OPPO K15s and K15x Launched in China: ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದೊಡ್ಡ ಬ್ಯಾಟರಿ ಸಾಮರ್ಥ್ಯದ ಫೋನ್‌ಗಳಿಗೆ ಬೇಡಿಕೆ ಹೆಚ್ಚುತ್ತಿರುವ ನಡುವೆಯೇ OPPO ತನ್ನ K15 ಸರಣಿಗೆ ಎರಡು ಹೊಸ ಮಾದರಿಗಳನ್ನ ಸೇರ್ಪಡೆ ಮಾಡಿದೆ. ಕಂಪನಿಯು ಚೀನಾದಲ್ಲಿ OPPO K15s ಮತ್ತು OPPO K15x ಸ್ಮಾರ್ಟ್‌ಫೋನ್‌ಗಳನ್ನ ಬಿಡುಗಡೆ ಮಾಡಿದ್ದು, ಎರಡೂ ಫೋನ್‌ಗಳಲ್ಲಿ ದೊಡ್ಡ ಬ್ಯಾಟರಿ, 120Hz ಡಿಸ್ಪ್ಲೇ ಮತ್ತು ವೇಗದ ಚಾರ್ಜಿಂಗ್‌ಗೆ ಆದ್ಯತೆ ನೀಡಲಾಗಿದೆ. ಈ ಪೈಕಿ K15s 8,000mAh ಬ್ಯಾಟರಿಯೊಂದಿಗೆ ಬಂದರೆ, K15x 6,500mAh ಬ್ಯಾಟರಿ ಹೊಂದಿದೆ.
OPPO K15s: 8,000mAh ಬ್ಯಾಟರಿಯ ವಿಶೇಷತೆ
ಹೊಸ ಸರಣಿಯಲ್ಲಿನ ಹೆಚ್ಚು ಪ್ರೀಮಿಯಂ ಮಾದರಿ OPPO K15s ಆಗಿದೆ. ಈ ಫೋನ್‌ನಲ್ಲಿ 8,000mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ. ಜೊತೆಗೆ 45W SuperVOOC ವೇಗದ ಚಾರ್ಜಿಂಗ್ ಸೌಲಭ್ಯವಿದೆ. OPPO ಪ್ರಕಾರ, ಬ್ಯಾಟರಿ 2,000ಕ್ಕೂ ಹೆಚ್ಚು ಚಾರ್ಜ್ ಸೈಕಲ್‌ಗಳನ್ನ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದು, ಸಿಮ್ಯುಲೇಟೆಡ್ ಬಳಕೆಯ ಆಧಾರದ ಮೇಲೆ ಸುಮಾರು ಏಳು ವರ್ಷಗಳ ಬಳಿಕವೂ ಕನಿಷ್ಠ 80% ಸಾಮರ್ಥ್ಯ ಉಳಿಸಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಡಿಸ್ಪ್ಲೇ ವಿಚಾರದಲ್ಲಿ K15s ಗಮನ ಸೆಳೆಯುತ್ತದೆ. ಇದರಲ್ಲಿ 6.57 ಇಂಚಿನ Full HD+ AMOLED ಡಿಸ್ಪ್ಲೇ ಇದ್ದು, 120Hz ರಿಫ್ರೆಶ್ ರೇಟ್ ನೀಡಲಾಗಿದೆ. 2,372×1,080 ಪಿಕ್ಸೆಲ್ ರೆಸಲ್ಯೂಷನ್ ಹೊಂದಿರುವ ಸ್ಕ್ರೀನ್ 1,400 ನಿಟ್ಸ್‌ವರೆಗೆ ಗರಿಷ್ಠ ಬ್ರೈಟ್‌ನೆಸ್ ನೀಡುತ್ತದೆ.
ಪ್ರೊಸೆಸರ್ ಮತ್ತು ಕ್ಯಾಮೆರಾ
OPPO K15sನಲ್ಲಿ MediaTek Dimensity 6360 Max ಚಿಪ್‌ಸೆಟ್ ಅಳವಡಿಸಲಾಗಿದೆ. ಇದು 6GB ಅಥವಾ 8GB LPDDR4X RAM ಮತ್ತು ಗರಿಷ್ಠ 256GB UFS 2.2 ಸ್ಟೋರೇಜ್ ಆಯ್ಕೆಯೊಂದಿಗೆ ಬರುತ್ತದೆ. ಕ್ಯಾಮೆರಾ ವಿಭಾಗದಲ್ಲಿ 50MP ಆಟೋಫೋಕಸ್ ಮುಖ್ಯ ಕ್ಯಾಮೆರಾ ಮತ್ತು 8MP ಫ್ರಂಟ್ ಕ್ಯಾಮೆರಾ ನೀಡಲಾಗಿದೆ. 1080p ವಿಡಿಯೋ ರೆಕಾರ್ಡಿಂಗ್‌ಗೆ ಸಹ ಫೋನ್ ಬೆಂಬಲ ನೀಡುತ್ತದೆ. ಇನ್ನು ಬಾಳಿಕೆ ದೃಷ್ಟಿಯಿಂದಲೂ K15sಗೆ ಹೆಚ್ಚಿನ ಒತ್ತು ನೀಡಲಾಗಿದೆ. IP69K, IP69, IP68 ಮತ್ತು IP66 ಸೇರಿದಂತೆ ಹಲವು ರಕ್ಷಣಾ ಪ್ರಮಾಣೀಕರಣಗಳನ್ನ ಹೊಂದಿದೆ ಎಂದು ವರದಿಯಾಗಿದೆ. ಜೊತೆಗೆ 15 ಮಿಲಿಟರಿ-ಗ್ರೇಡ್ ಪರಿಸರ ಪರೀಕ್ಷೆಗಳನ್ನ ಎದುರಿಸಿದೆ ಎಂದು ಕಂಪನಿ ಹೇಳಿದೆ.
OPPO K15x: ಕಡಿಮೆ ಬೆಲೆಯಲ್ಲಿ ದೊಡ್ಡ ಬ್ಯಾಟರಿ
ಇನ್ನೊಂದೆಡೆ, OPPO K15x ಅನ್ನು ಹೆಚ್ಚು ಕೈಗೆಟುಕುವ ಮಾದರಿಯಾಗಿ ಪರಿಚಯಿಸಲಾಗಿದೆ. ಇದರಲ್ಲಿ 6,500mAh ಬ್ಯಾಟರಿ ಮತ್ತು 45W SuperVOOC ಚಾರ್ಜಿಂಗ್ ಸೌಲಭ್ಯವಿದೆ. K15xನಲ್ಲಿ 6.75 ಇಂಚಿನ HD+ LCD ಡಿಸ್ಪ್ಲೇ ಇದ್ದು, 120Hz ರಿಫ್ರೆಶ್ ರೇಟ್ ಬೆಂಬಲಿಸುತ್ತದೆ. ಫೋನ್ MediaTek Dimensity 6300 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತದೆ. 6GB RAM ಜೊತೆಗೆ 128GB ಮತ್ತು 256GB ಸ್ಟೋರೇಜ್ ಆಯ್ಕೆಗಳು ಲಭ್ಯವಿವೆ. ಕ್ಯಾಮೆರಾ ವಿಭಾಗದಲ್ಲಿ 13MP ಆಟೋಫೋಕಸ್ ಹಿಂಬದಿಯ ಕ್ಯಾಮೆರಾ ಹಾಗೂ 5MP ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. K15xಗೆ IP64 ರಕ್ಷಣೆಯ ಜೊತೆಗೆ ಡೈಮಂಡ್ ಆಂಟಿ-ಡ್ರಾಪ್ ಆರ್ಕಿಟೆಕ್ಚರ್ ನೀಡಲಾಗಿದೆ.
ಬೆಲೆ ಎಷ್ಟು?
ಚೀನಾದಲ್ಲಿ OPPO K15s 6GB+128GB ಮಾದರಿಯ ಬೆಲೆ 1,699 ಯುವಾನ್ ಆಗಿದ್ದು, 8GB+256GB ಮಾದರಿಗೆ 1,999 ಯುವಾನ್ ಬೆಲೆ ನಿಗದಿಪಡಿಸಲಾಗಿದೆ. ಮತ್ತೊಂದೆಡೆ, OPPO K15x 6GB+128GB ಮಾದರಿ 1,399 ಯುವಾನ್ ಮತ್ತು 6GB+256GB ಮಾದರಿ 1,699 ಯುವಾನ್ ಬೆಲೆಗೆ ಬಿಡುಗಡೆಯಾಗಿದೆ. ಪ್ರಸ್ತುತ ಈ ಎರಡೂ ಫೋನ್‌ಗಳ ಬಿಡುಗಡೆ ಚೀನಾಕ್ಕೆ ಸೀಮಿತವಾಗಿದೆ. ಭಾರತ ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಒಟ್ನಲ್ಲಿ OPPO K15s ತನ್ನ 8,000mAh ಬ್ಯಾಟರಿ, 120Hz AMOLED ಡಿಸ್ಪ್ಲೇ ಮತ್ತು ಹೆಚ್ಚಿನ ಬಾಳಿಕೆ ಸಾಮರ್ಥ್ಯದಿಂದ ಗಮನ ಸೆಳೆಯುತ್ತಿದ್ದರೆ, K15x ಕಡಿಮೆ ಬೆಲೆಯ ವಿಭಾಗದಲ್ಲಿ 6,500mAh ಬ್ಯಾಟರಿ ಮತ್ತು 120Hz ಡಿಸ್ಪ್ಲೇ ಮೂಲಕ ಗಮನ ಸೆಳೆಯುತ್ತಿದೆ. ಎರಡೂ ಮಾದರಿಗಳು ಮುಖ್ಯವಾಗಿ ದೀರ್ಘ ಬ್ಯಾಟರಿ ಬ್ಯಾಕಪ್ ಬಯಸುವ ಬಳಕೆದಾರರನ್ನ ಗುರಿಯಾಗಿಸಿಕೊಂಡಿವೆ.