SOCIAL MEDIA

Newsletter

PARTNER SITES
Select Language Select State

ಕೊನೆಗೂ ಭಾರತಕ್ಕೆ ಎಂಟ್ರಿ ಕೊಟ್ಟ ಆ್ಯಪಲ್ ಪೇ! ಆ್ಯಕ್ಸಿಸ್ ಬ್ಯಾಂಕ್ ಜೊತೆ ಒಪ್ಪಂದ

ಬಹು ವರ್ಷಗಳ ಬಳಿಕ Apple Pay ಭಾರತದಲ್ಲಿ ಅಧಿಕೃತವಾಗಿ ಲಭ್ಯವಾಗಿದೆ. ಆರಂಭಿಕ ಹಂತದಲ್ಲಿ Axis Bankನ ಅರ್ಹ Visa ಮತ್ತು Mastercard ಕ್ರೆಡಿಟ್‌ ಕಾರ್ಡ್‌ಗಳನ್ನ Apple Walletಗೆ ಸೇರಿಸಿ iPhone, iPad ಮತ್ತು Apple Watch ಮೂಲಕ ಪಾವತಿ ಮಾಡಬಹುದು. NFC PoS ಯಂತ್ರಗಳಲ್ಲಿ Tap-to-Pay ಜೊತೆಗೆ ಬೆಂಬಲಿತ ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳಲ್ಲೂ Apple Pay ಬಳಸುವ ಅವಕಾಶವಿದೆ.

Written By Puttaraj K Alur
Published: Sep 30, 2026, 10:19 AM IST | Updated: Sep 30, 2026, 10:36 AM IST
Image Credit: Apple Pay India
Join

Apple Pay Launches in India: ಹಲವು ವರ್ಷಗಳ ನಿರೀಕ್ಷೆಯ ಬಳಿಕ ಆ್ಯಪಲ್ ಪೇ (Apple Pay) ಅಧಿಕೃತವಾಗಿ ಭಾರತಕ್ಕೆ ಪ್ರವೇಶಿಸಿದೆ. ಆ್ಯಪಲ್‌ನ ಡಿಜಿಟಲ್ ಪೇಮೆಂಟ್ ಸೇವೆ ಇದೀಗ ಭಾರತದಲ್ಲಿ ಲಭ್ಯವಾಗಿದ್ದು, ಆರಂಭಿಕ ಹಂತದಲ್ಲಿ Axis Bankನ Visa ಮತ್ತು Mastercard ಕ್ರೆಡಿಟ್ ಕಾರ್ಡ್‌ಗಳನ್ನ ಆ್ಯಪಲ್ ಪೇಗೆ ಸೇರಿಸಿ ಪಾವತಿ ಮಾಡಲು ಅವಕಾಶ ನೀಡಲಾಗಿದೆ. iPhone, iPad ಮತ್ತು Apple Watch ಬಳಕೆದಾರರು ತಮ್ಮ ಅರ್ಹ ಕಾರ್ಡ್‌ಗಳನ್ನ ಆ್ಯಪಲ್‌ ವಾಲೆಟ್‌ಗೆ ಸೇರಿಸಿ ಅಂಗಡಿಗಳಲ್ಲಿ, ಆನ್‌ಲೈನ್‌ನಲ್ಲಿ ಹಾಗೂ ಆ್ಯಪ್‌ಗಳ ಮೂಲಕ ಪಾವತಿ ಮಾಡಬಹುದಾಗಿದೆ.  

ಆ್ಯಪಲ್ ಪೇಯನ್ನ ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸಿರುವುದು ಭಾರತೀಯ ಆ್ಯಪಲ್ ಬಳಕೆದಾರರಿಗೆ ಪ್ರಮುಖ ಬದಲಾವಣೆಯಾಗಿದೆ. ಅಮೆರಿಕದಲ್ಲಿ 2014ರಲ್ಲಿ ಆರಂಭವಾಗಿದ್ದ ಆ್ಯಪಲ್ ಪೇ ಹಲವು ದೇಶಗಳಲ್ಲಿ ಈಗಾಗಲೇ ಬಳಕೆಯಲ್ಲಿದೆ. ಆದರೆ ಭಾರತದಲ್ಲಿ UPI ಸೇರಿದಂತೆ ವಿವಿಧ ಡಿಜಿಟಲ್ ಪೇಮೆಂಟ್ ವ್ಯವಸ್ಥೆಗಳು ವ್ಯಾಪಕವಾಗಿ ಬಳಕೆಯಲ್ಲಿರುವುದರಿಂದ, ಆ್ಯಪಲ್ ಪೇ ಪ್ರವೇಶ ಹಲವು ವರ್ಷಗಳ ಕಾಲ ವಿಳಂಬವಾಗಿತ್ತು. ಇದೀಗ Axis Bankನೊಂದಿಗೆ ಪಾಲುದಾರಿಕೆ ಮಾಡಿಕೊಂಡು ಸೇವೆಯನ್ನ ಆರಂಭಿಸಲಾಗಿದೆ.  

ಯಾವ ಕಾರ್ಡ್‌ಗಳನ್ನ ಆ್ಯಪಲ್ ಪೇಗೆ ಸೇರಿಸಬಹುದು?

ಪ್ರಸ್ತುತ ಹಂತದಲ್ಲಿ ಎಲ್ಲಾ ಬ್ಯಾಂಕ್‌ಗಳ ಕಾರ್ಡ್‌ಗಳನ್ನ ಆ್ಯಪಲ್ ಪೇಗೆ ಸೇರಿಸಲು ಸಾಧ್ಯವಿಲ್ಲ. ಆರಂಭಿಕವಾಗಿ Axis Bank ನೀಡಿರುವ ಅರ್ಹ Visa ಮತ್ತು Mastercard ಕ್ರೆಡಿಟ್ ಕಾರ್ಡ್‌ಗಳಿಗೆ ಬೆಂಬಲ ನೀಡಲಾಗಿದೆ. ಇತರ ಬ್ಯಾಂಕ್‌ಗಳ ಕಾರ್ಡ್‌ಗಳನ್ನ ಮುಂದಿನ ಹಂತಗಳಲ್ಲಿ ಸೇರಿಸುವ ಸಾಧ್ಯತೆ ಇದೆ. ಆ್ಯಪಲ್ ಪೇ ಸೇವೆಯನ್ನ ಹಂತ ಹಂತವಾಗಿ ವಿಸ್ತರಿಸುವ ಉದ್ದೇಶವನ್ನ ಕಂಪನಿ ಹೊಂದಿದೆ. HDFC Bank ಮತ್ತು ICICI Bank ಸೇರಿದಂತೆ ಇತರ ಬ್ಯಾಂಕ್‌ಗಳೊಂದಿಗೆ ಆ್ಯಪಲ್ ಮಾತುಕತೆ ನಡೆಸುತ್ತಿರುವ ಬಗ್ಗೆ ಈ ಹಿಂದೆ ವರದಿಗಳು ಬಂದಿದ್ದವು. ಆದರೆ ಆರಂಭಿಕ ವಾಣಿಜ್ಯ ಪಾಲುದಾರರಾಗಿ Axis Bank ಸೇರ್ಪಡೆಯಾಗಿದೆ.  

ಆ್ಯಪಲ್ ಪೇ ಹೇಗೆ ಕೆಲಸ ಮಾಡುತ್ತದೆ?

ಆ್ಯಪಲ್ ಪೇ ಬಳಕೆದಾರರ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನ Apple Walletನಲ್ಲಿ ಸುರಕ್ಷಿತವಾಗಿ ಬಳಸಲು ಅನುವು ಮಾಡಿಕೊಡುತ್ತದೆ. ಪಾವತಿ ಮಾಡುವಾಗ ಪ್ರತಿಯೊಂದು ವಹಿವಾಟಿಗೂ ಭೌತಿಕ ಕಾರ್ಡ್‌ಅನ್ನ ಹೊರತೆಗೆಯುವ ಅಗತ್ಯವಿಲ್ಲ. NFC ಹೊಂದಿರುವ ಪಾವತಿ ಯಂತ್ರದ ಬಳಿ iPhone ಅಥವಾ Apple Watch ಅನ್ನ ಹಿಡಿದು ಪಾವತಿ ಮಾಡಬಹುದು. iPhoneನಲ್ಲಿ Face ID ಅಥವಾ Touch ID ಮೂಲಕ ವಹಿವಾಟನ್ನ ದೃಢೀಕರಿಸಬಹುದು. ಹೀಗಾಗಿ ಅಂಗಡಿಯಲ್ಲಿ ಪಾವತಿ ಮಾಡುವಾಗ ಕಾರ್ಡ್‌ಅನ್ನ ಕೈಯಲ್ಲಿ ಹಿಡಿದುಕೊಳ್ಳುವ ಅಗತ್ಯ ಕಡಿಮೆಯಾಗುತ್ತದೆ.

Apple ಪ್ರಕಾರ, Walletನಲ್ಲಿ ಸೇರಿಸಿದ ನೈಜ ಕಾರ್ಡ್ ಸಂಖ್ಯೆಯನ್ನ ವ್ಯಾಪಾರಿಗಳಿಗೆ ಹಂಚಿಕೊಳ್ಳಲಾಗುವುದಿಲ್ಲ. ಆ್ಯಪಲ್ ಪೇ ವಹಿವಾಟುಗಳಲ್ಲಿ ಟೋಕನೈಸ್ ಮಾಡಿದ ಕಾರ್ಡ್ ಮಾಹಿತಿಯನ್ನ ಬಳಸಲಾಗುತ್ತದೆ. ಇದರಿಂದ ಬಳಕೆದಾರರ ನೈಜ ಕಾರ್ಡ್ ವಿವರಗಳನ್ನ ಪ್ರತಿ ಪಾವತಿ ಸಂದರ್ಭದಲ್ಲಿ ವ್ಯಾಪಾರಿಗೆ ನೀಡುವ ಅಗತ್ಯ ಇರುವುದಿಲ್ಲ. 

iPhoneನಲ್ಲಿ ಆ್ಯಪಲ್ ಪೇಗೆ ಕಾರ್ಡ್‌ ಸೇರಿಸುವುದು ಹೇಗೆ?

ಆ್ಯಪಲ್ ಪೇ ಬಳಸಲು ಮೊದಲು ನಿಮ್ಮ iPhoneನಲ್ಲಿ Wallet app ತೆರೆಯಬೇಕು.

1. Wallet ಆ್ಯಪ್ ತೆರೆಯಿರಿ.
2. ಮೇಲ್ಭಾಗದಲ್ಲಿರುವ ‘+’ ಆಯ್ಕೆಯನ್ನು ಒತ್ತಿರಿ.
3. ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಸೇರಿಸುವ ಆಯ್ಕೆ ಆರಿಸಿ.
4. ನಿಮ್ಮ ಅರ್ಹ Axis Bank ಕಾರ್ಡ್‌ನ ವಿವರಗಳನ್ನ ನಮೂದಿಸಿ ಅಥವಾ ಕಾರ್ಡ್ ಅನ್ನ ಸ್ಕ್ಯಾನ್ ಮಾಡಿ.
5. ಪರದೆಯ ಮೇಲೆ ಕಾಣಿಸುವ ಸೂಚನೆಗಳನ್ನ ಅನುಸರಿಸಿ.
6. ಬ್ಯಾಂಕ್ ಕೇಳುವ ಪರಿಶೀಲನೆ ಅಥವಾ ದೃಢೀಕರಣ ಪ್ರಕ್ರಿಯೆ ಪೂರ್ಣಗೊಳಿಸಿ.
7. ಕಾರ್ಡ್‌ Apple Walletಗೆ ಸೇರ್ಪಡೆಯಾದ ನಂತರ ಆ್ಯಪಲ್ ಪೇ ಮೂಲಕ ಪಾವತಿ ಮಾಡಬಹುದು.

ಆ್ಯಪಲ್‌ನ ಅಧಿಕೃತ ಮಾಹಿತಿಯ ಪ್ರಕಾರ, iPhoneನಲ್ಲಿ Wallet ಆ್ಯಪ್ ತೆರೆಯುವುದರ ಮೂಲಕ ಕಾರ್ಡ್ ಸೇರಿಸಬಹುದು. Apple Watchಗೆ iPhoneನಲ್ಲಿರುವ Watch app ಮೂಲಕ Wallet & Apple Pay > Add Card ಆಯ್ಕೆ ಮಾಡಬೇಕು. iPadನಲ್ಲಿ Settings ಮೂಲಕ Wallet & Apple Pay ವಿಭಾಗಕ್ಕೆ ಹೋಗಿ ಕಾರ್ಡ್ ಸೇರಿಸಬಹುದು. 

ಅಂಗಡಿಗಳಲ್ಲಿ ಪಾವತಿ ಹೇಗೆ?

ಅಂಗಡಿಯಲ್ಲಿ ಆ್ಯಪಲ್ ಪೇ ಮೂಲಕ ಪಾವತಿ ಮಾಡಲು NFC-enabled PoS ಯಂತ್ರ ಅಗತ್ಯವಿರುತ್ತದೆ. iPhoneನಲ್ಲಿ Side Buttonಅನ್ನ ಎರಡು ಬಾರಿ ಒತ್ತಿ Wallet ತೆರೆಯಬಹುದು. ನಂತರ Face ID ಅಥವಾ Passcode ಮೂಲಕ ದೃಢೀಕರಿಸಿ, iPhoneನ ಮೇಲ್ಭಾಗವನ್ನ contactless payment terminal ಬಳಿ ಹಿಡಿಯಬೇಕು. Apple Watch ಬಳಕೆದಾರರು ಕೂಡ ತಮ್ಮ ವಾಚ್ ಮೂಲಕ NFC ಪಾವತಿ ಮಾಡಬಹುದು. ಹೀಗಾಗಿ ಪ್ರತಿಬಾರಿ ಭೌತಿಕ ಕ್ರೆಡಿಟ್ ಕಾರ್ಡ್ ತೆಗೆದುಕೊಂಡು ಹೋಗುವ ಅಗತ್ಯ ಇರುವುದಿಲ್ಲ.

ಆನ್‌ಲೈನ್ ಮತ್ತು ಆ್ಯಪ್‌ ಪಾವತಿಗೂ ಅವಕಾಶ

ಆ್ಯಪಲ್ ಪೇ ಕೇವಲ ಅಂಗಡಿಗಳಲ್ಲಿ tap-to-payಗೆ ಸೀಮಿತವಾಗಿಲ್ಲ. ಆ್ಯಪಲ್ ಪೇ ಬೆಂಬಲಿಸುವ ಆನ್‌ಲೈನ್ ವ್ಯಾಪಾರಿಗಳು ಮತ್ತು ಆ್ಯಪ್‌ಗಳಲ್ಲಿಯೂ ಪಾವತಿ ಮಾಡಲು ಇದನ್ನ ಬಳಸಬಹುದು. ಇದರಿಂದ iPhone ಬಳಕೆದಾರರಿಗೆ ಪಾವತಿ ಪ್ರಕ್ರಿಯೆ ಇನ್ನಷ್ಟು ಸರಳವಾಗಲಿದೆ. ಆದರೆ ಭಾರತದಲ್ಲಿ ಈಗಾಗಲೇ UPI ಅತ್ಯಂತ ವ್ಯಾಪಕವಾಗಿ ಬಳಕೆಯಲ್ಲಿರುವುದರಿಂದ ಆ್ಯಪಲ್ ಪೇಗೆ ಭಾರತೀಯ ಮಾರುಕಟ್ಟೆಯಲ್ಲಿ ಹೇಗೆ ಪ್ರತಿಕ್ರಿಯೆ ಸಿಗಲಿದೆ ಎಂಬುದು ಗಮನಾರ್ಹವಾಗಿದೆ. ಆರಂಭಿಕ ಹಂತದಲ್ಲಿ ಆ್ಯಪಲ್ ಪೇ ಕಾರ್ಡ್ ಆಧಾರಿತ ಪಾವತಿಗಳ ಮೇಲೆ ಗಮನಹರಿಸಿದೆ.

ಇತರ ಬ್ಯಾಂಕ್‌ಗಳ ಕಾರ್ಡ್‌ಗಳು ಯಾವಾಗ?

ಸದ್ಯ Axis Bank ಮೊದಲ ಪ್ರಮುಖ ಪಾಲುದಾರನಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಬ್ಯಾಂಕ್‌ಗಳು ಆ್ಯಪಲ್ ಪೇ ವ್ಯವಸ್ಥೆಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಆ್ಯಪಲ್ ಭಾರತದಲ್ಲಿ ತನ್ನ ಪಾವತಿ ಸೇವೆಯನ್ನ ಹಂತ ಹಂತವಾಗಿ ವಿಸ್ತರಿಸುವ ಯೋಜನೆಯಲ್ಲಿದೆ ಎಂದು ವರದಿಗಳು ತಿಳಿಸಿವೆ. Macನಲ್ಲಿ ಆ್ಯಪಲ್ ಪೇ ಬೆಂಬಲವೂ ಮುಂದಿನ ಹಂತದಲ್ಲಿ ಲಭ್ಯವಾಗಲಿದೆ ಎಂದು ಆ್ಯಪಲ್ ತಿಳಿಸಿದೆ. ಪ್ರಸ್ತುತ iPhone, iPad ಮತ್ತು Apple Watch ಮೂಲಕ ಸೇವೆ ಬಳಸಬಹುದಾಗಿದೆ.

ಒಟ್ನಲ್ಲಿ ಹಲವು ವರ್ಷಗಳ ನಂತರ ಆ್ಯಪಲ್ ಪೇ ಭಾರತದಲ್ಲಿ ಅಧಿಕೃತವಾಗಿ ಲಭ್ಯವಾಗಿರುವುದು iPhone ಬಳಕೆದಾರರಿಗೆ ಹೊಸ ಡಿಜಿಟಲ್ ಪೇಮೆಂಟ್ ಆಯ್ಕೆಯನ್ನ ನೀಡಿದೆ. ಆರಂಭದಲ್ಲಿ Axis Bankನ ಅರ್ಹ Visa ಮತ್ತು Mastercard ಕ್ರೆಡಿಟ್ ಕಾರ್ಡ್‌ಗಳಿಗೆ ಮಾತ್ರ ಸೀಮಿತವಾಗಿದ್ದರೂ, ಮುಂದಿನ ದಿನಗಳಲ್ಲಿ ಹೆಚ್ಚಿನ ಬ್ಯಾಂಕ್‌ಗಳು ಮತ್ತು ಕಾರ್ಡ್‌ಗಳನ್ನ ಬೆಂಬಲಿಸುವ ಸಾಧ್ಯತೆ ಇದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES