Warning signs of bad cholesterol : ಆಧುನಿಕ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ವ್ಯಾಯಾಮದ ಕೊರತೆಯಿಂದಾಗಿ ಅನೇಕರಲ್ಲಿ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚುತ್ತಿದೆ. ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (LDL) ಸುರಕ್ಷಿತ ಮಿತಿಯನ್ನು ಮೀರಿದಾಗ, ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆಯಾಗುತ್ತದೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಗಂಭೀರ ಸಮಸ್ಯೆ ಗಳಿಗೆ ಕಾರಣವಾಗಬಹುದು. ಸಾಮಾನ್ಯವಾಗಿ ಹೆಚ್ಚಿನ ಕೊಲೆಸ್ಟ್ರಾಲ್ ನೋವು ಅಥವಾ ತಕ್ಷಣದ, ಸ್ಪಷ್ಟ ಲಕ್ಷಣ ಗಳನ್ನು ಉಂಟುಮಾಡುವುದಿಲ್ಲ. ಅದಕ್ಕಾಗಿಯೇ ಇದನ್ನು "ಮೂಕ ಹಂತಕ" (silent killer) ಎಂದು ಕರೆಯಲಾಗುತ್ತದೆ. ಆದಾಗ್ಯೂ ಕಣ್ಣುಗಳು, ಚರ್ಮ ಮತ್ತು ಕಾಲುಗಳಲ್ಲಿ ಕಂಡುಬರುವ ಕೆಲವು ಸೂಕ್ಷ್ಮ ಬದಲಾವಣೆ ಗಳು ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿರುವುದನ್ನು ಸೂಚಿಸಬಹುದು. ಈ ಪ್ರಮುಖ ಎಚ್ಚರಿಕೆಯ ಚಿಹ್ನೆಗಳ ಬಗ್ಗೆ ತಿಳಿಯೋಣ.
ಆರಂಭದಲ್ಲಿ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ ಯಾವುದೇ ಸ್ಪಷ್ಟ ಲಕ್ಷಣಗಳು ಕಂಡುಬರುವುದಿಲ್ಲ. ಅದಕ್ಕಾಗಿಯೇ ಇದನ್ನು "ಮೂಕ ಹಂತಕ" ಎಂದು ಕರೆಯಲಾಗುತ್ತದೆ. ಆದಾಗ್ಯೂ, ಕಣ್ಣುಗಳು, ಚರ್ಮ ಮತ್ತು ಕಾಲುಗಳಲ್ಲಿ ಕಂಡುಬರುವ ನಿರ್ದಿಷ್ಟ ಬದಲಾವಣೆಗಳ ಮೂಲಕ ಹೆಚ್ಚಿನ ಕೊಲೆಸ್ಟ್ರಾಲ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಬಹುದು ಎಂದು ವೈದ್ಯರು ಹೇಳುತ್ತಾರೆ. ಈ ಚಿಹ್ನೆಗಳನ್ನು ಆರಂಭದಲ್ಲೇ ಗುರುತಿಸಿ ವೈದ್ಯರನ್ನು ಸಂಪರ್ಕಿಸಲು ಅವರು ಸಲಹೆ ನೀಡುತ್ತಾರೆ.
ಕಣ್ಣುರೆಪ್ಪೆಗಳ ಮೇಲೆ ಹಳದಿ ಕಲೆಗಳು: ಕಣ್ಣು ರೆಪ್ಪೆಗಳು ಅಥವಾ ಅವುಗಳ ಮೂಲೆಗಳ ಸುತ್ತಲೂ ಸಣ್ಣ ಹಳದಿ ಬಣ್ಣದ ಕೊಬ್ಬಿನ ನಿಕ್ಷೇಪಗಳು ಅಥವಾ ಗಂಟುಗಳು ಕಾಣಿಸಿಕೊಳ್ಳುವುದು ದೇಹದಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವಿರುವುದರ ಸ್ಪಷ್ಟ ಸಂಕೇತವಾಗಿದೆ.
ಐರಿಸ್ (ಕಣ್ಣಿನ ಬಣ್ಣದ ಭಾಗ) ಸುತ್ತಲೂ ಬಿಳಿ ಉಂಗುರ: ಐರಿಸ್‌ನ ಸುತ್ತಲೂ ಬಿಳಿ ಅಥವಾ ಬೂದು ಬಣ್ಣದ ಉಂಗುರವು ರೂಪುಗೊಳ್ಳುತ್ತದೆ. ಸಾಮಾನ್ಯವಾಗಿ ಈ ಸ್ಥಿತಿಯು ವಯಸ್ಸಾದವರಲ್ಲಿ ಕಂಡು ಬರುತ್ತದೆ ಆದರೂ, ಚಿಕ್ಕ ವಯಸ್ಸಿನಲ್ಲಿ ಇದು ಕಂಡು ಬಂದರೆ ಅದು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವು ಅಪಾಯಕಾರಿ ಮಟ್ಟದಲ್ಲಿ ಹೆಚ್ಚಿರುವುದನ್ನು ಸೂಚಿಸುತ್ತದೆ.
ಕಾಲಿನ ಸ್ನಾಯುಗಳಲ್ಲಿ ತೀವ್ರ ಸೆಳೆತ : ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆಯಾಗುವುದರಿಂದ ಕಾಲುಗಳಿಗೆ ರಕ್ತ ಪರಿಚಲನೆ ಕಡಿಮೆಯಾಗುತ್ತದೆ. ಇದರ ಪರಿಣಾಮವಾಗಿ ನಡೆಯುವಾಗ ಅಥವಾ ಮೆಟ್ಟಿಲು ಹತ್ತುವಾಗ ಕಾಲಿನ ಸ್ನಾಯುಗಳಲ್ಲಿ ತೀವ್ರ ಸೆಳೆತ ಮತ್ತು ಕಾಲುಗಳ ಹಿಂಭಾಗದ ಸ್ನಾಯುಗಳಲ್ಲಿ (ಕಾಲಿನ ಕೆಳ ಭಾಗದಲ್ಲಿ) ನೋವು ಉಂಟಾಗುತ್ತದೆ. ಇತರ ಲಕ್ಷಣಗಳೆಂದರೆ ಕಾಲುಗಳು ಸದಾ ತಂಪಾಗಿರುವುದು, ಆಗಾಗ್ಗೆ ಕಾಲು ಸೆಳೆತ, ಕಾಲಿನ ಚರ್ಮದ ಬಣ್ಣ ಬದಲಾಗುವುದು, ಕಾಲಿನ ಮೇಲಿನ ಕೂದಲು ಉದುರುವುದು ಮತ್ತು ಕಾಲ್ಬೆರಳ ಉಗುರುಗಳು ದಪ್ಪವಾಗುವುದು.
ಚರ್ಮದ ಮೇಲೆ ಕಂಡುಬರುವ ಚಿಹ್ನೆಗಳು: ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ, ಮೊಣಕೈ ಗಳು, ಮೊಣಕಾಲುಗಳು, ಪೃಷ್ಠ ಅಥವಾ ಬೆರಳಿನ ಕೀಲುಗಳ ಬಳಿ ಚರ್ಮದ ಅಡಿಯಲ್ಲಿ ಸಣ್ಣ ಹಳದಿ ಅಥವಾ ಕೆಂಪು ಬಣ್ಣದ ಕೊಬ್ಬಿನ ನಿಕ್ಷೇಪಗಳು ರೂಪುಗೊಳ್ಳಬಹುದು. ಕಣ್ಣುಗಳು, ಚರ್ಮ ಅಥವಾ ಕಾಲುಗಳಲ್ಲಿ ಮೇಲೆ ತಿಳಿಸಿದ ಬದಲಾವಣೆಗಳು ಕಂಡುಬಂದರೆ, ಅವುಗಳನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಮತ್ತು 'ಲಿಪಿಡ್ ಪ್ರೊಫೈಲ್' ರಕ್ತ ಪರೀಕ್ಷೆಯನ್ನು ಮಾಡಿಸಿಕೊಳ್ಳ ಬೇಕು. ಸರಿಯಾದ ಆಹಾರ ಪದ್ಧತಿ, ವ್ಯಾಯಾಮ ಮತ್ತು ವೈದ್ಯಕೀಯ ಸಲಹೆಗಳನ್ನು ಪಾಲಿಸುವ ಮೂಲಕ, ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು ಮತ್ತು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಸೂಚನೆ: ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ನೀಡಲಾಗಿದೆ. ದಯವಿಟ್ಟು ಯಾವುದೇ ಪರಿಹಾರವನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.