SOCIAL MEDIA

Newsletter

PARTNER SITES
Select Language Select State

ಭಾರತದ ರಸ್ತೆಗಿಳಿಯಲಿವೆ ಈ ಹೊಸ 7 ಸೀಟರ್ ಹೈಬ್ರಿಡ್ ಕಾರುಗಳು! ಕಿಯಾ, ಹ್ಯುಂಡೈ, ರೆನಾಲ್ಟ್‌ನಿಂದ ಭರ್ಜರಿ ಸಿದ್ಧತೆ

ಭಾರತದ ಮಾರುಕಟ್ಟೆಗೆ ಕಿಯಾ, ಹ್ಯುಂಡೈ ಮತ್ತು ರೆನಾಲ್ಟ್ ಕಂಪನಿಗಳಿಂದ ಮೂರು ಹೊಸ 7 ಸೀಟರ್ ಕಾರುಗಳು ಬರಲು ಸಿದ್ಧವಾಗಿವೆ. ಕಿಯಾ ಕಾರ್ನಿವಲ್ ಹೈಬ್ರಿಡ್, ಹ್ಯುಂಡೈನ Ni1i ಮತ್ತು ರೆನಾಲ್ಟ್ ಬೋರಿಯಲ್ ಮಾದರಿಗಳು ಗ್ರಾಹಕರ ಗಮನ ಸೆಳೆಯುತ್ತಿವೆ. ಇವುಗಳಲ್ಲಿ ಹೈಬ್ರಿಡ್ ಎಂಜಿನ್ ಆಯ್ಕೆಗಳೂ ಇರಲಿದ್ದು, ರೆನಾಲ್ಟ್ ಬೋರಿಯಲ್ 2027ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಕಾರುಗಳ ಬೆಲೆ ಮತ್ತು ನಿಖರ ಬಿಡುಗಡೆ ದಿನಾಂಕವನ್ನ ಕಂಪನಿಗಳು ಇನ್ನೂ ಪ್ರಕಟಿಸಿಲ್ಲ.

Written By Puttaraj K Alur
Published: Nov 16, 2026, 21:18 IST | Updated: Nov 16, 2026, 22:01 IST
Image Credit: 7 Seater Hybrid Cars
Join

Upcoming 7 Seater Hybrid Cars: ಭಾರತದ ಕಾರು ಮಾರುಕಟ್ಟೆಯಲ್ಲಿ 7 ಸೀಟರ್ ಎಸ್‌ಯುವಿಗಳಿಗೆ ಬೇಡಿಕೆ ಹೆಚ್ಚುತ್ತಿರುವ ಬೆನ್ನಲ್ಲೇ, ಕಿಯಾ, ಹ್ಯುಂಡೈ ಮತ್ತು ರೆನಾಲ್ಟ್ ಕಂಪನಿಗಳು ಹೊಸ ಹೈಬ್ರಿಡ್ ಕಾರುಗಳನ್ನ ಪರಿಚಯಿಸಲು ಸಿದ್ಧತೆ ನಡೆಸಿವೆ. ದೊಡ್ಡ ಕುಟುಂಬಗಳಿಗೆ ಹೆಚ್ಚು ಸ್ಥಳಾವಕಾಶ, ಆರಾಮದಾಯಕ ಪ್ರಯಾಣ ಮತ್ತು ಉತ್ತಮ ಮೈಲೇಜ್ ನೀಡುವ ಉದ್ದೇಶದಿಂದ ಈ ಕಾರುಗಳನ್ನ ಮಾರುಕಟ್ಟೆಗೆ ತರಲಾಗುತ್ತಿದೆ. ಪೆಟ್ರೋಲ್ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಹೈಬ್ರಿಡ್ ಕಾರುಗಳತ್ತ ಗ್ರಾಹಕರ ಆಸಕ್ತಿ ಹೆಚ್ಚುತ್ತಿರುವ ಸಮಯದಲ್ಲಿ ಈ ಹೊಸ ಮಾದರಿಗಳು ಗಮನ ಸೆಳೆಯುತ್ತಿವೆ.

ಸದ್ಯ ಭಾರತದಲ್ಲಿ ಟೊಯೋಟಾ ಇನ್ನೋವಾ ಹೈಕ್ರಾಸ್‌ನಂತಹ ಕೆಲವು 7 ಸೀಟರ್ ಹೈಬ್ರಿಡ್ ಕಾರುಗಳ ಆಯ್ಕೆಯಷ್ಟೇ ಗ್ರಾಹಕರ ಮುಂದಿದೆ. ಆದರೆ ಕಿಯಾ, ಹ್ಯುಂಡೈ ಮತ್ತು ರೆನಾಲ್ಟ್‌ನ ಹೊಸ ಮಾದರಿಗಳು ಮಾರುಕಟ್ಟೆಗೆ ಬಂದರೆ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳು ಲಭ್ಯವಾಗಲಿವೆ. ಈ ಪಟ್ಟಿಯಲ್ಲಿ ಕಿಯಾ ಕಾರ್ನಿವಲ್ ಹೈಬ್ರಿಡ್, ಹ್ಯುಂಡೈನ Ni1i ಮತ್ತು ರೆನಾಲ್ಟ್ ಬೋರಿಯಲ್ ಪ್ರಮುಖವಾಗಿವೆ.

ಕಿಯಾ ಕಾರ್ನಿವಲ್ ಹೈಬ್ರಿಡ್

ಕಿಯಾ ಕಂಪನಿಯು ಭಾರತದಲ್ಲಿ ಕಾರ್ನಿವಲ್ ಹೈಬ್ರಿಡ್ ಕಾರನ್ನ ಬಿಡುಗಡೆ ಮಾಡುವುದಾಗಿ ಖಚಿತಪಡಿಸಿದೆ. ಆದರೆ ಇದರ ನಿಖರ ಬಿಡುಗಡೆಯ ದಿನಾಂಕವನ್ನ ಕಂಪನಿ ಇನ್ನೂ ಪ್ರಕಟಿಸಿಲ್ಲ. ಮುಂದಿನ ವರ್ಷದ ಆರಂಭದಲ್ಲಿ ಈ ಕಾರು ಭಾರತೀಯ ಮಾರುಕಟ್ಟೆಗೆ ಪ್ರವೇಶಿಸುವ ನಿರೀಕ್ಷೆಯಿದೆ. ಈ ಕಾರಿನಲ್ಲಿ 1.6 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಜೊತೆಗೆ ಎಲೆಕ್ಟ್ರಿಕ್ ಮೋಟಾರ್ ಇರಲಿದೆ.

ಪೆಟ್ರೋಲ್ ಎಂಜಿನ್ 180 ಬಿಎಚ್‌ಪಿ ಪವರ್ ಮತ್ತು 265 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಮತ್ತೊಂದೆಡೆ ಎಲೆಕ್ಟ್ರಿಕ್ ಮೋಟಾರ್ 73.4 ಬಿಎಚ್‌ಪಿ ಪವರ್ ಹಾಗೂ 304 ಎನ್‌ಎಂ ಟಾರ್ಕ್ ನೀಡಲಿದೆ. ಈ ಎಂಜಿನ್ ವ್ಯವಸ್ಥೆಗೆ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಿಸಲಾಗುತ್ತದೆ. ವಿಶಾಲವಾದ ಒಳಾಂಗಣ ಮತ್ತು ಪ್ರೀಮಿಯಂ ವೈಶಿಷ್ಟ್ಯಗಳನ್ನ ಹೊಂದಿರುವ ಕಾರ್ನಿವಲ್ ಹೈಬ್ರಿಡ್ ಕುಟುಂಬದ ಪ್ರವಾಸ ಹಾಗೂ ದೂರದ ಪ್ರಯಾಣಕ್ಕೆ ಅನುಕೂಲಕರವಾಗುವ ನಿರೀಕ್ಷೆಯಿದೆ.

ಹ್ಯುಂಡೈ Ni1i: ಹೊಸ ಪ್ರೀಮಿಯಂ 7 ಸೀಟರ್ ಎಸ್‌ಯುವಿ

ಹ್ಯುಂಡೈ ಮೋಟಾರ್ ಇಂಡಿಯಾ ಕೂಡ ಹೊಸ ಪ್ರೀಮಿಯಂ 7 ಸೀಟರ್ ಎಸ್‌ಯುವಿಯನ್ನ ಅಭಿವೃದ್ಧಿಪಡಿಸುತ್ತಿದೆ. ಸದ್ಯಕ್ಕೆ ಈ ಕಾರಿಗೆ 'Ni1i' ಎಂಬ ಕೋಡ್‌ನೇಮ್ ನೀಡಲಾಗಿದೆ. ಕಂಪನಿಯ ಎಸ್‌ಯುವಿ ಸರಣಿಯಲ್ಲಿ ಅಲ್ಕಾಜರ್ ಮತ್ತು ಟ್ಯೂಸಾನ್ ಕಾರುಗಳ ನಡುವಿನ ಸ್ಥಾನವನ್ನು ಈ ಹೊಸ ಮಾದರಿ ಪಡೆಯುವ ಸಾಧ್ಯತೆಯಿದೆ. ಮಹೀಂದ್ರ XUV700 ಮತ್ತು ಟಾಟಾ ಸಫಾರಿ ಕಾರುಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ಇದನ್ನ ರೂಪಿಸುವ ನಿರೀಕ್ಷೆಯಿದೆ.

ಚೀನಾದಲ್ಲಿ ಮಾರಾಟವಾಗುತ್ತಿರುವ ಹ್ಯುಂಡೈ ಟ್ಯೂಸಾನ್ LWB ಮಾದರಿಯನ್ನ ಆಧಾರವಾಗಿಟ್ಟುಕೊಂಡು ಈ ಕಾರನ್ನ ನಿರ್ಮಿಸುವ ಸಾಧ್ಯತೆಯಿದೆ. ಆದರೆ ಈ ಹೊಸ ಎಸ್‌ಯುವಿಯ ಎಂಜಿನ್ ಕುರಿತು ಹ್ಯುಂಡೈ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ. ಇದರಲ್ಲಿ 1.6 ಲೀಟರ್ ಪೆಟ್ರೋಲ್ ಹೈಬ್ರಿಡ್ ವ್ಯವಸ್ಥೆ ಅಥವಾ 1.5 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಂಪನಿಯಿಂದ ಅಧಿಕೃತ ಘೋಷಣೆ ಹೊರಬಂದ ಬಳಿಕ ಹೆಚ್ಚಿನ ವಿವರಗಳು ಲಭ್ಯವಾಗಲಿವೆ.

ರೆನಾಲ್ಟ್ ಬೋರಿಯಲ್: 2027ರಲ್ಲಿ ಬಿಡುಗಡೆಯ ನಿರೀಕ್ಷೆ

ರೆನಾಲ್ಟ್ ಕಂಪನಿಯೂ ಭಾರತೀಯ ಮಾರುಕಟ್ಟೆಯಲ್ಲಿ ತನ್ನ 7 ಸೀಟರ್ ಎಸ್‌ಯುವಿಯನ್ನ ಪರಿಚಯಿಸಲು ಯೋಜಿಸಿದೆ. 2027ರಲ್ಲಿ ಈ ಹೊಸ ಕಾರು ಮಾರುಕಟ್ಟೆಗೆ ಬರುವ ನಿರೀಕ್ಷೆಯಿದ್ದು, ಭಾರತದಲ್ಲಿ ಇದಕ್ಕೆ 'ರೆನಾಲ್ಟ್ ಬೋರಿಯಲ್' ಎಂಬ ಹೆಸರು ನೀಡುವ ಸಾಧ್ಯತೆಯಿದೆ. ಈ ಕಾರಿನ ವಿನ್ಯಾಸವು ಡೇಸಿಯಾ ಬಿಗ್‌ಸ್ಟರ್ ಮಾದರಿಯಿಂದ ಸ್ಫೂರ್ತಿ ಪಡೆದಿದೆ.

ಈಗಿರುವ 5 ಸೀಟರ್ ಡಸ್ಟರ್‌ಗೆ ಹೋಲಿಸಿದರೆ ಹೊಸ 7 ಸೀಟರ್ ಮಾದರಿ ಹೆಚ್ಚು ಉದ್ದ ಮತ್ತು ವಿಶಾಲವಾಗಿರಲಿದೆ. ಕಂಪನಿಯು ಇದನ್ನ RGMP ಪ್ಲಾಟ್‌ಫಾರ್ಮ್ ಆಧರಿಸಿ ನಿರ್ಮಿಸುತ್ತಿದೆ. ಎಂಜಿನ್ ಆಯ್ಕೆಗಳ ವಿಚಾರದಲ್ಲಿ 1.3 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಮತ್ತು 1.8 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೇನ್ ಇರಲಿದೆ ಎಂದು ಹೇಳಲಾಗಿದೆ. 7 ಸೀಟರ್ ವಿಭಾಗದಲ್ಲಿ ರೆನಾಲ್ಟ್ ತನ್ನ ಸ್ಥಾನವನ್ನ ಬಲಪಡಿಸಲು ಈ ಹೊಸ ಎಸ್‌ಯುವಿ ನೆರವಾಗುವ ನಿರೀಕ್ಷೆಯಿದೆ.

ಹೈಬ್ರಿಡ್ ಕಾರುಗಳತ್ತ ಗ್ರಾಹಕರ ಆಸಕ್ತಿ

ಪೆಟ್ರೋಲ್ ಬೆಲೆ ಏರಿಕೆ ಮತ್ತು ಮೈಲೇಜ್ ಕುರಿತ ಚಿಂತೆಗಳಿಂದ ಗ್ರಾಹಕರು ಹೈಬ್ರಿಡ್ ಕಾರುಗಳತ್ತ ಆಸಕ್ತಿ ತೋರಿಸುತ್ತಿದ್ದಾರೆ. ಪೆಟ್ರೋಲ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಒಟ್ಟಿಗೆ ಕಾರ್ಯನಿರ್ವಹಿಸುವುದು ಈ ಕಾರುಗಳ ಪ್ರಮುಖ ವಿಶೇಷತೆಯಾಗಿದೆ. ಇದರಿಂದ ಇಂಧನ ಬಳಕೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ. ಈಗ ಕಿಯಾ, ಹ್ಯುಂಡೈ ಮತ್ತು ರೆನಾಲ್ಟ್ ಕಂಪನಿಗಳು ಹೊಸ 7 ಸೀಟರ್ ಮಾದರಿಗಳನ್ನ ಪರಿಚಯಿಸಲು ಮುಂದಾಗಿರುವುದರಿಂದ ದೊಡ್ಡ ಕುಟುಂಬಗಳಿಗೂ ಹೆಚ್ಚಿನ ಆಯ್ಕೆಗಳು ಸಿಗಲಿವೆ. ಆದರೆ ಈ ಮೂರು ಕಾರುಗಳ ನಿಖರ ಬೆಲೆ, ವೇರಿಯೆಂಟ್‌ಗಳು ಮತ್ತು ಬಿಡುಗಡೆಯ ದಿನಾಂಕಗಳ ಕುರಿತು ಇನ್ನೂ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ.  

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES