SOCIAL MEDIA

Newsletter

PARTNER SITES
Select Language Select State

ಮಗಳಿಗೆ 18 ವರ್ಷ ತುಂಬಿದ ಬಳಿಕ ಸುಕನ್ಯಾ ಸಮೃದ್ಧಿ ಯೋಜನೆಯಿಂದ ಫುಲ್‌ ಹಣ ಹಿಂಪಡೆಯಬಹುದೇ?

ಹೆಣ್ಣು ಮಕ್ಕಳ ಭವಿಷ್ಯಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿನ್ಯಾಸಗೊಳಿಸಿರುವ ಮಹತ್ವಾಕಾಂಕ್ಷೆಯ ಯೋಜನೆಯೇ ಸುಕನ್ಯಾ ಸಮೃದ್ಧಿ ಯೋಜನೆ.

Written By Yashaswini V
Published: Oct 20, 2026, 11:06 AM IST | Updated: Oct 20, 2026, 11:08 AM IST
Join

ಹೆಣ್ಣು ಮಕ್ಕಳು ಎಂದರೆ ಖರ್ಚು, ಆರ್ಥಿಕ ಹೊರೆ ಎಂದಾಗಬಾರದು. ಹೆಣ್ಣು ಮಕ್ಕಳ ಭವಿಷ್ಯ ಉಜ್ವಲವಾಗಿರಬೇಕು ಎಂಬ ಮಹಾ ಉದ್ದೇಶದಿಂದ ಅವರ ಉಜ್ವಲ ಭವಿಷ್ಯಕ್ಕಾಗಿ ಹಣಕಾಸಿನ ಭದ್ರತೆ ಒದಗಿಸಲು ಕೇಂದ್ರ ಸರ್ಕಾರ ಆರಂಭಿಸಿರುವ ಸರ್ಕಾರಿ ಉಳಿತಾಯ ಯೋಜನೆಯೇ ಸುಕನ್ಯಾ ಸಮೃದ್ಧಿ ಯೋಜನೆ (SSY).

ಸುಕನ್ಯಾ ಸಮೃದ್ಧಿ ಯೋಜನೆ (SSY)ಯಲ್ಲಿ ಸಣ್ಣ ಸಣ್ಣ ಉಳಿತಾಯವನ್ನು ಮಾಡುವ ಮೂಲಕ ಪೋಷಕರು ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಹಾಗೂ ಅವರ ಮದುವೆ ಖರ್ಚಿಗಾಗಿ ಉತ್ತಮ ಹಣವನ್ನು ಕಲೆಹಾಕಬಹುದು. ಆದರೆ, ನಮ್ಮಲ್ಲಿ ಬಹುತೇಕ ಜನರಿಗೆ ಇರುವ ಸಾಮಾನ್ಯ ಪ್ರಶ್ನೆ ಎಂದರೆ, ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಿದರೆ ಮಗಳಿಗೆ 18 ವರ್ಷ ತುಂಬಿದ ಬಳಿಕ ಅದರಲ್ಲಿರುವ ಸಂಪೂರ್ಣ ಹಣವನ್ನು ಹಿಂಪಡೆಯಬಹುದೇ ಅಥವಾ ಮಗಳಿಗೆ 21 ತುಂಬುವವರೆಗೂ ಕಾಯಲೇ ಬೇಕೆ? ಎಂಬುದಾಗಿದೆ. ನಿಮ್ಮ ಈ ಪ್ರಶ್ನೆಗೆ ಇಲ್ಲಿದೆ ಉತ್ತರ.

