SOCIAL MEDIA

Newsletter

PARTNER SITES
Select Language Select State

ದೀಪಾವಳಿಗೂ ಮುನ್ನ ಬಂಗಾರ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿ : ಕುಸಿದ ಚಿನ್ನ ಹಾಗೂ ಬೆಳ್ಳಿ ಬೆಲೆ.. ಎಷ್ಟು ಗೊತ್ತೆ?

Deepavali 2026 gold rate : ದಸರಾ ಹಬ್ಬ ಮುಗಿದು ದೀಪಾವಳಿಯ ಸಂಭ್ರಮಕ್ಕೆ ಇಡೀ ದೇಶವೇ ಸಜ್ಜಾಗುತ್ತಿರುವ ಹೊತ್ತಲ್ಲೇ, ಆಭರಣ ಪ್ರಿಯರಿಗೆ ಮತ್ತು ಸಾಮಾನ್ಯ ಜನರಿಗೆ ಆರ್ಥಿಕ ತಜ್ಞರ ತಂಡವೊಂದು ಭರ್ಜರಿ ಸಿಹಿಸುದ್ದಿ ನೀಡಿದೆ.. ಕಳೆದ ಕೆಲ ತಿಂಗಳುಗಳಿಂದ ಗಗನಕ್ಕೇರಿ ಜನಸಾಮಾನ್ಯರಿಗೆ ಕಣ್ಣೀರು ತರಿಸುತ್ತಿದ್ದ ಬಂಗಾರ ಮತ್ತು ಬೆಳ್ಳಿಯ ಬೆಲೆಯಲ್ಲಿ ಈಗ ದಿಢೀರ್ ಕುಸಿತ ಉಂಟಾಗಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

Written By Krishna NK
Published: Oct 22, 2026, 09:29 PM IST | Updated: Oct 22, 2026, 09:33 PM IST
Image Credit: Deepavali 2026 Gold price
Join

Gold Price Drop : ಬೆಳಕಿನ ಹಬ್ಬ ದೀಪಾವಳಿ ಹೊತ್ತಿಗೆ ಚಿನ್ನದ ದುಬಾರಿ ಪಟ್ಟ ಸಂಪೂರ್ಣ ಕಳಚಿಬೀಳಲಿದ್ದು, ಬೆಲೆ ಮತ್ತಷ್ಟು ಗಣನೀಯವಾಗಿ ಇಳಿಕೆಯಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.. ಎಂಸಿಎಕ್ಸ್ ಮಾರುಕಟ್ಟೆಯಿಂದ ಹಿಡಿದು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ಬೆಲೆ ಕೆಳಮುಖವಾಗಿ ಸಾಗುತ್ತಿದ್ದು, ಗ್ರಾಹಕರಿಗೆ ಸಖತ್ ರಿಲೀಫ್ ಸಿಕ್ಕಿದೆ.. ಇತ್ತೀಚಿನ ದಿನಗಳಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದ್ದ ಚಿನ್ನದ ಬೆಲೆ ದಿಢೀರ್ ಇಳಿಯುತ್ತಿರುವುದೇಕೆ?.. ಜಾಗತಿಕ ಮಾರುಕಟ್ಟೆಯಲ್ಲಿ ಆಗು ತ್ತಿರುವ ಬದಲಾವಣೆಗಳೇನು?.. ಮಧ್ಯಪ್ರಾಚ್ಯದ ಬಿಕ್ಕಟ್ಟು ಮತ್ತು ಅಮೆರಿಕದ ಫೆಡರಲ್ ರಿಸರ್ವ್ ನಿರ್ಧಾರಗಳು ಬಂಗಾರದ ಮೇಲೆ ಬೀರುತ್ತಿರುವ ಪ್ರಭಾವವೇನು?.. ಬನ್ನಿ ತಿಳಿಯೋಣ..

ದೀಪಾವಳಿ ಮತ್ತು ಧನ್‌ತೇರಸ್ ಹಬ್ಬದ ಸಡಗರದಲ್ಲಿದ್ದ ಜನಸಾಮಾನ್ಯರಿಗೆ ಬುಲಿಯನ್ ಮಾರುಕಟ್ಟೆಯಿಂದ ಅತ್ಯಂತ ಸಂತಸದ ಸುದ್ದಿ ಹೊರಬಿದ್ದಿದೆ. ಗಗನಮುಖಿಯಾಗಿದ್ದ ಬಂಗಾರದ ಬೆಲೆ ಈಗ ಗಣನೀಯವಾಗಿ ಇಳಿಕೆಯಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶೇ ಕಡಾ 1ಕ್ಕಿಂತ ಹೆಚ್ಚು ಕುಸಿದಿದ್ದು, ದೇಶೀಯ ಮಾರುಕಟ್ಟೆಯಲ್ಲೂ ದರ ಕೆಳಮುಖವಾಗಿದೆ. ದೀಪಾವಳಿ ಸಂದರ್ಭದಲ್ಲಿ ಭಾರತದಲ್ಲಿ ಬಂಗಾರಕ್ಕೆ ಅಪಾರ ಬೇಡಿಕೆ ಇರುತ್ತದೆ. ಆದಾಗ್ಯೂ ಜಾಗತಿಕ ಆರ್ಥಿಕ ಸಮೀಕರಣಗಳಿಂದಾಗಿ ಬೆಲೆ ಇಳಿಕೆಯ ಹಾದಿ ಹಿಡಿದಿದ್ದು, ಗ್ರಾಹಕರ ಕೈಗೆಟುಕುವ ದರ ದಲ್ಲಿ ಚಿನ್ನ ಸಿಗುವ ನಿರೀಕ್ಷೆ ಮೂಡಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮಹಾನಗರಗಳಲ್ಲಿ ಚಿನ್ನದ ದರದಲ್ಲಿ ಸಮಾಧಾನಕರ ಇಳಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ ಆಭರಣ ತಯಾರಿಕೆಯ 22 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ ₹1,33,890ಕ್ಕೆ ತಲುಪಿದೆ. ಇತ್ತ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ ಡಿಸೆಂಬರ್ ಫ್ಯೂಚರ್ಸ್ ವಹಿವಾಟಿನಲ್ಲೂ ಚಿನ್ನದ ದರ ಶೇ. 0.35ರಷ್ಟು ಇಳಿಕೆ ಕಂಡಿದೆ. ಆದರೆ ಗ್ರಾಹಕರು ನೆನಪಿಡಬೇಕಾದ ಅಂಶವೆಂದರೆ, ಆಭರಣ ಮಳಿಗೆಗಳಲ್ಲಿ ಜಿಎಸ್‌ಟಿ (GST) ಮತ್ತು ತಯಾರಿಕಾ ಶುಲ್ಕಗಳು (Making Charges) ಪ್ರತ್ಯೇಕವಾಗಿ ಸೇರ್ಪಡೆಯಾಗಲಿವೆ.

ಕೇವಲ ಚಿನ್ನ ಮಾತ್ರವಲ್ಲದೆ, ಇತ್ತೀಚಿನ ದಿನಗಳಲ್ಲಿ ₹2.30 ಲಕ್ಷದ ಗಡಿ ದಾಟಿ ದುಬಾರಿಯಾಗಿದ್ದ ಬೆಳ್ಳಿ ಬೆಲೆಯಲ್ಲೂ ಗಮನಾರ್ಹ ಕುಸಿತ ದಾಖಲಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಒಂದೇ ದಿನ ಪ್ರತಿ ಕೆಜಿ ಬೆಳ್ಳಿ ಬೆಲೆಯಲ್ಲಿ ಬರೊಬ್ಬರಿ 5,000 ರೂಪಾಯಿ ಇಳಿಕೆಯಾಗಿದ್ದು, 2.25 ಲಕ್ಷ ರೂಪಾಯಿಗೆ ಬಂದು ನಿಂತಿದೆ. ಇತ್ತ ಎಂಸಿಎಕ್ಸ್ ವಹಿವಾಟಿನಲ್ಲೂ ಪ್ರತಿ ಕೆಜಿಗೆ 2,124 ರೂಪಾಯಿ ಇಳಿಕೆಯಾಗಿದ್ದು ₹2,09,361ಕ್ಕೆ ತಲುಪಿದೆ. ದೀಪಾವಳಿ ಲಕ್ಷ್ಮಿ ಪೂಜೆಗೆ ಬೆಳ್ಳಿ ನಾಣ್ಯ ಹಾಗೂ ವಸ್ತುಗಳನ್ನು ಖರೀದಿಸುವ ಜನರಿಗೆ ಈ ಬೆಲೆ ಇಳಿಕೆ ದೊಡ್ಡ ನಿರಾಳತೆ ತಂದಿದೆ.

ಚಿನ್ನದ ಬೆಲೆ ಏಕಾಏಕಿ ಇಳಿಯಲು ಜಾಗತಿಕ ಹಣಕಾಸು ಮಾರುಕಟ್ಟೆಯ ಬೆಳವಣಿಗೆಗಳೇ ಮುಖ್ಯ ಕಾರಣ. ಅಮೆರಿಕನ್ ಡಾಲರ್ ಸೂಚ್ಯಂಕ ಬಲಗೊಳ್ಳುತ್ತಿರುವುದರಿಂದ ಹಳದಿ ಲೋಹದ ಬೇಡಿಕೆ ಕುಸಿದಿದೆ. ಇದರ ಜೊತೆಗೆ ಅಮೆರಿಕದ ಕೇಂದ್ರ ಬ್ಯಾಂಕ್ ಆಗಿರುವ ಫೆಡರಲ್ ರಿಸರ್ವ್ ಡಿಸೆಂಬರ್‌ನಲ್ಲಿ ಬಡ್ಡಿದರ ಏರಿಸುವ ಶೇ. 90ರಷ್ಟು ನಿರೀಕ್ಷೆಯಿದೆ ಎಂದು ಸಿಎಂಇ ಫೆಡ್‌ವಾಚ್ (CME FedWatch) ತಿಳಿಸಿದೆ. ಬಡ್ಡಿದರ ಹೆಚ್ಚಾದಾಗ ಹೂಡಿಕೆದಾರರು ಬಡ್ಡಿ ನೀಡುವ ಸರ್ಕಾರಿ ಬಾಂಡ್‌ಗಳತ್ತ ಆಕರ್ಷಿತರಾಗುತ್ತಾರೆ. ಇದರಿಂದ ಯಾವುದೇ ಬಡ್ಡಿ ತರದ ಬಂಗಾರದ ಮೇಲಿನ ಹೂಡಿಕೆ ಕಡಿಮೆಯಾಗಿ ಬೆಲೆ ಕುಸಿಯುತ್ತಿದೆ.

ಮಧ್ಯಪ್ರಾಚ್ಯದಲ್ಲಿ ಸೌದಿ ಅರೇಬಿಯಾದ ಅರಾಮ್ಕೋ ತೈಲ ಘಟಕಗಳ ಮೇಲೆ ಹೌತಿ ಬಂಡುಕೋರರು ನಡೆಸುತ್ತಿರುವ ಕ್ಷಿಪಣಿ ದಾಳಿಯು ಕಚ್ಚಾ ತೈಲ ಬೆಲೆಯನ್ನು ಏರಿಸುತ್ತಿದೆ. ತೈಲ ಬೆಲೆ ಏರಿದರೆ ಹಣದುಬ್ಬರ ಹೆಚ್ಚುತ್ತದೆ, ಇದನ್ನು ನಿಯಂತ್ರಿಸಲು ವಿಶ್ವದ ಪ್ರಮುಖ ದೇಶಗಳು ಬಡ್ಡಿದರಗಳನ್ನು ಹೆಚ್ಚಿಸಬೇಕಾಗುತ್ತದೆ. ಇದು ಸದ್ಯಕ್ಕೆ ಚಿನ್ನದ ಬೆಲೆಯನ್ನು ನಿಯಂತ್ರಣದಲ್ಲಿಟ್ಟಿದೆ. ಆದರೆ ಆರ್ಥಿಕ ತಜ್ಞರ ಪ್ರಕಾರ, ದೀಪಾವಳಿ ಮತ್ತು ಧನ್‌ತೇರಸ್ ಮುಗಿಯುತ್ತಿದ್ದಂತೆ ಭಾರತದಲ್ಲಿ ಮದುವೆ ಸೀಸನ್ ಆರಂಭವಾಗಲಿದ್ದು, ದೇಶೀಯ ಬೇಡಿಕೆ ಏಕಾಏಕಿ ಪುಟಿದೇಳಲಿದೆ. ಆಗ ಬಂಗಾರದ ಬೆಲೆ ಮತ್ತೆ ಏರಿಕೆಯಾಗುವ ಸಾಧ್ಯತೆ ಇರುವುದರಿಂದ, ಈಗಿನ ಇಳಿಕೆಯ ಸಮಯವೇ ಖರೀದಿಗೆ ಅತ್ಯಂತ ಸೂಕ್ತವಾಗಿದೆ.

ಒಟ್ಟಿನಲ್ಲಿ, ಬಂಗಾರದ ಬೆಲೆ ದಿನೇ ದಿನೇ ಏರುತ್ತಲೇ ಇರುತ್ತದೆ, ಸಾಮಾನ್ಯರ ಕೈಗೆಟುಕುವುದಿಲ್ಲ ಎಂದು ಚಿಂತಿಸುತ್ತಿದ್ದ ಜನತೆಗೆ ಈ ಬಾರಿಯ ದೀಪಾವಳಿ ನಿಜಕ್ಕೂ ಸಿಹಿಸುದ್ದಿ ಹೊತ್ತು ತಂದಿದೆ. ಜಾಗತಿಕ ಡಾಲರ್ ಬಲ ಮತ್ತು ಅಮೆರಿಕಾದ ಫೆಡ್ ಬಡ್ಡಿದರದ ಸಮೀಕರಣಗಳು ಹಳದಿ ಲೋಹದ ಓಟಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿವೆ. ದೀಪಾವಳಿ ಮತ್ತು ಧನ್‌ತೇರಸ್ ಪೂಜೆಗೆ ಬಂಗಾರ ಅಥವಾ ಬೆಳ್ಳಿ ಖರೀದಿಸಲು ಕಾಯುತ್ತಿದ್ದ ಆಭರಣ ಪ್ರಿಯರಿಗೆ ಇದು ಹೇಳಿ ಮಾಡಿಸಿದ ಸಮಯ. ಆದರೆ ಹಬ್ಬದ ನಂತರ ಮದುವೆ ಸೀಸನ್ ಶುರುವಾದರೆ ಮಾರುಕಟ್ಟೆ ಮತ್ತೆ ಜಿಗಿಯುವ ಸಾಧ್ಯತೆ ಇರುವುದರಿಂದ, ಖರೀದಿದಾರರು ಇಂದಿನ ದರ ಮತ್ತು ಮಳಿಗೆಗಳ ತಯಾರಿಕಾ ವೆಚ್ಚಗಳನ್ನು ಸೂಕ್ತವಾಗಿ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುವುದು ಜಾಣತನ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES