Protein for Weight Loss: ಇತ್ತೀಚಿನ ದಿನಗಳಲ್ಲಿ ತೂಕ ಇಳಿಸಿಕೊಳ್ಳಲು ಹಲವರು ವ್ಯಾಯಾಮದ ಜೊತೆಗೆ ಆಹಾರ ಪದ್ಧತಿಯಲ್ಲಿಯೂ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ. ದೇಹದ ತೂಕ ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ಕೆಲವರು ಆಹಾರ ಸೇವನೆಯ ಪ್ರಮಾಣವನ್ನ ಕಡಿಮೆ ಮಾಡುತ್ತಿದ್ದರೆ, ಇನ್ನು ಕೆಲವರು ತಮ್ಮ ಆಹಾರದಲ್ಲಿ ಪ್ರೋಟೀನ್ ಪ್ರಮಾಣವನ್ನೂ ಕಡಿಮೆ ಮಾಡುತ್ತಿದ್ದಾರೆ. ಆದರೆ ತೂಕ ಇಳಿಸುವ ಪ್ರಯತ್ನದಲ್ಲಿ ಪ್ರೋಟೀನ್ ಸೇವನೆಗೆ ವಿಶೇಷ ಮಹತ್ವವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ತೂಕ ಇಳಿಸಿಕೊಳ್ಳುವ ಸಂದರ್ಭದಲ್ಲಿ ಕೇವಲ ಕ್ಯಾಲೊರಿ ಪ್ರಮಾಣವನ್ನ ಕಡಿಮೆ ಮಾಡುವುದಷ್ಟೇ ಮುಖ್ಯವಲ್ಲ. ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಸರಿಯಾದ ಪ್ರಮಾಣದಲ್ಲಿ ದೊರೆಯುವುದೂ ಅಷ್ಟೇ ಅಗತ್ಯ. ಅದರಲ್ಲೂ ಪ್ರೋಟೀನ್ ದೇಹದ ಸ್ನಾಯುಗಳ ಆರೋಗ್ಯ ಕಾಪಾಡುವಲ್ಲಿ, ಚಯಾಪಚಯ ಕ್ರಿಯೆ ಹಾಗೂ ಹಸಿವಿನ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನೋಯ್ಡಾದ ಫೋರ್ಟಿಸ್ ಆಸ್ಪತ್ರೆಯ ಹಿರಿಯ ಎಂಡೋಕ್ರೈನಾಲಜಿ ಸಲಹೆಗಾರ ಡಾ. ಅನುಪಮ್ ಬಿಸ್ವಾಸ್ ವಿವರಿಸಿದ್ದಾರೆ.
ತೂಕ ಇಳಿಸುವಾಗ ಪ್ರೋಟೀನ್ ಏಕೆ ಮುಖ್ಯ?
ತೂಕ ಕಡಿಮೆ ಮಾಡಿಕೊಳ್ಳಲು ಆಹಾರದಿಂದ ಪಡೆಯುವ ಕ್ಯಾಲೊರಿಗಳನ್ನ ಕಡಿಮೆ ಮಾಡಿದಾಗ, ದೇಹವು ಶಕ್ತಿಗಾಗಿ ಸಂಗ್ರಹವಾಗಿರುವ ಕೊಬ್ಬಿನ ಜೊತೆಗೆ ಸ್ನಾಯುಗಳನ್ನೂ ಬಳಸಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ಆಹಾರದಲ್ಲಿ ಸಾಕಷ್ಟು ಪ್ರೋಟೀನ್ ಇಲ್ಲದಿದ್ದರೆ ಸ್ನಾಯುಗಳ ನಷ್ಟ ಉಂಟಾಗಬಹುದು. ಆದರೆ ಅಗತ್ಯ ಪ್ರಮಾಣದಲ್ಲಿ ಪ್ರೋಟೀನ್ ಸೇವಿಸುವುದರಿಂದ ಸ್ನಾಯುಗಳನ್ನ ಕಾಪಾಡಿಕೊಳ್ಳಲು ನೆರವಾಗುತ್ತದೆ.
ತೂಕ ಇಳಿಸುವ ಪ್ರಕ್ರಿಯೆಯಲ್ಲಿ ಸ್ನಾಯುಗಳ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗಿದ್ದು, ದೇಹದ ಕಾರ್ಯಕ್ಷಮತೆಯನ್ನೂ ಉಳಿಸಿಕೊಳ್ಳಲು ಪ್ರೋಟೀನ್ ಸಹಕಾರಿಯಾಗಿದೆ. ಹೀಗಾಗಿ ತೂಕ ಕಡಿಮೆ ಮಾಡಿಕೊಳ್ಳುವವರು ಆಹಾರದಲ್ಲಿ ಕ್ಯಾಲೊರಿಗಳನ್ನ ಕಡಿಮೆ ಮಾಡುವುದರ ಜೊತೆಗೆ ಪ್ರೋಟೀನ್ ಪ್ರಮಾಣದ ಬಗ್ಗೆಯೂ ಗಮನಹರಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ.
ಚಯಾಪಚಯ ಕ್ರಿಯೆಗೂ ನೆರವು
ಪ್ರೋಟೀನ್‌ನ ಮತ್ತೊಂದು ಪ್ರಮುಖ ಗುಣವೆಂದರೆ, ಕಾರ್ಬೋಹೈಡ್ರೇಟ್‌ಗಳು ಮತ್ತು ಕೊಬ್ಬಿನ ಅಂಶಗಳಿಗೆ ಹೋಲಿಸಿದರೆ ಅದನ್ನ ಜೀರ್ಣಿಸಿಕೊಳ್ಳಲು ದೇಹವು ಹೆಚ್ಚಿನ ಶಕ್ತಿಯನ್ನ ಬಳಸುತ್ತದೆ. ಇದನ್ನ ಆಹಾರದ ಥರ್ಮಿಕ್ ಪರಿಣಾಮ ಎಂದು ಕರೆಯಲಾಗುತ್ತದೆ. ಪ್ರೋಟೀನ್ ಜೀರ್ಣಕ್ರಿಯೆಯಲ್ಲಿ ಹೆಚ್ಚುವರಿ ಶಕ್ತಿ ಬಳಕೆಯಾಗುವುದರಿಂದ ಕ್ಯಾಲೊರಿ ದಹನಕ್ಕೆ ಸೀಮಿತ ಪ್ರಮಾಣದಲ್ಲಿ ನೆರವಾಗಬಹುದು. ಇದು ತೂಕ ನಿರ್ವಹಣೆಯಲ್ಲಿಯೂ ಉಪಯುಕ್ತವಾಗುತ್ತದೆ.
ಇದರ ಜೊತೆಗೆ ಪ್ರೋಟೀನ್ ಸೇವನೆಯಿಂದ ಹೊಟ್ಟೆ ತುಂಬಿದ ಅನುಭವ ಹೆಚ್ಚು ಸಮಯ ಉಳಿಯುತ್ತದೆ. ಇದರಿಂದ ಪದೇಪದೇ ಹಸಿವಾಗುವುದು, ಅನಗತ್ಯವಾಗಿ ತಿಂಡಿ ತಿನ್ನುವುದು ಹಾಗೂ ಅತಿಯಾಗಿ ಆಹಾರ ಸೇವಿಸುವ ಸಾಧ್ಯತೆ ಕಡಿಮೆಯಾಗಬಹುದು. ವಿಶೇಷವಾಗಿ ನಾರಿನಂಶವಿರುವ ಆಹಾರಗಳ ಜೊತೆಗೆ ಪ್ರೋಟೀನ್‌ಯುಕ್ತ ಆಹಾರ ಸೇವಿಸಿದಾಗ ಹೊಟ್ಟೆ ತುಂಬಿದ ಅನುಭವ ದೊರೆಯಲು ಸಹಾಯವಾಗುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟಕ್ಕೂ ಸಂಬಂಧ
ಪ್ರೋಟೀನ್‌ಯುಕ್ತ ಆಹಾರವನ್ನ ನಾರಿನಂಶವಿರುವ ಪದಾರ್ಥಗಳೊಂದಿಗೆ ಹಾಗೂ ಸಮತೋಲಿತ ಆಹಾರದ ಭಾಗವಾಗಿ ಸೇವಿಸುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನ ಸ್ಥಿರವಾಗಿಡಲು ನೆರವಾಗಬಹುದು. ತೂಕ ಹೆಚ್ಚಳ ಮತ್ತು ಬೊಜ್ಜಿನ ಸಮಸ್ಯೆಗಳು ಇನ್ಸುಲಿನ್ ಪ್ರತಿರೋಧ ಸೇರಿದಂತೆ ಕೆಲವು ಚಯಾಪಚಯ ಸಮಸ್ಯೆಗಳೊಂದಿಗೆ ಸಂಬಂಧ ಹೊಂದಿರಬಹುದು. ಆದ್ದರಿಂದ ತೂಕ ಇಳಿಸುವಾಗ ಕೇವಲ ಕ್ಯಾಲೊರಿಗಳ ಲೆಕ್ಕಾಚಾರಕ್ಕೆ ಸೀಮಿತವಾಗದೆ, ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳ ಸಮತೋಲನಕ್ಕೂ ಆದ್ಯತೆ ನೀಡಬೇಕೆಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ದಿನಕ್ಕೆ ಎಷ್ಟು ಪ್ರೋಟೀನ್ ಅಗತ್ಯ?
ಸಾಮಾನ್ಯವಾಗಿ ಆರೋಗ್ಯವಂತ ವಯಸ್ಕ ವ್ಯಕ್ತಿಗೆ ಪ್ರತಿದಿನ ದೇಹದ ತೂಕದ ಪ್ರತಿ ಕಿಲೋಗ್ರಾಂಗೆ ಸುಮಾರು 0.8 ಗ್ರಾಂ ಪ್ರೋಟೀನ್ ಅಗತ್ಯವಿರುತ್ತದೆ. ಆದರೆ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವವರಿಗೆ ಇದಕ್ಕಿಂತ ಹೆಚ್ಚಿನ ಪ್ರಮಾಣದ ಪ್ರೋಟೀನ್ ಬೇಕಾಗಬಹುದು. ವ್ಯಕ್ತಿಯ ದೈಹಿಕ ಚಟುವಟಿಕೆ ಹಾಗೂ ಅಗತ್ಯಕ್ಕೆ ಅನುಗುಣವಾಗಿ ಪ್ರೋಟೀನ್ ಪ್ರಮಾಣ ಬದಲಾಗಬಹುದು.
ಪ್ರೋಟೀನ್ ಪಡೆಯಲು ಯಾವ ಆಹಾರ ಸೇವಿಸಬೇಕು?
ದೈನಂದಿನ ಆಹಾರದಲ್ಲಿಯೇ ಹಲವು ಪ್ರೋಟೀನ್ ಮೂಲಗಳು ಲಭ್ಯವಿವೆ. ಬೇಳೆಕಾಳುಗಳು, ಪನೀರ್, ಹಾಲು, ಮೊಸರು, ಸೋಯಾಬೀನ್, ಟೋಫು ಮತ್ತು ಒಣಹಣ್ಣುಗಳು ಪ್ರೋಟೀನ್‌ಯುಕ್ತ ಆಹಾರಗಳಾಗಿವೆ. ಇವುಗಳನ್ನ ಆಹಾರದಲ್ಲಿ ಸೂಕ್ತ ಪ್ರಮಾಣದಲ್ಲಿ ಸೇರಿಸಿಕೊಳ್ಳಬಹುದು.
ಒಟ್ನಲ್ಲಿ ತೂಕ ಇಳಿಸಿಕೊಳ್ಳಲು ಆಹಾರದ ಪ್ರಮಾಣವನ್ನ ಕಡಿಮೆ ಮಾಡುವುದೊಂದೇ ಮಾರ್ಗವಲ್ಲ. ದೇಹಕ್ಕೆ ಅಗತ್ಯವಿರುವ ಪ್ರೋಟೀನ್ ಸೇವನೆ, ನಿಯಮಿತ ವ್ಯಾಯಾಮ ಮತ್ತು ಸಮತೋಲಿತ ಆಹಾರ ಪದ್ಧತಿಗೂ ಆದ್ಯತೆ ನೀಡಬೇಕು ಎಂಬುದು ವೈದ್ಯರ ಸಲಹೆಯಾಗಿದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ತಜ್ಞ ಮೂಲಗಳ ಮಾಹಿತಿಯನ್ನ ಆಧರಿಸಿದೆ. ಇದನ್ನ Zee Kannada News ದೃಢಪಡಿಸುವುದಿಲ್ಲ. ಇಲ್ಲಿನ ಸಲಹೆಗಳನ್ನ ಪಾಲಿಸುವ ಮುನ್ನ ತಜ್ಞರ ಸಲಹೆ ಪಡೆಯುವುದು ಉತ್ತಮ.)