ಸುಕನ್ಯಾ ಸಮೃದ್ಧಿ ಯೋಜನೆ (SSY) ಎಂದರೆ ಏನು?
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳನ್ನು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಗೆ ಹೋಲಿಸಲಾಗುತ್ತದೆ. ಆದರೆ, ಅವರ ಓದು, ಮದುವೆ, ನಂತರದ ಖರ್ಚುಗಳ ವಿಷಯಕ್ಕೆ ಬಂದಾಗ ಅರೆ ಗಂಡು ಮಕ್ಕಳಿಗೆ ಖರ್ಚು ಮಾಡಿದರೆ ಭವಿಷ್ಯದಲ್ಲಿ ಅವರು ನಮಗೆ ಒಂದು ಹೊತ್ತು ಅನ್ನ ಆದ್ರೂ ಹಾಕ್ತಾರೆ.. ಆದರೆ, ಹೆಣ್ಣು ಮಕ್ಕಳೆಂದರೆ ಬರೀ ಖರ್ಚು ಎನ್ನುವ ಭಾವನೆ ಇದೆ. ಇಂತಹ ಆಲೋಚನೆಯನ್ನು ಹೋಗಲಾಡಿಸಬೇಕು. ಜೊತೆಗೆ, ಹೆಣ್ಣು ಮಕ್ಕಳ ಭವಿಷ್ಯಕ್ಕೆ ಉತ್ತಮ ಆರ್ಥಿಕ ಬುನಾದಿ ಹಾಕಬೇಕು ಎಂಬ ಉದ್ದೇಶದಿಂದಲೇ ಕೇಂದ್ರ ಸರ್ಕಾರ ವಿನ್ಯಾಸಗೊಳಿಸಿರುವ ಮಹತ್ವದ ಉಳಿತಾಯ ಯೋಜನೆಯೇ ಸುಕನ್ಯಾ ಸಮೃದ್ಧಿ ಯೋಜನೆ (SSY).

ಸುಕನ್ಯಾ ಸಮೃದ್ಧಿ ಯೋಜನೆ ಪ್ರಯೋಜನ?
ಕೇಂದ್ರ ಸರ್ಕಾರ, ಪ್ರಸ್ತುತ ಸುಕನ್ಯಾ ಸಮೃದ್ಧಿ ಯೋಜನೆ (SSY)ಯಲ್ಲಿ ಹೂಡಿಕೆ ಮಾಡುವ ಹಣಕ್ಕೆ ವಾರ್ಷಿಕ 8.2% ಬಡ್ಡಿದರವನ್ನು ನೀಡುತ್ತಿದೆ. ಹಾಗಾಗಿ, ಹೆಣ್ಣು ಮಕ್ಕಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ (SSY) ಖಾತೆ ತೆರೆದು, ಇದರಲ್ಲಿ ಸಣ್ಣ ಸಣ್ಣ ಪ್ರಮಾಣದಲ್ಲಿ ಉಳಿತಾಯ ಮಾಡುತ್ತಾ ಹೋದರೆ, ಅವರ ಉನ್ನತ ವಿದ್ಯಾಭ್ಯಾಸ, ಇಲ್ಲವೇ ಅವರ ಮದುವೆ ಸಮಯಕ್ಕೆ ಒಂದು ದೊಡ್ಡ ಮೊತ್ತವನ್ನು ಕಲೆಹಾಕಬಹುದು.

ಮಗಳಿಗೆ 18 ವರ್ಷ ತುಂಬಿದಾಗ ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯಿಂದ ಫುಲ್‌ ಹಣ ವಿತ್‌ ಡ್ರಾ ಮಾಡಬಹುದಾ?
ಅಂಚೆ ಕಚೇರಿಯ ನಿಯಮಗಳ ಪ್ರಕಾರ, ಮಗಳಿಗೆ 18 ವರ್ಷ ತುಂಬಿದ ನಂತರ ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯಿಂದ ಸಂಪೂರ್ಣ ಮೊತ್ತವನ್ನು ಹಿಂಪಡೆಯಲು ಸಾಧ್ಯವಿಲ್ಲ. ಆದಾಗ್ಯೂ, ಮಗಳ ಉನ್ನತ ಶಿಕ್ಷಣಕ್ಕಾಗಿ ಎಸ್‌ಎಸ್‌ವೈ ಖಾತೆಯ ಬಾಕಿಯ ಗರಿಷ್ಠ ಮೊತ್ತದಲ್ಲಿ ಶೇ. 50ರಷ್ಟು ಹಣವನ್ನು ಹಿಂಪಡೆಯಬಹುದು.

ಉದಾಹರಣೆಗೆ ನಿಮ್ಮ ಮಗಳ ಸುಕನ್ಯಾ ಸಮೃದ್ಧಿ ಖಾತೆಯಲ್ಲಿ 10 ಲಕ್ಷ ಠೇವಣಿ ಇದ್ದರೆ, ನೀವು ಮಗಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಗರಿಷ್ಠ 5 ಲಕ್ಷ ರೂಪಾಯಿಗಳನ್ನು ಎಸ್‌ಎಸ್‌ವೈ ಖಾತೆಯಿಂದ ಹಿಂಪಡೆಯಬಹುದಾಗಿದೆ. ಆದರೆ, 10 ಲಕ್ಷ ಠೇವಣಿ ಇದೆ ಎಂದು ಸುಖಾಸುಮ್ಮನೆ ಬೇಡದಿದ್ದರೂ ಗರಿಷ್ಠ 5 ಲಕ್ಷ ರೂಪಾಯಿವರೆಗೆ ಹಣ ವಿತ್‌ ಡ್ರಾ ಮಾಡಬಹುದು ಎಂದು ಇದರ ಅರ್ಥವಲ್ಲ. ಎಸ್‌ಎಸ್‌ವೈ ಖಾತೆಯಿಂದ ನೀವು ವಿದ್ಯಾಭ್ಯಾಸಕ್ಕಾಗಿ ಹಣ ಹಿಂಪಡೆಯಲು ಬಯಸಿದರೆ, ಇದಕ್ಕಾಗಿ ಮಗಳು ವಿದ್ಯಾಭ್ಯಾಸ ಮಾಡುತ್ತಿರುವ ಶಿಕ್ಷಣ ಸಂಸ್ಥೆಯಿಂದ ಫೀಸ್‌ ರೆಸಿಪ್ಟ್‌ ಹೊಂದಿರುವುದು ಅಗತ್ಯವಾಗಿದೆ.

ಮಗಳಿಗೆ 18 ವರ್ಷ ಪೂರ್ಣಗೊಂಡ ಬಳಿಕ ಎಸ್‌ಎಸ್‌ವೈ ಖಾತೆ ಮುಚ್ಚಬಹುದೇ?
ಇಂಡಿಯಾ ಪೋಸ್ಟ್ ಪ್ರಕಾರ, ಸುಕನ್ಯಾ ಸಮೃದ್ಧಿ ಯೋಜನೆ ಎಂದರೆ ಎಸ್‌ಎಸ್‌ವೈ ಖಾತೆಯು ತೆರೆದ ದಿನಾಂಕದಿಂದ 21 ವರ್ಷಗಳು ಪೂರ್ಣಗೊಂಡ ನಂತರ ಪಕ್ವವಾಗುತ್ತದೆ. ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ, ಖಾತೆಯನ್ನು ಮೊದಲೇ ಮುಚ್ಚಬಹುದು.
ನಿಯಮಗಳ ಪ್ರಕಾರ, ಸುಕನ್ಯಾ ಸಮೃದ್ಧಿ ಯೋಜನೆಯಡಿ ಮಗಳಿಗೆ 18 ವರ್ಷ ತುಂಬಿದ ಬಳಿಕ ಖಾತೆಯನ್ನು ಮುಚ್ಚಲು ಸಹ ಅನುಮತಿಸುತ್ತದೆ, ಆದಾಗ್ಯೂ ಇದು ಒಂದು ನಿರ್ದಿಷ್ಟ ಷರತ್ತಿಗೆ ಒಳಪಟ್ಟಿರುತ್ತದೆ. ಮಗಳು ಮದುವೆಯಾಗುತ್ತಿದ್ದರೆ ಮತ್ತು ಮದುವೆಯ ದಿನಾಂಕದಂದು ಕನಿಷ್ಠ 18 ವರ್ಷ ವಯಸ್ಸಿನವಳಾಗಿದ್ದರೆ, ಅಂತಹ ಸಂದರ್ಭದಲ್ಲಿ ಎಸ್‌ಎಸ್‌ವೈ ಖಾತೆಯನ್ನು ಮುಕ್ತಾಯದ ಮೊದಲು ಮುಚ್ಚಲು ಅವಕಾಶವಿರುತ್ತದೆ.

ಮಗಳ ಮದುವೆ ಎಸ್‌ಎಸ್‌ವೈ ಖಾತೆ ಮುಚ್ಚಲು ಏನು ಮಾಡಬೇಕು?
ನಿಮ್ಮ ಮಗಳಿಗೆ 18 ವರ್ಷ ತುಂಬಿದ್ದು, ಆಕೆಯ ಮದುವೆಗಾಗಿ ನೀವು ಸುಕನ್ಯಾ ಸಮೃದ್ಧಿ ಖಾತೆ ಪಕ್ವವಾಗುವ ಮೊದಲೇ ಅದನ್ನು ಮುಚ್ಚಲು ಬಯಸಿದರೆ ಇದಕ್ಕಾಗಿ, ನಿಮ್ಮ ಮಗಳು ಅರ್ಜಿಯೊಂದಿಗೆ ವಯಸ್ಸಿನ ಪುರಾವೆ ಮತ್ತು ನೋಟರಿಯಿಂದ ಪ್ರಮಾಣೀಕರಿಸಲ್ಪಟ್ಟ ನ್ಯಾಯಾಂಗೇತರ ಸ್ಟಾಂಪ್ ಪೇಪರ್‌ನಲ್ಲಿ ಘೋಷಣೆಯನ್ನು ಸಲ್ಲಿಸಬೇಕು. ನಿಯಮಗಳ ಪ್ರಕಾರ, ಮದುವೆಗೆ ಒಂದು ತಿಂಗಳ ಮೊದಲು ಮತ್ತು ಮದುವೆಯ ಮೂರು ತಿಂಗಳ ನಂತರ ಖಾತೆಯನ್ನು ಮುಚ್ಚಲು ಅನುಮತಿ ಇದೆ. ಖಾತೆ ಮುಚ್ಚುವಾಗ ಬಾಕಿ ಮತ್ತು ಅನ್ವಯವಾಗುವ ಬಡ್ಡಿಯನ್ನು ಮರುಪಾವತಿಸಲಾಗುತ್ತದೆ.

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಎಷ್ಟು ವರ್ಷಗಳವರೆಗೆ ಹಣವನ್ನು ಠೇವಣಿ ಇಡಬೇಕು?
ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಖಾತೆ ತೆರೆದ ದಿನಾಂಕದಿಂದ 15 ವರ್ಷಗಳವರೆಗೆ ಠೇವಣಿಗಳು ಮಾನ್ಯವಾಗಿರುತ್ತವೆ. 
*ಎಸ್‌ಎಸ್‌ವೈ ಖಾತೆಯಲ್ಲಿ ಒಂದು ಹಣಕಾಸು ವರ್ಷದಲ್ಲಿ ಕನಿಷ್ಠ ₹250 ಮತ್ತು ಗರಿಷ್ಠ ₹1.5 ಲಕ್ಷ ಠೇವಣಿ ಇಡಲು ಅವಕಾಶವಿದೆ. ಆದಾಗ್ಯೂ, ಒಂದೇ ಬಾರಿಗೆ ಠೇವಣಿ ಮಾಡಬೇಕು ಎಂದೇನಿಲ್ಲ, ಬಹು ಕಂತುಗಳಲ್ಲಿ ಠೇವಣಿ ಮಾಡಬಹುದು. 
* 15 ವರ್ಷಗಳ ಠೇವಣಿ ಅವಧಿ ಪೂರ್ಣಗೊಂಡ ನಂತರ, ಖಾತೆಯು 21 ವರ್ಷಗಳ ಮುಕ್ತಾಯ ದಿನಾಂಕದವರೆಗೆ ಎಂದಿನಂತೆ ಮುಂದುವರಿಯುತ್ತದೆ, ಈ ಅವಧಿಯಲ್ಲಿ ಅನ್ವಯವಾಗುವ ದರದಲ್ಲಿ ಠೇವಣಿ ಮೊತ್ತವು ಬಡ್ಡಿಯನ್ನು ಗಳಿಸುತ್ತದೆ.
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES