SOCIAL MEDIA

Newsletter

PARTNER SITES
Select Language Select State

ಚಳಿಗಾಲದಲ್ಲಿ ಕಾಡುವ ತಲೆಹೊಟ್ಟು ಸಮಸ್ಯೆಗೆ ಇಲ್ಲಿದೆ ಸರಳ ಪರಿಹಾರ! ಕೂದಲಿನ ಆರೈಕೆಗೆ ಈ ರೀತಿ ಮಾಡಿ

ಚಳಿಗಾಲದಲ್ಲಿ ತಲೆಯ ಚರ್ಮ ಒಣಗುವುದು, ತುರಿಕೆ ಮತ್ತು ಬಿಳಿ ಪದರಗಳು ಉದುರುವುದರಿಂದ ತಲೆಹೊಟ್ಟು ಸಮಸ್ಯೆ ಹೆಚ್ಚಾಗಬಹುದು. ಇದನ್ನ ನಿಯಂತ್ರಿಸಲು ಸೂಕ್ತ ಆಂಟಿ-ಡ್ಯಾಂಡ್ರಫ್ ಶಾಂಪೂ ಬಳಸುವುದು, ಕೂದಲನ್ನ ನಿಯಮಿತವಾಗಿ ಸ್ವಚ್ಛಗೊಳಿಸುವುದು ಹಾಗೂ ಹೇರ್ ಸ್ಟೈಲಿಂಗ್ ಉತ್ಪನ್ನಗಳ ಬಳಕೆಯನ್ನ ಮಿತಿಗೊಳಿಸುವುದು ಮುಖ್ಯ. ಸಮಸ್ಯೆ ದೀರ್ಘಕಾಲ ಮುಂದುವರಿದರೆ ಚರ್ಮರೋಗ ತಜ್ಞರ ಸಲಹೆ ಪಡೆಯುವುದು ಉತ್ತಮ.

Written By Puttaraj K Alur
Published: Nov 13, 2026, 20:04 IST | Updated: Nov 13, 2026, 20:16 IST
Image Credit: Winter Dandruff
Join

Hair Care Tips: ಚಳಿಗಾಲ ಆರಂಭವಾಗುತ್ತಿದ್ದಂತೆ ಹಲವರನ್ನ ಕಾಡುವ ಸಾಮಾನ್ಯ ಸಮಸ್ಯೆಗಳಲ್ಲಿ ತಲೆಹೊಟ್ಟು ಕೂಡ ಒಂದು. ತಲೆಯ ಚರ್ಮ ಒಣಗುವುದು, ತುರಿಕೆ ಕಾಣಿಸಿಕೊಳ್ಳುವುದು ಮತ್ತು ಕೂದಲಿನ ನಡುವೆ ಬಿಳಿ ಪದರದಂತೆ ಹೊಟ್ಟು ಬೀಳುವುದು ಈ ಸಮಸ್ಯೆಯ ಪ್ರಮುಖ ಲಕ್ಷಣಗಳಾಗಿವೆ. ವಿಶೇಷವಾಗಿ ಚಳಿಯ ವಾತಾವರಣದಲ್ಲಿ ತಲೆಹೊಟ್ಟಿನ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳಬಹುದು. ಇದರಿಂದ ಕೂದಲಿನ ಸೌಂದರ್ಯಕ್ಕೆ ಧಕ್ಕೆಯಾಗುವುದರ ಜೊತೆಗೆ ಮುಜುಗರವೂ ಉಂಟಾಗುತ್ತದೆ. ಹಾಗಾದರೆ ಚಳಿಗಾಲದಲ್ಲಿ ತಲೆಹೊಟ್ಟು ಸಮಸ್ಯೆಯನ್ನ ನಿಯಂತ್ರಿಸಲು ಯಾವ ಕ್ರಮಗಳನ್ನ ಅನುಸರಿಸಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ...

ಚಳಿಗಾಲದಲ್ಲಿ ತಲೆಹೊಟ್ಟು ಹೆಚ್ಚಾಗಲು ಕಾರಣವೇನು?

ತಲೆಹೊಟ್ಟು ಕಾಣಿಸಿಕೊಳ್ಳಲು ಹಲವು ಕಾರಣಗಳಿವೆ. ತಲೆಯ ಚರ್ಮ ಒಣಗುವುದು, ಚರ್ಮದಲ್ಲಿ ಎಣ್ಣೆಯಂಶ ಹೆಚ್ಚಾಗುವುದು, ಮಲಾಸೆಜಿಯಾ ಎಂಬ ಯೀಸ್ಟ್‌ನ ಬೆಳವಣಿಗೆ ಹಾಗೂ ಕೆಲವು ಕೂದಲಿನ ಆರೈಕೆ ಉತ್ಪನ್ನಗಳಿಂದ ಉಂಟಾಗುವ ಕಿರಿಕಿರಿ ಇದಕ್ಕೆ ಕಾರಣವಾಗಬಹುದು. ಚಳಿಗಾಲದಲ್ಲಿ ವಾತಾವರಣ ತಂಪು ಮತ್ತು ಶುಷ್ಕವಾಗಿರುವುದರಿಂದ ತಲೆಯ ಚರ್ಮದ ಸಮಸ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ತಲೆಹೊಟ್ಟು ಕಾಣಿಸಿಕೊಂಡಾಗ ತಲೆಯ ಚರ್ಮದಲ್ಲಿ ಬಿಳಿ ಪದರಗಳು ಉದುರುವುದು, ನಿರಂತರ ತುರಿಕೆ ಮತ್ತು ಕೆಲವೊಮ್ಮೆ ಕೆಂಪಾಗುವ ಲಕ್ಷಣಗಳು ಕಂಡುಬರಬಹುದು. ಈ ಸಮಸ್ಯೆ ಸಾಮಾನ್ಯವಾಗಿ ಗಂಭೀರವಲ್ಲದಿದ್ದರೂ ನಿರ್ಲಕ್ಷ್ಯ ಮಾಡದೆ ಸೂಕ್ತ ಆರೈಕೆ ಮಾಡುವುದು ಮುಖ್ಯ.

ತಲೆಹೊಟ್ಟು ನಿಯಂತ್ರಿಸಲು ಅನುಸರಿಸಬೇಕಾದ ಸರಳ ಕ್ರಮಗಳು

ಸೂಕ್ತ ಶಾಂಪೂ ಬಳಸಿ: ತಲೆಹೊಟ್ಟು ಸಮಸ್ಯೆ ಇರುವವರು ಸಾಮಾನ್ಯ ಶಾಂಪೂ ಬದಲಿಗೆ ಆಂಟಿ-ಡ್ಯಾಂಡ್ರಫ್ ಶಾಂಪೂ ಬಳಸಬಹುದು. ಕೆಟೋಕೊನಜೋಲ್, ಜಿಂಕ್ ಪೈರಿಥಿಯೋನ್, ಸೆಲೆನಿಯಂ ಸಲ್ಫೈಡ್ ಅಥವಾ ಸ್ಯಾಲಿಸಿಲಿಕ್ ಆ್ಯಸಿಡ್‌ನಂತಹ ಅಂಶಗಳನ್ನ ಒಳಗೊಂಡಿರುವ ಶಾಂಪೂಗಳು ತಲೆಹೊಟ್ಟು ನಿಯಂತ್ರಿಸಲು ಸಹಾಯ ಮಾಡಬಹುದು. ನಿಮ್ಮ ಕೂದಲು ಮತ್ತು ತಲೆಯ ಚರ್ಮದ ಸ್ವಭಾವಕ್ಕೆ ಅನುಗುಣವಾಗಿ ಶಾಂಪೂ ಆಯ್ಕೆ ಮಾಡುವುದು ಉತ್ತಮ.

ಶಾಂಪೂ ಬಳಸುವ ವಿಧಾನ ಗಮನಿಸಿ: ಆಂಟಿ-ಡ್ಯಾಂಡ್ರಫ್ ಶಾಂಪೂವನ್ನ ಕೂದಲಿನ ಮೇಲೆ ಮಾತ್ರವಲ್ಲದೆ ತಲೆಯ ಚರ್ಮಕ್ಕೆ ತಲುಪುವಂತೆ ಬಳಸಬೇಕು. ಕೆಲವು ಶಾಂಪೂಗಳನ್ನ ಹಚ್ಚಿದ ತಕ್ಷಣ ತೊಳೆಯುವ ಬದಲು ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಡಬೇಕಾಗುತ್ತದೆ. ಪ್ರತಿ ಉತ್ಪನ್ನದ ಬಾಟಲಿಯ ಮೇಲೆ ನೀಡಿರುವ ಸೂಚನೆಗಳನ್ನ ಸರಿಯಾಗಿ ಪಾಲಿಸುವುದು ಅಗತ್ಯ.

ನಿಯಮಿತವಾಗಿ ಕೂದಲು ತೊಳೆಯಿರಿ: ತಲೆಯ ಚರ್ಮದಲ್ಲಿ ಹೆಚ್ಚುವರಿ ಎಣ್ಣೆ ಮತ್ತು ಸತ್ತ ಚರ್ಮದ ಕೋಶಗಳು ಸಂಗ್ರಹವಾಗುವುದನ್ನ ಕಡಿಮೆ ಮಾಡಲು ಕೂದಲನ್ನ ನಿಯಮಿತವಾಗಿ ತೊಳೆಯುವುದು ಮುಖ್ಯ. ಆದರೆ ಎಷ್ಟು ಬಾರಿ ಕೂದಲು ತೊಳೆಯಬೇಕು ಎಂಬುದು ಕೂದಲಿನ ಸ್ವಭಾವ ಮತ್ತು ತಲೆಯ ಚರ್ಮದ ಸ್ಥಿತಿಯನ್ನ ಅವಲಂಬಿಸಿರುತ್ತದೆ. ತೊಳೆಯುವಾಗ ತಲೆಯ ಚರ್ಮವನ್ನ ಹೆಚ್ಚು ಒತ್ತಿ ಉಜ್ಜದೆ ಮೃದುವಾಗಿ ಸ್ವಚ್ಛಗೊಳಿಸಬೇಕು.

ಕೂದಲಿನ ಆರೈಕೆ ಉತ್ಪನ್ನಗಳ ಬಳಕೆ ಕಡಿಮೆ ಮಾಡಿ: ಹೇರ್ ಜೆಲ್, ಸ್ಪ್ರೇ ಮತ್ತು ಇತರ ಸ್ಟೈಲಿಂಗ್ ಉತ್ಪನ್ನಗಳನ್ನ ಅತಿಯಾಗಿ ಬಳಸುವುದರಿಂದ ಅವುಗಳ ಅವಶೇಷಗಳು ತಲೆಯ ಚರ್ಮದಲ್ಲಿ ಸಂಗ್ರಹವಾಗಬಹುದು. ಇದರಿಂದ ಎಣ್ಣೆಯಂಶ ಹೆಚ್ಚಾಗಿ ತಲೆಹೊಟ್ಟು ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಇಂತಹ ಉತ್ಪನ್ನಗಳ ಬಳಕೆಯನ್ನ ಮಿತಿಗೊಳಿಸುವುದು ಉತ್ತಮ.

ತಲೆಯ ಚರ್ಮದ ಆರೋಗ್ಯದ ಬಗ್ಗೆ ಗಮನವಿರಲಿ

ತಲೆಹೊಟ್ಟು ಸಮಸ್ಯೆ ನಿಯಂತ್ರಣದಲ್ಲಿರಲು ಸೂಕ್ತ ಕೂದಲಿನ ಆರೈಕೆ ಪದ್ಧತಿಯನ್ನ ಅನುಸರಿಸಬೇಕು. ತಲೆಯ ಚರ್ಮವನ್ನ ಸ್ವಚ್ಛವಾಗಿಟ್ಟುಕೊಳ್ಳುವುದು ಮತ್ತು ಅದಕ್ಕೆ ಹೊಂದಿಕೆಯಾಗುವ ಉತ್ಪನ್ನಗಳನ್ನ ಬಳಸುವುದು ಮುಖ್ಯ. ಯಾವುದೇ ಶಾಂಪೂ ಬಳಸಿದ ಬಳಿಕ ತುರಿಕೆ, ಉರಿ ಅಥವಾ ಕಿರಿಕಿರಿ ಕಾಣಿಸಿಕೊಂಡರೆ ಅದರ ಬಳಕೆಯನ್ನ ನಿಲ್ಲಿಸಬೇಕು.

ಸಮಸ್ಯೆ ಮುಂದುವರಿದರೆ ವೈದ್ಯರ ಸಲಹೆ ಪಡೆಯಿರಿ

ಆಂಟಿ-ಡ್ಯಾಂಡ್ರಫ್ ಶಾಂಪೂ ಬಳಸಿದರೂ ಹಲವು ವಾರಗಳವರೆಗೆ ಸಮಸ್ಯೆ ಕಡಿಮೆಯಾಗದಿದ್ದರೆ ಚರ್ಮರೋಗ ತಜ್ಞರನ್ನ ಸಂಪರ್ಕಿಸುವುದು ಉತ್ತಮ. ತೀವ್ರ ತುರಿಕೆ, ಕೆಂಪಾಗುವಿಕೆ, ಊತ ಅಥವಾ ನೋವು ಕಾಣಿಸಿಕೊಂಡರೂ ವೈದ್ಯಕೀಯ ಸಲಹೆ ಪಡೆಯಬೇಕು. ಕೆಲವೊಮ್ಮೆ ತಲೆಹೊಟ್ಟಿನಂತೆ ಕಾಣಿಸುವ ಸಮಸ್ಯೆಗೆ ಎಕ್ಸಿಮಾ, ಸೋರಿಯಾಸಿಸ್ ಅಥವಾ ಇತರ ಚರ್ಮದ ಕಾಯಿಲೆಗಳು ಕಾರಣವಾಗಿರಬಹುದು. ಒಟ್ನಲ್ಲಿ ಚಳಿಗಾಲದಲ್ಲಿ ತಲೆಹೊಟ್ಟು ಸಮಸ್ಯೆ ಕಾಡುತ್ತಿದ್ದರೆ ಕೂದಲಿನ ಸ್ವಚ್ಛತೆ, ಸೂಕ್ತ ಶಾಂಪೂ ಬಳಕೆ ಮತ್ತು ನಿಯಮಿತ ಆರೈಕೆಗೆ ಆದ್ಯತೆ ನೀಡಬೇಕು. ಸಮಸ್ಯೆಯ ತೀವ್ರತೆಗೆ ಅನುಗುಣವಾಗಿ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಮುಂದುವರಿಸುವುದು ಸೂಕ್ತ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ತಜ್ಞ ಮೂಲಗಳ ಮಾಹಿತಿಯನ್ನ ಆಧರಿಸಿದೆ. ಇದನ್ನ Zee Kannada News ದೃಢಪಡಿಸುವುದಿಲ್ಲ. ಇಲ್ಲಿನ ಸಲಹೆಗಳನ್ನ ಪಾಲಿಸುವ ಮುನ್ನ ತಜ್ಞರ ಸಲಹೆ ಪಡೆಯುವುದು ಉತ್ತಮ.)

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES