SOCIAL MEDIA

Newsletter

PARTNER SITES
Select Language Select State

ಹೊಟ್ಟೆಯ ಸಮಸ್ಯೆಗೆ ಒತ್ತಡವೇ ವಿಲನ್‌? ಮಲಬದ್ಧತೆ ಹಿಂದಿನ ಅಚ್ಚರಿಯ ಕಾರಣ ಬಯಲು!

ನಾರಿನಂಶ ಹೆಚ್ಚಿರುವ ಆಹಾರ ಸೇವಿಸಿ, ಸಾಕಷ್ಟು ನೀರು ಕುಡಿದರೂ ಮಲಬದ್ಧತೆ ಸಮಸ್ಯೆ ಕಾಡುತ್ತಿದ್ದರೆ ಅದಕ್ಕೆ ದೀರ್ಘಕಾಲದ ಮಾನಸಿಕ ಒತ್ತಡವೂ ಕಾರಣವಾಗಿರಬಹುದು. ಒತ್ತಡದಿಂದ ಕರುಳಿನ ಚಲನೆ ನಿಧಾನವಾಗಿ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ನಿಯಮಿತ ವ್ಯಾಯಾಮ, ಯೋಗ, ಉತ್ತಮ ನಿದ್ರೆ ಹಾಗೂ ಒತ್ತಡ ನಿಯಂತ್ರಣಕ್ಕೆ ಆದ್ಯತೆ ನೀಡುವಂತೆ ತಜ್ಞರು ಸಲಹೆ ನೀಡಿದ್ದಾರೆ.

Written By Puttaraj K Alur
Published: Nov 14, 2026, 15:26 IST | Updated: Nov 14, 2026, 15:44 IST
Image Credit: Stress and Digestion
Join

Stress and Digestion: ಇತ್ತೀಚಿನ ದಿನಗಳಲ್ಲಿ ಹಲವರನ್ನ ಕಾಡುತ್ತಿರುವ ಸಾಮಾನ್ಯ ಆರೋಗ್ಯ ಸಮಸ್ಯೆಗಳಲ್ಲಿ ಮಲಬದ್ಧತೆಯೂ ಒಂದು. ಹೊಟ್ಟೆ ಸರಿಯಾಗಿ ಖಾಲಿಯಾಗದಿರುವುದು, ಹೊಟ್ಟೆ ಉಬ್ಬರ, ಭಾರವಾದ ಅನುಭವ, ಹೊಟ್ಟೆಯಲ್ಲಿ ಸೆಳೆತ ಹಾಗೂ ವಾಕರಿಕೆಯಂತಹ ತೊಂದರೆಗಳು ಈ ಸಮಸ್ಯೆಯಿಂದ ಕಾಣಿಸಿಕೊಳ್ಳಬಹುದು. ಮಲಬದ್ಧತೆಯಿಂದ ಪರಿಹಾರ ಪಡೆಯಲು ನಾರಿನಂಶ ಹೆಚ್ಚಿರುವ ಆಹಾರ ಸೇವಿಸುವುದು, ಸಾಕಷ್ಟು ನೀರು ಕುಡಿಯುವುದು ಮತ್ತು ದೈಹಿಕ ಚಟುವಟಿಕೆಗಳನ್ನ ಹೆಚ್ಚಿಸಿಕೊಳ್ಳುವುದು ಮುಖ್ಯವೆಂದು ಹೇಳಲಾಗುತ್ತದೆ. ಆದರೆ ಈ ಎಲ್ಲಾ ಕ್ರಮಗಳನ್ನ ಅನುಸರಿಸಿದರೂ ಕೆಲವರಿಗೆ ಮಲಬದ್ಧತೆ ಸಮಸ್ಯೆ ಕಡಿಮೆಯಾಗುವುದಿಲ್ಲ. ಇದಕ್ಕೆ ದೀರ್ಘಕಾಲದ ಮಾನಸಿಕ ಒತ್ತಡವೂ ಒಂದು ಕಾರಣವಾಗಿರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಒತ್ತಡಕ್ಕೂ ಮಲಬದ್ಧತೆಗೂ ಏನು ಸಂಬಂಧ?

ದೀರ್ಘಕಾಲದ ಮಾನಸಿಕ ಒತ್ತಡವು ಜೀರ್ಣಾಂಗ ವ್ಯವಸ್ಥೆಯ ಸಹಜ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು. ಕೆಲವರು ಆಹಾರದಲ್ಲಿ ನಾರಿನಂಶ ಹೆಚ್ಚಿಸಿಕೊಳ್ಳುತ್ತಾರೆ, ನಿಯಮಿತವಾಗಿ ನೀರು ಕುಡಿಯುತ್ತಾರೆ. ಅಗತ್ಯ ಔಷಧಿಗಳನ್ನೂ ತೆಗೆದುಕೊಳ್ಳುತ್ತಾರೆ. ಆದರೂ ಮಲಬದ್ಧತೆ ಸಮಸ್ಯೆ ಮುಂದುವರಿಯಬಹುದು. ಇಂತಹ ಸಂದರ್ಭಗಳಲ್ಲಿ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯದ ಬಗ್ಗೆಯೂ ಗಮನಹರಿಸುವುದು ಅಗತ್ಯವೆಂದು ವೈದ್ಯರು ತಿಳಿಸಿದ್ದಾರೆ.

ದೀರ್ಘಕಾಲದ ಒತ್ತಡದಿಂದ ಕರುಳಿನ ಚಲನೆ ನಿಧಾನವಾಗುತ್ತದೆಯೇ?

ನಿರಂತರವಾಗಿ ಮಾನಸಿಕ ಒತ್ತಡಕ್ಕೆ ಒಳಗಾದಾಗ ದೇಹದ ನರಮಂಡಲವು ಒತ್ತಡದ ಪ್ರತಿಕ್ರಿಯೆಯ ಸ್ಥಿತಿಯಲ್ಲಿರಬಹುದು. ಇದು ಕರುಳಿನ ಸಹಜ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಪರಿಣಾಮ ಕರುಳಿನ ಚಲನೆ ನಿಧಾನವಾಗಿ ಮಲವಿಸರ್ಜನೆಯ ಸಾಮಾನ್ಯ ಕ್ರಮದಲ್ಲಿ ವ್ಯತ್ಯಯ ಉಂಟಾಗಬಹುದು. ಇದರಿಂದ ಮಲಬದ್ಧತೆ ಸಮಸ್ಯೆ ಹೆಚ್ಚಾಗಬಹುದು ಎಂದು ತಜ್ಞರು ವಿವರಿಸಿದ್ದಾರೆ. ಇದಲ್ಲದೆ ಒತ್ತಡದಲ್ಲಿರುವ ವ್ಯಕ್ತಿಗಳ ದೈನಂದಿನ ಜೀವನಶೈಲಿಯಲ್ಲಿಯೂ ಕೆಲವು ಬದಲಾವಣೆಗಳು ಕಾಣಿಸಿಕೊಳ್ಳಬಹುದು.

ಕೆಲವರು ಸಮಯಕ್ಕೆ ಸರಿಯಾಗಿ ಊಟ ಮಾಡುವುದಿಲ್ಲ. ದೈಹಿಕ ಚಟುವಟಿಕೆಗಳಿಗೂ ಹೆಚ್ಚು ಸಮಯ ನೀಡುವುದಿಲ್ಲ. ಮಲವಿಸರ್ಜನೆಯ ಬಯಕೆಯಾದರೂ ಅದನ್ನ ಮುಂದೂಡುವ ಅಭ್ಯಾಸ ಬೆಳೆಸಿಕೊಳ್ಳುತ್ತಾರೆ. ಕೆಲವರಿಗೆ ಶೌಚಾಲಯದಲ್ಲಿ ಕುಳಿತಾಗ ಸೊಂಟದ ಕೆಳಭಾಗದಲ್ಲಿರುವ ಸ್ನಾಯುಗಳನ್ನ ಸರಿಯಾಗಿ ಸಡಿಲಗೊಳಿಸಲು ಸಾಧ್ಯವಾಗುವುದಿಲ್ಲ. ಇಂತಹ ಹಲವು ಕಾರಣಗಳು ಮಲಬದ್ಧತೆಯ ಸಮಸ್ಯೆಯನ್ನ ಮತ್ತಷ್ಟು ಹೆಚ್ಚಿಸಬಹುದು. ಹೀಗಾಗಿ ಆಹಾರ ಮತ್ತು ನೀರಿನ ಸೇವನೆಗೆ ಮಾತ್ರ ಸೀಮಿತವಾಗದೆ ಮಾನಸಿಕ ಒತ್ತಡವನ್ನ ನಿಯಂತ್ರಿಸುವುದೂ ಮುಖ್ಯವಾಗಿದೆ.

ಮಲಬದ್ಧತೆ ಸಮಸ್ಯೆ ಕಡಿಮೆ ಮಾಡಲು ಈ ಕ್ರಮಗಳನ್ನ ಅನುಸರಿಸಿ

ಮಾನಸಿಕ ಒತ್ತಡವನ್ನ ಕಡಿಮೆ ಮಾಡಿಕೊಂಡು ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಲು ತಜ್ಞರು ಕೆಲವು ಸಲಹೆಗಳನ್ನ ನೀಡಿದ್ದಾರೆ.

ನಿಯಮಿತ ವ್ಯಾಯಾಮ: ಪ್ರತಿದಿನ ನಡಿಗೆ, ಸೈಕ್ಲಿಂಗ್, ಈಜು ಅಥವಾ ಲಘು ವ್ಯಾಯಾಮ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು.

ಯೋಗ ಮತ್ತು ಉಸಿರಾಟದ ಅಭ್ಯಾಸ: ಬಾಲಾಸನ, ಭ್ರಮರಿ ಹಾಗೂ ಅನುಲೋಮ ವಿಲೋಮದಂತಹ ಯೋಗ ಮತ್ತು ಉಸಿರಾಟದ ಕ್ರಮಗಳನ್ನ ಅಭ್ಯಾಸ ಮಾಡಬಹುದು.

ಸಾಕಷ್ಟು ನಿದ್ರೆ: ಪ್ರತಿದಿನ 7ರಿಂದ 8 ಗಂಟೆಗಳ ಕಾಲ ಉತ್ತಮ ನಿದ್ರೆ ಪಡೆಯುವುದು ಅಗತ್ಯ.

ಕೆಫೀನ್ ಮತ್ತು ಮದ್ಯಪಾನ ನಿಯಂತ್ರಣ: ಕೆಫೀನ್ ಹಾಗೂ ಮದ್ಯಪಾನದಂತಹ ಅಭ್ಯಾಸಗಳನ್ನ ಮಿತಿಗೊಳಿಸಬೇಕು.

ಪ್ರಕೃತಿಯೊಂದಿಗೆ ಸಮಯ ಕಳೆಯಿರಿ: ಪ್ರಕೃತಿಯ ನಡುವೆ ಸ್ವಲ್ಪ ಸಮಯ ಕಳೆಯುವುದು ಮತ್ತು ಇಷ್ಟವಾದ ಸಂಗೀತ ಆಲಿಸುವುದು ಒತ್ತಡ ಕಡಿಮೆ ಮಾಡಿಕೊಳ್ಳಲು ಸಹಕಾರಿಯಾಗಬಹುದು.

ಭಾವನೆಗಳನ್ನ ಹಂಚಿಕೊಳ್ಳಿ: ಮನಸ್ಸಿನಲ್ಲಿರುವ ಆತಂಕ ಮತ್ತು ಭಾವನೆಗಳನ್ನ ನಂಬಿಕಸ್ಥ ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಬೇಕು.

ಯಾವಾಗ ವೈದ್ಯರನ್ನ ಸಂಪರ್ಕಿಸಬೇಕು?

ಮಲಬದ್ಧತೆ ಸಮಸ್ಯೆ ದೀರ್ಘಕಾಲ ಮುಂದುವರಿದರೆ ಅದನ್ನ ನಿರ್ಲಕ್ಷಿಸಬಾರದು. ವಿಶೇಷವಾಗಿ ಹೊಟ್ಟೆನೋವು ತೀವ್ರವಾಗಿದ್ದರೆ ಅಥವಾ ಮಲದಲ್ಲಿ ರಕ್ತ ಕಂಡುಬಂದರೆ ವೈದ್ಯರನ್ನ ಸಂಪರ್ಕಿಸುವುದು ಅಗತ್ಯವೆಂದು ತಜ್ಞರು ಸಲಹೆ ನೀಡಿದ್ದಾರೆ. ಒಟ್ನಲ್ಲಿ ಮಲಬದ್ಧತೆ ಸಮಸ್ಯೆಗೆ ಆಹಾರ ಪದ್ಧತಿ ಮತ್ತು ನೀರಿನ ಸೇವನೆಯಷ್ಟೇ ಕಾರಣವಾಗುವುದಿಲ್ಲ. ದೀರ್ಘಕಾಲದ ಮಾನಸಿಕ ಒತ್ತಡವೂ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಆರೋಗ್ಯಕರ ಆಹಾರ, ಸಾಕಷ್ಟು ನೀರು, ನಿಯಮಿತ ವ್ಯಾಯಾಮ ಮತ್ತು ಉತ್ತಮ ನಿದ್ರೆಯ ಜೊತೆಗೆ ಮಾನಸಿಕ ಆರೋಗ್ಯಕ್ಕೂ ಆದ್ಯತೆ ನೀಡುವುದು ಮುಖ್ಯವಾಗಿದೆ.

(ಸೂಚನೆ: ಇದು ಆರೋಗ್ಯ ಮಾಹಿತಿ ವರದಿ ಮಾತ್ರ; ವೈಯಕ್ತಿಕ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. Zee News Kannada ಇದನ್ನ ದೃಢಪಡಿಸುವುದಿಲ್ಲ.)

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES