Griha Pravesh Vastu Tips: ಹೊಸ ಮನೆಗೆ ಕಾಲಿಡುವುದು ಪ್ರತಿಯೊಬ್ಬರ ಜೀವನದಲ್ಲೂ ವಿಶೇಷ ಕ್ಷಣ. ಹಿಂದೂ ಧರ್ಮ ಮತ್ತು ವಾಸ್ತುಶಾಸ್ತ್ರದ ನಂಬಿಕೆಗಳ ಪ್ರಕಾರ, ಗೃಹಪ್ರವೇಶದ ಸಂದರ್ಭದಲ್ಲಿ ಕೆಲವು ವಸ್ತುಗಳನ್ನ ಮನೆಗೆ ತರುವುದು ಶುಭವಾದರೆ, ಇನ್ನೂ ಕೆಲವು ವಸ್ತುಗಳನ್ನ ತರುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಹಳೆಯ ಮನೆಯಿಂದ ಹೊಸ ಮನೆಗೆ ಸ್ಥಳಾಂತರಗೊಳ್ಳುವಾಗ ನಾಲ್ಕು ಬಗೆಯ ವಸ್ತುಗಳನ್ನ ತೆಗೆದುಕೊಂಡು ಹೋಗಬಾರದು ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗುತ್ತದೆ.
ಹೊಸ ಮನೆ ಕಟ್ಟುವುದು ಅಥವಾ ಖರೀದಿಸುವುದು ಬಹುತೇಕರ ಕನಸು. ಆ ಕನಸು ನನಸಾದಾಗ ಕುಟುಂಬದ ಸದಸ್ಯರೆಲ್ಲರೂ ಸಂತೋಷದಿಂದ ಹೊಸ ಮನೆಗೆ ಪ್ರವೇಶಿಸುತ್ತಾರೆ. ಹಿಂದೂ ಸಂಪ್ರದಾಯದಲ್ಲಿ ಗೃಹಪ್ರವೇಶಕ್ಕೆ ವಿಶೇಷ ಮಹತ್ವವಿದ್ದು, ಇದನ್ನ ಹೊಸ ಜೀವನದ ಶುಭಾರಂಭವೆಂದು ಪರಿಗಣಿಸಲಾಗುತ್ತದೆ. ಹೊಸ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಮತ್ತು ಆರ್ಥಿಕ ಸಮೃದ್ಧಿ ನೆಲೆಸಬೇಕೆಂಬುದು ಪ್ರತಿಯೊಬ್ಬರ ಆಶಯವಾಗಿರುತ್ತದೆ.
ವಾಸ್ತುಶಾಸ್ತ್ರದ ನಂಬಿಕೆಗಳ ಪ್ರಕಾರ, ಗೃಹಪ್ರವೇಶದ ಸಮಯದಲ್ಲಿ ಮನೆಗೆ ತರುವ ವಸ್ತುಗಳ ಬಗ್ಗೆಯೂ ಎಚ್ಚರಿಕೆ ವಹಿಸುವುದು ಮುಖ್ಯ. ಹಳೆಯ ಮನೆಯಿಂದ ಎಲ್ಲ ವಸ್ತುಗಳನ್ನ ಹೊಸ ಮನೆಗೆ ಕೊಂಡೊಯ್ಯುವುದು ಸೂಕ್ತವಲ್ಲ. ಕೆಲವು ವಸ್ತುಗಳು ನಕಾರಾತ್ಮಕ ಶಕ್ತಿಯನ್ನ ಆಕರ್ಷಿಸುತ್ತವೆ ಹಾಗೂ ಕುಟುಂಬದ ನೆಮ್ಮದಿಗೆ ಅಡ್ಡಿಯಾಗುತ್ತವೆ ಎಂಬ ನಂಬಿಕೆಯಿದೆ. ಹಾಗಾದರೆ ಹೊಸ ಮನೆಗೆ ಯಾವ ವಸ್ತುಗಳನ್ನ ತರಬಾರದು? ಯಾವ ವಸ್ತುಗಳನ್ನ ತರುವುದು ಮಂಗಳಕರ? ಇಲ್ಲಿದೆ ಮಾಹಿತಿ.
ಒಡೆದ ಪಾತ್ರೆಗಳು ಮತ್ತು ಬಿರುಕು ಬಿಟ್ಟ ಗಾಜಿನ ವಸ್ತುಗಳನ್ನ ತರಬೇಡಿ
ಹೊಸ ಮನೆಗೆ ಸ್ಥಳಾಂತರಗೊಳ್ಳುವಾಗ ಅಡುಗೆಮನೆಯ ಪಾತ್ರೆಗಳು ಹಾಗೂ ಗಾಜಿನ ಸಾಮಾನುಗಳನ್ನ ತೆಗೆದುಕೊಂಡು ಹೋಗುವುದು ಸಾಮಾನ್ಯ. ಆದರೆ ಒಡೆದ, ಬಿರುಕು ಬಿಟ್ಟ ಅಥವಾ ಹಾನಿಗೊಳಗಾದ ಪಾತ್ರೆಗಳನ್ನ ಹೊಸ ಮನೆಗೆ ತರಬಾರದು ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ವಾಸ್ತು ನಂಬಿಕೆಗಳ ಪ್ರಕಾರ, ಇಂತಹ ವಸ್ತುಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನ ಆಕರ್ಷಿಸುತ್ತವೆ. ಇದರಿಂದ ಕುಟುಂಬದ ಸದಸ್ಯರ ನಡುವೆ ಅಶಾಂತಿ ಉಂಟಾಗಬಹುದು ಹಾಗೂ ಆರ್ಥಿಕ ಪ್ರಗತಿಗೆ ಅಡ್ಡಿಯಾಗಬಹುದು ಎಂದು ನಂಬಲಾಗುತ್ತದೆ. ಆದ್ದರಿಂದ ಹಳೆಯ ಮನೆಯಿಂದ ವಸ್ತುಗಳನ್ನ ಸ್ಥಳಾಂತರಿಸುವಾಗ ಹಾನಿಗೊಳಗಾದ ಪಾತ್ರೆಗಳು ಮತ್ತು ಗಾಜಿನ ಸಾಮಾನುಗಳನ್ನ ಪ್ರತ್ಯೇಕಿಸುವುದು ಉತ್ತಮವೆಂದು ಪರಿಗಣಿಸಲಾಗುತ್ತದೆ.
ಮುಳ್ಳಿನ ಗಿಡಗಳು ಮತ್ತು ಕಳ್ಳಿ ಸಸ್ಯಗಳಿಗೆ ಹೊಸ ಮನೆಯಲ್ಲಿ ಜಾಗ ಬೇಡ
ನೆಯ ಅಂದವನ್ನು ಹೆಚ್ಚಿಸಲು ಅನೇಕರು ವಿವಿಧ ಬಗೆಯ ಅಲಂಕಾರಿಕ ಸಸ್ಯಗಳನ್ನು ಬೆಳೆಸುತ್ತಾರೆ. ಆದರೆ ವಾಸ್ತುಶಾಸ್ತ್ರದ ಪ್ರಕಾರ, ಕಳ್ಳಿ ಗಿಡಗಳು ಹಾಗೂ ಮುಳ್ಳುಗಳನ್ನು ಹೊಂದಿರುವ ಸಸ್ಯಗಳನ್ನು ಹೊಸ ಮನೆಗೆ ತೆಗೆದುಕೊಂಡು ಹೋಗುವುದು ಅಶುಭವೆಂದು ಪರಿಗಣಿಸಲಾಗಿದೆ. ಇಂತಹ ಸಸ್ಯಗಳು ಕುಟುಂಬ ಸದಸ್ಯರ ನಡುವೆ ಮನಸ್ತಾಪ, ಭಿನ್ನಾಭಿಪ್ರಾಯ ಹಾಗೂ ನಕಾರಾತ್ಮಕ ಭಾವನೆಗಳನ್ನ ಹೆಚ್ಚಿಸುತ್ತವೆ ಎಂಬ ನಂಬಿಕೆಯಿದೆ. ಹೀಗಾಗಿ ಗೃಹಪ್ರವೇಶದ ಸಂದರ್ಭದಲ್ಲಿ ಹಳೆಯ ಮನೆಯಲ್ಲಿ ಬೆಳೆಸಿದ ಮುಳ್ಳಿನ ಸಸ್ಯಗಳನ್ನ ಹೊಸ ಮನೆಗೆ ತರದಿರುವುದು ಒಳ್ಳೆಯದು ಎಂದು ವಾಸ್ತು ನಂಬಿಕೆಗಳು ತಿಳಿಸುತ್ತವೆ.
ಹಳೆಯ ಅಥವಾ ಮುರಿದ ಪೊರಕೆಯನ್ನ ಹೊಸ ಮನೆಗೆ ಕೊಂಡೊಯ್ಯಬೇಡಿ
ಹಿಂದೂ ಸಂಪ್ರದಾಯದಲ್ಲಿ ಪೊರಕೆಗೆ ವಿಶೇಷ ಮಹತ್ವವಿದೆ. ಪೊರಕೆಯನ್ನ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಗೃಹಪ್ರವೇಶದ ಸಂದರ್ಭದಲ್ಲಿ ಪೊರಕೆಯ ವಿಚಾರದಲ್ಲಿಯೂ ಕೆಲವು ನಂಬಿಕೆಗಳನ್ನ ಪಾಲಿಸಲಾಗುತ್ತದೆ. ವಾಸ್ತುಶಾಸ್ತ್ರದ ಪ್ರಕಾರ, ಹಳೆಯ ಮನೆಯಲ್ಲಿ ಬಳಸಿದ ಪೊರಕೆ ಅಥವಾ ಮುರಿದ ಪೊರಕೆಯನ್ನ ಹೊಸ ಮನೆಗೆ ತೆಗೆದುಕೊಂಡು ಹೋಗಬಾರದು. ಹೀಗೆ ಮಾಡುವುದರಿಂದ ಹಳೆಯ ಮನೆಯ ನಕಾರಾತ್ಮಕತೆ ಹೊಸ ಮನೆಗೂ ಪ್ರವೇಶಿಸುತ್ತದೆ ಎಂಬ ನಂಬಿಕೆಯಿದೆ. ಆದ್ದರಿಂದ ಹೊಸ ಮನೆಗೆ ಪ್ರವೇಶಿಸುವಾಗ ಹೊಸ ಪೊರಕೆಯನ್ನ ತರುವುದು ಶುಭಕರವೆಂದು ಹೇಳಲಾಗುತ್ತದೆ.
ನಿಂತುಹೋದ ಮತ್ತು ಕೆಟ್ಟುಹೋದ ಗಡಿಯಾರಗಳನ್ನ ತರಬೇಡಿ
ಗಡಿಯಾರವು ಸಮಯ, ಜೀವನದ ಚಲನೆ ಮತ್ತು ಪ್ರಗತಿಯ ಸಂಕೇತವಾಗಿದೆ. ವಾಸ್ತುಶಾಸ್ತ್ರದ ನಂಬಿಕೆಗಳ ಪ್ರಕಾರ, ನಿಂತುಹೋದ ಅಥವಾ ಸರಿಯಾಗಿ ಕಾರ್ಯನಿರ್ವಹಿಸದ ಗಡಿಯಾರಗಳನ್ನ ಹೊಸ ಮನೆಯಲ್ಲಿ ಇಡುವುದು ಅಶುಭ. ಇಂತಹ ಗಡಿಯಾರಗಳು ವ್ಯಕ್ತಿಯ ವೃತ್ತಿಜೀವನ ಹಾಗೂ ಜೀವನದ ಪ್ರಗತಿಯಲ್ಲಿ ಅಡೆತಡೆಗಳನ್ನ ಉಂಟುಮಾಡುತ್ತವೆ ಎಂದು ನಂಬಲಾಗುತ್ತದೆ. ಹೀಗಾಗಿ ಹಳೆಯ ಮನೆಯಿಂದ ಹೊಸ ಮನೆಗೆ ಸ್ಥಳಾಂತರಗೊಳ್ಳುವಾಗ ಕೆಟ್ಟುಹೋದ, ಹಾನಿಗೊಳಗಾದ ಅಥವಾ ನಿಂತುಹೋದ ಗಡಿಯಾರಗಳನ್ನ ತೆಗೆದುಕೊಂಡು ಹೋಗುವುದನ್ನ ತಪ್ಪಿಸಬೇಕೆಂದು ವಾಸ್ತುಶಾಸ್ತ್ರದಲ್ಲಿ ತಿಳಿಸಲಾಗಿದೆ.
ಗೃಹಪ್ರವೇಶದ ಸಮಯದಲ್ಲಿ ಯಾವ ವಸ್ತುಗಳನ್ನ ತರುವುದು ಶುಭ?
ಹೊಸ ಮನೆಗೆ ಕೆಲವು ವಸ್ತುಗಳನ್ನ ತರಬಾರದು ಎಂಬ ನಂಬಿಕೆ ಇರುವಂತೆಯೇ, ಕೆಲವು ವಸ್ತುಗಳನ್ನ ಮೊದಲು ತರುವುದು ಅತ್ಯಂತ ಮಂಗಳಕರವೆಂದೂ ಪರಿಗಣಿಸಲಾಗುತ್ತದೆ. ವಾಸ್ತುಶಾಸ್ತ್ರದ ಪ್ರಕಾರ, ಅಕ್ಕಿ ಮತ್ತು ಗೋಧಿಯಂತಹ ಧಾನ್ಯಗಳನ್ನ ಹೊಸ ಮನೆಗೆ ತರುವುದು ಶುಭ. ಅದೇ ರೀತಿ ಪವಿತ್ರವೆಂದು ಪರಿಗಣಿಸಲಾದ ತುಳಸಿ ಗಿಡವನ್ನ ಮನೆಗೆ ತರುವುದು ಮಂಗಳಕರವಾಗಿದೆ. ಹಾಲು ಮತ್ತು ಮೊಸರು ಕೂಡ ಗೃಹಪ್ರವೇಶದ ಸಂದರ್ಭದಲ್ಲಿ ತರಬೇಕಾದ ಶುಭ ವಸ್ತುಗಳೆಂದು ಹೇಳಲಾಗುತ್ತದೆ.
ಇವುಗಳ ಜೊತೆಗೆ ಗಣೇಶ ಮತ್ತು ಲಕ್ಷ್ಮಿದೇವಿಯ ವಿಗ್ರಹಗಳು ಅಥವಾ ಚಿತ್ರಗಳನ್ನ ಹೊಸ ಮನೆಗೆ ಮೊದಲು ತರುವುದು ಅತ್ಯಂತ ಶುಭಕರವೆಂಬ ನಂಬಿಕೆಯಿದೆ. ಈ ವಸ್ತುಗಳು ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯ ಆಶಯವನ್ನ ಪ್ರತಿನಿಧಿಸುತ್ತವೆ. ಹಿಂದೂ ಧಾರ್ಮಿಕ ನಂಬಿಕೆಗಳು ಹಾಗೂ ವಾಸ್ತುಶಾಸ್ತ್ರದ ಪ್ರಕಾರ, ಗೃಹಪ್ರವೇಶವು ಹೊಸ ಜೀವನದ ಸಕಾರಾತ್ಮಕ ಆರಂಭವಾಗಿದೆ. ಆದ್ದರಿಂದ ಹೊಸ ಮನೆಗೆ ಪ್ರವೇಶಿಸುವಾಗ ಅಶುಭವೆಂದು ಪರಿಗಣಿಸಲಾದ ವಸ್ತುಗಳನ್ನ ತಪ್ಪಿಸಿ, ಶುಭಕರವೆಂದು ನಂಬಲಾದ ವಸ್ತುಗಳಿಗೆ ಆದ್ಯತೆ ನೀಡುವುದು ಸಂಪ್ರದಾಯದ ಭಾಗವಾಗಿದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಜಾನಪದ ನಂಬಿಕೆಗಳನ್ನ ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. Zee Kannada News ಇದನ್ನ ದೃಢಪಡಿಸುವುದಿಲ್ಲ.)