ಹಾರ್ದಿಕ್ ಪಾಂಡ್ಯ ಖರೀದಿಗೆ 6 ಫ್ರಾಂಚೈಸಿಗಳ ಪೈಪೋಟಿ! IPL 2027ಕ್ಕೆ ತಂಡ ಬದಲಿಸುತ್ತಾರಾ ಮುಂಬೈ ನಾಯಕ?
ಐಪಿಎಲ್ 2027ಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯರನ್ನ ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಆರು ಫ್ರಾಂಚೈಸಿಗಳು ಆಸಕ್ತಿ ತೋರಿಸಿವೆ ಎಂಬ ವರದಿಗಳು ಚರ್ಚೆಗೆ ಕಾರಣವಾಗಿವೆ. ಕೋಲ್ಕತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಸೇರಿದಂತೆ ಹಲವು ತಂಡಗಳು ಆಟಗಾರರ ವಿನಿಮಯದ ಮೂಲಕ ಪಾಂಡ್ಯರನ್ನ ಖರೀದಿಸಲು ಪ್ರಯತ್ನಿಸುತ್ತಿವೆ ಎನ್ನಲಾಗಿದೆ.
IPL 2027: ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ ಮುಂದಿನ ಆವೃತ್ತಿಗೆ ಸಿದ್ಧತೆಗಳು ಚುರುಕುಗೊಳ್ಳುತ್ತಿರುವ ಬೆನ್ನಲ್ಲೇ, ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯರ ಭವಿಷ್ಯದ ಕುರಿತು ಚರ್ಚೆಗಳು ಆರಂಭವಾಗಿವೆ. ಐಪಿಎಲ್ 2027ರ ಮಿನಿ ಹರಾಜಿಗೂ ಮುನ್ನ ಪಾಂಡ್ಯರನ್ನ ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಆರು ಫ್ರಾಂಚೈಸಿಗಳು ಆಸಕ್ತಿ ತೋರಿಸಿವೆ ಎಂದು ವರದಿಯಾಗಿದೆ. ಆಟಗಾರರ ಅದಲುಬದಲು (Player Swap Deal) ಮೂಲಕ ಈ ಒಪ್ಪಂದವನ್ನ ಅಂತಿಮಗೊಳಿಸಲು ಕೆಲವು ತಂಡಗಳು ಪ್ರಯತ್ನಿಸುತ್ತಿವೆ ಎನ್ನಲಾಗಿದೆ.
ಹಾರ್ದಿಕ್ ಪಾಂಡ್ಯರನ್ನ ತಂಡಕ್ಕೆ ಸೇರಿಸಿಕೊಳ್ಳುವ ವಿಚಾರದಲ್ಲಿ ಕೋಲ್ಕತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಸೇರಿದಂತೆ ಹಲವು ಫ್ರಾಂಚೈಸಿಗಳ ಹೆಸರುಗಳು ಮುನ್ನೆಲೆಗೆ ಬಂದಿವೆ. ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಕೂಡ ಈ ಬೆಳವಣಿಗೆಯನ್ನ ಗಮನಿಸುತ್ತಿವೆ ಎಂದು ತಿಳಿದುಬಂದಿದೆ.
ಆಟಗಾರರ ಅದಲುಬದಲು ಮೂಲಕ ಒಪ್ಪಂದಕ್ಕೆ ಪ್ರಯತ್ನ?
ಹಾರ್ದಿಕ್ ಪಾಂಡ್ಯರ ಸಂಭಾವ್ಯ ವರ್ಗಾವಣೆಯಲ್ಲಿ ಹಣಕಾಸಿನ ವ್ಯವಹಾರದ ಜೊತೆಗೆ ಆಟಗಾರರ ವಿನಿಮಯಕ್ಕೂ ಹೆಚ್ಚಿನ ಮಹತ್ವ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ. ಪಾಂಡ್ಯರ ಪ್ರಸ್ತುತ ಮೌಲ್ಯ ₹16.35 ಕೋಟಿ ಎಂದು ವರದಿಯಲ್ಲಿ ತಿಳಿಸಲಾಗಿದ್ದು, ಈ ಮೊತ್ತಕ್ಕೆ ಅನುಗುಣವಾಗಿ ತಮ್ಮ ತಂಡದ ಪ್ರಮುಖ ಆಟಗಾರರನ್ನ ಮುಂಬೈ ಇಂಡಿಯನ್ಸ್‌ಗೆ ಬಿಟ್ಟುಕೊಡುವ ಮೂಲಕ ಒಪ್ಪಂದ ಮಾಡಿಕೊಳ್ಳಲು ಕೆಲವು ಫ್ರಾಂಚೈಸಿಗಳು ಆಸಕ್ತಿ ತೋರಿಸಿವೆ ಎಂಬ ಮಾಹಿತಿ ಹೊರಬಿದ್ದಿದೆ.
ಈ ಹಿನ್ನೆಲೆಯಲ್ಲಿ ಪ್ಲೇಯರ್ ಟು ಪ್ಲೇಯರ್ ಸ್ವಾಪ್ ಡೀಲ್ ಕುರಿತು ಕೆಲವು ತಂಡಗಳು ಮುಂಬೈ ಇಂಡಿಯನ್ಸ್ ಆಡಳಿತ ಮಂಡಳಿಯೊಂದಿಗೆ ಮಾತುಕತೆ ಆರಂಭಿಸಿವೆ ಎಂದು ವರದಿಯಾಗಿದೆ. ಆದರೆ ಈ ಕುರಿತಂತೆ ಯಾವುದೇ ಅಧಿಕೃತ ಒಪ್ಪಂದ ಅಂತಿಮಗೊಂಡಿರುವ ಮಾಹಿತಿ ಲಭ್ಯವಾಗಿಲ್ಲ.
ಹಾರ್ದಿಕ್ ಪಾಂಡ್ಯ ಮೇಲೆ ಕಣ್ಣಿಟ್ಟಿರುವ ಪ್ರಮುಖ ತಂಡಗಳು
ಕೋಲ್ಕತಾ ನೈಟ್ ರೈಡರ್ಸ್ (KKR)
2024ರ ಐಪಿಎಲ್ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವು ಹಾರ್ದಿಕ್ ಪಾಂಡ್ಯರನ್ನ ತನ್ನ ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ತೋರಿಸಿದೆ ಎನ್ನಲಾಗಿದೆ. ತಂಡಕ್ಕೆ ಅನುಭವಿ ಭಾರತೀಯ ನಾಯಕನ ಅಗತ್ಯವಿದೆ ಎಂಬ ಹಿನ್ನೆಲೆಯಲ್ಲಿ ಪಾಂಡ್ಯರ ಸೇರ್ಪಡೆಯ ಸಾಧ್ಯತೆಯನ್ನ ಕೆಕೆಆರ್ ಪರಿಶೀಲಿಸುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಕಾರಣದಿಂದ ಸಂಭಾವ್ಯ ಟ್ರೇಡ್ ಚರ್ಚೆಯಲ್ಲಿ ಕೆಕೆಆರ್ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.
ರಾಜಸ್ಥಾನ್ ರಾಯಲ್ಸ್ (RR)
ಐಪಿಎಲ್‌ನ ಚೊಚ್ಚಲ ಆವೃತ್ತಿಯ ಚಾಂಪಿಯನ್ ರಾಜಸ್ಥಾನ್ ರಾಯಲ್ಸ್ ಕೂಡ ಹಾರ್ದಿಕ್ ಪಾಂಡ್ಯರನ್ನ ತನ್ನ ತಂಡಕ್ಕೆ ಸೇರಿಸಿಕೊಳ್ಳುವ ಆಸಕ್ತಿ ಹೊಂದಿದೆ ಎನ್ನಲಾಗಿದೆ. ಪಾಂಡ್ಯ ಅವರಂತಹ ಆಟಗಾರನ ಸೇರ್ಪಡೆಯ ಮೂಲಕ ತಂಡದ ಬಲವನ್ನ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಫ್ರಾಂಚೈಸಿ ಈ ಸಾಧ್ಯತೆಯನ್ನ ಗಮನಿಸುತ್ತಿದೆ ಎಂಬ ಮಾಹಿತಿ ವರದಿಯಲ್ಲಿದೆ.
ಚೆನ್ನೈ ಸೂಪರ್ ಕಿಂಗ್ಸ್ (CSK)
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರೋಮೋವೊಂದರಲ್ಲಿ ಹಾರ್ದಿಕ್ ಪಾಂಡ್ಯರ ಜೆರ್ಸಿ ಸಂಖ್ಯೆ 33 ಕಾಣಿಸಿಕೊಂಡಿರುವುದು ಚರ್ಚೆಗೆ ಕಾರಣವಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಸಿಎಸ್‌ಕೆ ಕೂಡ ಪಾಂಡ್ಯರನ್ನ ತನ್ನ ತಂಡಕ್ಕೆ ಕರೆತರಲು ತೆರೆಮರೆಯಲ್ಲಿ ಪ್ರಯತ್ನಿಸುತ್ತಿದೆ ಎಂಬ ಊಹಾಪೋಹಗಳು ಕೇಳಿಬಂದಿವೆ. ಆದರೆ ಈ ಪ್ರೋಮೋದಲ್ಲಿ ಜೆರ್ಸಿ ಸಂಖ್ಯೆ ಕಾಣಿಸಿಕೊಂಡಿರುವುದೇ ವರ್ಗಾವಣೆಯ ಖಚಿತ ಸೂಚನೆಯಲ್ಲ.
ಡೆಲ್ಲಿ, ಲಕ್ನೋ ಮತ್ತು ಪಂಜಾಬ್ ತಂಡಗಳೂ ರೇಸ್‌ನಲ್ಲಿ?
ಹಾರ್ದಿಕ್ ಪಾಂಡ್ಯರ ಮುಂದಿನ ತಂಡದ ಕುರಿತು ನಡೆಯುತ್ತಿರುವ ಚರ್ಚೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ಹೆಸರುಗಳೂ ಕೇಳಿಬರುತ್ತಿವೆ. ಈ ಮೂರು ಫ್ರಾಂಚೈಸಿಗಳು ಕೂಡ ಅವರ ಭವಿಷ್ಯದ ನಡೆ ಕುರಿತು ಗಮನ ಹರಿಸುತ್ತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆರು ತಂಡಗಳ ಆಸಕ್ತಿ ಕುರಿತ ಮಾಹಿತಿ ಹೊರಬಿದ್ದಿದ್ದರೂ, ಯಾವ ಫ್ರಾಂಚೈಸಿ ಪಾಂಡ್ಯರನ್ನ ತನ್ನ ತಂಡಕ್ಕೆ ಕರೆತರಲಿದೆ ಎಂಬುದರ ಕುರಿತು ಸ್ಪಷ್ಟತೆ ಇಲ್ಲ. ಮುಂಬೈ ಇಂಡಿಯನ್ಸ್ ಅವರನ್ನ ಉಳಿಸಿಕೊಳ್ಳಲಿದೆಯೇ ಅಥವಾ ಆಟಗಾರರ ವಿನಿಮಯಕ್ಕೆ ಒಪ್ಪಿಗೆ ನೀಡಲಿದೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ.
ನವೆಂಬರ್ 1ರಿಂದ ಟ್ರೇಡಿಂಗ್ ಚರ್ಚೆಗಳಿಗೆ ವೇಗ?
ವರದಿಯ ಪ್ರಕಾರ, ಫ್ರಾಂಚೈಸಿಗಳು ತಮ್ಮ ರಿಟೆನ್ಷನ್ ಪಟ್ಟಿಯನ್ನ ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದ್ದು, 2026ರ ನವೆಂಬರ್ 1ರಿಂದ ಆಟಗಾರರ ವರ್ಗಾವಣೆ ಕುರಿತ ಮಾತುಕತೆಗಳು ವೇಗ ಪಡೆದುಕೊಳ್ಳುವ ನಿರೀಕ್ಷೆಯಿದೆ. ಈ ಹಂತದಲ್ಲಿ ಹಾರ್ದಿಕ್ ಪಾಂಡ್ಯರ ಭವಿಷ್ಯದ ಕುರಿತು ನಡೆಯುತ್ತಿರುವ ಚರ್ಚೆಗಳು ಮತ್ತಷ್ಟು ಗಮನ ಸೆಳೆಯುವ ಸಾಧ್ಯತೆಯಿದೆ.
ಒಟ್ನಲ್ಲಿ ಐಪಿಎಲ್ 2027ಕ್ಕೂ ಮುನ್ನ ಹಾರ್ದಿಕ್ ಪಾಂಡ್ಯರನ್ನ ಕೇಂದ್ರವಾಗಿಟ್ಟುಕೊಂಡು ಆರು ಫ್ರಾಂಚೈಸಿಗಳ ಆಸಕ್ತಿಯ ಕುರಿತು ವರದಿಗಳು ಹರಿದಾಡುತ್ತಿವೆ. ಆದರೆ ಅವರ ವರ್ಗಾವಣೆ ಅಥವಾ ತಂಡ ಬದಲಾವಣೆಗೆ ಸಂಬಂಧಿಸಿದಂತೆ ಅಧಿಕೃತ ಘೋಷಣೆ ಹೊರಬಂದಿಲ್ಲ. ಹೀಗಾಗಿ ಮುಂಬೈ ಇಂಡಿಯನ್ಸ್ ನಾಯಕ ಮುಂದಿನ ಆವೃತ್ತಿಯಲ್ಲೂ ಇದೇ ತಂಡದಲ್ಲಿ ಮುಂದುವರಿಯಲಿದ್ದಾರೆಯೇ ಅಥವಾ ಹೊಸ ಫ್ರಾಂಚೈಸಿಯ ಪರ ಆಡಲಿದ್ದಾರೆಯೇ ಎಂಬುದಕ್ಕೆ ಮುಂದಿನ ಬೆಳವಣಿಗೆಗಳಿಂದಲೇ ತಿಳಿದುಬರಲಿದೆ.