SOCIAL MEDIA

Newsletter

PARTNER SITES
Select Language Select State

35 ಎಸೆತಗಳಲ್ಲಿ ಶತಕ ಸಿಡಿಸಿ ಇತಿಹಾಸ ಬರೆದ ಅಭಿಷೇಕ್ ಶರ್ಮಾ; ವಿರಾಟ್ ಕೊಹ್ಲಿ ದಾಖಲೆ ಹಿಂದಿಕ್ಕಿದ ಸಿಕ್ಸರ್ ಕಿಂಗ್!

ನ್ಯೂಜಿಲೆಂಡ್ ನೀಡಿದ 199 ರನ್‌ಗಳ ಗುರಿಯನ್ನ ಭಾರತ ಕೇವಲ 13.2 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ತಲುಪಿತು. ಈ ಮೂಲಕ ಭಾರತ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಅಭಿಷೇಕ್ ಶರ್ಮಾ ಅವರ ಸ್ಫೋಟಕ ಶತಕ ಹಾಗೂ ವೈಭವ್ ಸೂರ್ಯವಂಶಿ ಅವರ ಆಕ್ರಮಣಕಾರಿ ಬ್ಯಾಟಿಂಗ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

Written By Puttaraj K Alur
Published: Oct 27, 2026, 04:52 PM IST | Updated: Oct 27, 2026, 05:18 PM IST
Image Credit: Abhishek Sharma
Join

Abhishek Sharma Century: ಭಾರತ v/s ನ್ಯೂಜಿಲೆಂಡ್ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಹೊಸ ದಾಖಲೆ ನಿರ್ಮಿಸಿದ್ದಾರೆ. ನ್ಯೂಜಿಲೆಂಡ್ ನೀಡಿದ 199 ರನ್‌ಗಳ ಗುರಿಯನ್ನ ಬೆನ್ನಟ್ಟಿದ ಭಾರತ ಪರ ಅಭಿಷೇಕ್ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದರು. ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಕೂಡ ಆಕ್ರಮಣಕಾರಿ ಆಟವಾಡುವ ಮೂಲಕ ನ್ಯೂಜಿಲೆಂಡ್ ಬೌಲರ್‌ಗಳ ಮೇಲೆ ಒತ್ತಡ ಹೇರಿದರು.

ವೆಲ್ಲಿಂಗ್ಟನ್‌ನ ಹೆನ್ರಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಕೇವಲ 13.2 ಓವರ್‌ಗಳಲ್ಲಿ 199 ರನ್‌ಗಳ ಗುರಿಯನ್ನ ತಲುಪಿ ಆರು ವಿಕೆಟ್‌ಗಳ ಜಯ ಸಾಧಿಸಿತು. ಅಭಿಷೇಕ್ ಶರ್ಮಾ ಅವರ ಭರ್ಜರಿ ಶತಕ ಮತ್ತು ವೈಭವ್ ಸೂರ್ಯವಂಶಿ ಅವರ ವೇಗದ ಆಟ ಭಾರತದ ಚೇಸಿಂಗ್‌ಗೆ ದೊಡ್ಡ ಬಲ ನೀಡಿತು.

35 ಎಸೆತಗಳಲ್ಲಿ ಶತಕ: ಅಭಿಷೇಕ್ ಶರ್ಮಾ ಅಬ್ಬರ

ನ್ಯೂಜಿಲೆಂಡ್ ಬೌಲರ್‌ಗಳನ್ನ ಆರಂಭದಿಂದಲೇ ಬೆಂಡೆತ್ತಿದ ಅಭಿಷೇಕ್ ಶರ್ಮಾ ಸಿಕ್ಸರ್‌ಗಳು ಮತ್ತು ಬೌಂಡರಿಗಳ ಸುರಿಮಳೆಗೈದರು. ಅವರು ಕೇವಲ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿ, ನಂತರ 35 ಎಸೆತಗಳಲ್ಲಿ ಶತಕದ ಗಡಿ ದಾಟಿದರು. ಅಭಿಷೇಕ್ 38 ಎಸೆತಗಳಲ್ಲಿ 113 ರನ್ ಗಳಿಸಿದರು. ಅವರ ಈ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಮತ್ತು 11 ಸಿಕ್ಸರ್‌ಗಳು ಸೇರಿದ್ದವು. 297.37ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಮಾಡಿದ ಅವರು ಭಾರತಕ್ಕೆ ಸುಲಭ ಗೆಲುವು ತಂದುಕೊಟ್ಟರು. ಇದು ಅಭಿಷೇಕ್ ಶರ್ಮಾರ ನಾಲ್ಕನೇ ಟಿ20 ಅಂತಾರಾಷ್ಟ್ರೀಯ ಶತಕವಾಗಿದೆ. ಇದಕ್ಕೂ ಮೊದಲು ಅಫ್ಘಾನಿಸ್ತಾನ, ಇಂಗ್ಲೆಂಡ್ ಮತ್ತು ಜಿಂಬಾಬ್ವೆ ವಿರುದ್ಧ ಅವರು ಶತಕ ಗಳಿಸಿದ್ದರು. ನ್ಯೂಜಿಲೆಂಡ್ ವಿರುದ್ಧದ ಈ ಇನ್ನಿಂಗ್ಸ್ ಅವರ ಮತ್ತೊಂದು ಗಮನಾರ್ಹ ಸಾಧನೆಯಾಗಿದೆ.

ಸೂರ್ಯಕುಮಾರ್ ಯಾದವ್‌ ದಾಖಲೆ ಸರಿಗಟ್ಟಿದ ಅಭಿಷೇಕ್!

ಅಭಿಷೇಕ್ ಶರ್ಮಾ ಅವರ ಈ ಶತಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿನ ಅವರ ನಾಲ್ಕನೇ ಶತಕವಾಗಿದೆ. ಈ ಮೂಲಕ ಅವರು ಸೂರ್ಯಕುಮಾರ್ ಯಾದವ್ ಮತ್ತು ಫಿಲ್ ಸಾಲ್ಟ್ ಅವರ ದಾಖಲೆಯನ್ನ ಸರಿಗಟ್ಟಿದ್ದಾರೆ. ಪುರುಷರ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿಹೆಚ್ಚು ಶತಕ ಗಳಿಸಿದವರ ಪಟ್ಟಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ರೋಹಿತ್ ಶರ್ಮಾ ತಲಾ ಐದು ಶತಕಗಳೊಂದಿಗೆ ಮುಂದಿದ್ದಾರೆ. ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಫಿಲ್ ಸಾಲ್ಟ್ ತಲಾ ನಾಲ್ಕು ಶತಕಗಳನ್ನ ಗಳಿಸಿದ್ದಾರೆ.

ಪುರುಷರ ಟಿ20ಐಗಳಲ್ಲಿ ಅತಿಹೆಚ್ಚು ಶತಕ ಬಾರಿಸಿದ ಬ್ಯಾಟ್ಸ್‌ಮನ್‌ಗಳು

ಗ್ಲೆನ್ ಮ್ಯಾಕ್ಸ್‌ವೆಲ್ - 5 
ರೋಹಿತ್ ಶರ್ಮಾ - 5  
ಕರಣ್‌ಬೀರ್ ಸಿಂಗ್ _ 4 
ಫಿಲ್ ಸಾಲ್ಟ್‌ _ 4 
ಸೂರ್ಯಕುಮಾರ್ ಯಾದವ್ - 4
ಅಭಿಷೇಕ್ ಶರ್ಮಾ - 4

ವಿರಾಟ್ ಕೊಹ್ಲಿ ದಾಖಲೆ ಹಿಂದಿಕ್ಕಿದ ಅಭಿಷೇಕ್

ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ ಅಭಿಷೇಕ್ ಶರ್ಮಾ ತಮ್ಮ 11ನೇ ಶತಕವನ್ನ ದಾಖಲಿಸಿದ್ದಾರೆ. ಈ ಮೂಲಕ ತಲಾ 10 ಶತಕಗಳನ್ನ ಗಳಿಸಿರುವ ವಿರಾಟ್ ಕೊಹ್ಲಿ ಮತ್ತು ಡೇವಿಡ್ ವಾರ್ನರ್ ಅವರನ್ನ ಹಿಂದಿಕ್ಕಿದ್ದಾರೆ. ಈ ಪಟ್ಟಿಯಲ್ಲಿ ಕ್ರಿಸ್ ಗೇಲ್ 22 ಶತಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಬಾಬರ್ ಅಜಮ್ 13 ಶತಕಗಳೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ. ಅಭಿಷೇಕ್ ಶರ್ಮಾರ ಖಾತೆಯಲ್ಲಿ ಈಗ 11 ಟಿ20 ಶತಕಗಳಿವೆ.

ವೈಭವ್ ಸೂರ್ಯವಂಶಿ ಕೂಡ ಸ್ಫೋಟಕ ಆಟ

ಅಭಿಷೇಕ್ ಶರ್ಮಾ ಜೊತೆಗೆ ಯುವ ಆಟಗಾರ ವೈಭವ್ ಸೂರ್ಯವಂಶಿ ಕೂಡ ವೇಗದ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಅವರು ಕೇವಲ 19 ಎಸೆತಗಳಲ್ಲಿ 45 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳು ಸೇರಿದ್ದವು. ಅವರ ಸ್ಟ್ರೈಕ್‌ರೇಟ್ 236.84 ಆಗಿತ್ತು. ಇಬ್ಬರೂ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಪರಿಣಾಮ, ಭಾರತ ಕಡಿಮೆ ಓವರ್‌ಗಳಲ್ಲೇ ಸುಲಭವಾಗಿ ಟಾರ್ಗೆಟ್‌ ಚೇಸ್‌ ಮಾಡಿತು.  

ಭಾರತಕ್ಕೆ 6 ವಿಕೆಟ್‌ಗಳ ಭರ್ಜರಿ ಗೆಲುವು!

ನ್ಯೂಜಿಲೆಂಡ್ ನೀಡಿದ 199 ರನ್‌ಗಳ ಗುರಿಯನ್ನ ಭಾರತ ಕೇವಲ 13.2 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ತಲುಪಿತು. ಈ ಮೂಲಕ ಭಾರತ 6 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು. ಟಾಸ್‌ ಗೆದ್ದ ಟೀಂ ಇಂಡಿಯಾ ಫೀಲ್ಡಿಂಗ್‌ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತು. ಡ್ಯಾರಿಲ್ ಮಿಚೆಲ್ 89 ರನ್‌ಗಳೊಂದಿಗೆ ಅಜೇಯರಾಗಿ ಉಳಿದರೆ, ಫಿನ್ ಅಲೆನ್ 40 ಮತ್ತು ಬೆವನ್ ಜೇಕಬ್ಸ್ ಅಜೇಯ 39 ರನ್ ಗಳಿಸಿದರು. ಗುರಿ ಬೆನ್ನಟ್ಟಿದ ಭಾರತ 13.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತು. ಅಭಿಷೇಕ್ ಶರ್ಮಾ 38 ಎಸೆತಗಳಲ್ಲಿ 113 ರನ್ ಸಿಡಿಸಿದರೆ, ವೈಭವ್ ಸೂರ್ಯವಂಶಿ 19 ಎಸೆತಗಳಲ್ಲಿ 45 ರನ್ ಗಳಿಸಿದರು. ಕೈಲ್ ಜೇಮಿಸನ್ 2 ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಇನ್ನೂ 2 ಪಂದ್ಯಗಳು ಬಾಕಿ ಇರುವಂತೆಯೇ ಟೀಂ ಇಂಡಿಯಾ ಸರಣಿಯನ್ನ ಕೈವಶ ಮಾಡಿಕೊಂಡಿದ್ದು, 3-0 ರಿಂದ ಮುನ್ನಡೆ ಸಾಧಿಸಿದೆ. 

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES