ವಿಶ್ವದ ODI ಕ್ರಿಕೆಟ್ ಇತಿಹಾಸದಲ್ಲಿ ದ್ವಿಶತಕ ಬಾರಿಸುವುದು ಎಂದರೆ ಅಸಾಧ್ಯವಾದ ಮಾತು ಆಗಿತ್ತು. ಬೇರೆ ಬೇರೆ ದೇಶಗಳು ಕ್ರಿಕೆಟ್ ಆಡಿದರೂ ಯಾವುದೇ ಆಟಗಾರರು ದ್ವಿಶತಕ ಗಳಿಸಿರಲಿಲ್ಲ. 50 ಓವರ್‌ಗಳಲ್ಲಿ ಒಬ್ಬ ಬ್ಯಾಟರ್ ಇಷ್ಟೊಂದು ಮೊತ್ತ ಪೇರಿಸುವುದು ಎನ್ನುವುದು ನಂಬಲೇ ಆಗುತ್ತಿರಲಿಲ್ಲ. ಏಕೆಂದರೆ ಇದಕ್ಕಿಂತ ಮೊದಲು ಟೆಸ್ಟ್ ಕ್ರಿಕೆಟ್‌ನಲ್ಲಿ ಸಾಕಷ್ಟು ಸಮಯ ಇರುತ್ತಿದ್ದರಿಂದ ದ್ವಿಶತಕ, ತ್ರಿಶತಕ ಗಳಿಸುವುದು ಸಾಮಾನ್ಯವಾಗಿತ್ತು. ಆದರೆ ಅದೇ ಏಕದಿನ ಪಂದ್ಯದಲ್ಲಿ 200 ರನ್‌ಗಳನ್ನು ಒಬ್ಬ ಬ್ಯಾಟರ್ ಗಳಿಸುವುದು ಊಹೆಗೂ ನಿಲುಕದ ಮಾತಾಗಿತ್ತು. ಎಲ್ಲದಕ್ಕೂ ಬದಲಾವಣೆ ಎನ್ನುವುದು ಇದ್ದೇ ಇರುತ್ತದೆ. ಅದರಂತೆ ಅದೊಂದು ದಿನ ಕ್ರಿಕೆಟ್ ದೇವ್ರು ಸಚಿನ್ ತೆಂಡೂಲ್ಕರ್ ಅವರು ಯಾವುದೂ ಆಗಲ್ಲ ಎಂದು ಹೇಳುತ್ತಿದ್ದರೋ ಅದನ್ನು ಸಾಧಿಸಿ ತೋರಿಸಿಯೇ ಬಿಟ್ಟರು. ಆದರೆ ಸಚಿನ್‌ಗೂ ಮೀರಿದ ಸಾಧನೆಯನ್ನು ಮೊದಲು ಮಾಡಿದ್ದು ಮಾತ್ರ ಟೀಮ್ ಇಂಡಿಯಾದ ಮಾಜಿ ಕ್ರಿಕೆಟರ್, ಈ ಬಿಗ್ ಬ್ಯಾಟ್ಸ್‌ಮನ್.
ಸಚಿನ್ ತೆಂಡೂಲ್ಕರ್ ಅವರ ಹೆಸರು ಗೊತ್ತಿಲ್ಲದ ವ್ಯಕ್ತಿಯೇ ಇಲ್ಲ ಎನ್ನಬಹುದು. ಏಕೆಂದರೆ ಕ್ರಿಕೆಟ್‌ನಲ್ಲಿ ಸಚಿನ್ ಮಾಡಿರುವ ಸಾಧನೆ, ದಾಖಲೆ, ಆಟಗಾರರೊಂದಿಗೆ ಅವರು ಹೊಂದಿರುವ ಆತ್ಮಿಯತೆ, ಸುದೀರ್ಘವಾಗಿ ಆಡಿಕೊಂಡು ಬಂದಿರುವುದು ಈಗಿನವರಿಗೆ ನಂಬಲು ಆಗುವುದಿಲ್ಲ. 50 ಓವರ್‌ಗಳಲ್ಲಿ ಒಬ್ಬ ಬ್ಯಾಟ್ಸ್‌ಮನ್ ದ್ವಿಶತಕ ಹೊಡೆಯುವುದು ಸಾಧ್ಯವೇ ಇಲ್ಲ ಎಂಬುದನ್ನು ಎಲ್ಲರೂ ನಂಬಿದ್ದರು. ಆದರೆ ಈ ನಂಬಿಕೆಯನ್ನು ಮೊದಲು ಬ್ರೇಕ್ ಮಾಡಿದವರು ಸಚಿನ್ ತೆಂಡೂಲ್ಕರ್ ಅವರು. 2010ರ ಫೆಬ್ರುವರಿ 24ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಗ್ವಾಲಿಯರ್ ಮೈದಾನದಲ್ಲಿ ಸಚಿನ್ ತೆಂಡೂಲ್ಕರ್ ಅವರು ಅಜೇಯ 200 ರನ್ ಬಾರಿಸಿ ವಿಶ್ವದಲ್ಲಿ ಹೊಸ ವಿಶ್ವದಾಖಲೆಯನ್ನು ಮೊದಲ ಬಾರಿಗೆ ಮಾಡಿದರು.
ಒಡಿಐ ಕ್ರಿಕೆಟ್ ಇತಿಹಾಸದಲ್ಲಿ ಸಚಿನ್ ತೆಂಡೂಲ್ಕರ್ ಅವರ 200 ರನ್‌ಗಳ ದಾಖಲೆ ಯಾರು ಬ್ರೇಕ್ ಮಾಡುತ್ತಾರೆ ಎನ್ನುವುದು ವಿಶ್ವವೇ ಎದುರು ನೋಡುತ್ತಿತ್ತು. ಅಂದರ ದಾಖಲೆಗಳು ಇರುವುದೇ ಬ್ರೇಕ್ ಮಾಡುವುದಕ್ಕೆ ಎಂಬುವ ಮಾತು ಚಾಲ್ತಿಯಲ್ಲಿದೆ. ಅದರಂತೆ ಸಚಿನ್ ದಾಖಲೆ ಮೀರಿಸುವ ಆ ಬ್ಯಾಟ್ಸಮನ್ ಕ್ರಿಕೆಟ್ ಜಗತ್ತಿನಲ್ಲಿ ಇನ್ನು ಇಲ್ಲ ಎಂದು ತಮಾಷೆಯಾಗಿ ಅಭಿಮಾನಿಗಳು ಹೇಳುತ್ತಿದ್ದರು. ಕಾಡಿನಲ್ಲಿ ಹುಲ್ಲು ಬೆಳೆಯಬೇಕಾದರೆ ನಾನು ದೊಡ್ಡವನು ನನ್ನನ್ನು ಬಿಟ್ಟರೇ ಮತ್ಯಾರು ಇಷ್ಟೊಂದು ಎತ್ತರಕ್ಕೆ ಬೆಳೆಯಲ್ಲ ಎನ್ನುತ್ತಿತ್ತು. ಆದರೆ ಅದರ ಪಕ್ಕದಲ್ಲಿಯೇ ಬಿದ್ದ ಬೀಜ ಅದಕ್ಕಿಂತ ದೊಡ್ಡದಾಗಿ ಬೆಳೆದು ಗಿಡವಾಗಿ ಮರವಾಗುತ್ತದೆ. ಅದರಂತೆ ಸಚಿನ್ ಜೊತೆಯೇ ಓಪನಿಂಗ್ ಬ್ಯಾಟ್ಸ್‌ಮನ್ ಈ ದಾಖಲೆಯನ್ನು ಮೊದಲು ಬ್ರೇಕ್ ಮಾಡಿದರು.
ಟೀಮ್ ಇಂಡಿಯಾದ ಆಗಿನ ಸ್ಟಾರ್ ಓಪನರ್, ವಿಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಅವರು ವಿಶ್ವದಲ್ಲಿ ಹೊಸ ದಾಖಲೆಗೆ ಕಾರಣವಾದರು. ಸಚಿನ್ ದಾಖಲೆ ಬ್ರೇಕ್ ಮಾಡುವುದಕ್ಕೆ ಆಗಲ್ಲ ಎನ್ನುವುದನ್ನು ಬದಲಾಯಿಸಿದರು. ಇಂದೋರ್‌ನ ಹೋಳ್ಕತ್ ಕ್ರಿಕೆಟ್ ಸ್ಟೇಡಿಯಂನಲ್ಲಿ ವೆಸ್ಟ್ ವಿರುದ್ಧದ ಏಕದಿನ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ ಅವರು ಸಿಡಿಲಬ್ಬರ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯ 4ನೇ ಪಂದ್ಯದಲ್ಲಿ ಕ್ಯಾಪ್ಟನ್ ಆಗಿದ್ದ ಎಂ.ಎಸ್ ಧೋನಿ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಆದ್ದರಿಂದ ಅಂದಿನ ತಂಡದ ಜವಾಬ್ದಾರಿಯನ್ನು ಸೆಹ್ವಾಗ್ ಅವರೇ ನಿರ್ವಹಿಸಿದ್ದರು. ಈ ಸರಣಿಯಲ್ಲಿ ಸೆಹ್ವಾಗ ಮೊದಲ ಮೂರು ಪಂದ್ಯಗಳಲ್ಲಿ ಕೇವಲ 46 ರನ್‌ಗಳನ್ನು ಮಾತ್ರ ಗಳಿಸಿದ್ದರು.
ಇದರಿಂದ ಸೆಹ್ವಾಗ್ ಬ್ಯಾಟಿಂಗ್ ವಿರುದ್ಧ ಸಹಜವಾಗಿಯೇ ಟೀಕೆಗಳು ಕೇಳಿ ಬಂದಿದ್ದವು. ಆದರೆ ಟೀಕೆಗಳಿಗೆ ಹೇಗೆ ಉತ್ತರ ಕೊಡಬೇಕು ಎನ್ನುವುದು ಕ್ರೀಸ್‌ನಲ್ಲಿಯೇ ನಿರ್ಧರಿಸಿ ಬಿಟ್ಟರು. ಪಂದ್ಯ ಆರಂಭವಾಗುವುದಕ್ಕೂ ಮೊದಲೇ ಗೌತಮ್ ಗಂಭೀರ್ ಜೊತೆ ವೀರೇಂದ್ರ ಸೆಹ್ವಾಗ್ ಅವರು ಪಿಚ್ ಕುರಿರು ಮಾತನಾಡಿದ್ದರು. ಈ ಪಿಚ್ ಚೆನ್ನಾಗಿದೆ. ಔಟ್ ಫೀಲ್ಡ್ ವೇಗವಾಗಿದೆ. 50-60 ಗಜಗಳಷ್ಟೇ ಬೌಂಡರಿ ಲೈನ್ ದೂರ ಇದೆ. ಸ್ವಲ್ಪ ತಾಳ್ಮೆಯಿಂದ ಆಡಿದರೆ ಬೃಹತ್ ಇನ್ನಿಂಗ್ಸ್ ಅನ್ನು ಇಲ್ಲಿ ಆಡಬಹುದು ಎಂದು ಮಾತನಾಡಿದ್ದರು.
ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಬೌಲರ್‌ಗಳನ್ನು ದೂಳೀಪಟ ಮಾಡಿದ ವೀರೇಂದ್ರ ಸೆಹ್ವಾಗ್ ಅವರು ಬಿರುಸಿನ ಬ್ಯಾಟಿಂಗ್‌ಗೆ ಆರಂಭದಿಂದಲೇ ಮುನ್ನುಡಿ ಬರೆದಿದ್ದರು. ಎಂದಿನಂತೆ ಓಪನಿಂಗ್ ಆರಂಭಿಸಿದ್ದ ವೀರೇಂದ್ರ ಸೆಹ್ವಾಗ್ ಅವರು ಹೊಡಿಬಡಿ ಕಾಳಗಕ್ಕೆ ಇಳಿದು ಬಿಟ್ಟಿದ್ದರು. ಮೊದಲ ಓವರ್‌ನಲ್ಲೇ ಕೆಮರ್ ರೋಚ್ ಅವರ ಎಸೆತವನ್ನು ಥರ್ಡ್ ಮ್ಯಾನ್ ಮೇಲೆ ಅಪ್ಪರ್ ಕಟ್ ಹೊಡೆದು ಸಿಕ್ಸ್ ಹೊಡೆದರು. ಸ್ಪಿನ್ನರ್ ಸುನಿಲ್ ನರೈನ್ ಅವರಿಗೆ ಸಿಕ್ಸರ್ ಹೊಡೆಯುವ ಮೂಲಕ ಸ್ವಾಗತ ಮಾಡಿದರು. ಕೇವಲ 41 ಎಸೆತಗಳಲ್ಲಿ ಮೊದಲ ಅರ್ಧಶತಕ ಪೂರೈಸಿದರು.
ಹಾಗೇ ಬ್ಯಾಟಿಂಗ್ ಮುಂದುವರೆಸಿದ ವೀರೇಂದ್ರ ಸೆಹ್ವಾಗ್ ಅವರು 69 ಎಸೆತಗಳಲ್ಲಿ ತಮ್ಮ 15ನೇ ಏಕದಿನ ಶತಕ ಬಾರಿಸಿದರು. ಶತಕದ ಬಳಿಕ ರನ್‌ಗಳ ಮಳೆ ಸುರಿಸಿದರು. ಆದರೆ ಅವರು 200 ರನ್ ಗಳಿಸುತ್ತೇನೆ ಎಂದು ಅಂದುಕೊಂಡಿರಲಿಲ್ವಂತೆ. ಮೊದಲ ವಿಕೆಟ್‌ಗೆ ಸೆಹ್ವಾಗ್ ಮತ್ತು ಗಂಭೀರ್ ಅವರು 176 ರನ್‌ಗಳ ಪಾರ್ಟನರ್‌ಶಿಪ್ ಆಡಿದರು. ಗಂಭೀರ್ 67 ರನ್‌ಗೆ ಔಟಾದ ಮೇಲೆ ಸುರೇಶ್ ರೈನಾ ಜೊತೆ ಸ್ಫೋಟಕ 140 ರನ್‌ಗಳ ಜೊತೆಯಾಟವನ್ನು ವೀರೇಂದ್ರ ಸೆಹ್ವಾಗ್ ಅವರು ಆಡಿದರು. ವೀರೇಂದ್ರ ಸೆಹ್ವಾಗ್ ಅವರಿಗೆ ದ್ವಿಶತಕದ ಆಲೋಚನೆ ಬಂದಿದ್ದು ಬ್ಯಾಟಿಂಗ್ ಪವರ್ ಪ್ಲೇ ಸಮಯದಲ್ಲಿ. ಅಂದರೆ 35 ರಿಂದ 40 ಓವರ್‌ಗಳ ನಡುವೆ.
ವೀರೇಂದ್ರ ಸೆಹ್ವಾಗ್ ಅವರು 170 ರನ್ ಗಳಿಸಿದ್ದಾಗ ವೆಸ್ಟ್ ಇಂಡೀಸ್ ಬೌಲರ್ ರವಿ ರಪಾಲ್ ಬೌಲಿಂಗ್‌ನಲ್ಲಿ ಕ್ಯಾಪ್ಟನ್ ಡ್ಯಾರೆನ್ ಸ್ಯಾಮಿ ಕ್ಯಾಚ್ ಕೈಚೆಲ್ಲಿದರು. ಆವಾಗ ಸೆಹ್ವಾಗ್ ಅವರಿಗೆ ಹೊಸದೊಂದು ಆಲೋಚನೆ ಕ್ರೀಸ್‌ನಲ್ಲಿ ಥಟ್ ಅಂತ ಬಂತು. ಈ ರನ್ ಯಾಕೆ 200 ರನ್ ಆಗಬಾರದು ಎಂದು ಭಾವಿಸಿದರು. ಅದರಂತೆ ಬ್ಯಾಟಿಂಗ್ ಮುಂದುವರೆಸಿದ್ದ ಟೀಮ್ ಇಂಡಿಯಾದ ಸ್ಪೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ ಅವರು 197 ರನ್ ಗಳಿಸಿದ್ದಾಗ ಆಂಡ್ರೆ ರಸೆಲ್ ಅವರ ಬೌಲಿಂಗ್‌ನಲ್ಲಿ ಪಾಯಿಂಟ್ ಕಡೆಗೆ ಕಟ್ ಮಾಡಿ ಬೌಂಡರಿ ಮಾರಿಸೋ ಮೂಲಕ ಸಚಿನ್ ತೆಂಡೂಲ್ಕರ್ ಅವರ 200 ರನ್‌ಗಳ ದಾಖಲೆಯನ್ನು ಬ್ರೇಕ್ ಮಾಡಿದರು. 201 ರನ್ ಬಾರಿಸಿ ವೀರೇಂದ್ರ ಸೆಹ್ವಾಗ್ ಬ್ಯಾಟ್ ಮೇಲೇತ್ತಿ ಆಕಾಶವನ್ನು ನೋಡುತ್ತ ಸಂಭ್ರಮಿಸಿದರು.
ಓಪನರ್ ಸೆಹ್ವಾಗ ಅವರು ಕೇವಲ 140 ಎಸೆತಗಳಲ್ಲಿ 201 ರನ್ ಗಳಿಸಿರುವುದು ಅತ್ಯಂತ ವೇಗದ ದ್ವಿಶತಕವಾಗಿತ್ತು. ಅಭಿಮಾನಿಗಳು ಹರ್ಷೋದ್ಗಾರ ಸ್ಟೇಡಿಯಂ ತುಂಬಾ ಆವರಿಸಿತ್ತು. ಭಾರತ ತಂಡ ಅಂದು ಮತ್ತೊಂದು ಹೊಸ ದಾಖಲೆ ಬರೆದು ವಿಶ್ವ ಕ್ರಿಕೆಟ್‌ಗೆ ಬಲಿಷ್ಠ ಸಂದೇಶ ರವಾನೆ ಮಾಡಿತು. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 47ನೇ ಓವರ್‌ನಲ್ಲಿ ಕೀರನ್ ಪೊಲಾರ್ಡ್ ಎಸೆತದಲ್ಲಿ ಲಾಂಗ್ ಆಫ್‌ನಲ್ಲಿ ಸೆಹ್ವಾಗ್ ಕ್ಯಾಚ್ ನೀಡಿ ಔಟಾದರು. ಸೆಹ್ವಾಗ್ ಅವರು ಕೇವಲ 149 ಎಸೆತಗಳಲ್ಲಿ 25 ಬೌಂಡರಿಗಳು ಮತ್ತು 7 ಸಿಕ್ಸರ್‌ಗಳಿಂದ ಒಟ್ಟು 219 ರನ್ ಗಳಿಸಿದ್ದರು. ಸಚಿನ್ ಅವರ 200 ರನ್‌ಗಳ ದಾಖಲೆ ಮೊದಲು ಮುರಿದಿರುವ ವಿಶ್ವದ ಮೊದಲ ಏಕೈಕ ಬ್ಯಾಟರ್ ಎಂಧರೆ ಅದು ಸೆಹ್ವಾಗ್ ಎಂಬುದೇ ವಿಶೇಷ. ಇನ್ನೊಂದು ಅಚ್ಚರಿ ಸಂಗತಿ ಎಂದರೆ, ಸೆಹ್ವಾಗ್ ದಾಖಲೆ (219 ರನ್) ಯನ್ನು ಮೀರಿಸಿದ ಮತ್ತೊಬ್ಬ ಕ್ರಿಕೆಟರ್ ಕೂಡ ಟೀಮ್ ಇಂಡಿಯಾದ ಸ್ಟಾರ್ ಓಪನರ್ ಆಗಿದ್ದಾರೆ.