SOCIAL MEDIA

Newsletter

PARTNER SITES
Select Language Select State

ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಶಾಕ್‌: ಈ ವಸ್ತುಗಳ ಬೆಲೆಯೂ ಹೆಚ್ಚಳ!

ದೇಶದ ಪ್ರಮುಖ ಗ್ರಾಹಕ ಉತ್ಪನ್ನ ತಯಾರಕ ಸಂಸ್ಥೆ ಹಿಂದೂಸ್ತಾನ್‌ ಯೂನಿಲಿವರ್‌ ಲಿಮಿಟೆಡ್‌ ತನ್ನ ಡಿಟರ್ಜೆಂಟ್‌ ಬ್ರ್ಯಾಂಡ್‌ಗಳ ಬೆಲೆಯನ್ನು ಶೇ11. ರಷ್ಟು ಏರಿಕೆ ಮಾಡಿದೆ. ಹೆಚ್ಚುತ್ತಿರುವ ಕಚ್ಚಾ ವಸ್ತುಗಳ ವೆಚ್ಚ ಮತ್ತು ಹಣದುಬ್ಬರ ಹೊಡೆತದಿಂದಾಗಿ ಕಂಪನಿ ಈ ನಿರ್ಧಾರ ಕೈಗೊಂಡಿದೆ.

Written By Yashaswini V
Published: Nov 12, 2026, 13:08 IST | Updated: Nov 12, 2026, 13:31 IST
Join

ಬೆಂಗಳೂರು : ಈಗಾಗಲೇ ಬೆಲೆ ಏರಿಕೆಯಿಂದ ಬೆಂದು ಹೋಗಿದ್ದ ಜನಸಾಮಾನ್ಯರಿಗೆ ಈಗ ಮತ್ತೊಂದು ಶಾಕ್‌ ಎದುರಾಗಿದೆ. ದೇಶದ ಪ್ರಮುಖ ಗ್ರಾಹಕ ಉತ್ಪನ್ನ ತಯಾರಕ ಸಂಸ್ಥೆಯಾದ ಹಿಂದೂಸ್ತಾನ್‌ ಯೂನಿಲಿವರ್‌ ಲಿಮಿಟೆಡ್‌, ತನ್ನ ಜನಪ್ರಿಯ ಡಿಟರ್ಜೆಂಟ್‌ ಬ್ರ್ಯಾಂಡ್‌ಗಳಾದ ಸರ್ಫ್‌ಎಕ್ಸೆಲ್‌, ರಿನ್‌, ಮತ್ತು ವೀಲ್‌ ಉತ್ಪನ್ನ ಬೆಲೆಗಳನ್ನು ಶೇ.11ರಷ್ಟು ಏರಿಕೆ ಮಾಡಿದೆ.

ಅಂತರಾಷ್ಟ್ರೀಯ ಹಾಗೂ ದೇಶಿಯ ಮಾರುಕಟ್ಟೆಯಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಕಚ್ಚಾ ವಸ್ತುಗಳ ವೆಚ್ಚ, ಸಾಗಾಣಿಕೆ ದರ ಮತ್ತು ಹಣದುಬ್ಬರದ ಹೊಡೆತದಿಂದಾಗಿ ಕಂಪನಿಯು ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಪ್ರಾಡಕ್ಟ್‌ ಪ್ಯಾಕೆಟ್‌ ಗಾತ್ರ ಮತ್ತು ತೂಕಕ್ಕೆ ಅನುಗುಣವಾಗಿ ಬೆಲೆಯಲ್ಲಿ ಕನಿಷ್ಟ 1 ರೂ. ಇಂದ ಗರಿಷ್ಠ 10 ರೂ. ಗಳವರೆಗೆ ಏರಿಕೆ ಮಾಡಲಾಗಿದೆ. ಈ ಪರಿಷ್ಕೃತ ದರಗಳು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಮಧ್ಯಮ ಮತ್ತು ಬಡ ವರ್ಗದ ಕುಟುಂಬಗಳ ಮಾಸಿಕ ಬಜೆಟ್‌ ಮೇಲೆ ನೇರ ಪರಿಣಾಮ ಬೀರಲಿದೆ.

ಉತ್ಪನ್ನಗಳ ಬೆಲೆ ವಿವರ:

ದಿನ ನಿತ್ಯ ಮನೆಗಳಲ್ಲಿ ಬಳಸುವ ಬಟ್ಟೆ ಒಗೆಯುವ ಸೋಪು ಮತ್ತು ಡಿಟರ್ಜೆಂಟ್‌ ಪೌಡರ್‌ಗಳ ಬೆಲೆಗಳಲ್ಲಿ ಗಮನರ್ಹ ಬದಲಾವಣೆ ಕಂಡು ಬಂದಿದ್ದು, ಈ ಪ್ರಮುಖ ಉತ್ಪನ್ನಗಳ ನೂತನ ದರ ಪಟ್ಟಿ ಇಲ್ಲಿದೆ.

ಸರ್ಫ್‌ ಎಕ್ಸೆಲ್‌ ಕ್ವಿಕ್‌ ವಾಶ್‌ : ಈ ಬ್ರ್ಯಾಂಡ್‌ನ 1 ಕೆಜಿ ಪ್ಯಾಕ್‌ ಬೆಲೆಯಲ್ಲಿ ಬರೋಬ್ಬರಿ 10 ರೂ. ಹೆಚ್ಚಳವಾಗಿದೆ. ಈ ಹಿಂದೆ 235 ರೂ. ಇದ್ದ 1ಕೆಜಿ ಪ್ಯಾಕ್‌ ಬೆಲೆ ಇದೀಗ 245 ರೂ.ಗೆ ಹೆಚ್ಚಳವಾಗಿದೆ. ಅದೇ ರೀತಿ  500 ಗ್ರಾಂ ಪ್ಯಾಕ್‌ ಬೆಲೆ ಕೂಡ ಏರಿಕೆಯಾಗಿ 128 ರೂ. ತಲುಪಿದೆ.

ಸರ್ಫ್‌ ಎಕ್ಸೆಲ್‌ ಈಸಿ ವಾಶ್‌ : ಮಧ್ಯಮ ವರ್ಗದವರು ಹೆಚ್ಚಾಗಿ ಬಳಸುವ ಈಸಿ ವಾಶ್‌ 1 ಕೆಜಿ ಪ್ಯಾಕ್‌ ಬೆಲೆ  167 ರೂ. ಇದ್ದದ್ದು, ಈಗ 172 ರೂ. ಗೆ ಏರಿಕೆಯಾಗಿದೆ. ಇನ್ನೂ 500 ಗ್ರಾಂ ಪ್ಯಾಕ್‌ ಬೆಲೆ ಕೂಡ 87 ರೂ. ಗೆ ತಲುಪಿದೆ.  

ರಿನ್‌ ಮತ್ತು ವೀಲ್‌ ಉತ್ಪನ್ನ : ಕೇವಲ ಸರ್ಫ್‌ ಎಕ್ಸೆಲ್‌ ಮಾತ್ರವಲ್ಲದೆ, ಕಡಿಮೆ ಬೆಲೆಯ ರಿನ್‌ ಡಿಟರ್ಜೆಂಟ್‌ ಪೌಡರ್‌, ರಿನ್‌ ಬಾರ್‌ ಸೋಪ್‌ ಹಾಗೂ ವೀಲ್‌ ಸೋಪ್‌ ಮತ್ತು ಪೌಡರ್‌ ಬೆಲೆಗಳನ್ನೂ ಕೂಡ ಕಂಪನಿ ಪರಿಷ್ಕರಿಸಿದೆ. ಸಣ್ಣ ಪ್ಯಾಕೆಟ್‌ಗಳ ಮೇಲೂ 1 ರಿಂದ 2 ರೂ. ಗಳವರೆಗೆ ಹೆಚ್ಚಳ ಮಾಡಿರುವುದರಿಂದ ದಿನಗೂಲಿ ನೌಕರರು ಮತ್ತು ಬಡ ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ.

ಬೆಲೆ ಏರಿಕೆಯ ಕುರಿತು ಪ್ರತಿಕ್ರಿಯಿಸಿದ ಹಿಂದೂಸ್ತಾನ್‌ ಯೂನಿಲಿವರ್‌ ಲಿಮಿಟೆಡ್‌ ಕಂಪನಿಯು, ಕಳೆದ ಕೆಲವು ತಿಂಗಳಿಂದ ಉತ್ಪಾದನಾ ವೆಚ್ಚ ಮತ್ತು ಪ್ಯಾಕೇಜಿಂಗ್‌ ವೆಚ್ಚಗಳು ಗಣನೀಯವಾಗಿ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿನ ಹಣದುಬ್ಬರದ ಒತ್ತಡವನ್ನು ನಿಭಾಯಿಸಲು ಮತ್ತು ಉತ್ಪನ್ನಗಳ ಗುಣಮಟ್ಟವನ್ನು ಕಾಯ್ದುಕೊಳ್ಳಲು ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ತಿಳಿಸಿದೆ.

ರಾಜ್ಯ ಹಾಗೂ ದೇಶದಲ್ಲಿ ಈಗಾಗಲೇ ಬೆಲೆ ಏರಿಕೆಯನ್ನು ಕಂಡು ಜನ ಸಾಮಾನ್ಯರು ಸುಸ್ತಾಗಿದ್ದಾರೆ. ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಹೆಚ್ಚಳದಿಂದಾಗಿ ಸಾಗಾಣಿಕೆಯ ವೆಚ್ಚ ಗಗನಕ್ಕೇರಿದೆ. ಇದರ ಬೆನ್ನಲ್ಲೇ ಇತ್ತೀಚೆಗಷ್ಟೇ ರಾಜ್ಯದಲ್ಲಿ ಸರ್ಕಾರಿ ಬಸ್‌ ದರ ಹೆಚ್ಚಳವಾಗಿದ್ದು, ಪ್ರಯಾಣಿಕರಿಗೆ ಹೊರೆಯಾಗಿದೆ. ಅಷ್ಟೇ ಅಲ್ಲದೆ, ಅಗತ್ಯ ವಸ್ತುಗಳಾದ ನಂದಿನಿ ಹಾಲಿನ ದರ ಮತ್ತು ಅಕ್ಕಿಯ ಬೆಲೆ ಕೂಡ ಗಣನೀಯವಾಗಿ ಏರಿಕೆ ಕಂಡಿದೆ.

ತರಕಾರಿ, ದಿನಸಿ, ಹಾಲು, ಪ್ರಯಾಣ ಬೆಲೆಯ ಹೆಚ್ಚಳದ ನಡುವೆ ಇದೀಗ ನಿತ್ಯ ಬಳಕೆಯ ಸೋಪು ಮತ್ತು ಡಿಟರ್ಜೆಂಟ್‌ ಪೌಡರ್‌ ಬೆಲೆಗಳೂ ಕೂಡ ಜಾಸ್ತಿಯಾಗಿರುವುದು ಸಾರ್ವಜನಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮುಂದಿನ ದಿನಗಳಲ್ಲಿ ಇತರ ಎಫ್‌ಎಂಸಿಜಿ ಕಂಪನಿಗಳೂ ಸಹ ಇದೇ ದಾರಿ ಹಿಡಿಯುವ ಸಾಧ್ಯತೆ ಇದ್ದು, ದಿನ ನಿತ್ಯ ಮನೆ ನಿರ್ವಹಣೆಯ ವೆಚ್ಚ ಮತ್ತಷ್ಟು ದುಬಾರಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

ZEENEWS TRENDING STORIES