Hair Care Tips: ಚಳಿಗಾಲ ಆರಂಭವಾಗುತ್ತಿದ್ದಂತೆ ಹಲವರನ್ನ ಕಾಡುವ ಸಾಮಾನ್ಯ ಸಮಸ್ಯೆಗಳಲ್ಲಿ ತಲೆಹೊಟ್ಟು ಕೂಡ ಒಂದು. ತಲೆಯ ಚರ್ಮ ಒಣಗುವುದು, ತುರಿಕೆ ಕಾಣಿಸಿಕೊಳ್ಳುವುದು ಮತ್ತು ಕೂದಲಿನ ನಡುವೆ ಬಿಳಿ ಪದರದಂತೆ ಹೊಟ್ಟು ಬೀಳುವುದು ಈ ಸಮಸ್ಯೆಯ ಪ್ರಮುಖ ಲಕ್ಷಣಗಳಾಗಿವೆ. ವಿಶೇಷವಾಗಿ ಚಳಿಯ ವಾತಾವರಣದಲ್ಲಿ ತಲೆಹೊಟ್ಟಿನ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳಬಹುದು. ಇದರಿಂದ ಕೂದಲಿನ ಸೌಂದರ್ಯಕ್ಕೆ ಧಕ್ಕೆಯಾಗುವುದರ ಜೊತೆಗೆ ಮುಜುಗರವೂ ಉಂಟಾಗುತ್ತದೆ. ಹಾಗಾದರೆ ಚಳಿಗಾಲದಲ್ಲಿ ತಲೆಹೊಟ್ಟು ಸಮಸ್ಯೆಯನ್ನ ನಿಯಂತ್ರಿಸಲು ಯಾವ ಕ್ರಮಗಳನ್ನ ಅನುಸರಿಸಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ...
ಚಳಿಗಾಲದಲ್ಲಿ ತಲೆಹೊಟ್ಟು ಹೆಚ್ಚಾಗಲು ಕಾರಣವೇನು?
ತಲೆಹೊಟ್ಟು ಕಾಣಿಸಿಕೊಳ್ಳಲು ಹಲವು ಕಾರಣಗಳಿವೆ. ತಲೆಯ ಚರ್ಮ ಒಣಗುವುದು, ಚರ್ಮದಲ್ಲಿ ಎಣ್ಣೆಯಂಶ ಹೆಚ್ಚಾಗುವುದು, ಮಲಾಸೆಜಿಯಾ ಎಂಬ ಯೀಸ್ಟ್‌ನ ಬೆಳವಣಿಗೆ ಹಾಗೂ ಕೆಲವು ಕೂದಲಿನ ಆರೈಕೆ ಉತ್ಪನ್ನಗಳಿಂದ ಉಂಟಾಗುವ ಕಿರಿಕಿರಿ ಇದಕ್ಕೆ ಕಾರಣವಾಗಬಹುದು. ಚಳಿಗಾಲದಲ್ಲಿ ವಾತಾವರಣ ತಂಪು ಮತ್ತು ಶುಷ್ಕವಾಗಿರುವುದರಿಂದ ತಲೆಯ ಚರ್ಮದ ಸಮಸ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ತಲೆಹೊಟ್ಟು ಕಾಣಿಸಿಕೊಂಡಾಗ ತಲೆಯ ಚರ್ಮದಲ್ಲಿ ಬಿಳಿ ಪದರಗಳು ಉದುರುವುದು, ನಿರಂತರ ತುರಿಕೆ ಮತ್ತು ಕೆಲವೊಮ್ಮೆ ಕೆಂಪಾಗುವ ಲಕ್ಷಣಗಳು ಕಂಡುಬರಬಹುದು. ಈ ಸಮಸ್ಯೆ ಸಾಮಾನ್ಯವಾಗಿ ಗಂಭೀರವಲ್ಲದಿದ್ದರೂ ನಿರ್ಲಕ್ಷ್ಯ ಮಾಡದೆ ಸೂಕ್ತ ಆರೈಕೆ ಮಾಡುವುದು ಮುಖ್ಯ.
ತಲೆಹೊಟ್ಟು ನಿಯಂತ್ರಿಸಲು ಅನುಸರಿಸಬೇಕಾದ ಸರಳ ಕ್ರಮಗಳು
ಸೂಕ್ತ ಶಾಂಪೂ ಬಳಸಿ: ತಲೆಹೊಟ್ಟು ಸಮಸ್ಯೆ ಇರುವವರು ಸಾಮಾನ್ಯ ಶಾಂಪೂ ಬದಲಿಗೆ ಆಂಟಿ-ಡ್ಯಾಂಡ್ರಫ್ ಶಾಂಪೂ ಬಳಸಬಹುದು. ಕೆಟೋಕೊನಜೋಲ್, ಜಿಂಕ್ ಪೈರಿಥಿಯೋನ್, ಸೆಲೆನಿಯಂ ಸಲ್ಫೈಡ್ ಅಥವಾ ಸ್ಯಾಲಿಸಿಲಿಕ್ ಆ್ಯಸಿಡ್‌ನಂತಹ ಅಂಶಗಳನ್ನ ಒಳಗೊಂಡಿರುವ ಶಾಂಪೂಗಳು ತಲೆಹೊಟ್ಟು ನಿಯಂತ್ರಿಸಲು ಸಹಾಯ ಮಾಡಬಹುದು. ನಿಮ್ಮ ಕೂದಲು ಮತ್ತು ತಲೆಯ ಚರ್ಮದ ಸ್ವಭಾವಕ್ಕೆ ಅನುಗುಣವಾಗಿ ಶಾಂಪೂ ಆಯ್ಕೆ ಮಾಡುವುದು ಉತ್ತಮ.
ಶಾಂಪೂ ಬಳಸುವ ವಿಧಾನ ಗಮನಿಸಿ: ಆಂಟಿ-ಡ್ಯಾಂಡ್ರಫ್ ಶಾಂಪೂವನ್ನ ಕೂದಲಿನ ಮೇಲೆ ಮಾತ್ರವಲ್ಲದೆ ತಲೆಯ ಚರ್ಮಕ್ಕೆ ತಲುಪುವಂತೆ ಬಳಸಬೇಕು. ಕೆಲವು ಶಾಂಪೂಗಳನ್ನ ಹಚ್ಚಿದ ತಕ್ಷಣ ತೊಳೆಯುವ ಬದಲು ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಡಬೇಕಾಗುತ್ತದೆ. ಪ್ರತಿ ಉತ್ಪನ್ನದ ಬಾಟಲಿಯ ಮೇಲೆ ನೀಡಿರುವ ಸೂಚನೆಗಳನ್ನ ಸರಿಯಾಗಿ ಪಾಲಿಸುವುದು ಅಗತ್ಯ.
ನಿಯಮಿತವಾಗಿ ಕೂದಲು ತೊಳೆಯಿರಿ: ತಲೆಯ ಚರ್ಮದಲ್ಲಿ ಹೆಚ್ಚುವರಿ ಎಣ್ಣೆ ಮತ್ತು ಸತ್ತ ಚರ್ಮದ ಕೋಶಗಳು ಸಂಗ್ರಹವಾಗುವುದನ್ನ ಕಡಿಮೆ ಮಾಡಲು ಕೂದಲನ್ನ ನಿಯಮಿತವಾಗಿ ತೊಳೆಯುವುದು ಮುಖ್ಯ. ಆದರೆ ಎಷ್ಟು ಬಾರಿ ಕೂದಲು ತೊಳೆಯಬೇಕು ಎಂಬುದು ಕೂದಲಿನ ಸ್ವಭಾವ ಮತ್ತು ತಲೆಯ ಚರ್ಮದ ಸ್ಥಿತಿಯನ್ನ ಅವಲಂಬಿಸಿರುತ್ತದೆ. ತೊಳೆಯುವಾಗ ತಲೆಯ ಚರ್ಮವನ್ನ ಹೆಚ್ಚು ಒತ್ತಿ ಉಜ್ಜದೆ ಮೃದುವಾಗಿ ಸ್ವಚ್ಛಗೊಳಿಸಬೇಕು.
ಕೂದಲಿನ ಆರೈಕೆ ಉತ್ಪನ್ನಗಳ ಬಳಕೆ ಕಡಿಮೆ ಮಾಡಿ: ಹೇರ್ ಜೆಲ್, ಸ್ಪ್ರೇ ಮತ್ತು ಇತರ ಸ್ಟೈಲಿಂಗ್ ಉತ್ಪನ್ನಗಳನ್ನ ಅತಿಯಾಗಿ ಬಳಸುವುದರಿಂದ ಅವುಗಳ ಅವಶೇಷಗಳು ತಲೆಯ ಚರ್ಮದಲ್ಲಿ ಸಂಗ್ರಹವಾಗಬಹುದು. ಇದರಿಂದ ಎಣ್ಣೆಯಂಶ ಹೆಚ್ಚಾಗಿ ತಲೆಹೊಟ್ಟು ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಇಂತಹ ಉತ್ಪನ್ನಗಳ ಬಳಕೆಯನ್ನ ಮಿತಿಗೊಳಿಸುವುದು ಉತ್ತಮ.
ತಲೆಯ ಚರ್ಮದ ಆರೋಗ್ಯದ ಬಗ್ಗೆ ಗಮನವಿರಲಿ
ತಲೆಹೊಟ್ಟು ಸಮಸ್ಯೆ ನಿಯಂತ್ರಣದಲ್ಲಿರಲು ಸೂಕ್ತ ಕೂದಲಿನ ಆರೈಕೆ ಪದ್ಧತಿಯನ್ನ ಅನುಸರಿಸಬೇಕು. ತಲೆಯ ಚರ್ಮವನ್ನ ಸ್ವಚ್ಛವಾಗಿಟ್ಟುಕೊಳ್ಳುವುದು ಮತ್ತು ಅದಕ್ಕೆ ಹೊಂದಿಕೆಯಾಗುವ ಉತ್ಪನ್ನಗಳನ್ನ ಬಳಸುವುದು ಮುಖ್ಯ. ಯಾವುದೇ ಶಾಂಪೂ ಬಳಸಿದ ಬಳಿಕ ತುರಿಕೆ, ಉರಿ ಅಥವಾ ಕಿರಿಕಿರಿ ಕಾಣಿಸಿಕೊಂಡರೆ ಅದರ ಬಳಕೆಯನ್ನ ನಿಲ್ಲಿಸಬೇಕು.
ಸಮಸ್ಯೆ ಮುಂದುವರಿದರೆ ವೈದ್ಯರ ಸಲಹೆ ಪಡೆಯಿರಿ
ಆಂಟಿ-ಡ್ಯಾಂಡ್ರಫ್ ಶಾಂಪೂ ಬಳಸಿದರೂ ಹಲವು ವಾರಗಳವರೆಗೆ ಸಮಸ್ಯೆ ಕಡಿಮೆಯಾಗದಿದ್ದರೆ ಚರ್ಮರೋಗ ತಜ್ಞರನ್ನ ಸಂಪರ್ಕಿಸುವುದು ಉತ್ತಮ. ತೀವ್ರ ತುರಿಕೆ, ಕೆಂಪಾಗುವಿಕೆ, ಊತ ಅಥವಾ ನೋವು ಕಾಣಿಸಿಕೊಂಡರೂ ವೈದ್ಯಕೀಯ ಸಲಹೆ ಪಡೆಯಬೇಕು. ಕೆಲವೊಮ್ಮೆ ತಲೆಹೊಟ್ಟಿನಂತೆ ಕಾಣಿಸುವ ಸಮಸ್ಯೆಗೆ ಎಕ್ಸಿಮಾ, ಸೋರಿಯಾಸಿಸ್ ಅಥವಾ ಇತರ ಚರ್ಮದ ಕಾಯಿಲೆಗಳು ಕಾರಣವಾಗಿರಬಹುದು. ಒಟ್ನಲ್ಲಿ ಚಳಿಗಾಲದಲ್ಲಿ ತಲೆಹೊಟ್ಟು ಸಮಸ್ಯೆ ಕಾಡುತ್ತಿದ್ದರೆ ಕೂದಲಿನ ಸ್ವಚ್ಛತೆ, ಸೂಕ್ತ ಶಾಂಪೂ ಬಳಕೆ ಮತ್ತು ನಿಯಮಿತ ಆರೈಕೆಗೆ ಆದ್ಯತೆ ನೀಡಬೇಕು. ಸಮಸ್ಯೆಯ ತೀವ್ರತೆಗೆ ಅನುಗುಣವಾಗಿ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಮುಂದುವರಿಸುವುದು ಸೂಕ್ತ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ತಜ್ಞ ಮೂಲಗಳ ಮಾಹಿತಿಯನ್ನ ಆಧರಿಸಿದೆ. ಇದನ್ನ Zee Kannada News ದೃಢಪಡಿಸುವುದಿಲ್ಲ. ಇಲ್ಲಿನ ಸಲಹೆಗಳನ್ನ ಪಾಲಿಸುವ ಮುನ್ನ ತಜ್ಞರ ಸಲಹೆ ಪಡೆಯುವುದು ಉತ್ತಮ.)