SOCIAL MEDIA

Newsletter

PARTNER SITES
Select Language Select State

ರಾತ್ರಿ ಮಲಗುವಾಗ ಕೈಗಳು ಮರಗಟ್ಟುತ್ತಿವೆಯೇ? ನಿರ್ಲಕ್ಷ್ಯ ಬೇಡ; ಈ ಕಾಯಿಲೆಯ ಲಕ್ಷಣ ಇರಬಹುದು...

ರಾತ್ರಿ ನಿದ್ರಿಸುವಾಗ ಕೈ ಮರಗಟ್ಟುವುದು ಅಥವಾ ಬೆರಳುಗಳಲ್ಲಿ ಜುಮ್ಮೆನಿಸುವಿಕೆ ಕಾಣಿಸಿಕೊಳ್ಳುವುದು ತಪ್ಪಾದ ಮಲಗುವ ಭಂಗಿ, ನರಗಳ ಮೇಲಿನ ಒತ್ತಡ, ಕಾರ್ಪಲ್ ಟನಲ್ ಸಿಂಡ್ರೋಮ್, ಮಧುಮೇಹ ಅಥವಾ ವಿಟಮಿನ್ B12 ಕೊರತೆಯಿಂದ ಉಂಟಾಗಬಹುದು. ಸಮಸ್ಯೆ ಪದೇಪದೇ ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸಿ. ಕೈ ಮರಗಟ್ಟುವಿಕೆಯ ಜೊತೆಗೆ ಮುಖ ವಾಲುವುದು ಅಥವಾ ಮಾತನಾಡಲು ತೊಂದರೆಯಾದರೆ ತಕ್ಷಣ ತುರ್ತು ವೈದ್ಯಕೀಯ ನೆರವು ಪಡೆಯಿರಿ.

Written By Puttaraj K Alur
Published: Oct 19, 2026, 08:02 PM IST | Updated: Oct 19, 2026, 08:12 PM IST
Image Credit: Hands Going Numb at Night
Join

Hands Going Numb at Night: ರಾತ್ರಿ ನೆಮ್ಮದಿಯಿಂದ ನಿದ್ರಿಸುತ್ತಿರುವಾಗ ಏಕಾಏಕಿ ಕೈ ಮರಗಟ್ಟುವುದು, ಬೆರಳುಗಳಲ್ಲಿ ಸೂಜಿ ಚುಚ್ಚಿದಂತೆ ಅನುಭವವಾಗುವುದು ಅಥವಾ ಜುಮ್ಮೆನಿಸುವಿಕೆ ಕಾಣಿಸಿಕೊಳ್ಳುವುದು ಹಲವರಿಗೆ ಎದುರಾಗುವ ಸಮಸ್ಯೆ. ಕೆಲವರು ಕೈಯನ್ನ ಅಲುಗಾಡಿಸಿ ಅಥವಾ ಮಲಗುವ ಭಂಗಿಯನ್ನ ಬದಲಿಸಿಕೊಂಡು ಮತ್ತೆ ನಿದ್ರಿಸುತ್ತಾರೆ. ಆದರೆ ಇದೇ ಸಮಸ್ಯೆ ಪದೇಪದೇ ಕಾಣಿಸಿಕೊಂಡರೆ ನಿರ್ಲಕ್ಷಿಸುವುದು ಸೂಕ್ತವಲ್ಲ. ಮಲಗುವ ತಪ್ಪಾದ ಭಂಗಿಯಿಂದ ಹಿಡಿದು ನರಗಳ ಮೇಲಿನ ಒತ್ತಡ, ಕಾರ್ಪಲ್ ಟನಲ್ ಸಿಂಡ್ರೋಮ್, ಮಧುಮೇಹ ಮತ್ತು ವಿಟಮಿನ್ ಕೊರತೆಯವರೆಗೆ ಹಲವು ಕಾರಣಗಳು ಇದಕ್ಕೆ ಸಂಬಂಧಿಸಿರಬಹುದು.

ಮಲಗುವ ಭಂಗಿಯೂ ಕೈ ಮರಗಟ್ಟಲು ಕಾರಣ!

ಕೈಯನ್ನ ತಲೆಯ ಕೆಳಗೆ ಇಟ್ಟುಕೊಂಡು ಮಲಗುವುದು, ಕೈ ಮೇಲೆ ದೇಹದ ತೂಕ ಬೀಳುವಂತೆ ಮಲಗುವುದು ಅಥವಾ ಮೊಣಕೈಯನ್ನ ದೀರ್ಘಕಾಲ ಮಡಚಿಟ್ಟುಕೊಳ್ಳುವುದು ನರಗಳ ಮೇಲೆ ಒತ್ತಡ ಉಂಟುಮಾಡಬಹುದು. ಇದರಿಂದ ಕೈಗಳಲ್ಲಿ ತಾತ್ಕಾಲಿಕ ಮರಗಟ್ಟುವಿಕೆ ಅಥವಾ ಜುಮ್ಮೆನಿಸುವಿಕೆ ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ಕೈಯ ಮೇಲಿನ ಒತ್ತಡವನ್ನ ತೆಗೆದುಹಾಕಿ, ಮಲಗುವ ಭಂಗಿಯನ್ನ ಬದಲಿಸಿದ ಬಳಿಕ ಈ ಲಕ್ಷಣಗಳು ಕಡಿಮೆಯಾಗುತ್ತವೆ. ಆದರೆ ಪದೇಪದೇ ಇದೇ ಸಮಸ್ಯೆ ಕಾಣಿಸಿಕೊಂಡರೆ ಅದನ್ನ ಕೇವಲ ಮಲಗುವ ಭಂಗಿಯ ಸಮಸ್ಯೆ ಎಂದು ಭಾವಿಸಬಾರದು. 

ಕಾರ್ಪಲ್ ಟನಲ್ ಸಿಂಡ್ರೋಮ್ ಇರಬಹುದೇ?

ರಾತ್ರಿ ಕೈ ಮರಗಟ್ಟುವುದಕ್ಕೆ ಪ್ರಮುಖ ಕಾರಣಗಳಲ್ಲಿ ಕಾರ್ಪಲ್ ಟನಲ್ ಸಿಂಡ್ರೋಮ್ ಕೂಡ ಒಂದು. ಮಣಿಕಟ್ಟಿನಲ್ಲಿರುವ ಕಿರಿದಾದ ಮಾರ್ಗದ ಮೂಲಕ ಹಾದುಹೋಗುವ ಮೀಡಿಯನ್ ನರದ ಮೇಲೆ ಒತ್ತಡ ಉಂಟಾದಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದ ಮುಖ್ಯವಾಗಿ ಹೆಬ್ಬೆರಳು, ತೋರುಬೆರಳು, ಮಧ್ಯದ ಬೆರಳು ಮತ್ತು ಉಂಗುರದ ಬೆರಳಿನ ಒಂದು ಭಾಗದಲ್ಲಿ ಜುಮ್ಮೆನಿಸುವಿಕೆ, ಮರಗಟ್ಟುವಿಕೆ ಅಥವಾ ನೋವು ಕಾಣಿಸಬಹುದು. ಕೆಲವರಿಗೆ ರಾತ್ರಿ ನಿದ್ರೆಯಿಂದ ಎಚ್ಚರವಾಗುವಷ್ಟು ತೊಂದರೆಯಾಗಬಹುದು. ಕೈಯ ಹಿಡಿತದ ಶಕ್ತಿ ಕಡಿಮೆಯಾಗುವುದು ಅಥವಾ ವಸ್ತುಗಳನ್ನ ಹಿಡಿಯಲು ಕಷ್ಟವಾಗುವುದೂ ಇದರ ಲಕ್ಷಣಗಳಾಗಿರಬಹುದು. ಇಂತಹ ಸಮಸ್ಯೆ ಮುಂದುವರಿದರೆ ವೈದ್ಯರನ್ನ ಸಂಪರ್ಕಿಸುವುದು ಅಗತ್ಯ.

ಕುತ್ತಿಗೆಯ ನರಗಳ ಮೇಲಿನ ಒತ್ತಡವೂ ಕಾರಣವಾಗಬಹುದು

ಕುತ್ತಿಗೆಯ ಬೆನ್ನುಹುರಿ ಅಥವಾ ಡಿಸ್ಕ್‌ಗೆ ಸಂಬಂಧಿಸಿದ ಸಮಸ್ಯೆಗಳಿಂದ ನರಗಳ ಮೇಲೆ ಒತ್ತಡ ಉಂಟಾದರೆ ಅದರ ಪರಿಣಾಮ ಕೈಗಳವರೆಗೆ ಕಾಣಿಸಿಕೊಳ್ಳಬಹುದು. ಕೈ ಮರಗಟ್ಟುವುದರ ಜೊತೆಗೆ ಕುತ್ತಿಗೆ ಅಥವಾ ಭುಜದಲ್ಲಿ ನೋವು, ಕೈಯಲ್ಲಿ ಜುಮ್ಮೆನಿಸುವಿಕೆ ಅಥವಾ ಬಲಹೀನತೆ ಕಾಣಿಸಿಕೊಂಡರೆ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಬೇಕು. ಲಕ್ಷಣಗಳ ಸ್ವರೂಪ ಮತ್ತು ಯಾವ ಬೆರಳುಗಳಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ ಎಂಬುದರ ಆಧಾರದ ಮೇಲೆ ವೈದ್ಯರು ಕಾರಣವನ್ನ ಗುರುತಿಸಲು ಪ್ರಯತ್ನಿಸುತ್ತಾರೆ.

ಮಧುಮೇಹ ಮತ್ತು ವಿಟಮಿನ್ B12 ಕೊರತೆಯ ಎಚ್ಚರಿಕೆ

ಮಧುಮೇಹದಿಂದ ನರಗಳಿಗೆ ಹಾನಿಯಾಗುವ ಸ್ಥಿತಿಯನ್ನ ಡಯಾಬೆಟಿಕ್ ನ್ಯೂರೋಪಥಿ ಎಂದು ಕರೆಯಲಾಗುತ್ತದೆ. ಇದರಿಂದ ಕೈ ಮತ್ತು ಕಾಲುಗಳಲ್ಲಿ ಮರಗಟ್ಟುವಿಕೆ, ಜುಮ್ಮೆನಿಸುವಿಕೆ, ಉರಿ ಅಥವಾ ನೋವು ಕಾಣಿಸಿಕೊಳ್ಳಬಹುದು. ವಿಟಮಿನ್ B12 ಕೊರತೆಯೂ ನರಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು. ಆದರೆ ಕೈ ಮರಗಟ್ಟುತ್ತಿದೆ ಎಂಬ ಒಂದೇ ಲಕ್ಷಣದಿಂದ ಮಧುಮೇಹ ಅಥವಾ ವಿಟಮಿನ್ ಕೊರತೆ ಇದೆ ಎಂದು ನಿರ್ಧರಿಸಲು ಸಾಧ್ಯವಿಲ್ಲ. ಅಗತ್ಯವಿದ್ದರೆ ವೈದ್ಯರು ರಕ್ತಪರೀಕ್ಷೆ ಸೇರಿದಂತೆ ಸೂಕ್ತ ಪರೀಕ್ಷೆಗಳನ್ನ ಶಿಫಾರಸು ಮಾಡಬಹುದು. ಸ್ವಯಂ ಔಷಧ ಸೇವಿಸುವ ಬದಲು ನಿಖರ ಕಾರಣವನ್ನ ಪತ್ತೆಹಚ್ಚುವುದು ಮುಖ್ಯ. 

ಯಾವಾಗ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು?

ಕೈ ಮರಗಟ್ಟುವಿಕೆ ಪದೇಪದೇ ಕಾಣಿಸಿಕೊಂಡರೆ, ದೀರ್ಘಕಾಲ ಮುಂದುವರಿದರೆ, ನೋವು ಅಥವಾ ಕೈಯಲ್ಲಿ ಬಲಹೀನತೆ ಕಾಣಿಸಿಕೊಂಡರೆ ವೈದ್ಯರನ್ನ ಸಂಪರ್ಕಿಸಿ. ಮಲಗುವಾಗ ಕೈ ಮೇಲೆ ಒತ್ತಡ ಬೀಳದಂತೆ ನೋಡಿಕೊಳ್ಳುವುದು ಮತ್ತು ಮಣಿಕಟ್ಟನ್ನ ಹೆಚ್ಚು ಮಡಚದೆ ನೇರವಾಗಿಡುವುದು ಸಹಾಯಕವಾಗಬಹುದು.

ಮುಖ್ಯ ಎಚ್ಚರಿಕೆ: ಕೈ ಏಕಾಏಕಿ ಮರಗಟ್ಟುವುದರ ಜೊತೆಗೆ ಮುಖದ ಒಂದು ಭಾಗ ವಾಲುವುದು, ಮಾತನಾಡಲು ತೊಂದರೆಯಾಗುವುದು ಅಥವಾ ದೇಹದ ಒಂದು ಭಾಗದಲ್ಲಿ ಹಠಾತ್ ಬಲಹೀನತೆ ಕಾಣಿಸಿಕೊಂಡರೆ ಅದು ಪಾರ್ಶ್ವವಾಯುವಿನ ಲಕ್ಷಣವಾಗಿರಬಹುದು. ಇಂತಹ ಸಂದರ್ಭದಲ್ಲಿ ತಕ್ಷಣ ತುರ್ತು ವೈದ್ಯಕೀಯ ನೆರವು ಪಡೆಯಬೇಕು. ಒಟ್ನಲ್ಲಿ ರಾತ್ರಿ ಕೈ ಮರಗಟ್ಟುವುದು ಪ್ರತಿಬಾರಿಯೂ ಗಂಭೀರ ಕಾಯಿಲೆಯ ಸೂಚನೆಯಾಗಿರಬೇಕಿಲ್ಲ. ಆದರೆ ಸಮಸ್ಯೆ ಮರುಕಳಿಸುತ್ತಿದ್ದರೆ ಅಥವಾ ಇತರ ಲಕ್ಷಣಗಳೂ ಕಾಣಿಸಿಕೊಂಡರೆ ನಿರ್ಲಕ್ಷಿಸದೆ ವೈದ್ಯಕೀಯ ಸಲಹೆ ಪಡೆಯುವುದು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮುಖ್ಯ.

(ಸೂಚನೆ: ಈ ವರದಿ ಆರೋಗ್ಯ ಜಾಗೃತಿಗಾಗಿ ಮಾತ್ರ. ಲಕ್ಷಣಗಳ ಆಧಾರದ ಮೇಲೆ ಸ್ವಯಂ ರೋಗನಿರ್ಣಯ ಮಾಡಿಕೊಳ್ಳಬೇಡಿ; ಅಗತ್ಯವಿದ್ದರೆ ವೈದ್ಯರ ಸಲಹೆ ಪಡೆಯಿರಿ. Zee Kannada News ಇದನ್ನ ದೃಢಪಡಿಸುವುದಿಲ್ಲ.)

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES