Keeway Hypevolt-R: ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಗೆ ಮತ್ತೊಂದು ಪ್ರೀಮಿಯಂ ಸ್ಕೂಟರ್ ಸೇರ್ಪಡೆಯಾಗಿದೆ. ಕೀವೇ ಇಂಡಿಯಾ ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಹೈಪ್‌ವೋಲ್ಟ್-ಆರ್ ಅನ್ನ ಬಿಡುಗಡೆ ಮಾಡಿದೆ. ಆಧುನಿಕ ತಂತ್ರಜ್ಞಾನ, ಶಕ್ತಿಶಾಲಿ ಮೋಟಾರ್ ಹಾಗೂ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನ ಒಳಗೊಂಡಿರುವ ಈ ಸ್ಕೂಟರ್ ಗ್ರಾಹಕರ ಗಮನ ಸೆಳೆಯುತ್ತಿದೆ.
ವಿಶೇಷವಾಗಿ ಒಂದೇ ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ 180 ಕಿಲೋಮೀಟರ್‌ಗಳವರೆಗೆ ಸಂಚರಿಸುವ ಸಾಮರ್ಥ್ಯ ಮತ್ತು ಗಂಟೆಗೆ 115 ಕಿಲೋಮೀಟರ್ ಗರಿಷ್ಠ ವೇಗ ಇದರ ಪ್ರಮುಖ ಆಕರ್ಷಣೆಗಳಾಗಿವೆ. ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗವನ್ನ ಗುರಿಯಾಗಿಸಿಕೊಂಡು ಕಂಪನಿ ಈ ಹೊಸ ಮಾದರಿಯನ್ನ ಪರಿಚಯಿಸಿದೆ. ಡ್ಯುಯಲ್-ಚಾನೆಲ್ ಎಬಿಎಸ್, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ ಸೇರಿದಂತೆ ಹಲವು ಸುರಕ್ಷತಾ ತಂತ್ರಜ್ಞಾನಗಳನ್ನ ಇದರಲ್ಲಿ ನೀಡಲಾಗಿದೆ. ಇದರ ಆರಂಭಿಕ ಎಕ್ಸ್‌ಶೋರೂಂ ಬೆಲೆ 1.99 ಲಕ್ಷ ರೂಪಾಯಿ ಎಂದು ವರದಿಯಾಗಿದೆ.
5.04 kWh ಸಾಮರ್ಥ್ಯದ ಡ್ಯುಯಲ್ ಬ್ಯಾಟರಿ
ಕೀವೇ ಹೈಪ್‌ವೋಲ್ಟ್-ಆರ್ ಸ್ಕೂಟರ್‌ನಲ್ಲಿ 5.04 kWh ಸಾಮರ್ಥ್ಯದ NMC ಬ್ಯಾಟರಿ ಪ್ಯಾಕ್ ಅಳವಡಿಸಲಾಗಿದೆ. ಇದು ಎರಡು 72V 35Ah ಬ್ಯಾಟರಿ ಘಟಕಗಳನ್ನ ಒಳಗೊಂಡಿದೆ. ಎರಡೂ ಬ್ಯಾಟರಿಗಳು ತೆಗೆಯಬಹುದಾದ ವ್ಯವಸ್ಥೆಯನ್ನ ಹೊಂದಿರುವುದು ವಿಶೇಷ. ಸಂಪೂರ್ಣ ಚಾರ್ಜ್‌ನಲ್ಲಿ 180 ಕಿಲೋಮೀಟರ್ IDC ಪ್ರಮಾಣೀಕೃತ ರೈಡಿಂಗ್ ರೇಂಜ್ ನೀಡುತ್ತದೆ ಎಂದು ಕಂಪನಿ ತಿಳಿಸಿದೆ. ಈ ಸ್ಕೂಟರ್‌ನಲ್ಲಿ ಮಿಡ್-ಮೌಂಟೆಡ್ ಪರ್ಮನೆಂಟ್ ಮ್ಯಾಗ್ನೆಟ್ ಸಿಂಕ್ರೋನಸ್ ಮೋಟಾರ್ ಬಳಸಲಾಗಿದೆ. ಇದು 6 kW ರೇಟೆಡ್ ಪವರ್ ಮತ್ತು 12 kW ಗರಿಷ್ಠ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದರ ಗರಿಷ್ಠ ಟಾರ್ಕ್ 72 Nm ಆಗಿದೆ.
ಗಂಟೆಗೆ 115 ಕಿ.ಮೀ ಟಾಪ್ ಸ್ಪೀಡ್
ವೇಗದ ವಿಚಾರದಲ್ಲಿಯೂ ಹೈಪ್‌ವೋಲ್ಟ್-ಆರ್ ಗಮನ ಸೆಳೆಯುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಗಂಟೆಗೆ ಗರಿಷ್ಠ 115 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲದು. ಸ್ಪೋರ್ಟ್ ಮೋಡ್‌ನಲ್ಲಿ ಕೇವಲ 2.3 ಸೆಕೆಂಡ್‌ಗಳಲ್ಲಿ ಗಂಟೆಗೆ 0ರಿಂದ 40 ಕಿಲೋಮೀಟರ್ ವೇಗ ಪಡೆದುಕೊಳ್ಳುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದರಲ್ಲಿ ರೈಡರ್‌ಗಳ ಅನುಕೂಲಕ್ಕಾಗಿ ಮೂರು ಡ್ರೈವಿಂಗ್ ಮೋಡ್‌ಗಳನ್ನ ನೀಡಲಾಗಿದೆ. ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ ಮೋಡ್‌ಗಳ ಮೂಲಕ ಸವಾರರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬಹುದು. ಅಲ್ಲದೆ 30 ಡಿಗ್ರಿ ಏರುಪ್ರದೇಶವನ್ನ ಹತ್ತುವ ಸಾಮರ್ಥ್ಯವನ್ನೂ ಸ್ಕೂಟರ್ ಹೊಂದಿದೆ ಎಂದು ಹೇಳಲಾಗಿದೆ.
ಚಾರ್ಜಿಂಗ್ ವ್ಯವಸ್ಥೆ ಹೇಗಿದೆ?
ಹೈಪ್‌ವೋಲ್ಟ್-ಆರ್‌ನ ಬ್ಯಾಟರಿಗಳನ್ನ ಸ್ಕೂಟರ್‌ನಿಂದ ಹೊರತೆಗೆದು ಚಾರ್ಜ್ ಮಾಡಬಹುದು. ಅಥವಾ ಸ್ಕೂಟರ್‌ನಲ್ಲಿಯೇ ಚಾರ್ಜಿಂಗ್ ಮಾಡುವ ಆಯ್ಕೆಯೂ ಇದೆ. ಇದರ ಆನ್‌ಬೋರ್ಡ್ ಚಾರ್ಜರ್ ಮೂಲಕ ಬ್ಯಾಟರಿಯನ್ನ ಶೂನ್ಯದಿಂದ ಅಂದರೆ 0ದಿಂದ ಶೇ.80ರಷ್ಟು ಚಾರ್ಜ್ ಮಾಡಲು ಸುಮಾರು ಮೂರು ಗಂಟೆಗಳ ಸಮಯ ಬೇಕಾಗುತ್ತದೆ ಎಂದು ವರದಿಯಾಗಿದೆ.
ಸುರಕ್ಷತೆಗೆ ಹಲವು ಸುಧಾರಿತ ಫೀಚರ್ಸ್
ಈ ಸ್ಕೂಟರ್‌ನ ಪ್ರಮುಖ ವಿಶೇಷತೆಗಳಲ್ಲಿ ಸುರಕ್ಷತಾ ತಂತ್ರಜ್ಞಾನಗಳೂ ಸೇರಿವೆ. ಡ್ಯುಯಲ್-ಚಾನೆಲ್ ಎಬಿಎಸ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ ನೀಡಲಾಗಿದೆ. ಇದರ ಜೊತೆಗೆ ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್ ಮತ್ತು ಇಂಟೆಲಿಜೆಂಟ್ ಕ್ರೂಸ್ ಕಂಟ್ರೋಲ್ ವ್ಯವಸ್ಥೆಗಳಿವೆ. ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಹಾಗೂ ಹಿಂಭಾಗದ ರಿವರ್ಸ್ ಕ್ಯಾಮೆರಾ ಕೂಡ ಸ್ಕೂಟರ್‌ನಲ್ಲಿವೆ. ಇವುಗಳ ಜೊತೆಗೆ ಬ್ಲೂಟೂತ್ ಸಂಪರ್ಕ, ಐದು ಇಂಚಿನ TFT ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಎಲ್‌ಇಡಿ ಲೈಟ್ ಸ್ಟ್ರಿಪ್ ನೀಡಲಾಗಿದೆ.
ಗಾತ್ರ, ತೂಕ ಮತ್ತು ಸಂಗ್ರಹಣಾ ಸಾಮರ್ಥ್ಯ
ಕೀವೇ ಹೈಪ್‌ವೋಲ್ಟ್-ಆರ್ ಸ್ಕೂಟರ್ 130 ಮಿಲಿಮೀಟರ್ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಇದರ ಸೀಟ್ ಎತ್ತರ 770 ಮಿಲಿಮೀಟರ್ ಆಗಿದ್ದು, ವೀಲ್‌ಬೇಸ್ 1,454 ಮಿಲಿಮೀಟರ್ ಇದೆ. ಸ್ಕೂಟರ್‌ನ ಕರ್ಬ್ ತೂಕ 140 ಕೆ.ಜಿ. ಆಗಿದೆ. ಸೀಟಿನ ಕೆಳಭಾಗದಲ್ಲಿ 27 ಲೀಟರ್ ಸಾಮರ್ಥ್ಯದ ಸಂಗ್ರಹಣಾ ಸ್ಥಳವನ್ನೂ ನೀಡಲಾಗಿದೆ.
ಬೆಲೆ ಎಷ್ಟು? ಯಾವ ಬಣ್ಣಗಳಲ್ಲಿ ಲಭ್ಯ?
ಕೀವೇ ಹೈಪ್‌ವೋಲ್ಟ್-ಆರ್ ಎಲೆಕ್ಟ್ರಿಕ್ ಸ್ಕೂಟರ್‌ನ ಆರಂಭಿಕ ಎಕ್ಸ್‌ಶೋರೂಂ ಬೆಲೆ 1.99 ಲಕ್ಷ ರೂಪಾಯಿ. ಗ್ರಾಹಕರು 5,000 ರೂಪಾಯಿ ಟೋಕನ್ ಮೊತ್ತ ಪಾವತಿಸಿ ಸ್ಕೂಟರ್ ಬುಕ್ ಮಾಡಿಕೊಳ್ಳಬಹುದು. ಕ್ರಿಸ್ಟಲ್ ವೈಟ್ ಮತ್ತು ಪ್ಲಾಟಿನಂ ಗ್ರೇ ಎಂಬ ಎರಡು ಬಣ್ಣಗಳ ಆಯ್ಕೆಯಲ್ಲಿ ಇದು ಲಭ್ಯವಿದೆ. ಕಂಪನಿಯು ಶೀಘ್ರದಲ್ಲೇ ಸ್ಕೂಟರ್ ವಿತರಣೆ ಆರಂಭಿಸಲಿದೆ ಎಂದು ವರದಿಯಾಗಿದೆ.
ಒಟ್ನಲ್ಲಿ 180 ಕಿಲೋಮೀಟರ್ IDC ರೇಂಜ್, 115 ಕಿ.ಮೀ ಟಾಪ್ ಸ್ಪೀಡ್, ತೆಗೆಯಬಹುದಾದ ಡ್ಯುಯಲ್ ಬ್ಯಾಟರಿ ಮತ್ತು ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನ ಹೊಂದಿರುವ ಕೀವೇ ಹೈಪ್‌ವೋಲ್ಟ್-ಆರ್ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಹೊಸ ಆಯ್ಕೆಯಾಗಿ ಮಾರುಕಟ್ಟೆಗೆ ಬಂದಿದೆ.