ಊಟದ ಬಳಿಕ ಎದೆಯಲ್ಲಿ ಉರಿ ಕಾಡುತ್ತಿದೆಯಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ
ವೈದ್ಯಕೀಯವಾಗಿ ಹಾರ್ಟ್‌ಬರ್ನ್ (Heartburn) ಎಂದರೆ ಹೃದಯದಲ್ಲಿ ಉಂಟಾಗುವ ನೋವಲ್ಲ. ಹೊಟ್ಟೆಯಲ್ಲಿರುವ ಆಮ್ಲವು ಆಹಾರನಾಳದತ್ತ ಮೇಲಕ್ಕೆ ಬಂದಾಗ ಅಲ್ಲಿ ಉಂಟಾಗುವ ಉರಿ ಅಥವಾ ನೋವನ್ನೇ ಹಾರ್ಟ್‌ಬರ್ನ್ ಎಂದು ಕರೆಯಲಾಗುತ್ತದೆ.
Heartburn: ಊಟ ಮಾಡಿದ ಬಳಿಕ ಎದೆಯ ಮಧ್ಯಭಾಗದಲ್ಲಿ ಉರಿ, ಸುಡುವ ಅನುಭವ ಅಥವಾ ಎದೆ ತುಂಬಾ ಭಾರವಾದಂತೆ ಅನಿಸುವುದು ಹಲವರಲ್ಲಿ ಕಂಡುಬರುವ ಸಾಮಾನ್ಯ ಸಮಸ್ಯೆಯಾಗಿದೆ. ಕೆಲವರು ಇದನ್ನ ಗ್ಯಾಸ್ ಅಥವಾ ಅಜೀರ್ಣವೆಂದು ನಿರ್ಲಕ್ಷಿಸುತ್ತಾರೆ. ಆದರೆ ಪದೇಪದೇ ಇಂತಹ ಸಮಸ್ಯೆ ಕಾಣಿಸಿಕೊಂಡರೆ ಅದರ ಹಿಂದಿರುವ ನಿಜವಾದ ಕಾರಣವನ್ನ ತಿಳಿದುಕೊಳ್ಳುವುದು ಮುಖ್ಯ. ಸಾಮಾನ್ಯವಾಗಿ ಊಟದ ಬಳಿಕ ಕಾಣಿಸಿಕೊಳ್ಳುವ ಎದೆಯುರಿಗೆ ಆಸಿಡ್ ರಿಫ್ಲಕ್ಸ್ ಪ್ರಮುಖ ಕಾರಣವಾಗಿರಬಹುದು.
ವೈದ್ಯಕೀಯವಾಗಿ ಹಾರ್ಟ್‌ಬರ್ನ್ (Heartburn) ಎಂದರೆ ಹೃದಯದಲ್ಲಿ ಉಂಟಾಗುವ ನೋವಲ್ಲ. ಹೊಟ್ಟೆಯಲ್ಲಿರುವ ಆಮ್ಲವು ಆಹಾರನಾಳದತ್ತ ಮೇಲಕ್ಕೆ ಬಂದಾಗ ಅಲ್ಲಿ ಉಂಟಾಗುವ ಉರಿ ಅಥವಾ ನೋವನ್ನೇ ಹಾರ್ಟ್‌ಬರ್ನ್ ಎಂದು ಕರೆಯಲಾಗುತ್ತದೆ. ಹೊಟ್ಟೆ ಮತ್ತು ಆಹಾರನಾಳದ ನಡುವಿನ ಭಾಗದಲ್ಲಿ ಒಂದು ಸ್ನಾಯು ಕವಾಟದಂತೆ ಕಾರ್ಯನಿರ್ವಹಿಸುತ್ತದೆ. ಇದನ್ನ ಲೋವರ್ ಈಸೋಫೇಜಿಯಲ್ ಸ್ಪಿಂಕ್ಟರ್ ಎಂದು ಕರೆಯಲಾಗುತ್ತದೆ. ಇದು ಸರಿಯಾಗಿ ಮುಚ್ಚಿಕೊಳ್ಳದಿದ್ದಾಗ ಹೊಟ್ಟೆಯ ಆಮ್ಲ ಮೇಲಕ್ಕೆ ಬಂದು ಎದೆಯಲ್ಲಿ ಉರಿ ಉಂಟುಮಾಡಬಹುದು.
ಊಟದ ಬಳಿಕವೇ ಏಕೆ ಹೆಚ್ಚಾಗುತ್ತದೆ?
ಊಟ ಮಾಡಿದ ನಂತರ ಹೊಟ್ಟೆಯಲ್ಲಿ ಆಹಾರದ ಪ್ರಮಾಣ ಹೆಚ್ಚಾಗುತ್ತದೆ. ವಿಶೇಷವಾಗಿ ಹೆಚ್ಚು ಪ್ರಮಾಣದಲ್ಲಿ ಅಥವಾ ಎಣ್ಣೆ-ಕೊಬ್ಬು ಇರುವ ಆಹಾರ ಸೇವಿಸಿದಾಗ ಹೊಟ್ಟೆ ಖಾಲಿಯಾಗಲು ಹೆಚ್ಚಿನ ಸಮಯ ಬೇಕಾಗಬಹುದು. ಈ ಸಂದರ್ಭದಲ್ಲಿ ಆಮ್ಲ ಮೇಲಕ್ಕೆ ಬರುವ ಸಾಧ್ಯತೆ ಹೆಚ್ಚಾಗುತ್ತದೆ. ಊಟ ಮಾಡಿದ ತಕ್ಷಣ ಮಲಗುವುದು ಅಥವಾ ಬಾಗುವುದು ಕೂಡ ಸಮಸ್ಯೆಯನ್ನ ಹೆಚ್ಚಿಸಬಹುದು.
ಖಾರವಾದ ಆಹಾರ, ಟೊಮೆಟೊ, ಸಿಟ್ರಸ್ ಹಣ್ಣುಗಳು, ಚಾಕೊಲೇಟ್, ಕಾಫಿ ಮತ್ತು ಇತರ ಕ್ಯಾಫೀನ್‌ಯುಕ್ತ ಪಾನೀಯಗಳು, ಕಾರ್ಬೊನೇಟೆಡ್ ಡ್ರಿಂಕ್ಸ್ ಹಾಗೂ ಹೆಚ್ಚು ಕೊಬ್ಬಿನ ಆಹಾರಗಳು ಕೆಲವರಲ್ಲಿ ಹಾರ್ಟ್‌ಬರ್ನ್‌ಗೆ ಕಾರಣವಾಗಬಹುದು. ಆದರೆ ಎಲ್ಲರಿಗೂ ಒಂದೇ ಆಹಾರದಿಂದ ಸಮಸ್ಯೆ ಉಂಟಾಗುವುದಿಲ್ಲ. ಯಾವ ಆಹಾರ ಸೇವಿಸಿದಾಗ ಸಮಸ್ಯೆ ಹೆಚ್ಚಾಗುತ್ತದೆ ಎಂಬುದನ್ನ ಗಮನಿಸುವುದು ಸಹಾಯಕವಾಗಬಹುದು.
ಮಲಗುವ ಮುನ್ನ ಊಟ ಮಾಡುವುದನ್ನ ತಪ್ಪಿಸಿ
ಊಟ ಮಾಡಿದ ತಕ್ಷಣ ಮಲಗುವುದರಿಂದ ಆಸಿಡ್ ರಿಫ್ಲಕ್ಸ್ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಊಟ ಮಾಡಿದ ಬಳಿಕ ಕನಿಷ್ಠ 2ರಿಂದ 3 ಗಂಟೆಗಳ ಕಾಲ ಮಲಗದೆ ಇರುವುದು ಸಹಾಯಕವಾಗಬಹುದು. ದೊಡ್ಡ ಪ್ರಮಾಣದಲ್ಲಿ ಒಂದೇ ಬಾರಿ ಊಟ ಮಾಡುವ ಬದಲು ಸಣ್ಣ ಪ್ರಮಾಣದಲ್ಲಿ ಆಹಾರ ಸೇವಿಸುವುದು ಕೂಡ ಕೆಲವು ಮಂದಿಗೆ ಪ್ರಯೋಜನಕಾರಿಯಾಗಿದೆ. ಆರೋಗ್ಯಕರ ತೂಕವನ್ನ ಕಾಪಾಡಿಕೊಳ್ಳುವುದು, ಧೂಮಪಾನ ಮತ್ತು ಮದ್ಯಪಾನವನ್ನ ತಪ್ಪಿಸುವುದು ಕೂಡ ಹಾರ್ಟ್‌ಬರ್ನ್ ನಿಯಂತ್ರಣಕ್ಕೆ ನೆರವಾಗಬಹುದು.
ಪದೇಪದೇ ಎದೆಯುರಿ ಬಂದರೆ ನಿರ್ಲಕ್ಷಿಸಬೇಡಿ
ವಾರಕ್ಕೆ ಹಲವು ಬಾರಿ ಎದೆಯುರಿ ಕಾಣಿಸಿಕೊಳ್ಳುತ್ತಿದ್ದರೆ ಅಥವಾ ಸಾಮಾನ್ಯ ಜೀವನಕ್ಕೆ ತೊಂದರೆಯಾಗುತ್ತಿದ್ದರೆ ವೈದ್ಯರನ್ನ ಸಂಪರ್ಕಿಸುವುದು ಸೂಕ್ತ. ನಿರಂತರ ಆಸಿಡ್ ರಿಫ್ಲಕ್ಸ್ ಗ್ಯಾಸ್ಟ್ರೋಈಸೋಫೇಜಿಯಲ್ ರಿಫ್ಲಕ್ಸ್ ಡಿಸೀಸ್ (GERD)ನ ಲಕ್ಷಣವಾಗಿರಬಹುದು. ನುಂಗಲು ಕಷ್ಟವಾಗುವುದು, ನಿರಂತರ ವಾಂತಿ ಅಥವಾ ವಾಕರಿಕೆ, ಆಹಾರ ಸೇವಿಸಲು ತೊಂದರೆ ಅಥವಾ ಕಾರಣವಿಲ್ಲದೆ ತೂಕ ಇಳಿಯುವುದು ಕಂಡುಬಂದರೂ ವೈದ್ಯಕೀಯ ಸಲಹೆ ಪಡೆಯಬೇಕು.
ಎದೆಯುರಿ ಮತ್ತು ಹೃದಯಾಘಾತ ಒಂದೇ ಅಲ್ಲ!
ಎದೆಯಲ್ಲಿ ಉರಿ ಕಾಣಿಸಿಕೊಂಡರೆ ಅದು ಹಾರ್ಟ್‌ಬರ್ನ್ ಎಂದು ಸ್ವತಃ ನಿರ್ಧರಿಸುವುದು ಅಪಾಯಕಾರಿ. ಹಾರ್ಟ್‌ಬರ್ನ್ ಮತ್ತು ಹೃದಯ ಸಂಬಂಧಿತ ಎದೆನೋವಿನ ಲಕ್ಷಣಗಳು ಕೆಲವೊಮ್ಮೆ ಒಂದೇ ರೀತಿ ಕಾಣಿಸಿಕೊಳ್ಳಬಹುದು. ಹೊಸದಾಗಿ ಅಥವಾ ಅಸಾಮಾನ್ಯ ಎದೆನೋವು ಕಾಣಿಸಿಕೊಂಡರೆ, ವಿಶೇಷವಾಗಿ ಎದೆಯಲ್ಲಿ ಒತ್ತಡ ಅಥವಾ ಬಿಗಿತದ ಅನುಭವದ ಜೊತೆಗೆ ಉಸಿರಾಟದ ತೊಂದರೆ, ತಲೆಸುತ್ತು, ವಾಕರಿಕೆ, ಬೆವರು ಅಥವಾ ನೋವು ಕೈ, ದವಡೆ, ಕುತ್ತಿಗೆ ಅಥವಾ ಬೆನ್ನಿನತ್ತ ಹರಡಿದರೆ ತಕ್ಷಣ ತುರ್ತು ವೈದ್ಯಕೀಯ ನೆರವು ಪಡೆಯಬೇಕು. ಇಂತಹ ಸಂದರ್ಭದಲ್ಲಿ ಆ್ಯಂಟಾಸಿಡ್ ತೆಗೆದುಕೊಂಡು ನೋವು ಕಡಿಮೆಯಾಗುತ್ತದೆಯೇ ಎಂದು ಕಾಯುವುದು ಸೂಕ್ತವಲ್ಲವೆಂದು ವೈದ್ಯಕೀಯ ತಜ್ಞರು ಎಚ್ಚರಿಸುತ್ತಾರೆ.
ಹೀಗಾಗಿ ಊಟದ ಬಳಿಕ ಕೆಲವೊಮ್ಮೆ ಕಾಣಿಸಿಕೊಳ್ಳುವ ಸಣ್ಣ ಪ್ರಮಾಣದ ಎದೆಯುರಿ ಸಾಮಾನ್ಯ ಆಸಿಡ್ ರಿಫ್ಲಕ್ಸ್‌ನಿಂದ ಉಂಟಾಗಿರಬಹುದು. ಆದರೆ ಸಮಸ್ಯೆ ಪದೇಪದೆ ಮರುಕಳಿಸಿದರೆ ಅಥವಾ ಎದೆನೋವಿನ ಸ್ವರೂಪ ಬದಲಾಗಿದ್ದರೆ ವೈದ್ಯರ ಸಲಹೆ ಪಡೆಯುವುದು ಮುಖ್ಯ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ತಜ್ಞ ಮೂಲಗಳ ಮಾಹಿತಿಯನ್ನ ಆಧರಿಸಿದೆ. ಇದನ್ನ Zee Kannada News ದೃಢಪಡಿಸುವುದಿಲ್ಲ. ಇಲ್ಲಿನ ಸಲಹೆಗಳನ್ನ ಪಾಲಿಸುವ ಮುನ್ನ ತಜ್ಞರ ಸಲಹೆ ಪಡೆಯುವುದು ಉತ್ತಮ.)