ಬೋಳು ತಲೆಗೆ ಈರುಳ್ಳಿ ರಸ ಹಚ್ಚಿದ್ರೆ ಹೊಸ ಕೂದಲು ಬರುತ್ತಾ.? ಇಲ್ಲಿದೆ ಶಾಕ್ ಸತ್ಯ
ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ 'ಈರುಳ್ಳಿ ರಸ' ಹಚ್ಚಿದ್ರೆ ಸಾಕು, ಉದುರೋ ಕೂದಲು ನಿಲ್ಲುತ್ತೆ ಹಾಗೂ ಬೋಳು ತಲೆಯಲ್ಲಿ ಹೊಸ ಕೂದಲು ಹುಟ್ಟುತ್ತೆ ಅನ್ನೋ ಪ್ರಚಾರ ಜೋರಾಗಿದೆ. ಆದರೆ ಈ ಮನೆಮದ್ದಿನ ಹಿಂದೆ ಎಷ್ಟು ಸತ್ಯವಿದೆ? ತೆಂಗಿನ ಎಣ್ಣೆ ಅಥವಾ ಅಲೋವೆರಾ ಜೆಲ್ ಜೊತೆ ಇದನ್ನು ಹೇಗೆ ಬಳಸಬೇಕು? ಇದರ ಅಡ್ಡಪರಿಣಾಮಗಳೇನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ..
Hair growth tips : ಇಂದಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಯಾರನ್ನ ಕಾಡ್ತಿಲ್ಲ ಹೇಳಿ? ಚಿಕ್ಕ ವಯಸ್ಸಿನಲ್ಲೇ ಕೂದಲು ಉದುರಿ ತಲೆ ಬೋಳಾಗ್ತಿರೋದನ್ನು ನೋಡಿ ನಾವೆಲ್ಲರೂ ಟೆನ್ಷನ್ ಮಾಡಿಕೊಳ್ತೀವಿ. ಒತ್ತಡ, ತಿನ್ನೋ ಆಹಾರದಲ್ಲಿ ಪೋಷಕಾಂಶಗಳ ಕೊರತೆ, ಹಾರ್ಮೋನ್ ಬದಲಾವಣೆಗಳು ಹೀಗೆ ನಾನಾ ಕಾರಣಗಳಿಂದ ಈ ಸಮಸ್ಯೆ ಎದುರಾಗುತ್ತೆ. ಇಂತಹ ಟೈಮಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಅಥವಾ ಫ್ರೆಂಡ್ಸ್ ಹತ್ತಿರ ಕೇಳಿ ನಾವೆಲ್ಲರೂ ಮಾಡೋ ಮೊದಲ ಕೆಲಸ ಅಂದ್ರೆ ಮನೆಮದ್ದುಗಳ ಮೊರೆ ಹೋಗೋದು. ಅದ್ರಲ್ಲೂ 'ಈರುಳ್ಳಿ ರಸ' ಹಚ್ಚಿದ್ರೆ ಸಾಕು, ಉದುರೋ ಕೂದಲು ನಿಲ್ಲುತ್ತೆ, ಬೋಳು ತಲೆಯಲ್ಲಿ ಹೊಸ ಕೂದಲು ಹುಟ್ಟುತ್ತೆ ಅನ್ನೋ ಮಾತುಗಳು ಎಲ್ಲೆಡೆ ಕೇಳಿಬರ್ತಿವೆ. ಹಾಗಾದ್ರೆ, ಈ ಮಾತುಗಳಲ್ಲಿ ಎಷ್ಟು ಸತ್ಯವಿದೆ? ಬನ್ನಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ಈರುಳ್ಳಿ ರಸ ಹಚ್ಚಿದ್ರೆ ನಿಜಕ್ಕೂ ಹೊಸ ಕೂದಲು ಬರುತ್ತಾ?
ಸಾಮಾಜಿಕ ಜಾಲತಾಣಗಳಲ್ಲಿ ಈರುಳ್ಳಿ ರಸದ ಬಗ್ಗೆ ಬರುವ ಪ್ರಚಾರ ನೋಡಿ ನಾವೆಲ್ಲರೂ ಅದನ್ನೇ ನಂಬಿಬಿಡುತ್ತೇವೆ. ಆದರೆ ವೈಜ್ಞಾನಿಕವಾಗಿ ಹೇಳೋದಾದ್ರೆ, ಬೋಳು ಕಲೆಗಳ ಮೇಲೆ ಅಥವಾ ಸಂಪೂರ್ಣ ಬೋಳಾದ ತಲೆ ಮೇಲೆ ಈರುಳ್ಳಿ ರಸ ಹಚ್ಚಿದರೆ ಖಂಡಿತ ಹೊಸ ಕೂದಲು ಬೆಳೆಯುತ್ತೆ ಅನ್ನೋದಕ್ಕೆ ಯಾವುದೇ ಸ್ಪಷ್ಟ ಅಥವಾ ಬಲವಾದ ವೈಜ್ಞಾನಿಕ ಪುರಾವೆಗಳಿಲ್ಲ. ಈರುಳ್ಳಿ ರಸದಲ್ಲಿ ಸಲ್ಫರ್ (Sulphur) ಅಂಶ ಇರೋದ್ರಿಂದ ಇದು ಕೂದಲಿನ ಬುಡಕ್ಕೆ ತಾತ್ಕಾಲಿಕವಾಗಿ ಪೋಷಣೆ ನೀಡಬಹುದೇ ಹೊರತು, ಆನುವಂಶಿಕ ಬೋಳು ಅಥವಾ ಗಂಭೀರ ಆರೋಗ್ಯ ಸಮಸ್ಯೆಯಿಂದ ಬರೋ ಕೂದಲು ಉದುರುವಿಕೆಯನ್ನು ಇದು ಸಂಪೂರ್ಣವಾಗಿ ವಾಸಿ ಮಾಡೋದಿಲ್ಲ.
ತೆಂಗಿನ ಎಣ್ಣೆ ಮತ್ತು ಅಲೋವೆರಾ ಜೆಲ್ ಜೊತೆ ಈರುಳ್ಳಿ ರಸ ಬಳಸುವುದು ಹೇಗೆ?
ತೆಂಗಿನ ಎಣ್ಣೆ ಜೊತೆ: ತೆಂಗಿನ ಎಣ್ಣೆ ಕೂದಲಿಗೆ ತೇವಾಂಶ ನೀಡಲು ಸಹಾಯ ಮಾಡುತ್ತೆ. ಆದರೆ ಈರುಳ್ಳಿ ರಸದೊಂದಿಗೆ ಎಣ್ಣೆ ಬೆರೆಸಿ ಹಚ್ಚಿದ ತಕ್ಷಣ ಕೂದಲು ದಪ್ಪಗಾಗಿ ಬೆಳೆಯುತ್ತೆ ಅಂತ ನಂಬೋದು ತಪ್ಪು.
ಅಲೋವೆರಾ ಜೆಲ್ ಜೊತೆ: ಅಲೋವೆರಾ ಜೆಲ್ ನೆತ್ತಿಗೆ ತಂಪಾದ ಅನುಭವ ನೀಡುತ್ತೆ. ಆದರೆ ಅಲೋವೆರಾ ಮತ್ತು ಈರುಳ್ಳಿ ರಸದ ಮಿಶ್ರಣವು ತಲೆಹೊಟ್ಟು ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ ಅಥವಾ ಸೋಂಕುಗಳನ್ನು ತಡೆಯುತ್ತದೆ ಎನ್ನೋದಕ್ಕೂ ಸಾಕ್ಷಿ ಇಲ್ಲ.
ಹಾಗಾದರೆ ಇದನ್ನು ಹೇಗೆ ಬಳಸಬೇಕು? ಮೊದಲು ಈರುಳ್ಳಿಯನ್ನು ರುಬ್ಬಿ ರಸ ತೆಗೆದುಕೊಂಡು, ಹತ್ತಿ ಉಂಡೆ ಸಹಾಯದಿಂದ ನೆತ್ತಿಗೆ ಹಚ್ಚಿ ಬೆರಳುಗಳಿಂದ ನಿಧಾನವಾಗಿ ಮಸಾಜ್ ಮಾಡಬೇಕು. ಸುಮಾರು ಹದಿನೈದರಿಂದ ಮೂ'ವತ್ತು ನಿಮಿಷ ಬಿಟ್ಟು ಮೈಲ್ಡ್ ಆದ ಶಾಂಪೂ ಬಳಸಿ ತಲೆ ತೊಳೆಯಬೇಕು. ಆದರೆ ನೆನಪಿಡಿ, ನೇರವಾಗಿ ಹಚ್ಚುವ ಮುಂಚೆ ಕೈ ಮೇಲೆ ಸ್ವಲ್ಪ ಹಚ್ಚಿ ಅಲರ್ಜಿ ಆಗುತ್ತಾ ಇಲ್ಲವಾ ಅಂತ ಚೆಕ್ ಮಾಡೋದು ಒಳ್ಳೆಯದು.
ಮುನ್ನೆಚ್ಚರಿಕೆ ತುಂಬಾ ಮುಖ್ಯ
ಈರುಳ್ಳಿ ರಸ ತುಂಬಾ ಬಿಸಿಯಾದ ಅಥವಾ ತೀಕ್ಷ್ಣವಾದ ಗುಣ ಹೊಂದಿದೆ. ಕೆಲವರ ಚರ್ಮ ತುಂಬಾನೇ ಸೂಕ್ಷ್ಮವಾಗಿರುತ್ತದೆ. ಅಂತಹವರ ತಲೆಗೆ ಈರುಳ್ಳಿ ರಸ ಹಚ್ಚಿದರೆ ಸುಡುವ ಅನುಭವ, ತುರಿಕೆ, ಕೆಂಪುಚುಕ್ಕೆಗಳು ಅಥವಾ ಅಲರ್ಜಿ ಉಂಟಾಗಬಹುದು. ಒಂದು ವೇಳೆ ನಿಮಗೆ ಇದು ನೆತ್ತಿಯಲ್ಲಿ ಉರಿ ಅಥವಾ ಅಲರ್ಜಿ ಉಂಟುಮಾಡಿದರೆ, ತಕ್ಷಣವೇ ನೀರಿನಿಂದ ತೊಳೆಯಿರಿ. ಅಲ್ಲದೆ, ನೆತ್ತಿಯ ಮೇಲೆ ಯಾವುದೇ ರೀತಿಯ ಗಾಯಗಳು, ಹುಣ್ಣುಗಳು ಅಥವಾ ಉರಿಯೂತ ಇದ್ದರೆ ಅಪ್ಪಿತಪ್ಪೆಯೂ ಈರುಳ್ಳಿ ರಸವನ್ನು ಹಚ್ಚಬೇಡಿ.
ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು?
ನಿಮಗೆ ಅತಿಯಾಗಿ ಕೂದಲು ಉದುರುತ್ತಿದ್ದರೆ, ತಲೆ ಅಲ್ಲಿಲ್ಲಿ ತೇಪೆ ತೇಪೆಯಾಗಿ ಕೂದಲು ಉದುರಿ ಬೋಳಾಗುತ್ತಿದ್ದರೆ ಅಥವಾ ಹಠಾತ್ತನೆ ಕೂದಲು ಉದುರುವ ಸಮಸ್ಯೆ ಹೆಚ್ಚಾದರೆ, ಸುಮ್ಮನೆ ಮನೆಮದ್ದುಗಳ ಹಿಂದೆ ಬಿದ್ದು ಸಮಯ ವ್ಯರ್ಥ ಮಾಡಬೇಡಿ. ತಕ್ಷಣವೇ ಒಬ್ಬ ಒಳ್ಳೆಯ ಚರ್ಮರೋಗ ತಜ್ಞರನ್ನು (Dermatologist) ಭೇಟಿ ಮಾಡಿ. ಕೂದಲು ಉದುರಲು ಅಸಲಿ ಕಾರಣ ಏನು ಅಂತ ಪತ್ತೆ ಹಚ್ಚಿ, ವೈದ್ಯರು ನೀಡುವ ಸರಿಯಾದ ಚಿಕಿತ್ಸೆ ಪಡೆದುಕೊಳ್ಳುವುದು ಬಹಳ ಮುಖ್ಯ. ಈರುಳ್ಳಿ ರಸ ಕೇವಲ ಒಂದು ತಾತ್ಕಾಲಿಕ ಮನೆಮದ್ದು ಅಷ್ಟೇ, ಅದನ್ನೇ ದೊಡ್ಡ ಚಿಕಿತ್ಸೆ ಎಂದು ನಂಬಬೇಡಿ!