SOCIAL MEDIA

Newsletter

PARTNER SITES
Select Language Select State

ಪೆಟ್ರೋಲ್ ಕಾರುಗಳಿಗೆ ಬೇಡಿಕೆ ಇಳಿಕೆ: ಸಿಎನ್‌ಜಿ, ಹೈಬ್ರಿಡ್, ಇವಿ ವಾಹನಗಳತ್ತ ಗ್ರಾಹಕರ ಒಲವು!

ಅಕ್ಟೋಬರ್‌ನಲ್ಲಿ ಭಾರತದ ವಾಹನ ಮಾರುಕಟ್ಟೆಯ ಒಟ್ಟಾರೆ ರಿಟೇಲ್ ಮಾರಾಟ ಶೇ.23.8ರಷ್ಟು ಕುಸಿದು 31.72 ಲಕ್ಷ ಯೂನಿಟ್‌ಗಳಿಗೆ ತಲುಪಿದೆ ಎಂದು FADA ವರದಿ ತಿಳಿಸಿದೆ. ದ್ವಿಚಕ್ರ ಮತ್ತು ಪೆಟ್ರೋಲ್ ವಾಹನಗಳ ಮಾರಾಟ ಇಳಿಕೆಯಾಗಿದ್ದರೆ, ಸಿಎನ್‌ಜಿ, ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಿದೆ. ಪರ್ಯಾಯ ಇಂಧನದ ಕಾರುಗಳು ಒಟ್ಟಾಗಿ ಶೇ.41.83ರಷ್ಟು ಮಾರುಕಟ್ಟೆ ಪಾಲು ಪಡೆದು ಪೆಟ್ರೋಲ್ ಕಾರುಗಳನ್ನ ಹಿಂದಿಕ್ಕಿವೆ. ಅಲ್ಲದೆ ಅಕ್ಟೋಬರ್‌ನಲ್ಲಿ 3.55 ಲಕ್ಷ ಎಲೆಕ್ಟ್ರಿಕ್ ವಾಹನಗಳು ಮಾರಾಟವಾಗಿ ಹೊಸ ದಾಖಲೆ ನಿರ್ಮಿಸಿವೆ.

Written By Puttaraj K Alur
Published: Nov 08, 2026, 15:17 IST | Updated: Nov 08, 2026, 15:27 IST
Image Credit: India Auto Sales
Join

India Auto Sales October 2026: ಭಾರತದ ವಾಹನ ಮಾರುಕಟ್ಟೆಯಲ್ಲಿ ಅಕ್ಟೋಬರ್ ತಿಂಗಳ ಮಾರಾಟದಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ. ಒಟ್ಟಾರೆ ವಾಹನಗಳ ರಿಟೇಲ್ ಮಾರಾಟದಲ್ಲಿ ಭಾರೀ ಕುಸಿತ ದಾಖಲಾಗಿದ್ದರೂ, ಸಿಎನ್‌ಜಿ, ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳು ಗ್ರಾಹಕರ ಗಮನ ಸೆಳೆದಿವೆ. ವಿಶೇಷವಾಗಿ ಪರ್ಯಾಯ ಇಂಧನದ ಕಾರುಗಳು ಪೆಟ್ರೋಲ್ ಕಾರುಗಳ ಮಾರಾಟದ ಪಾಲನ್ನ ಹಿಂದಿಕ್ಕಿರುವುದು ಈ ಬಾರಿಯ ಆಟೋಮೊಬೈಲ್ ಮಾರುಕಟ್ಟೆಯ ಪ್ರಮುಖ ಬೆಳವಣಿಗೆಯಾಗಿದೆ.

ಆಟೋಮೊಬೈಲ್ ಡೀಲರ್‌ಗಳ ಒಕ್ಕೂಟವಾದ ಫೆಡರೇಷನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ (FADA) ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಅಕ್ಟೋಬರ್‌ನಲ್ಲಿ ದೇಶದಾದ್ಯಂತ ಒಟ್ಟು ವಾಹನಗಳ ರಿಟೇಲ್ ಮಾರಾಟ ಶೇ.23.8ರಷ್ಟು ಇಳಿಕೆಯಾಗಿ 31.72 ಲಕ್ಷ ಯೂನಿಟ್‌ಗಳಿಗೆ ತಲುಪಿದೆ. ದ್ವಿಚಕ್ರ ವಾಹನಗಳು ಮತ್ತು ಪ್ರಯಾಣಿಕ ವಾಹನಗಳ ಮಾರಾಟದಲ್ಲಿನ ಕುಸಿತ ಈ ಇಳಿಕೆಗೆ ಪ್ರಮುಖ ಕಾರಣವಾಗಿದೆ. ಆದರೆ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ.

ವಾಹನ ಮಾರಾಟ ಕುಸಿತಕ್ಕೆ ಹಬ್ಬಗಳ ದಿನಾಂಕ ಬದಲಾವಣೆ ಕಾರಣ

ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲೇ ನವರಾತ್ರಿ ಮತ್ತು ದೀಪಾವಳಿ ಹಬ್ಬಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಹೊಸ ವಾಹನ ಖರೀದಿಗೆ ಗ್ರಾಹಕರಿಂದ ಹೆಚ್ಚಿನ ಬೇಡಿಕೆ ವ್ಯಕ್ತವಾಗಿತ್ತು. ಆದರೆ 2026ರಲ್ಲಿ ನವರಾತ್ರಿ ಅಕ್ಟೋಬರ್‌ನಲ್ಲಿ ನಡೆದರೆ, ಧನ್ತೇರಸ್ ಮತ್ತು ದೀಪಾವಳಿ ನವೆಂಬರ್ ತಿಂಗಳಿಗೆ ಮುಂದೂಡಲ್ಪಟ್ಟಿವೆ. ಹೀಗಾಗಿ ಹಲವು ಗ್ರಾಹಕರು ವಾಹನ ಖರೀದಿಯನ್ನ ನವೆಂಬರ್‌ವರೆಗೆ ಮುಂದೂಡಿದ್ದಾರೆ. ಇದರ ಜೊತೆಗೆ 2025ರ ಸೆಪ್ಟೆಂಬರ್‌ನಲ್ಲಿ ಜಿಎಸ್‌ಟಿ 2.0 ದರ ಕಡಿತ ಜಾರಿಯಾದ ಬಳಿಕ ವಾಹನ ಮಾರುಕಟ್ಟೆಯಲ್ಲಿ ಹೆಚ್ಚಿನ ಖರೀದಿ ನಡೆದಿತ್ತು. ಕಳೆದ ವರ್ಷದ ಈ ಹೆಚ್ಚಿನ ಮಾರಾಟದ ಅಂಕಿ-ಅಂಶಗಳೊಂದಿಗೆ ಹೋಲಿಕೆ ಮಾಡುವುದರಿಂದ ಈ ಬಾರಿಯ ಅಕ್ಟೋಬರ್ ಮಾರಾಟದಲ್ಲಿ ಕುಸಿತ ಹೆಚ್ಚಾಗಿ ಕಾಣಿಸಿಕೊಂಡಿದೆ ಎಂದು ವರದಿ ತಿಳಿಸಿದೆ.

ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಭಾರೀ ಇಳಿಕೆ

ಅಕ್ಟೋಬರ್‌ನಲ್ಲಿ ದ್ವಿಚಕ್ರ ವಾಹನಗಳ ರಿಟೇಲ್ ಮಾರಾಟ ಶೇ.28.35ರಷ್ಟು ಕುಸಿದು 23.21 ಲಕ್ಷ ಯೂನಿಟ್‌ಗಳಿಗೆ ತಲುಪಿದೆ. ಪ್ರಯಾಣಿಕ ವಾಹನಗಳ ಮಾರಾಟದಲ್ಲಿಯೂ ಇಳಿಕೆ ದಾಖಲಾಗಿದೆ. FADA ವರದಿಯ ಪ್ರಕಾರ, ಈ ವಿಭಾಗದಲ್ಲಿ ಶೇ.4.23ರಷ್ಟು ಕುಸಿತ ಕಂಡುಬಂದಿದ್ದು, ಒಟ್ಟು 5.08 ಲಕ್ಷ ಯೂನಿಟ್‌ಗಳು ಮಾರಾಟವಾಗಿವೆ. ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಗ್ರಾಮೀಣ ಪ್ರದೇಶಗಳ ಕುಸಿತ ನಗರ ಪ್ರದೇಶಗಳಿಗಿಂತ ಹೆಚ್ಚಾಗಿದೆ. ಗ್ರಾಮೀಣ ಮಾರುಕಟ್ಟೆಯಲ್ಲಿ ಮಾರಾಟ ಶೇ.33.97ರಷ್ಟು ಇಳಿಕೆಯಾಗಿದ್ದರೆ, ನಗರ ಪ್ರದೇಶಗಳಲ್ಲಿ ಶೇ.20.77ರಷ್ಟು ಕುಸಿತ ದಾಖಲಾಗಿದೆ. ಹೀಗಾಗಿ ವಾಹನ ಮಾರುಕಟ್ಟೆಯ ಒಟ್ಟಾರೆ ಅಂಕಿ-ಅಂಶಗಳಲ್ಲಿ ದ್ವಿಚಕ್ರ ವಾಹನಗಳ ವಿಭಾಗ ಪ್ರಮುಖವಾಗಿ ಗಮನ ಸೆಳೆದಿದೆ.

ಪೆಟ್ರೋಲ್ ಕಾರುಗಳನ್ನು ಹಿಂದಿಕ್ಕಿದ ಪರ್ಯಾಯ ಇಂಧನ ವಾಹನಗಳು

ಅಕ್ಟೋಬರ್ ತಿಂಗಳ ವಾಹನ ಮಾರಾಟದಲ್ಲಿ ಅತ್ಯಂತ ಕುತೂಹಲಕಾರಿ ಬೆಳವಣಿಗೆಯೆಂದರೆ ಸಿಎನ್‌ಜಿ, ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಕಾರುಗಳ ಒಟ್ಟು ಮಾರುಕಟ್ಟೆ ಪಾಲು ಪೆಟ್ರೋಲ್ ಕಾರುಗಳ ಪಾಲನ್ನ ಮೀರಿರುವುದು. FADA ಅಂಕಿ-ಅಂಶಗಳ ಪ್ರಕಾರ, ಸಿಎನ್‌ಜಿ, ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳು ಒಟ್ಟಾಗಿ ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಶೇ.41.83ರಷ್ಟು ಪಾಲು ಹೊಂದಿವೆ. ಇದೇ ಅವಧಿಯಲ್ಲಿ ಪೆಟ್ರೋಲ್ ಕಾರುಗಳ ಪಾಲು ಶೇ.41.6ರಷ್ಟಿದೆ. ಅಂದರೆ ಪರ್ಯಾಯ ಇಂಧನದ ವಾಹನಗಳು ಪೆಟ್ರೋಲ್ ಕಾರುಗಳಿಗಿಂತ ಸ್ವಲ್ಪ ಹೆಚ್ಚಿನ ಮಾರುಕಟ್ಟೆ ಪಾಲು ಪಡೆದುಕೊಂಡಿವೆ.

ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಸಾರ್ವಕಾಲಿಕ ದಾಖಲೆ

ಎಲೆಕ್ಟ್ರಿಕ್ ವಾಹನಗಳ ವಿಭಾಗದಲ್ಲಿ ಅಕ್ಟೋಬರ್ ತಿಂಗಳು ಮಹತ್ವದ ಸಾಧನೆಗೆ ಸಾಕ್ಷಿಯಾಗಿದೆ. ದೇಶದಲ್ಲಿ ಒಟ್ಟು 3.55 ಲಕ್ಷ ಎಲೆಕ್ಟ್ರಿಕ್ ವಾಹನಗಳು ಮಾರಾಟವಾಗಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.6ರಷ್ಟಿದ್ದ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆ ಪಾಲು ಈ ಬಾರಿ ಶೇ.11.5ಕ್ಕೆ ಏರಿಕೆಯಾಗಿದೆ. ದ್ವಿಚಕ್ರ, ತ್ರಿಚಕ್ರ, ಪ್ರಯಾಣಿಕ ವಾಹನ ಮತ್ತು ವಾಣಿಜ್ಯ ವಾಹನಗಳ ಎಲೆಕ್ಟ್ರಿಕ್ ವಿಭಾಗಗಳಲ್ಲಿ ಅಕ್ಟೋಬರ್ ತಿಂಗಳ ಮಾರಾಟ ಹೊಸ ದಾಖಲೆ ನಿರ್ಮಿಸಿದೆ.

ವಾಣಿಜ್ಯ ವಾಹನ, ತ್ರಿಚಕ್ರ ವಾಹನಗಳ ಮಾರಾಟದಲ್ಲಿ ಏರಿಕೆ

ದ್ವಿಚಕ್ರ ಮತ್ತು ಪ್ರಯಾಣಿಕ ವಾಹನಗಳ ಮಾರಾಟ ಕುಸಿದಿದ್ದರೂ, ಇತರ ಕೆಲವು ವಿಭಾಗಗಳಲ್ಲಿ ಬೆಳವಣಿಗೆ ಕಂಡುಬಂದಿದೆ. ವಾಣಿಜ್ಯ ವಾಹನಗಳ ಮಾರಾಟ ಶೇ.2.29ರಷ್ಟು ಏರಿಕೆಯಾಗಿ 1.15 ಲಕ್ಷ ಯೂನಿಟ್‌ಗಳಿಗೆ ತಲುಪಿದೆ. ತ್ರಿಚಕ್ರ ವಾಹನಗಳ ಮಾರಾಟ ಶೇ.3.97ರಷ್ಟು ಹೆಚ್ಚಾಗಿ 1.41 ಲಕ್ಷ ಯೂನಿಟ್‌ಗಳಾಗಿದೆ. ಟ್ರ್ಯಾಕ್ಟರ್ ಮಾರಾಟ ಶೇ.3.10ರಷ್ಟು ಏರಿಕೆಯಾಗಿ 79,285 ಯೂನಿಟ್‌ಗಳಿಗೆ ತಲುಪಿದೆ.

ನವೆಂಬರ್ ಮಾರಾಟದ ಮೇಲೆ ನಿರೀಕ್ಷೆ

ನವೆಂಬರ್ ತಿಂಗಳಲ್ಲಿ ಧನ್ತೇರಸ್ ಮತ್ತು ದೀಪಾವಳಿ ಹಬ್ಬಗಳು ಬಂದಿರುವುದರಿಂದ ವಾಹನಗಳ ಮಾರಾಟ ಮತ್ತೆ ಹೆಚ್ಚಾಗುವ ನಿರೀಕ್ಷೆಯನ್ನ ಡೀಲರ್‌ಗಳು ಹೊಂದಿದ್ದಾರೆ. ಹಬ್ಬದ ಸಂದರ್ಭದಲ್ಲಿ ವಾಹನ ನೋಂದಣಿಯಲ್ಲಿ ಕಂಡುಬರುತ್ತಿರುವ ಬೆಳವಣಿಗೆಯೂ ಆಶಾದಾಯಕವಾಗಿದೆ ಎಂದು FADA ತಿಳಿಸಿದೆ. ಇನ್ನು ಡಿಸೆಂಬರ್ ಮತ್ತು ಜನವರಿ ತಿಂಗಳ ವಾಹನ ಮಾರಾಟವು ವರ್ಷಾಂತ್ಯದ ರಿಯಾಯಿತಿಗಳು, ಹೊಸ ವಾಹನಗಳ ಬಿಡುಗಡೆ ಹಾಗೂ ಗ್ರಾಹಕರು ಬಯಸುವ ಮಾದರಿಗಳ ಲಭ್ಯತೆಯನ್ನ ಅವಲಂಬಿಸಿರಲಿದೆ. ಒಟ್ನಲ್ಲಿ ಅಕ್ಟೋಬರ್‌ನಲ್ಲಿ ವಾಹನ ಮಾರಾಟ ಕುಸಿತ ಕಂಡಿದ್ದರೂ, ಪರ್ಯಾಯ ಇಂಧನ ಮತ್ತು ಎಲೆಕ್ಟ್ರಿಕ್ ವಾಹನಗಳ ಹೆಚ್ಚುತ್ತಿರುವ ಮಾರುಕಟ್ಟೆ ಪಾಲು ಪ್ರಮುಖ ಬೆಳವಣಿಗೆಯಾಗಿ ಹೊರಹೊಮ್ಮಿದೆ. 

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES