Arthritis Symptoms: ಬೆಳಗ್ಗೆ ನಿದ್ರೆಯಿಂದ ಎದ್ದ ತಕ್ಷಣ ಕೈಕಾಲುಗಳಲ್ಲಿ ಬಿಗಿತ ಕಾಣಿಸಿಕೊಳ್ಳುತ್ತಿದೆಯೇ? ಬೆರಳುಗಳನ್ನ ಬಗ್ಗಿಸಲು ಕಷ್ಟವಾಗುತ್ತಿದೆಯೇ? ನಡೆಯುವಾಗ ಅಥವಾ ಮೆಟ್ಟಿಲುಗಳನ್ನ ಹತ್ತುವಾಗ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದೆಯೇ? ಹಾಗಿದ್ದರೆ ಈ ಲಕ್ಷಣಗಳನ್ನ ನಿರ್ಲಕ್ಷಿಸುವುದು ಸೂಕ್ತವಲ್ಲ. ಇವು ಸಂಧಿವಾತದ ಆರಂಭಿಕ ಎಚ್ಚರಿಕೆಯ ಸಂಕೇತಗಳಾಗಿರಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.
ಸಾಮಾನ್ಯವಾಗಿ ಬೆಳಗ್ಗೆ ಎದ್ದಾಗ ಕೈಕಾಲುಗಳು ಗಟ್ಟಿಯಾದಂತೆ ಅನಿಸುವುದು, ಬೆರಳುಗಳನ್ನ ಸರಿಯಾಗಿ ಚಲಿಸಲು ಸಾಧ್ಯವಾಗದಿರುವುದು ಅಥವಾ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುವುದನ್ನ ಹಲವರು ವಯಸ್ಸಾಗುತ್ತಿರುವುದರ ಪರಿಣಾಮ ಎಂದು ಭಾವಿಸುತ್ತಾರೆ. ಕೆಲವರು ಇದನ್ನ ಹಿಂದಿನ ದಿನದ ಆಯಾಸ ಅಥವಾ ದೇಹದಲ್ಲಿನ ಸಾಮಾನ್ಯ ದೌರ್ಬಲ್ಯವೆಂದು ನಿರ್ಲಕ್ಷಿಸುತ್ತಾರೆ. ಆದರೆ ಇಂತಹ ಸಮಸ್ಯೆಗಳು ನಿರಂತರವಾಗಿ ಕಾಣಿಸಿಕೊಂಡರೆ ಕೀಲುಗಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಯ ಲಕ್ಷಣವಾಗಿರುವ ಸಾಧ್ಯತೆಯಿದೆ. ವಿಶೇಷವಾಗಿ ಬೆಳಗ್ಗೆ ಎದ್ದ ನಂತರ ಕಾಣಿಸಿಕೊಳ್ಳುವ ಕೀಲುಗಳ ಬಿಗಿತ, ಊತ ಮತ್ತು ನೋವಿನ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಈ ಲಕ್ಷಣಗಳು ಹಲವು ದಿನಗಳವರೆಗೆ ಮುಂದುವರಿದರೆ ವೈದ್ಯರನ್ನ ಸಂಪರ್ಕಿಸಿ ಸೂಕ್ತ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ.
ಸಂಧಿವಾತದಲ್ಲಿ ಹಲವು ವಿಧಗಳಿವೆ
ಸಂಧಿವಾತದಲ್ಲಿ ಹಲವು ವಿಧಗಳಿದ್ದು, ಅವುಗಳಲ್ಲಿ ರುಮಟಾಯ್ಡ್ ಸಂಧಿವಾತ ಮತ್ತು ಅಸ್ಥಿಸಂಧಿವಾತ ಪ್ರಮುಖವಾಗಿವೆ. ಈ ಎರಡೂ ಸಮಸ್ಯೆಗಳು ಕೀಲುಗಳ ಮೇಲೆ ಪರಿಣಾಮ ಬೀರುತ್ತವೆಯಾದರೂ, ಅವು ಉಂಟಾಗುವ ವಿಧಾನ ಮತ್ತು ಕಾಣಿಸಿಕೊಳ್ಳುವ ಲಕ್ಷಣಗಳಲ್ಲಿ ವ್ಯತ್ಯಾಸವಿದೆ.
ರುಮಟಾಯ್ಡ್ ಸಂಧಿವಾತ (Rheumatoid Arthritis)
ರುಮಟಾಯ್ಡ್ ಸಂಧಿವಾತವು ದೇಹದ ಪ್ರತಿರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಯಾಗಿದೆ. ಈ ಸ್ಥಿತಿಯಲ್ಲಿ ದೇಹದ ರೋಗನಿರೋಧಕ ವ್ಯವಸ್ಥೆಯೇ ತಪ್ಪಾಗಿ ತನ್ನದೇ ಕೀಲುಗಳ ಮೇಲೆ ದಾಳಿ ಮಾಡುತ್ತದೆ. ಇದರಿಂದ ಕೀಲುಗಳಲ್ಲಿ ಉರಿಯೂತ, ನೋವು ಮತ್ತು ಬಿಗಿತ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಯ ಪ್ರಮುಖ ಲಕ್ಷಣವೆಂದರೆ ಬೆಳಗ್ಗೆ ಎದ್ದ ನಂತರ ಕೀಲುಗಳಲ್ಲಿ ಕಾಣಿಸಿಕೊಳ್ಳುವ ಬಿಗಿತ. ಸಾಮಾನ್ಯವಾಗಿ ಈ ಬಿಗಿತವು 30 ನಿಮಿಷಗಳಿಗಿಂತ ಹೆಚ್ಚು ಕಾಲ ಮುಂದುವರಿಯಬಹುದು. ಕೈಬೆರಳುಗಳನ್ನ ಬಗ್ಗಿಸಲು ಅಥವಾ ಸಾಮಾನ್ಯ ಚಟುವಟಿಕೆಗಳನ್ನ ಮಾಡಲು ತೊಂದರೆಯಾಗಬಹುದು. ಬೆಳಗಿನ ಸಮಯದಲ್ಲಿ ಕಾಣಿಸಿಕೊಳ್ಳುವ ಇಂತಹ ನಿರಂತರ ಸಮಸ್ಯೆಗಳನ್ನ ಸಾಮಾನ್ಯ ಆಯಾಸವೆಂದು ಭಾವಿಸಿ ನಿರ್ಲಕ್ಷಿಸಬಾರದು.
ಅಸ್ಥಿಸಂಧಿವಾತ (Osteoarthritis)
ಅಸ್ಥಿಸಂಧಿವಾತದಲ್ಲಿ ಕೀಲುಗಳ ನಡುವೆ ಇರುವ ಕಾರ್ಟಿಲೆಜ್ ಅಥವಾ ಮೃದು ರಕ್ಷಣಾತ್ಮಕ ಪದರವು ಕ್ರಮೇಣ ಸವೆದುಹೋಗುತ್ತದೆ. ಇದರಿಂದ ಕೀಲುಗಳ ಚಲನೆಯ ಸಂದರ್ಭದಲ್ಲಿ ನೋವು ಉಂಟಾಗುತ್ತದೆ. ವಿಶೇಷವಾಗಿ ನಡೆಯುವಾಗ, ಮೆಟ್ಟಿಲುಗಳನ್ನ ಹತ್ತುವಾಗ ಮತ್ತು ವಸ್ತುಗಳನ್ನ ಎತ್ತುವಾಗ ನೋವು ಹೆಚ್ಚಾಗಬಹುದು. ಇದರ ಜೊತೆಗೆ ಕೀಲುಗಳಲ್ಲಿ ಊತ, ಉಷ್ಣತೆ ಮತ್ತು ಕೆಂಪು ಬಣ್ಣ ಕಾಣಿಸಿಕೊಳ್ಳಬಹುದು. ಬೆರಳುಗಳಿಂದ ವಸ್ತುಗಳನ್ನ ಗಟ್ಟಿಯಾಗಿ ಹಿಡಿದುಕೊಳ್ಳಲು ತೊಂದರೆಯಾಗುವುದು ಹಾಗೂ ಮೊಣಕಾಲು ನೋವು ಕಾಣಿಸಿಕೊಳ್ಳುವುದು ಕೂಡ ಅಸ್ಥಿಸಂಧಿವಾತದ ಲಕ್ಷಣಗಳಾಗಿರಬಹುದು.
ಸಂಧಿವಾತದ ಯಾವ ಲಕ್ಷಣಗಳನ್ನ ನಿರ್ಲಕ್ಷಿಸಬಾರದು?
ವೈದ್ಯರ ಪ್ರಕಾರ, ಕೆಲವು ಲಕ್ಷಣಗಳು ನಿರಂತರವಾಗಿ ಕಾಣಿಸಿಕೊಂಡರೆ ಅವುಗಳ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಅವುಗಳೆಂದರೆ:
- ಬೆಳಗ್ಗೆ ಎದ್ದ ನಂತರ ಕೈಕಾಲುಗಳಲ್ಲಿ ದೀರ್ಘಕಾಲ ಬಿಗಿತ ಕಾಣಿಸಿಕೊಳ್ಳುವುದು.
- ಕೈಬೆರಳುಗಳನ್ನ ಬಗ್ಗಿಸಲು ಅಥವಾ ಚಲಿಸಲು ತೊಂದರೆಯಾಗುವುದು.
- ಕೈ, ಕಾಲು ಮತ್ತು ಇತರ ಕೀಲುಗಳಲ್ಲಿ ಊತ ಕಾಣಿಸಿಕೊಳ್ಳುವುದು.
- ಕೀಲುಗಳಲ್ಲಿ ಕೆಂಪು ಬಣ್ಣ ಮತ್ತು ಉಷ್ಣತೆ ಕಂಡುಬರುವುದು.
- ನಡೆಯುವಾಗ ಅಥವಾ ಮೆಟ್ಟಿಲುಗಳನ್ನ ಹತ್ತುವಾಗ ನೋವು ಕಾಣಿಸಿಕೊಳ್ಳುವುದು.
- ಬೆರಳುಗಳಿಂದ ವಸ್ತುಗಳನ್ನ ಗಟ್ಟಿಯಾಗಿ ಹಿಡಿದುಕೊಳ್ಳಲು ಸಾಧ್ಯವಾಗದಿರುವುದು.
- ಎಚ್ಚರವಾದ ತಕ್ಷಣ ಕೀಲುಗಳಲ್ಲಿ ನೋವು ಮತ್ತು ಚಲನೆಯ ತೊಂದರೆ ಕಾಣಿಸಿಕೊಳ್ಳುವುದು.
ಈ ರೀತಿಯ ಸಮಸ್ಯೆಗಳು ಹಲವು ದಿನಗಳವರೆಗೆ ಮುಂದುವರಿದರೆ ಅಥವಾ ಕ್ರಮೇಣ ಹೆಚ್ಚಾಗುತ್ತಿದ್ದರೆ ವೈದ್ಯಕೀಯ ಸಲಹೆ ಪಡೆಯುವುದು ಮುಖ್ಯ.
ಸಂಧಿವಾತದ ಸಮಸ್ಯೆಯನ್ನ ನಿಯಂತ್ರಿಸುವುದು ಹೇಗೆ?
ಸಂಧಿವಾತದ ಲಕ್ಷಣಗಳು ಕಾಣಿಸಿಕೊಂಡಾಗ ಅವುಗಳನ್ನ ಸಾಮಾನ್ಯ ನೋವು ಎಂದು ಪರಿಗಣಿಸಿ ನಿರ್ಲಕ್ಷಿಸಬಾರದು ಎಂದು ವೈದ್ಯರು ಸಲಹೆ ನೀಡುತ್ತಾರೆ. ಸಮಸ್ಯೆ ಮುಂದುವರಿದರೆ ಅಥವಾ ಹದಗೆಡುತ್ತಿದ್ದರೆ ತಕ್ಷಣ ವೈದ್ಯರನ್ನ ಸಂಪರ್ಕಿಸಿ ಅಗತ್ಯ ಪರೀಕ್ಷೆಗಳನ್ನ ಮಾಡಿಸಿಕೊಳ್ಳಬೇಕು. ಇದರ ಜೊತೆಗೆ ಕೆಲವು ಜೀವನಶೈಲಿ ಕ್ರಮಗಳನ್ನ ಅನುಸರಿಸುವುದರಿಂದ ಕೀಲುಗಳ ಆರೋಗ್ಯವನ್ನ ಕಾಪಾಡಿಕೊಳ್ಳಲು ಸಹಾಯವಾಗಬಹುದು. ನಿಯಮಿತವಾಗಿ ಲಘು ವ್ಯಾಯಾಮ ಮಾಡುವುದು, ದೇಹದ ತೂಕವನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಮತ್ತು ಸಮತೋಲಿತ ಆಹಾರ ಸೇವಿಸುವುದು ಮುಖ್ಯವಾಗಿದೆ. ಕೀಲುಗಳ ಮೇಲೆ ಅತಿಯಾದ ಒತ್ತಡ ಬೀಳದಂತೆ ಎಚ್ಚರಿಕೆ ವಹಿಸುವುದೂ ಅಗತ್ಯ.
ಒಟ್ನಲ್ಲಿ ಬೆಳಗ್ಗೆ ಎದ್ದ ತಕ್ಷಣ ಕೈಕಾಲುಗಳಲ್ಲಿ ಬಿಗಿತ, ಕೀಲು ನೋವು, ಊತ ಅಥವಾ ಚಲನೆಗೆ ತೊಂದರೆ ಕಾಣಿಸಿಕೊಳ್ಳುತ್ತಿದ್ದರೆ ಅದನ್ನ ವಯಸ್ಸಾಗುವಿಕೆಯ ಸಾಮಾನ್ಯ ಪರಿಣಾಮವೆಂದು ನಿರ್ಲಕ್ಷಿಸಬಾರದು. ಇಂತಹ ಲಕ್ಷಣಗಳು ನಿರಂತರವಾಗಿದ್ದರೆ ವೈದ್ಯರನ್ನ ಸಂಪರ್ಕಿಸಿ ಸೂಕ್ತ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಆರಂಭಿಕ ಲಕ್ಷಣಗಳನ್ನ ಗುರುತಿಸಿ ಅಗತ್ಯ ವೈದ್ಯಕೀಯ ಸಲಹೆ ಪಡೆಯುವುದು ಕೀಲುಗಳ ಆರೋಗ್ಯದ ದೃಷ್ಟಿಯಿಂದ ಮುಖ್ಯವಾಗಿದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ತಜ್ಞ ಮೂಲಗಳ ಮಾಹಿತಿಯನ್ನ ಆಧರಿಸಿದೆ. ಇದನ್ನ Zee Kannada News ದೃಢಪಡಿಸುವುದಿಲ್ಲ. ಇಲ್ಲಿನ ಸಲಹೆಗಳನ್ನ ಪಾಲಿಸುವ ಮುನ್ನ ತಜ್ಞರ ಸಲಹೆ ಪಡೆಯುವುದು ಉತ್ತಮ.)