SOCIAL MEDIA

Newsletter

PARTNER SITES
Select Language Select State

ನಿರ್ಜನ ಪ್ರದೇಶದಲ್ಲಿ ಕೆಟ್ಟ ಕಾರು, ಆತಂಕದಲ್ಲಿದ್ದ ರಷ್ಯನ್ ಯುವತಿ! ಕ್ಯಾಬ್‌ ಚಾಲಕ ಮಾಡಿದ್ದೇನು?

ಜೈಪುರಕ್ಕೆ ಪ್ರವಾಸಕ್ಕೆ ಬಂದಿದ್ದ ರಷ್ಯಾದ ಯುವತಿಯೊಬ್ಬರ ಕ್ಯಾಬ್ ನಿರ್ಜನ ಪ್ರದೇಶದಲ್ಲಿ ಕೆಟ್ಟುನಿಂತಾಗ ಚಾಲಕ ಧೈರ್ಯ ತುಂಬಿ ಸಮಸ್ಯೆ ಸರಿಪಡಿಸಿ ಸುರಕ್ಷಿತವಾಗಿ ಹೋಟೆಲ್ ತಲುಪಿಸಿದ್ದಾನೆ. ಬಳಿಕ ಕಾರಿನಲ್ಲಿ ಮರೆತುಹೋಗಿದ್ದ ಆಕೆಯ ಪರ್ಸ್ ಅನ್ನ ಎರಡು ಕಿಲೋಮೀಟರ್ ಹಿಂದಕ್ಕೆ ಬಂದು ಮರಳಿಸಿದ್ದಾನೆ. ಚಾಲಕನ ಪ್ರಾಮಾಣಿಕತೆಗೆ ಮನಸೋತ ಯುವತಿ ₹2,000 ಟಿಪ್ ನೀಡಿ ಭಾರತದ ಆತಿಥ್ಯವನ್ನ ಕೊಂಡಾಡಿದ್ದಾರೆ.

Written By Puttaraj K Alur
Published: Nov 15, 2026, 13:46 IST | Updated: Nov 15, 2026, 13:52 IST
Image Credit: Russian Tourist
Join

Viral News: ಪ್ರವಾಸಕ್ಕಾಗಿ ಭಾರತಕ್ಕೆ ಬಂದಿದ್ದ ರಷ್ಯಾದ ಯುವತಿಯೊಬ್ಬರಿಗೆ ರಾಜಸ್ಥಾನದ ಜೈಪುರದ ಕ್ಯಾಬ್ ಚಾಲಕ ತೋರಿದ ಪ್ರಾಮಾಣಿಕತೆ ಮತ್ತು ಮಾನವೀಯ ನಡೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಯಾಣದ ನಡುವೆ ನಿರ್ಜನ ಪ್ರದೇಶದಲ್ಲಿ ಕಾರು ಕೆಟ್ಟುನಿಂತಾಗ ಯುವತಿಗೆ ಧೈರ್ಯ ತುಂಬಿದ ಚಾಲಕ, ಬಳಿಕ ಆಕೆ ಕಾರಿನಲ್ಲೇ ಮರೆತುಹೋಗಿದ್ದ ಪರ್ಸ್ ಅನ್ನ ಹುಡುಕಿ ಮರಳಿಸಿದ್ದಾನೆ. ಚಾಲಕನ ಈ ಪ್ರಾಮಾಣಿಕತೆಗೆ ಮನಸೋತ ಯುವತಿ ₹2,000 ಟಿಪ್ ನೀಡಿದ್ದು, ಭಾರತದ ಆತಿಥ್ಯ ಮತ್ತು ಜನರ ಒಳ್ಳೆಯತನವನ್ನ ಕೊಂಡಾಡಿದ್ದಾರೆ.

ನಿರ್ಜನ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಕೆಟ್ಟ ಕ್ಯಾಬ್!

ಸುಮಾರು ಐದರಿಂದ ಏಳು ದಿನಗಳ ಹಿಂದೆ ರಷ್ಯಾದ ಯುವತಿಯೊಬ್ಬರು ರಾಜಸ್ಥಾನದ ಪ್ರಸಿದ್ಧ ಪ್ರವಾಸಿ ತಾಣ ಜೈಪುರಕ್ಕೆ ಆಗಮಿಸಿದ್ದರು. ಪಿಂಕ್ ಸಿಟಿ ಎಂದೇ ಹೆಸರಾದ ಜೈಪುರವನ್ನ ಸುತ್ತಾಡುವ ಉದ್ದೇಶದಿಂದ ಬಂದಿದ್ದ ಅವರು, ವಿಮಾನ ನಿಲ್ದಾಣದಿಂದ ತಮ್ಮ ಹೋಟೆಲ್‌ಗೆ ತೆರಳಲು ಕ್ಯಾಬ್ ಬುಕ್ ಮಾಡಿದ್ದರು. ಅದರಂತೆ ಕ್ಯಾಬ್‌ನಲ್ಲಿ ಪ್ರಯಾಣ ಆರಂಭಿಸಿದ ಯುವತಿ, ಕೆಲವೇ ನಿಮಿಷಗಳಲ್ಲಿ ಅನಿರೀಕ್ಷಿತ ಸಮಸ್ಯೆಯನ್ನ ಎದುರಿಸಬೇಕಾಯಿತು.

ವಿಮಾನ ನಿಲ್ದಾಣದಿಂದ ಸುಮಾರು ಮೂರರಿಂದ ನಾಲ್ಕು ಕಿಲೋಮೀಟರ್ ದೂರ ಕ್ರಮಿಸುತ್ತಿದ್ದಂತೆಯೇ ಕ್ಯಾಬ್ ನಿರ್ಜನ ಪ್ರದೇಶವೊಂದರಲ್ಲಿ ಇದ್ದಕ್ಕಿದ್ದಂತೆ ಕೆಟ್ಟುನಿಂತಿತು. ಆ ಸಮಯದಲ್ಲಿ ಸಂಜೆ ಕತ್ತಲಾಗುತ್ತಿತ್ತು. ಸುತ್ತಮುತ್ತ ಜನರ ಓಡಾಟವೂ ಇಲ್ಲದ ಕಾರಣ ಒಬ್ಬಂಟಿಯಾಗಿದ್ದ ವಿದೇಶಿ ಯುವತಿ ಆತಂಕಕ್ಕೆ ಒಳಗಾದರು. ಹೊಸ ದೇಶಕ್ಕೆ ಪ್ರವಾಸಕ್ಕೆ ಬಂದಿದ್ದ ಸಂದರ್ಭದಲ್ಲಿ ಇಂತಹ ಪರಿಸ್ಥಿತಿ ಎದುರಾಗಿದ್ದರಿಂದ ಅವರಿಗೆ ಏನು ಮಾಡಬೇಕೆಂಬುದು ತಿಳಿಯದಂತಾಯಿತು.

ಧೈರ್ಯ ತುಂಬಿ ಸಮಸ್ಯೆ ಸರಿಪಡಿಸಿದ ಚಾಲಕ

ಯುವತಿಯ ಆತಂಕವನ್ನ ಗಮನಿಸಿದ ಕ್ಯಾಬ್ ಚಾಲಕ ಪರಿಸ್ಥಿತಿಯನ್ನ ಸಮಾಧಾನದಿಂದ ನಿಭಾಯಿಸಿದನು. ಕಾರಿನಲ್ಲಿ ಸಣ್ಣ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ, ಆತಂಕಪಡುವ ಅಗತ್ಯವಿಲ್ಲ, ಕೇವಲ ಎರಡು ನಿಮಿಷ ಸಮಯ ನೀಡುವಂತೆ ಯುವತಿಗೆ ತಿಳಿಸಿದನು. ನಂತರ ಕಾರಿನ ಬಾನೆಟ್ ತೆರೆದು ಪರಿಶೀಲನೆ ನಡೆಸಿದಾಗ ರೇಡಿಯೇಟರ್‌ನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದು ತಿಳಿದುಬಂದಿತು. ತಕ್ಷಣವೇ ಅಗತ್ಯ ಕ್ರಮ ಕೈಗೊಂಡ ಚಾಲಕ, ಕೇವಲ ಎರಡು ನಿಮಿಷಗಳಲ್ಲಿ ಸಮಸ್ಯೆಯನ್ನ ಸರಿಪಡಿಸಿದನು. ಕಾರು ಮತ್ತೆ ಚಲಿಸಲು ಆರಂಭಿಸಿದ ಬಳಿಕ ಯುವತಿಯನ್ನ ಸುರಕ್ಷಿತವಾಗಿ ಅವರ ಹೋಟೆಲ್‌ಗೆ ತಲುಪಿಸಿದನು. ಈ ಮೂಲಕ ಸಂಕಷ್ಟದ ಸಮಯದಲ್ಲಿ ಯುವತಿಗೆ ನೆರವಾಗಿ ಆಕೆಯ ಆತಂಕವನ್ನ ದೂರಮಾಡಿದನು.

ಕಾರಿನಲ್ಲೇ ಉಳಿದಿದ್ದ ಪರ್ಸ್ ಮರಳಿಸಿದ ಚಾಲಕ

ಹೋಟೆಲ್ ತಲುಪಿದ ಬಳಿಕ ಯುವತಿ ಆತುರದಲ್ಲಿ ತಮ್ಮ ಪರ್ಸ್ ಅನ್ನ ಕ್ಯಾಬ್‌ನ ಹಿಂಬದಿ ಸೀಟಿನಲ್ಲೇ ಮರೆತುಬಿಟ್ಟಿದ್ದರು. ಹೋಟೆಲ್ ಕೋಣೆಗೆ ತೆರಳಿದ ಸುಮಾರು ಹತ್ತು ನಿಮಿಷಗಳ ನಂತರ ಪರ್ಸ್ ಕಾಣೆಯಾಗಿರುವುದು ಅವರ ಗಮನಕ್ಕೆ ಬಂದಿದೆ. ತಕ್ಷಣವೇ ಅವರು ಕ್ಯಾಬ್ ಚಾಲಕನನ್ನ ಸಂಪರ್ಕಿಸಿ ಪರ್ಸ್ ಕಾರಿನಲ್ಲೇ ಉಳಿದಿರುವ ಸಾಧ್ಯತೆಯ ಬಗ್ಗೆ ಮಾಹಿತಿ ನೀಡಿದರು. ಕರೆ ಸ್ವೀಕರಿಸಿದ ಚಾಲಕ ಕೂಡಲೇ ಕಾರಿನ ಹಿಂಬದಿ ಸೀಟನ್ನ ಪರಿಶೀಲಿಸಿದನು.

ಆಗ ಯುವತಿಯ ಪರ್ಸ್ ಅಲ್ಲಿಯೇ ಇರುವುದು ಕಂಡುಬಂದಿದೆ. ಪರ್ಸ್ ಸಿಕ್ಕ ತಕ್ಷಣ ಅದನ್ನ ಮರಳಿಸಲು ಚಾಲಕ ನಿರ್ಧರಿಸಿದನು. ಸುಮಾರು ಎರಡು ಕಿಲೋಮೀಟರ್ ಹಿಂದಕ್ಕೆ ಪ್ರಯಾಣಿಸಿ ಯುವತಿ ಇದ್ದ ಸ್ಥಳಕ್ಕೆ ತೆರಳಿ ಪರ್ಸ್ ಅನ್ನ ಅವರ ಕೈಗೆ ಒಪ್ಪಿಸಿದನು. ಹಣ ಮತ್ತು ಇತರ ವಸ್ತುಗಳಿದ್ದ ಪರ್ಸ್ ಸುರಕ್ಷಿತವಾಗಿ ಮರಳಿ ಸಿಕ್ಕಿದ್ದರಿಂದ ಯುವತಿ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಪ್ರಾಮಾಣಿಕತೆಗೆ ₹2,000 ಟಿಪ್!

ಕ್ಯಾಬ್ ಚಾಲಕ ತೋರಿದ ಪ್ರಾಮಾಣಿಕತೆ ಮತ್ತು ಸಹಾಯ ಮನೋಭಾವಕ್ಕೆ ರಷ್ಯಾದ ಯುವತಿ ಮನಸೋತಿದ್ದಾರೆ. ಪರ್ಸ್ ಮರಳಿಸಿದ್ದಕ್ಕಾಗಿ ಸಂತೋಷ ವ್ಯಕ್ತಪಡಿಸಿದ ಅವರು, ಚಾಲಕನಿಗೆ ₹2,000 ಟಿಪ್ ನೀಡಿದ್ದಾರೆ. ಅಷ್ಟೇ ಅಲ್ಲದೆ ಭಾರತ ಮತ್ತು ಇಲ್ಲಿನ ಜನರ ಬಗ್ಗೆ ಮೆಚ್ಚುಗೆಯ ಮಾತುಗಳನ್ನೂ ಆಡಿದ್ದಾರೆ. ಭಾರತ ಅದ್ಭುತ ದೇಶವಾಗಿದ್ದು, ಇಲ್ಲಿನ ಕ್ಯಾಬ್ ಚಾಲಕರು ಅತ್ಯಂತ ಪ್ರಾಮಾಣಿಕರು ಎಂದು ಯುವತಿ ಪ್ರಶಂಸಿಸಿದ್ದಾರೆ.

ಒಂದೆಡೆ ನಿರ್ಜನ ಪ್ರದೇಶದಲ್ಲಿ ಕಾರು ಕೆಟ್ಟುನಿಂತಾಗ ಧೈರ್ಯ ತುಂಬಿ ಸುರಕ್ಷಿತವಾಗಿ ಹೋಟೆಲ್ ತಲುಪಿಸಿದ ಚಾಲಕ, ಮತ್ತೊಂದೆಡೆ ಮರೆತುಹೋಗಿದ್ದ ಪರ್ಸ್ ಅನ್ನ ಮರಳಿಸುವ ಮೂಲಕ ಮತ್ತೊಮ್ಮೆ ವಿಶ್ವಾಸ ಗಳಿಸಿದ್ದಾನೆ. ಈ ಘಟನೆಯ ವಿವರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಚಾಲಕನ ಪ್ರಾಮಾಣಿಕ ನಡೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES