SOCIAL MEDIA

Newsletter

PARTNER SITES
Select Language Select State

ಸಾಹಸಿ ಬೈಕ್ ಪ್ರಿಯರಿಗೆ ರಾಯಲ್ ಎನ್‌ಫೀಲ್ಡ್ ಭರ್ಜರಿ ಗಿಫ್ಟ್; 750 CC ಹಿಮಾಲಯನ್ ಅನಾವರಣ, ಬೆಲೆ ಎಷ್ಟು?

ಸಾಹಸಿ ಬೈಕ್ ಪ್ರಿಯರಿಗಾಗಿ ರಾಯಲ್ ಎನ್‌ಫೀಲ್ಡ್ ಹೊಸ ಹಿಮಾಲಯನ್ 750 ಬೈಕ್ ಅನಾವರಣಗೊಳಿಸಿದೆ. 750 ಸಿಸಿ ಪ್ಯಾರಲಲ್ ಟ್ವಿನ್ ಎಂಜಿನ್ ಹೊಂದಿರುವ ಈ ಬೈಕ್ 55 ಎಚ್‌ಪಿ ಶಕ್ತಿ ಮತ್ತು 60 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಕ್ರೂಸ್ ಕಂಟ್ರೋಲ್, ಸುಧಾರಿತ ಸಸ್ಪೆನ್ಷನ್, ಟ್ಯೂಬ್‌ಲೆಸ್ ಸ್ಪೋಕ್ ವೀಲ್‌ಗಳು ಸೇರಿದಂತೆ ಹಲವು ಫೀಚರ್ಸ್ ಇದರಲ್ಲಿವೆ. ಭಾರತದಲ್ಲಿ 2026ರ ನವೆಂಬರ್ ಕೊನೆಯ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಅಂದಾಜು ಬೆಲೆ ₹4.5 ಲಕ್ಷದಿಂದ ₹5 ಲಕ್ಷ ಇರಬಹುದು.

Written By Puttaraj K Alur
Published: Nov 05, 2026, 20:11 IST | Updated: Nov 05, 2026, 20:31 IST
Image Credit: Royal Enfield Himalayan 750
Join

Royal Enfield Himalayan 750: ಸಾಹಸಮಯ ಬೈಕ್ ಸವಾರಿಯನ್ನ ಇಷ್ಟಪಡುವವರಿಗೆ ರಾಯಲ್ ಎನ್‌ಫೀಲ್ಡ್ ಭರ್ಜರಿ ಸಿಹಿ ಸುದ್ದಿ ನೀಡಿದೆ. ತನ್ನ ಬಹುನಿರೀಕ್ಷಿತ ಹಿಮಾಲಯನ್ 750 ಬೈಕ್ ಅನ್ನ ಕಂಪನಿ ಅಧಿಕೃತವಾಗಿ ಅನಾವರಣಗೊಳಿಸಿದೆ. ಶಕ್ತಿಶಾಲಿ 750 ಸಿಸಿ ಪ್ಯಾರಲಲ್ ಟ್ವಿನ್ ಎಂಜಿನ್, ಕ್ರೂಸ್ ಕಂಟ್ರೋಲ್ ಸೇರಿದಂತೆ ಹಲವು ಸುಧಾರಿತ ವೈಶಿಷ್ಟ್ಯಗಳೊಂದಿಗೆ ಹೊಸ ಬೈಕ್ ಗಮನ ಸೆಳೆಯುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ಹಿಮಾಲಯನ್ 450ಗೆ ಹೋಲಿಸಿದರೆ ಹೊಸ ಮಾದರಿಯಲ್ಲಿ ಎಂಜಿನ್ ಸಾಮರ್ಥ್ಯ, ಗಾತ್ರ ಹಾಗೂ ಫೀಚರ್ಸ್‌ಗಳಲ್ಲಿ ಸಾಕಷ್ಟು ಬದಲಾವಣೆಗಳನ್ನ ಮಾಡಲಾಗಿದೆ.

ಹಿಮಾಲಯನ್ 750ಯನ್ನ ದೂರದ ಪ್ರಯಾಣ, ಹೆದ್ದಾರಿ ಸವಾರಿ ಮತ್ತು ಸಾಹಸಮಯ ಪ್ರವಾಸಗಳನ್ನ ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಕಂಪನಿಯು ಇದನ್ನ ತನ್ನ ಸ್ಟಂಟ್ ರೇಂಜ್ ಮಾದರಿಯಾಗಿ ಪರಿಚಯಿಸಿದೆ ಎಂದು ವರದಿಯಾಗಿದೆ. ವಿಶೇಷವಾಗಿ ಉದ್ದನೆಯ ಪ್ರಯಾಣದಲ್ಲಿ ಆರಾಮದಾಯಕ ಸವಾರಿ ಬಯಸುವವರಿಗೆ ಅನುಕೂಲವಾಗುವಂತೆ ಹಲವು ವೈಶಿಷ್ಟ್ಯಗಳನ್ನ ಅಳವಡಿಸಲಾಗಿದೆ.

ಪ್ರೀಮಿಯಂ ಲುಕ್‌ನಲ್ಲಿ ಹೊಸ ಹಿಮಾಲಯನ್ 750

ಹೊಸ ಹಿಮಾಲಯನ್ 750 ಬೈಕ್ ವಿನ್ಯಾಸದ ವಿಚಾರದಲ್ಲಿಯೂ ಗಮನ ಸೆಳೆಯುತ್ತದೆ. ಹಿಂದಿನ ಮಾದರಿಗೆ ಹೋಲಿಸಿದರೆ ಹೆಚ್ಚು ಪ್ರೀಮಿಯಂ ನೋಟ ನೀಡುವಂತೆ ವಿನ್ಯಾಸ ರೂಪಿಸಲಾಗಿದೆ. ದೊಡ್ಡ ಇಂಧನ ಟ್ಯಾಂಕ್ ಮತ್ತು ಎತ್ತರದ ಸೀಟ್ ಇದರ ಪ್ರಮುಖ ವಿನ್ಯಾಸ ವೈಶಿಷ್ಟ್ಯಗಳಾಗಿವೆ. ಬೈಕ್‌ನ ಮುಂಭಾಗವು ಈಗಿನ ಹಿಮಾಲಯನ್ ಮಾದರಿಯ ಸುಧಾರಿತ ರೂಪದಂತೆ ಕಾಣುತ್ತದೆ. ಹಿಂಭಾಗದ ವಿನ್ಯಾಸದಲ್ಲಿ ಹಿಮಾಲಯನ್ 450ರ ಕೆಲವು ಅಂಶಗಳನ್ನ ಉಳಿಸಿಕೊಳ್ಳಲಾಗಿದೆ. ಟೈಲ್ ಲ್ಯಾಂಪ್‌ಗಳನ್ನ ಟರ್ನ್ ಇಂಡಿಕೇಟರ್‌ಗಳಲ್ಲಿಯೇ ಸಂಯೋಜಿಸಿರುವುದು ಇದರ ಮತ್ತೊಂದು ವಿಶೇಷತೆ. ಜಾಗತಿಕ ಮಾರುಕಟ್ಟೆಯನ್ನ ಗಮನದಲ್ಲಿಟ್ಟುಕೊಂಡು ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಗಳಲ್ಲಿಯೂ ಈ ಬೈಕ್ ಲಭ್ಯವಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

750 ಸಿಸಿ ಪ್ಯಾರಲಲ್ ಟ್ವಿನ್ ಎಂಜಿನ್ ಶಕ್ತಿ

ಹಿಮಾಲಯನ್ 750ರ ಪ್ರಮುಖ ಆಕರ್ಷಣೆ ಅದರ ಹೊಸ ಎಂಜಿನ್. 750 ಸಿಸಿ ಪ್ಯಾರಲಲ್ ಟ್ವಿನ್ ಎಂಜಿನ್ ಹೊಂದಿರುವ ಈ ಬೈಕ್ ಅವಳಿ ಸಿಲಿಂಡರ್ ಪ್ಲಾಟ್‌ಫಾರ್ಮ್ ಆಧರಿಸಿದೆ. ಎಂಜಿನ್‌ಗೆ ಆರು ವೇಗದ ಗೇರ್‌ಬಾಕ್ಸ್ ಜೋಡಿಸಲಾಗಿದೆ. ಈ ಎಂಜಿನ್ ಗರಿಷ್ಠ 55 ಎಚ್‌ಪಿ ಶಕ್ತಿ ಮತ್ತು 60 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹೆಚ್ಚಿನ ಸಾಮರ್ಥ್ಯದ ಎಂಜಿನ್ ಹೊಂದಿರುವುದರಿಂದ ಹೆದ್ದಾರಿ ಪ್ರಯಾಣ ಹಾಗೂ ದೂರದ ಸವಾರಿಗೆ ಅನುಕೂಲವಾಗುವಂತೆ ಬೈಕ್ ರೂಪಿಸಲಾಗಿದೆ. ಇದರೊಂದಿಗೆ ಕ್ರೂಸ್ ಕಂಟ್ರೋಲ್‌ನಂತಹ ಆಧುನಿಕ ಫೀಚರ್‌ಗಳನ್ನೂ ನೀಡಲಾಗಿದೆ.

ಒರಟು ರಸ್ತೆಗಳಲ್ಲೂ ಸುಲಭ ಸವಾರಿಗೆ ವ್ಯವಸ್ಥೆ

ಹಿಮಾಲಯನ್ 750ಯನ್ನ ವಿವಿಧ ರೀತಿಯ ರಸ್ತೆಗಳಲ್ಲಿ ಪ್ರಯಾಣಿಸಲು ಅನುಕೂಲವಾಗುವಂತೆ ಸಿದ್ಧಪಡಿಸಲಾಗಿದೆ. ಬೈಕ್‌ನ ಮುಂಭಾಗ ಮತ್ತು ಹಿಂಭಾಗ ಎರಡರಲ್ಲೂ ದೀರ್ಘ ಪ್ರಯಾಣಕ್ಕೆ ಸೂಕ್ತವಾದ ಸಸ್ಪೆನ್ಷನ್ ವ್ಯವಸ್ಥೆ ಅಳವಡಿಸಲಾಗಿದೆ. ಮುಂಭಾಗದಲ್ಲಿ ಅಪ್‌ಸೈಡ್ ಡೌನ್ ಫೋರ್ಕ್‌ಗಳನ್ನ ನೀಡಲಾಗಿದ್ದು, ರಿಬೌಂಡ್ ಮತ್ತು ಕಂಪ್ರೆಷನ್ ಹೊಂದಾಣಿಕೆಯ ಸೌಲಭ್ಯವಿದೆ.

ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆನ್ಷನ್ ವ್ಯವಸ್ಥೆ ಇದ್ದು, ಪ್ರಿಲೋಡ್ ಸೆಟ್ಟಿಂಗ್‌ಗಳನ್ನ ಸರಿಹೊಂದಿಸಬಹುದಾಗಿದೆ. ಇದರ ಜೊತೆಗೆ ಟ್ಯೂಬ್‌ಲೆಸ್ ಸ್ಪೋಕ್ ವೀಲ್‌ಗಳು ಮತ್ತು ಮುಂಭಾಗದಲ್ಲಿ ಡ್ಯುಯಲ್ ಡಿಸ್ಕ್ ಬ್ರೇಕ್‌ಗಳನ್ನ ಅಳವಡಿಸಲಾಗಿದೆ. ಪ್ರವಾಸದ ವೇಳೆ ವಿವಿಧ ಭೂಪ್ರದೇಶಗಳಲ್ಲಿ ಬೈಕ್ ಚಲಾಯಿಸಲು ಅನುಕೂಲವಾಗುವಂತೆ ಈ ವ್ಯವಸ್ಥೆಗಳನ್ನ ರೂಪಿಸಲಾಗಿದೆ.

ದೀರ್ಘ ಪ್ರಯಾಣಕ್ಕೆ ವಿಶೇಷ ಫೀಚರ್ಸ್

ಸುದೀರ್ಘ ಪ್ರಯಾಣದ ಸಂದರ್ಭದಲ್ಲಿ ಸವಾರರಿಗೆ ಅನುಕೂಲವಾಗುವಂತೆ ವಿಂಡ್‌ಸ್ಕ್ರೀನ್ ವ್ಯವಸ್ಥೆ ನೀಡಲಾಗಿದೆ. ಗಾಳಿಯ ಹೊಡೆತದಿಂದ ರಕ್ಷಣೆ ಪಡೆಯಲು ಇದು ಸಹಕಾರಿಯಾಗಲಿದೆ. ಭಾರವಾದ ಲಗೇಜ್ ಅಥವಾ ಹಿಂಬದಿ ಸವಾರರನ್ನ ಕರೆದೊಯ್ಯುವ ಸಂದರ್ಭದಲ್ಲಿಯೂ ಸ್ಪಷ್ಟ ಗೋಚರತೆ ದೊರೆಯುವಂತೆ ಹೊಂದಾಣಿಕೆ ಮಾಡಬಹುದಾದ ಹೆಡ್‌ಲೈಟ್ ವ್ಯವಸ್ಥೆ ಇದೆ. ಬೈಕ್‌ನ ಸೀಟ್ ಎತ್ತರ 830ರಿಂದ 850 ಮಿಲಿಮೀಟರ್‌ಗಳ ನಡುವೆ ಇರಲಿದೆ. ಗ್ರೌಂಡ್ ಕ್ಲಿಯರೆನ್ಸ್ 220 ಮಿಲಿಮೀಟರ್‌ಗಿಂತ ಹೆಚ್ಚಿದೆ. ಈ ವಿನ್ಯಾಸವು ವಿವಿಧ ರೀತಿಯ ಭೂಪ್ರದೇಶಗಳಲ್ಲಿ ಸಂಚರಿಸಲು ಅನುಕೂಲವಾಗಲಿದೆ ಎಂದು ಕಂಪನಿ ತಿಳಿಸಿದೆ.

ಭಾರತದಲ್ಲಿ ಬಿಡುಗಡೆ ಯಾವಾಗ? ಬೆಲೆ ಎಷ್ಟಿರಬಹುದು?

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 750 ಬೈಕ್ ಭಾರತದಲ್ಲಿ 2026ರ ನವೆಂಬರ್ ಕೊನೆಯ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಆದರೆ ಕಂಪನಿಯು ಬಿಡುಗಡೆ ದಿನಾಂಕ ಮತ್ತು ಅಧಿಕೃತ ಬೆಲೆಯನ್ನು ಇನ್ನೂ ಖಚಿತಪಡಿಸಿಲ್ಲ. ಸದ್ಯದ ಅಂದಾಜಿನ ಪ್ರಕಾರ, ಈ ಬೈಕ್‌ನ ಬೆಲೆ ₹4.5 ಲಕ್ಷದಿಂದ ₹5 ಲಕ್ಷದವರೆಗೆ ಇರಬಹುದು ಎಂದು ನಿರೀಕ್ಷಿಸಲಾಗಿದೆ. ಅಧಿಕೃತ ಬೆಲೆ ಪ್ರಕಟವಾದ ಬಳಿಕವಷ್ಟೇ ನಿಖರವಾದ ಮೊತ್ತ ತಿಳಿಯಲಿದೆ.

ಒಟ್ನಲ್ಲಿ 750 ಸಿಸಿ ಪ್ಯಾರಲಲ್ ಟ್ವಿನ್ ಎಂಜಿನ್, 55 ಎಚ್‌ಪಿ ಶಕ್ತಿ, ಕ್ರೂಸ್ ಕಂಟ್ರೋಲ್, ಸುಧಾರಿತ ಸಸ್ಪೆನ್ಷನ್ ಮತ್ತು ಪ್ರವಾಸಕ್ಕೆ ಅನುಕೂಲವಾಗುವ ಫೀಚರ್ಸ್‌ಗಳೊಂದಿಗೆ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 750 ಹೊಸ ಬೈಕ್ ಮಾರುಕಟ್ಟೆಗೆ ಪ್ರವೇಶಿಸಲು ಸಜ್ಜಾಗಿದೆ. ಸಾಹಸಮಯ ಪ್ರಯಾಣವನ್ನ ಇಷ್ಟಪಡುವ ಬೈಕ್ ಪ್ರಿಯರ ಗಮನ ಸೆಳೆಯುವ ನಿರೀಕ್ಷೆಯಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES