಮತ್ತು ಗ್ರಾಹಕರಿಗೆ ಸಾಲ ಪಡೆಯುವುದು ಸುಲಭವಾಗುತ್ತದೆ. ಇದರಿಂದ ಹೂಡಿಕೆ ಹಾಗೂ ವ್ಯಾಪಾರ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ ಎಂಬ ನಿಲುವನ್ನ ಟ್ರಂಪ್ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕಡಿಮೆ ಬಡ್ಡಿದರಗಳ ಮೂಲಕ ದೇಶದ ಸಾಲವನ್ನ ವೇಗವಾಗಿ ತೀರಿಸಲು ಸಾಧ್ಯವಾಗಲಿದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಫೆಡರಲ್ ರಿಸರ್ವ್ ವಿರುದ್ಧ ಟ್ರಂಪ್ ವಾಗ್ದಾಳಿ

ಅಮೆರಿಕದ ಫೆಡರಲ್ ರಿಸರ್ವ್‌ನ ಕಾರ್ಯವೈಖರಿಯನ್ನ ಟ್ರಂಪ್ ತೀವ್ರವಾಗಿ ಟೀಕಿಸಿದ್ದಾರೆ. ಕೇಂದ್ರೀಯ ಬ್ಯಾಂಕ್ ರಾಜಕೀಯ ಪ್ರೇರಿತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿರುವ ಅವರು, ದೇಶದ ಆರ್ಥಿಕ ವರದಿಗಳು ಉತ್ತಮವಾಗಿರುವ ಸಂದರ್ಭಗಳಲ್ಲಿಯೂ ಬಡ್ಡಿದರಗಳನ್ನ ಹೆಚ್ಚಿಸುವ ಕ್ರಮ ಸರಿಯಲ್ಲವೆಂದು ಹೇಳಿದ್ದಾರೆ. ಅಮೆರಿಕದ ಬಡ್ಡಿದರಗಳು ಜಾಗತಿಕ ಮಟ್ಟದಲ್ಲಿ ಅತ್ಯಂತ ಕಡಿಮೆ ಇರಬೇಕು ಎಂಬುದು ತಮ್ಮ ಅಭಿಪ್ರಾಯವೆಂದು ಟ್ರಂಪ್ ತಿಳಿಸಿದ್ದಾರೆ. ಹೆಚ್ಚಿನ ಸಾಲದ ವೆಚ್ಚದ ನಡುವೆಯೂ ತಮ್ಮ ಆಡಳಿತದ ಸುಂಕ ನೀತಿಗಳು ದೇಶೀಯ ಉತ್ಪಾದನೆಯನ್ನ ಹೆಚ್ಚಿಸಲು ಕಂಪನಿಗಳನ್ನ ಪ್ರೇರೇಪಿಸುತ್ತಿವೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಹಣದುಬ್ಬರದ ಕಾರಣಕ್ಕೆ ಫೆಡ್‌ಗೆ ಸವಾಲು

ಟ್ರಂಪ್ ಬಡ್ಡಿದರ ಕಡಿತಕ್ಕೆ ಒತ್ತಾಯಿಸುತ್ತಿದ್ದರೂ, ಅಮೆರಿಕದಲ್ಲಿ ಹಣದುಬ್ಬರವು ಫೆಡರಲ್ ರಿಸರ್ವ್‌ನ ಶೇ.2ರ ದೀರ್ಘಕಾಲೀನ ಗುರಿಗಿಂತ ಹೆಚ್ಚಾಗಿದೆ. ಸೆಪ್ಟೆಂಬರ್‌ನ ಅಂಕಿಅಂಶಗಳ ಪ್ರಕಾರ, ವಾರ್ಷಿಕ ಪಿಸಿಇ ಹಣದುಬ್ಬರ ಶೇ.3.6ರಷ್ಟಿದ್ದರೆ, ಕೋರ್ ಪಿಸಿಇ ಹಣದುಬ್ಬರ ಶೇ.3.1ರಷ್ಟಿದೆ. ಫೆಡರಲ್ ರಿಸರ್ವ್ ಹಣಕಾಸು ನೀತಿಯನ್ನ ನಿರ್ಧರಿಸುವಾಗ ಬೆಲೆ ಸ್ಥಿರತೆ ಮತ್ತು ಗರಿಷ್ಠ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುತ್ತದೆ. ಹಣದುಬ್ಬರವನ್ನ ನಿಯಂತ್ರಿಸಲು ಸಾಲ ಪಡೆಯುವ ವೆಚ್ಚವನ್ನ ಹೆಚ್ಚಿಸುವ ಮೂಲಕ ಗ್ರಾಹಕರು ಮತ್ತು ಉದ್ಯಮಗಳ ಬೇಡಿಕೆಯನ್ನ ನಿಯಂತ್ರಿಸುವುದು ಅದರ ಪ್ರಮುಖ ಕ್ರಮವಾಗಿದೆ.

'ಡೆಡ್ ಎಕಾನಮಿ' ಎಂದಿದ್ದವರಿಂದಲೇ ಭಾರತದ ಆರ್ಥಿಕತೆಗೆ ಮೆಚ್ಚುಗೆ

ಈ ಹಿಂದೆ ಸುಂಕದ ವಿಚಾರದಲ್ಲಿ ಭಾರತದ ನಿಲುವನ್ನ ಟೀಕಿಸಿದ್ದ ಟ್ರಂಪ್, ದೇಶದ ಆರ್ಥಿಕತೆಯನ್ನ 'ಡೆಡ್ ಎಕಾನಮಿ' ಎಂದು ಕರೆದಿದ್ದರು. ಇದೀಗ ಭಾರತದ ಶೇ.7ರ ಜಿಡಿಪಿ ಬೆಳವಣಿಗೆಯನ್ನ ಅಮೆರಿಕದ ಆರ್ಥಿಕ ನೀತಿಗೆ ಉದಾಹರಣೆಯಾಗಿ ಬಳಸಿರುವುದು ಗಮನ ಸೆಳೆದಿದೆ. ಟ್ರಂಪ್ ಅವರ ಹಿಂದಿನ ಹೇಳಿಕೆಯನ್ನ ಬೆಂಬಲಿಸಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಈ ಬೆಳವಣಿಗೆಯಿಂದ ಮುಖಭಂಗವಾದಂತಾಗಿದೆ. 'ಡೆಡ್ ಎಕಾನಮಿ' ಎಂದು ಹೇಳಿ ಈಗ ಉಲ್ಟಾ ಹೊಡೆದ ಪರಣಾಮ, ಅಂದು ಟ್ರಂಪ್‌ ಬೆಂಬಲಿಸಿ ಭಾರತದ ಆರ್ಥಿಕತೆಯನ್ನ ಟೀಕಿಸಿದ್ದ ರಾಹುಲ್‌ ಗಾಂಧಿ ಟ್ರೋಲ್‌ ಆಗುತ್ತಿದ್ದಾರೆ.

ಒಟ್ನಲ್ಲಿ ಭಾರತದ ಆರ್ಥಿಕ ಬೆಳವಣಿಗೆಯನ್ನ ಉಲ್ಲೇಖಿಸಿ ಅಮೆರಿಕದ ಬಡ್ಡಿದರ ನೀತಿಯಲ್ಲಿ ಬದಲಾವಣೆ ತರಬೇಕೆಂದು ಟ್ರಂಪ್ ಒತ್ತಾಯಿಸಿದ್ದಾರೆ. ಆದರೆ ಹಣದುಬ್ಬರ ನಿಯಂತ್ರಣ ಮತ್ತು ಆರ್ಥಿಕ ಬೆಳವಣಿಗೆಯ ನಡುವಿನ ಸಮತೋಲನ ಕಾಯ್ದುಕೊಳ್ಳುವುದು ಫೆಡರಲ್ ರಿಸರ್ವ್ ಮುಂದಿರುವ ಪ್ರಮುಖ ಸವಾಲಾಗಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES