ಉದ್ಯೋಗಿಗಳೇ ಗಮನಿಸಿ.. ನೈಟ್ ಶಿಪ್ಟ್ ಮಾಡ್ತೀರಾ.?. ಹಾಗಿದ್ರೆ ಮಧುಮೇಹದ ಬಗ್ಗೆ ಇರಲಿ ಎಚ್ಚರ
ಇತ್ತೀಚಿನ ದಿನಗಳಲ್ಲಿ ಐಟಿ, ಬಿಪಿಒ ಮತ್ತು ಆಸ್ಪತ್ರೆಗಳಂತಹ ವಲಯಗಳಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದು ಅನಿವಾರ್ಯವಾಗಿಬಿಟ್ಟಿದೆ. ಆದರೆ, ಹಗಲಿನ ಬದಲಿಗೆ ರಾತ್ರಿ ವೇಳೆ ಎಚ್ಚರಿದ್ದು ಕೆಲಸ ಮಾಡುವುದು ಹಲವಾರು ಅಡ್ಡಪರಿಣಾಮಗಳನ್ನು ಉಂಟು ಮಾಡುತ್ತದೆ.. ಈ ಪೈಕಿ ಮಧುಮೇಹಕ್ಕೂ ಕಾರಣವಾಗಬಹುದು.. ಹೇಗೆ ಅಂತೀರಾ..? ಹೆಚ್ಚಿನ ಮಾಹಿತಿ ಇಲ್ಲಿದೆ..
ಬೆಂಗಳೂರು: ಐಟಿ, ಬಿಪಿಒ ಮತ್ತು ಆಸ್ಪತ್ರೆಗಳಂತಹ ವಲಯಗಳಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ, ರಾತ್ರಿಯ ನಿದ್ರೆಯನ್ನು ವಂಚಿಸಿ ಕೆಲಸ ಮಾಡುವುದು ಆರೋಗ್ಯದ ಮೇಲೆ ತೀವ್ರವಾದ ದುಷ್ಪರಿಣಾಮ ಬೀರುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ವಿಶೇಷವಾಗಿ ಇದು ಇನ್ಸುಲಿನ್ ಪ್ರತಿರೋಧವನ್ನು ಉಂಟುಮಾಡಿ, ಟೈಪ್ 2 ಮಧುಮೇಹದ ಅಪಾಯವನ್ನು ಗಣನೀಯವಾಗಿ ಹೆಚ್ಚಿಸುತ್ತದೆ ಎಂದು ವೈದ್ಯಕೀಯ ಅಧ್ಯಯನಗಳು ತಿಳಿಸಿವೆ.
ಜೈವಿಕ ಗಡಿಯಾರದ ಅಸ್ತವ್ಯಸ್ತತೆ
ಮಾನವನ ದೇಹವು ಹಗಲಿನಲ್ಲಿ ಸಕ್ರಿಯವಾಗಿರಲು ಮತ್ತು ರಾತ್ರಿ ವೇಳೆ ವಿಶ್ರಾಂತಿ ಪಡೆಯಲು ನೈಸರ್ಗಿಕವಾಗಿ ವಿನ್ಯಾಸಗೊಳಿಸಲ್ಪಟ್ಟಿದೆ. ಇದನ್ನು ದೇಹದ ಜೈವಿಕ ಗಡಿಯಾರ ಎನ್ನಲಾಗುತ್ತದೆ. ರಾತ್ರಿ ವೇಳೆ ಎಚ್ಚರವಾಗಿರುವುದರಿಂದ ಈ ನೈಸರ್ಗಿಕ ಚಕ್ರವು ಬದಲಾಗಿ, ದೇಹದಲ್ಲಿ ರಾಸಾಯನಿಕ ಅಸಮತೋಲನ ಉಂಟಾಗುತ್ತದೆ.
ಮಧುಮೇಹಕ್ಕೆ ಕಾರಣಗಳು
ರಾತ್ರಿ ನಿದ್ರೆ ಇಲ್ಲದಿರುವುದು ದೇಹದ ಜೀವಕೋಶಗಳನ್ನು ಇನ್ಸುಲಿನ್‌ಗೆ ನಿರೋಧಕವಾಗಿಸುತ್ತದೆ. ಮೇದೋಜ್ಜೀರಕ ಗ್ರಂಥಿಯಿಂದ ಸ್ರವಿಸುವ ಇನ್ಸುಲಿನ್ ಹಾರ್ಮೋನ್ ಮಟ್ಟದಲ್ಲಿ ಅಸಮತೋಲನ ಉಂಟಾಗಿ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ರಾತ್ರಿ ಎಚ್ಚರವಾಗಿರುವುದರಿಂದ ಕಾರ್ಟಿಸೋಲ್ ಎಂಬ ಒತ್ತಡದ ಹಾರ್ಮೋನ್ ಅಧಿಕವಾಗಿ ಬಿಡುಗಡೆಯಾಗುತ್ತದೆ, ಇದು ನೇರವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಯಕೃತ್ತು ರಾತ್ರಿಯಲ್ಲಿ ಗ್ಲೂಕೋಸ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಆದರೆ ರಾತ್ರಿ ಕೆಲಸ ಮಾಡುವಾಗ ದೇಹಕ್ಕೆ ಶಕ್ತಿಯ ಅಗತ್ಯವಿರುವುದರಿಂದ ಯಕೃತ್ತು ನಿರಂತರವಾಗಿ ಗ್ಲೂಕೋಸ್ ಬಿಡುಗಡೆ ಮಾಡುತ್ತಿರುತ್ತದೆ. ಮಧ್ಯರಾತ್ರಿ ಹಸಿವಾದಾಗ ಹೆಚ್ಚಿನವರು ಫಾಸ್ಟ್ ಫುಡ್ ಅಥವಾ ಅಧಿಕ ಕ್ಯಾಲೋರಿ ಇರುವ ತಿಂಡಿಗಳನ್ನು ಸೇವಿಸುವುದು ಮಧುಮೇಹದ ಅಪಾಯವನ್ನು ಹಲವು ಪಟ್ಟು ಹೆಚ್ಚಿಸುತ್ತದೆ. ಅಲ್ಲದೆ, ನಿದ್ರಾಹೀನತೆಯು ಬೊಜ್ಜಿಗೆ ಕಾರಣವಾಗುತ್ತದೆ.
ತಜ್ಞರ ಸಲಹೆ ಮತ್ತು ಮುನ್ನೆಚ್ಚರಿಕೆಗಳು
ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದು ಅನಿವಾರ್ಯವಿರುವವರು ತಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಪಾಳ ಮುಗಿಸಿ ಮನೆಗೆ ಬಂದ ಕೂಡಲೇ ಕತ್ತಲೆ ಮತ್ತು ಶಾಂತವಾದ ಕೋಣೆಯಲ್ಲಿ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ಗುಣಮಟ್ಟದ ನಿದ್ರೆ ಮಾಡಬೇಕು. ಮಧ್ಯರಾತ್ರಿಯಲ್ಲಿ ಹಸಿವಾದರೆ ಕರಿದ ತಿಂಡಿಗಳನ್ನು ಬದಿಗಿಟ್ಟು, ಹಣ್ಣುಗಳು ಅಥವಾ ಸುಲಭವಾಗಿ ಜೀರ್ಣವಾಗುವ ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ನೆರವಾಗುತ್ತದೆ.