₹5 ಲಕ್ಷದಿಂದಲೇ CNG ಕಾರು ಖರೀದಿಸಿ! 34 KMವರೆಗೆ ಮೈಲೇಜ್ ನೀಡುವ ಟಾಪ್ ಕಾರುಗಳಿವು
₹10 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಉತ್ತಮ ಮೈಲೇಜ್ ನೀಡುವ ಐದು ಸಿಎನ್‌ಜಿ ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ಡಿಜೈರ್, ವ್ಯಾಗನ್‌ಆರ್, ಸೆಲೆರಿಯೊ, ಸ್ವಿಫ್ಟ್ ಮತ್ತು ಆಲ್ಟೊ K10 ಸೇರಿವೆ. ಇವು ಪ್ರತಿ ಕೆಜಿ ಸಿಎನ್‌ಜಿಗೆ ಸುಮಾರು 32ರಿಂದ 34 ಕಿ.ಮೀ.ವರೆಗೆ ಮೈಲೇಜ್ ನೀಡುತ್ತವೆ. ಈ ಪೈಕಿ ಸೆಲೆರಿಯೊ 34.43 ಕಿ.ಮೀ. ಮೈಲೇಜ್‌ನೊಂದಿಗೆ ಮುಂಚೂಣಿಯಲ್ಲಿದ್ದರೆ, ಆಲ್ಟೊ K10 ₹4.81 ಲಕ್ಷ ಆರಂಭಿಕ ಎಕ್ಸ್‌ಶೋರೂಂ ಬೆಲೆಯೊಂದಿಗೆ ಅತ್ಯಂತ ಕಡಿಮೆ ಬೆಲೆಯ ಆಯ್ಕೆಯಾಗಿದೆ.
CNG Cars Under 10 Lakhs: ಪೆಟ್ರೋಲ್ ಬೆಲೆ ಏರಿಕೆಯಿಂದ ಪ್ರತಿದಿನ ಕಾರಿನಲ್ಲಿ ಪ್ರಯಾಣಿಸುವವರು ಇಂಧನ ವೆಚ್ಚವನ್ನ ಕಡಿಮೆ ಮಾಡಿಕೊಳ್ಳಲು ಸಿಎನ್‌ಜಿ ಕಾರುಗಳತ್ತ ಗಮನ ಹರಿಸುತ್ತಿದ್ದಾರೆ. ಅದರಲ್ಲೂ ಕಡಿಮೆ ಬಜೆಟ್‌ನಲ್ಲಿ ಕಾರು ಖರೀದಿಸಲು ಬಯಸುವ ಮಧ್ಯಮ ವರ್ಗದ ಜನರಿಗೆ ಸಿಎನ್‌ಜಿ ಮಾದರಿಗಳು ಉತ್ತಮ ಆಯ್ಕೆಗಳಾಗಿವೆ. ಮಾರುಕಟ್ಟೆಯಲ್ಲಿ ₹10 ಲಕ್ಷಕ್ಕಿಂತ ಕಡಿಮೆ ಎಕ್ಸ್‌ಶೋರೂಂ ಬೆಲೆಗೆ ಲಭ್ಯವಿರುವ ಹಲವು ಕಾರುಗಳು ಉತ್ತಮ ಮೈಲೇಜ್ ನೀಡುತ್ತಿವೆ. ಪ್ರತಿ ಕೆಜಿ ಸಿಎನ್‌ಜಿಗೆ 32ರಿಂದ 34 ಕಿ.ಮೀ.ವರೆಗೆ ಮೈಲೇಜ್ ನೀಡುವ ಐದು ಕಾರುಗಳ ಮಾಹಿತಿ ಇಲ್ಲಿದೆ ನೋಡಿ...
ಪೆಟ್ರೋಲ್ ಕಾರುಗಳಿಗೆ ಹೋಲಿಸಿದರೆ ಸಿಎನ್‌ಜಿ ಕಾರುಗಳ ಆರಂಭಿಕ ಬೆಲೆ ಸ್ವಲ್ಪ ಹೆಚ್ಚಿರಬಹುದು. ಆದರೆ ಉತ್ತಮ ಮೈಲೇಜ್‌ನಿಂದ ದೀರ್ಘಾವಧಿಯಲ್ಲಿ ಇಂಧನ ವೆಚ್ಚವನ್ನ ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ನಗರ ಪ್ರದೇಶಗಳಲ್ಲಿ ಪ್ರತಿದಿನ ಪ್ರಯಾಣಿಸುವವರಿಗೆ ಅನುಕೂಲವಾಗುವಂತಹ ಐದು ಸಿಎನ್‌ಜಿ ಕಾರುಗಳ ಮಾಹಿತಿ ಇಲ್ಲಿದೆ.
ಮಾರುತಿ ಸುಜುಕಿ ಡಿಜೈರ್ CNG: ಮಾರುತಿ ಸುಜುಕಿ ಡಿಜೈರ್ ಸಿಎನ್‌ಜಿ ಈ ವಿಭಾಗದಲ್ಲಿ ಪ್ರಮುಖ ಆಯ್ಕೆಯಾಗಿದೆ. ಈ ಕಾರಿನಲ್ಲಿ 1.2 ಲೀಟರ್, 3 ಸಿಲಿಂಡರ್ Z-ಸೀರಿಸ್ ಎಂಜಿನ್ ನೀಡಲಾಗಿದೆ. ಪೆಟ್ರೋಲ್ ಮೋಡ್‌ನಲ್ಲಿ ಈ ಎಂಜಿನ್ 81 bhp ಪವರ್ ಮತ್ತು 111.7 Nm ಟಾರ್ಕ್ ಉತ್ಪಾದಿಸುತ್ತದೆ. ARAI ಪ್ರಮಾಣೀಕರಣದ ಪ್ರಕಾರ, ಡಿಜೈರ್ ಸಿಎನ್‌ಜಿ ಪ್ರತಿ ಕೆಜಿ ಇಂಧನಕ್ಕೆ 33.73 ಕಿ.ಮೀ. ಮೈಲೇಜ್ ನೀಡುತ್ತದೆ. ಇದರ ಪೆಟ್ರೋಲ್ ಮ್ಯಾನುವಲ್ ಮಾದರಿ 24.79 ಕಿ.ಮೀ./ಲೀ. ಮತ್ತು ಎಎಂಟಿ ಮಾದರಿ 25.71 ಕಿ.ಮೀ./ಲೀ. ಮೈಲೇಜ್ ಹೊಂದಿದೆ. ಡಿಜೈರ್‌ನ ಎಕ್ಸ್‌ಶೋರೂಂ ಬೆಲೆ ₹8.03 ಲಕ್ಷದಿಂದ ಆರಂಭವಾಗುತ್ತದೆ.
ಮಾರುತಿ ಸುಜುಕಿ ವ್ಯಾಗನ್‌ಆರ್ CNG: ಭಾರತದಲ್ಲಿ ಜನಪ್ರಿಯವಾಗಿರುವ ವ್ಯಾಗನ್‌ಆರ್ ಕಾರಿನ ಸಿಎನ್‌ಜಿ ಮಾದರಿಯೂ ಉತ್ತಮ ಮೈಲೇಜ್ ನೀಡುತ್ತದೆ. ಇದರಲ್ಲಿ 998 ಸಿಸಿ, 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಬಳಸಲಾಗಿದೆ. ಪೆಟ್ರೋಲ್ ಮೋಡ್‌ನಲ್ಲಿ 67.5 bhp ಪವರ್ ಮತ್ತು 91.1 Nm ಟಾರ್ಕ್ ಉತ್ಪಾದಿಸುವ ಎಂಜಿನ್, ಸಿಎನ್‌ಜಿ ಮೋಡ್‌ನಲ್ಲಿ 55.9 bhp ಪವರ್ ಹಾಗೂ 82.1 Nm ಟಾರ್ಕ್ ನೀಡುತ್ತದೆ. ARAI ಪ್ರಮಾಣೀಕರಣದ ಪ್ರಕಾರ, ವ್ಯಾಗನ್‌ಆರ್ ಸಿಎನ್‌ಜಿ ಪ್ರತಿ ಕೆಜಿಗೆ 34.05 ಕಿ.ಮೀ. ಮೈಲೇಜ್ ನೀಡುತ್ತದೆ. ಇದರ ಎಕ್ಸ್‌ಶೋರೂಂ ಬೆಲೆ ₹5.88 ಲಕ್ಷದಿಂದ ಆರಂಭವಾಗುತ್ತದೆ.
ಮಾರುತಿ ಸುಜುಕಿ ಸೆಲೆರಿಯೊ CNG: ಹೆಚ್ಚಿನ ಮೈಲೇಜ್‌ಗೆ ಆದ್ಯತೆ ನೀಡುವವರಿಗೆ ಮಾರುತಿ ಸುಜುಕಿ ಸೆಲೆರಿಯೊ ಸಿಎನ್‌ಜಿ ಗಮನ ಸೆಳೆಯುತ್ತದೆ. ಈ ಕಾರಿನಲ್ಲಿಯೂ 998 ಸಿಸಿ, 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಸಿಎನ್‌ಜಿ ಮೋಡ್‌ನಲ್ಲಿ ಇದು 55.9 bhp ಪವರ್ ಮತ್ತು 82.1 Nm ಟಾರ್ಕ್ ಉತ್ಪಾದಿಸುತ್ತದೆ. ಸೆಲೆರಿಯೊ ಸಿಎನ್‌ಜಿ ಪ್ರತಿ ಕೆಜಿ ಇಂಧನಕ್ಕೆ 34.43 ಕಿ.ಮೀ. ಮೈಲೇಜ್ ನೀಡುತ್ತದೆ. ಇದರ ಎಕ್ಸ್‌ಶೋರೂಂ ಬೆಲೆ ₹5.97 ಲಕ್ಷದಿಂದ ಆರಂಭವಾಗುತ್ತದೆ.
ಮಾರುತಿ ಸುಜುಕಿ ಸ್ವಿಫ್ಟ್ CNG: ಸ್ಪೋರ್ಟಿ ವಿನ್ಯಾಸದ ಜೊತೆಗೆ ಉತ್ತಮ ಮೈಲೇಜ್ ಬಯಸುವವರಿಗೆ ಮಾರುತಿ ಸುಜುಕಿ ಸ್ವಿಫ್ಟ್ ಸಿಎನ್‌ಜಿ ಆಯ್ಕೆಯಾಗಿದೆ. ಡಿಜೈರ್‌ನಲ್ಲಿರುವ ಅದೇ 1.2 ಲೀಟರ್, 3 ಸಿಲಿಂಡರ್ Z-ಸೀರಿಸ್ ಪೆಟ್ರೋಲ್ ಎಂಜಿನ್ ಅನ್ನು ಸ್ವಿಫ್ಟ್ ಸಿಎನ್‌ಜಿಯಲ್ಲಿಯೂ ಬಳಸಲಾಗಿದೆ. ಈ ಕಾರು ಪ್ರತಿ ಕೆಜಿ ಸಿಎನ್‌ಜಿಗೆ 32.85 ಕಿ.ಮೀ. ಮೈಲೇಜ್ ನೀಡುತ್ತದೆ. ಇದರ ಎಕ್ಸ್‌ಶೋರೂಂ ಬೆಲೆ ₹7.44 ಲಕ್ಷದಿಂದ ಆರಂಭವಾಗುತ್ತದೆ. ಉತ್ತಮ ಮೈಲೇಜ್ ಜೊತೆಗೆ ಆಕರ್ಷಕ ವಿನ್ಯಾಸ ಮತ್ತು ಡ್ರೈವಿಂಗ್ ಅನುಭವ ಬಯಸುವವರಿಗೆ ಈ ಮಾದರಿ ಆಯ್ಕೆಯಾಗಿದೆ.
ಮಾರುತಿ ಸುಜುಕಿ ಆಲ್ಟೊ K10 CNG: ಕಡಿಮೆ ಬಜೆಟ್‌ನಲ್ಲಿ ಸಿಎನ್‌ಜಿ ಕಾರು ಖರೀದಿಸಲು ಬಯಸುವವರಿಗೆ ಮಾರುತಿ ಸುಜುಕಿ ಆಲ್ಟೊ K10 ಪ್ರಮುಖ ಆಯ್ಕೆಯಾಗಿದೆ. ಸಿಎನ್‌ಜಿ ಮೋಡ್‌ನಲ್ಲಿ ಈ ಕಾರು 55.9 bhp ಪವರ್ ಮತ್ತು 82.1 Nm ಟಾರ್ಕ್ ಉತ್ಪಾದಿಸುತ್ತದೆ. ಆಲ್ಟೊ K10 ಸಿಎನ್‌ಜಿ ಪ್ರತಿ ಕೆಜಿ ಇಂಧನಕ್ಕೆ 33.85 ಕಿ.ಮೀ. ಮೈಲೇಜ್ ನೀಡುತ್ತದೆ. ಇದರ ಎಕ್ಸ್‌ಶೋರೂಂ ಬೆಲೆ ₹4.81 ಲಕ್ಷದಿಂದ ಆರಂಭವಾಗುತ್ತದೆ. ಈ ಐದು ಕಾರುಗಳ ಪಟ್ಟಿಯಲ್ಲಿ ಕಡಿಮೆ ಆರಂಭಿಕ ಬೆಲೆ ಹೊಂದಿರುವ ಮಾದರಿ ಇದಾಗಿದೆ.
ನಿಮ್ಮ ಅಗತ್ಯಕ್ಕೆ ತಕ್ಕ ಕಾರು ಯಾವುದು?
ಕಡಿಮೆ ಬೆಲೆಗೆ ಸಿಎನ್‌ಜಿ ಕಾರು ಖರೀದಿಸುವುದು ಮೊದಲ ಆದ್ಯತೆಯಾಗಿದ್ದರೆ ಆಲ್ಟೊ K10 ಆಯ್ಕೆ ಮಾಡಿಕೊಳ್ಳಬಹುದು. ಹೆಚ್ಚಿನ ಮೈಲೇಜ್ ಬಯಸುವವರಿಗೆ ಸೆಲೆರಿಯೊ, ಹೆಚ್ಚು ಸ್ಥಳಾವಕಾಶ ಮತ್ತು ಪ್ರಾಯೋಗಿಕ ಬಳಕೆಗೆ ವ್ಯಾಗನ್‌ಆರ್ ಆಯ್ಕೆಯಾಗಬಹುದು. ಹೆಚ್ಚಿನ ಫೀಚರ್‌ಗಳು ಮತ್ತು ಉತ್ತಮ ಡ್ರೈವಿಂಗ್ ಅನುಭವಕ್ಕೆ ಆದ್ಯತೆ ನೀಡುವವರು ಡಿಜೈರ್ ಅಥವಾ ಸ್ವಿಫ್ಟ್ ಮಾದರಿಗಳನ್ನ ಪರಿಗಣಿಸಬಹುದು.
ಒಟ್ನಲ್ಲಿ ₹10 ಲಕ್ಷಕ್ಕಿಂತ ಕಡಿಮೆ ಬೆಲೆಯ ಈ ಐದು ಸಿಎನ್‌ಜಿ ಕಾರುಗಳು ವಿಭಿನ್ನ ಬಜೆಟ್ ಮತ್ತು ಅಗತ್ಯಗಳಿಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡುತ್ತವೆ. ಇವುಗಳಲ್ಲಿ ಕೆಲವು ಮಾದರಿಗಳು ಪ್ರತಿ ಕೆಜಿ ಸಿಎನ್‌ಜಿಗೆ 34 ಕಿ.ಮೀ.ಗಿಂತಲೂ ಹೆಚ್ಚಿನ ಮೈಲೇಜ್ ನೀಡುತ್ತವೆ ಎಂಬುದು ವಿಶೇಷ.