Easy tips to get rid of fish odor while cooking: ಅನೇಕ ಜನರು ಮೀನು ಬೇಯಿಸಿ ತಿನ್ನಲು ಇಷ್ಟಪಡುತ್ತಾರೆ. ಹುರಿದ ಮೀನಿನ ರುಚಿ ಬೇರೆ ಲೆವೆಲ್ ಆಗಿರುತ್ತದೆ. ಮೀನು ಬೇಯಿಸಿದ ನಂತರ ಅಡುಗೆಮನೆಯಲ್ಲಿ ಮತ್ತು ಮನೆಯಾದ್ಯಂತ ಹರಡುವ ಅದರ ವಾಸನೆಯು ನಮಗೆ ಏನೋ ಒಂಥಾರ ಸಮಸ್ಯೆ ಎನಿಸುತ್ತದೆ. ವಿಶೇಷವಾಗಿ ಮೀನು ಹುರಿದರೆ, ಅದರ ವಾಸನೆಯು ಅಡುಗೆಮನೆಗೆ ಸೀಮಿತವಾಗದೇ ಮನೆಯ ಇತರ ಕೋಣೆಗಳಲ್ಲಿಯೂ ವಾಸನೆ ಬೀರುತ್ತದೆ. ಮೀನಿನ ವಾಸನೆಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಕೆಲವೊಂದು ಟಿಪ್ಸ್‌ಗಳು ಇವೆ. ಕೆಲವು ಸರಳ ಮನೆಮದ್ದುಗಳನ್ನು ಅನುಸರಿಸುವ ಮೂಲಕ ಅದನ್ನು ಕಡಿಮೆ ಮಾಡಬಹುದು. ಮೀನು ಬೇಯಿಸಿದ ನಂತರ ಅಡುಗೆಮನೆಯಲ್ಲಿ ತಾಜಾತನವನ್ನು ಕಾಪಾಡಿಕೊಳ್ಳಲು ಇವುಗಳನ್ನು ಪ್ರಯತ್ನಿಸಿ ನೋಡಿ.
ಮೀನು ಬೇಯಿಸುವ ಮೊದಲು ಅಡುಗೆ ಮನೆಯ ಕಿಟಕಿಗಳನ್ನು ತೆರೆಯಿರಿ. ನಿಮ್ಮ ಮನೆಯಲ್ಲಿ ಎಕ್ಸಾಸ್ಟ್ ಫ್ಯಾನ್ ಇದ್ದರೆ, ಅಡುಗೆ ಮಾಡುವಾಗ ಮತ್ತು ಅಡುಗೆ ಮಾಡಿದ ನಂತರ ಸ್ವಲ್ಪ ಸಮಯದವರೆಗೆ ಅದನ್ನು ಆನ್ ಮಾಡಿ ಇಡಿ. ಇದು ಅಡುಗೆ ಮನೆಯೊಳಗಿನ ಮೀನಿನ ವಾಸನೆಯನ್ನು ಇಲ್ಲದಂತೆ ಮಾಡಲು ಸಹಾಯ ಮಾಡುತ್ತದೆ. ಬದಲಿಗೆ ಅದು ಹಾಗೆಯೇ ಉಳಿಯಲು ಬಿಡುವುದಿಲ್ಲ. ಮೀನಿನ ವಾಸನೆ ಇಲ್ಲದಂತೆ ಮಾಡಲು ಇದೊಂದು ಉಪಕಾರಿ ಆಗಿದೆ.
ಹೆಚ್ಚಿನ ಉರಿಯಲ್ಲಿ ಮೀನು ಹುರಿಯುವುದರಿಂದ ಅದರ ವಾಸನೆ ಗಾಳಿಯಲ್ಲಿ ಇನ್ನು ತುಸು ಹೆಚ್ಚಿಗೆ ಮನೆ ತುಂಬಾ ಬೀರುತ್ತದೆ. ಇದರಿಂದ ಪಕ್ಕದ ಮನೆಯವರಿಗೂ ಆ ವಾಸನೆ ಹೋಗುವ ಸಾಧ್ಯತೆ ಇರುತ್ತದೆ. ಇದರಿಂದ ಅವರಿಗೆ ತೊಂದರೆ ಆಗಬಹುದು ಅಥವಾ ಪಕ್ಕದ ಮನೆಯಲ್ಲಿ ಮೀನು ಅಡುಗೆ ಮಾಡುತ್ತಿದ್ದಾರೆ ಎನ್ನುವುದು ಸುಲಭವಾಗಿ ಗೊತ್ತಾಗಿಬಿಡುತ್ತದೆ. ಸಾಧ್ಯವಾದರೆ, ನೀವು ಮೀನನ್ನು ಫಾಯಿಲ್ ಅಥವಾ ತೆಳುವಾದ ಲೋಹದ ತಗಡಿನಲ್ಲಿ ಸುತ್ತಿ ಬೇಯಿಸಬಹುದು. ಈ ವಿಧಾನವು ಅಡುಗೆಮನೆಯಲ್ಲಿ ವಾಸನೆಯ ಪ್ರಮಾಣವನ್ನು ಕಡಿಮೆ ಮಾಡಬಹುದು.
ಮೀನಿನ ಮುಳ್ಳುಗಳು, ಅದರ ಚರ್ಮ ಅಥವಾ ಪ್ಯಾಕೇಜಿಂಗ್ ಮಾಡುವುದು ಕೂಡ ವಾಸನೆಗೆ ಕಾರಣವಾಗಬಹುದು. ಆದ್ದರಿಂದ ಮೀನು ತಿಂದ ಮೇಲೆ ಮೀನಿನ ಯಾವುದೇ ವೇಸ್ಟ್ ಅನ್ನು ಅಡುಗೆಮನೆಯ ಕಸದ ಬುಟ್ಟಿಯಲ್ಲಿ ಹೆಚ್ಚು ಹೊತ್ತು ಇಡಬೇಡಿ. ಅವುಗಳನ್ನು ಸರಿಯಾಗಿ ಪ್ಯಾಕ್ ಮಾಡಿ ಮತ್ತು ಸಾಧ್ಯವಾದಷ್ಟು ಬೇಗ ಹೊರಗಿನ ಕಸದ ಬುಟ್ಟಿಗೆ ಎಸೆಯಿರಿ. ನಿಮ್ಮ ಮನೆಯಿಂದ ದೂರದಲ್ಲಿ ಹೋಗಿ ಹಾಕಿಬಿಡಿ. ಇದರಿಂದ ಮನೆಯಲ್ಲಿ ಮೀನಿನ ವಾಸನೆ ದೀರ್ಘವಾಗಿ ಇರುವುದಿಲ್ಲ.
ಒಂದು ಸಣ್ಣ ಪಾತ್ರೆಯಲ್ಲಿ ಒಂದು ಕಪ್ ನೀರು ಮತ್ತು ಸುಮಾರು ಮೂರು ಚಮಚ ಬಿಳಿ ವಿನೆಗರ್ ತೆಗೆದುಕೊಳ್ಳಿ. ಈ ಎರಡನ್ನು ಸರಿಯಾಗಿ ಮಿಶ್ರಣವನ್ನು ಮಾಡಿ ಕೆಲವು ನಿಮಿಷಗಳ ಕಾಲ ಕುದಿಯಲು ಬಿಡಿ. ಇದು ಅಡುಗೆಮನೆಯಲ್ಲಿ ಉಳಿದಿರುವ ಬಲವಾದ ವಾಸನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇನ್ನೊಂದು ಪರಿಹಾರ ಎಂದರೆ ನಿಂಬೆ, ಕಿತ್ತಳೆ ಅಥವಾ ದ್ರಾಕ್ಷಿಹಣ್ಣಿನ ಸಿಪ್ಪೆಗಳು ಸಹ ಇದಕ್ಕೆ ಉಪಯುಕ್ತವಾಗಬಹುದು. ಒಂದು ಪಾತ್ರೆಯಲ್ಲಿ ನೀರು ತೆಗೆದುಕೊಂಡು, ಸಿಪ್ಪೆಗಳನ್ನು ಸೇರಿಸಿ. ಕೆಲವು ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬಿಸಿ ಮಾಡಬೇಕು. ಸಿಪ್ಪೆಗಳಿಂದ ಬರುವ ತಾಜಾ ಸುವಾಸನೆಯು ಅಡುಗೆಮನೆಯಲ್ಲಿ ಮೀನಿನ ವಾಸನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೇಗಿದೆ ಐಡಿಯಾ?.
ಮೀನಿನ ವಾಸನೆಯನ್ನು ಹೋಗಲಾಡಿಸಲು ಇನ್ನೊಂದು ಮನೆಮದ್ದು ಎಂದರೆ, ನೀರಿಗೆ ಸ್ವಲ್ಪ ದಾಲ್ಚಿನ್ನಿ ಅಥವಾ ಶುಂಠಿ ತುಂಡುಗಳನ್ನು ಸೇರಿಸಬೇಕು. ಕಡಿಮೆ ಉರಿಯಲ್ಲಿ ಸುಮಾರು 15 ನಿಮಿಷಗಳ ಕಾಲ ಕುದಿಸಿ. ಇದು ಮನೆಯಲ್ಲಿ ಹಗುರವಾದ ಪರಿಮಳ ಉಂಟುಮಾಡುತ್ತದೆ. ಮೀನಿನ ವಾಸನೆಯನ್ನು ಕಡಿಮೆ ಮಾಡುತ್ತದೆ. ಅಡುಗೆ ಸೋಡಾವನ್ನು ವಾಸನೆಯನ್ನು ಹೀರಿಕೊಳ್ಳಲು ಬಳಸಲಾಗುತ್ತದೆ. ಆದ್ದರಿಂದ, ನೀವು ಅಡುಗೆಮನೆಯಲ್ಲಿ ಪಾತ್ರೆಯಲ್ಲಿ ಸ್ವಲ್ಪ ಅಡಿಗೆ ಸೋಡಾವನ್ನು ಇಡಬಹುದು. ಇದು ಸುತ್ತಮುತ್ತಲಿನ ವಾಸನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.