T20 ವಿಶ್ವಕಪ್ ಟೂರ್ನಮೆಂಟ್ ಎಂದರೆ ಪ್ರತಿಷ್ಠೆಯ ಕದನ. ಎಲ್ಲ ಹಂತಗಳಲ್ಲಿ ಗೆಲುವು ಸಾಧಿಸಿ ಫೈನಲ್‌ಗೆ ಹೋಗಬೇಕು ಎಂದರೆ ಆಟಗಾರರು ಭಾರೀ ಪರಿಶ್ರಮವನ್ನೇ ಹಾಕಬೇಕು. ಒಬ್ಬರಲ್ಲ, ಇಬ್ಬರಲ್ಲ ಇಡೀ ತಂಡವೂ ಒಗ್ಗಟ್ಟಾಗಿ ಪ್ರದರ್ಶನ ನೀಡಿದಾಗ ಮಾತ್ರ ಕಪ್ ಒಲಿದು ಬರುತ್ತದೆ. ವಿಶ್ವಕಪ್ ಪಂದ್ಯಾವಳಿಯಲ್ಲಿ ಎಲ್ಲ ತಂಡಗಳು ಅದ್ಭುತವಾದ ಪ್ರದರ್ಶನ ನೀಡುತ್ತಿರುತ್ತವೆ. ಎಲ್ಲ ತಂಡಗಳ ವಿರುದ್ಧ ಸೆಣಸಾಡಿ ಗೆಲುವು ಪಡೆದು ಫೈನಲ್‌ವರೆಗೆ ಬರಬೇಕು ಎಂದರೆ ಆಟಗಾರರೆಲ್ಲ 100ಕ್ಕೆ ನೂರರಷ್ಟು ಶ್ರಮ ಹಾಕಲೇಬೇಕು. ಆದರೆ 2026ರ ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಟೀಮ್ ಇಂಡಿಯಾದಲ್ಲಿ ಆಗಿದ್ದೇ ಬೇರೆ.
ಭಾರತದಲ್ಲಿ ನಡೆದ 2026ರ ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಟೀಮ್ ಇಂಡಿಯಾ ಗೆಲ್ಲುತ್ತದೆಯೇ ಎಂದು ಹೇಳುವುದು ಕಷ್ಟವಾಗಿತ್ತು. ಏಕೆಂದರೆ ಓಪನರ್ ಆಗಿದ್ದ ಅಭಿಷೇಕ್ ಶರ್ಮಾ ಸಂಪೂರ್ಣವಾದ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ವಿಶ್ವಕಪ್ ಪಂದ್ಯಗಳಲ್ಲಿ ಅಭಿಷೇಕ್ ಶರ್ಮಾ, ಸೂರ್ಯಕುಮಾರ್, ಇಶಾನ್ ಕಿಶನ್, ತಿಲಕ್ ವರ್ಮಾ ಸೇರಿದಂತೆ ಇನ್ನು ಕೆಲವು ಆಟಗಾರರು ಬ್ಯಾಟಿಂಗ್ ವೈಫಲ್ಯದಿಂದ ಬಳಲುತ್ತಿದ್ದರು. ಇಂತಹ ಸಂದರ್ಭದಲ್ಲಿ ಭಾರತ ಈ ಸಲ ವಿಶ್ವಕಪ್ ಫೈನಲ್ ಆಡುತ್ತದೆಯೇ ಎನ್ನುವುದು ಅಭಿಮಾನಿಗಳ ಪ್ರಶ್ನೆ ಆಗಿತ್ತು. ಆದರೆ ಟೀಮ್ ಇಂಡಿಯಾವನ್ನು ಪ್ರತಿ ಹಂತದಲ್ಲೂ, ಪ್ರತಿ ಪಂದ್ಯದಲ್ಲೂ ಗೆಲ್ಲಿಸಿದ ನಿಜವಾದ ಹೀರೋ ಎಂದರೆ.. ಅದು ಕೇರಳದ ಹುಡುಗ.
T20 ವಿಶ್ವಕಪ್‌ಗೂ ಮೊದಲು ಆಡಿದಂತಹ ಟಿ20 ಸರಣಿಗಳಲ್ಲಿ ಸಂಜು ಸ್ಯಾಮ್ಸನ್ ಅವರು ಬ್ಯಾಟಿಂಗ್‌ನಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದರು. ಸಾಲು ಸಾಲು ಸರಣಿಗಳಲ್ಲಿ ಸಂಜು ಸ್ಯಾಮ್ಸನ್ ಅವರು ತೋರಿದ ಬ್ಯಾಟಿಂಗ್ ನೋಡಿದರೆ ಅವರನ್ನು ತಂಡದಿಂದಲೇ ಕೈಬಿಡಬೇಕು ಎನ್ನುವ ಮಾತುಗಳು ಕೇಳಿ ಬಂದಿದ್ದವು. ಏಕೆಂದರೆ 2025ರಲ್ಲಿ ಸಂಜು ಸ್ಯಾಮ್ಸನ್ ತೋರಿದ ಬ್ಯಾಟಿಂಗ್ ಪ್ರದರ್ಶನ ಆ ಮಟ್ಟದಲ್ಲಿತ್ತು. ಬಾಲ್ ಹೇಗೆ ಬಂದರೂ ಸಂಜು ಸ್ಯಾಮ್ಸನ್ ಹತ್ತು, ಇಪ್ಪತ್ತು ರನ್ ಒಳಗೆ ಔಟ್ ಆಗಿ ಬೇಸರದಿಂದ ಹೊರ ನಡೆಯುತ್ತಿದ್ದರು. ಇದು ಬಿಸಿಸಿಐ ಆಯ್ಕೆ ಸಮಿತಿಗೆ ದೊಡ್ಡ ತಲೆನೋವಾಗಿತ್ತು ಎನ್ನಬಹುದು. ಏಕೆಂದರೆ ಎಷ್ಟೇ ಟೀಕೆಗಳು ಬಂದರೂ ಸಂಜು ಸ್ಯಾಮ್ಸನ್ ಅವರನ್ನ ಸರಣಿಯಲ್ಲಿ ಬಿಸಿಸಿಐ ಆಯ್ಕೆ ಸಮಿತಿಯೂ ಸಂಜು ಸ್ಯಾಮ್ಸನ್ ಅವರನ್ನ ತಂಡಕ್ಕೆ ಸೇರಿಸಿಕೊಳ್ಳುತ್ತಲೇ ಬರುತ್ತಿತ್ತು.
ಇಂತಹ ಬ್ಯಾಟಿಂಗ್ ಮಾಡುತ್ತಿದ್ದ ಸಂಜು ಸ್ಯಾಮ್ಸನ್ ಅವರು T20 ವಿಶ್ವಕಪ್‌ನಲ್ಲಿ ಆಡುತ್ತಾರಾ ಎಂದು ಯಾರಾದರೂ ಭಾವಿಸುತ್ತಾರಾ?, ಬ್ಯಾಟಿಂಗ್ ಫಾರ್ಮ್‌ನಲ್ಲಿ ಇಲ್ಲ ಎಂದು ತಂಡದಿಂದ ಹೊರಗಿಡುವ ನಿರ್ಧಾರ ಮಾಡುತ್ತಾರೆ. ಆದರೆ ಬಿಸಿಸಿಐ ಆಯ್ಕೆ ಸಮಿತಿ ಸಂಜು ಸ್ಯಾಮ್ಸನ್ ಅವರಿಗೆ T20 ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡುತ್ತದೆ. ಸಂಜು ಸ್ಯಾಮ್ಸನ್ ಫಾರ್ಮ್‌ನಲ್ಲಿಯೇ ಇಲ್ಲ, ಏನು ಆಡುತ್ತಾರೆ ಎಂದು ಎಲ್ಲರೂ ಭಾವಿಸಿರುತ್ತಾರೆ. ಆದರೆ ವಿಶ್ವಕಪ್‌ನಲ್ಲಿ ಆಗಿದ್ದೇ ಬೇರೆ. ಪ್ರತಿ ಪಂದ್ಯದಲ್ಲೂ ಸಂಜು ಸ್ಯಾಮ್ಸನ್ ತೋರಿದ್ದ ಅದ್ಭುತವಾದ ಬ್ಯಾಟಿಂಗ್ ಇಡೀ ಭಾರತವನ್ನೇ ಅಚ್ಚರಿಗೊಳಿಸಿತು. ಎಲ್ಲೆಡೆ ಸಂಜು ಸ್ಯಾಮ್ಸನ್ ಹೆಸರು ಕೇಳಿ ಬಂತು. T20 ವಿಶ್ವಕಪ್ ಭಾರತದದ್ದೇ ಎನ್ನುವ ಭರವಸೆಯನ್ನು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿಯೇ ಮೂಡಿಸಿದರು.
ವಿಶ್ವಕಪ್ ಪಂದ್ಯಾವಳಿಯಲ್ಲಿ ಸಂಜು ಸ್ಯಾಮ್ಸನ್ ಅವರು 2026ರ ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಒಟ್ಟು ಐದು ಪಂದ್ಯಗಳಲ್ಲಿ ಆಡಿ ಭಾರತ ತಂಡದ ಚಿತ್ರಣವನ್ನೇ ಬದಲಾಯಿಸಿದರು. ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಕೇವಲ 22 ರನ್‌ಗೆ ಸಂಜು ಸ್ಯಾಮ್ಸನ್ ಔಟ್ ಆಗಿ ನಿರಾಸೆ ಮೂಡಿಸಿದರು. ಆದರೆ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘವಾದ ಗೆಲುವು ಪಡೆಯಿತು. ಜಿಂಬಾಂಬ್ವೆ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರು ಅಷ್ಟೊಂದು ಬ್ಯಾಟಿಂಗ್ ಏನು ಮಾಡಲಿಲ್ಲ ಎನ್ನಬಹುದು. ಏಕೆಂದರೆ ಜಿಂಬಾಂಬ್ವೆ ವಿರುದ್ಧ ಸಂಜು ಕೇವಲ 24 ರನ್ ಗಳಿಸಿದರು ಅಷ್ಟೇ.
ಇದಾದ ಮೇಲೆ ವೆಸ್ಟ್ ಇಂಡೀಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಭಯದಲ್ಲಿತ್ತು. ಏಕೆಂದರೆ ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ನಾಯಕನಾಗಿದ್ದ ಸೂರ್ಯಕುಮಾರ್ ಯಾದವ್ ಅವರು ಕೆಲವೇ ರನ್‌ಗಳನ್ನು ಗಳಿಸಿ ಪೆವಿಲಿಯನ್‌ಗೆ ಮರಳಿದ್ದರು. ಮುಖ್ಯವಾದ ಬ್ಯಾಟ್ಸ್‌ಮನ್‌ಗಳೇ ಔಟ್ ಆಗಿರುವಾಗ ಭಾರತ ತಂಡ ಗೆಲ್ಲುತ್ತದೆಯೋ, ಇಲ್ಲವೋ ಎನ್ನುವುದು ಅನುಮಾನ ಇತ್ತು. ಆದರೆ ಕ್ರೀಸ್‌ನಲ್ಲಿ ವೆಸ್ಟ್ ಇಂಡೀಸ್ ಬೌಲರ್‌ಗಳಿಗೆ ಬೆಂಡೆತ್ತಿದ ಸಂಜು ಸ್ಯಾಮ್ಸನ್ ಪಂದ್ಯದಲ್ಲಿ 12 ಬೌಂಡರಿಗಳು ಮತ್ತು 4 ಬಿಗ್ ಸಿಕ್ಸರ್‌ಗಳ ಸಮೇತ ಅಜೇಯ 97 ರನ್‌ಗಳನ್ನು ಸಿಡಿಸಿ ಭಾರತಕ್ಕೆ ಅಮೋಘವಾದ ಗೆಲುವು ತಂದುಕೊಟ್ಟರು. ವೆಸ್ಟ್ ಇಂಡೀಸ್ ವಿರುದ್ಧದ ಸಂಜು ಬ್ಯಾಟಿಂಗ್ ವಿಶ್ವಕಪ್ ಗೆಲ್ಲುವ ಕನಸು ಮತ್ತಷ್ಟು ಬಲಪಡಿಸಿತು.
ಇಂಗ್ಲೆಂಡ್ ವಿರುದ್ಧ ನಡೆದ ಸಮಿಫೈನಲ್ ಪಂದ್ಯದಲ್ಲೂ ಅಷ್ಟೇ, ಸಂಜು ಸ್ಯಾಮ್ಸನ್ ಅವರ ಬ್ಯಾಟಿಂಗ್ ವೈಭೋಗ ಯಾರಿಗೂ ತಡೆಯಲು ಆಗಲಿಲ್ಲ. ಇಂಗ್ಲೆಂಡ್ ಬೌಲರ್‌ಗಳಂತೂ ಸಂಜು ಸ್ಯಾಮ್ಸನ್ ವಿಕೆಟ್‌ಗಾಗಿ ಕಾಯುತ್ತಿದ್ದರು ಎನ್ನಬಹುದು. ಪಂದ್ಯದಲ್ಲಿ ಕೇವಲ 42 ಎಸೆತಗಳಲ್ಲಿ 8 ಬೌಂಡರಿ ಮತ್ತು 7 ಸಿಕ್ಸರ್‌ಗಳಿಂದ 89 ರನ್‌ಗಳನ್ನು ಸಿಡಿಸಿ ಟೀಮ್ ಇಂಡಿಯಾದ ವಿಜಯಕ್ಕೆ ಮುಖ್ಯ ಕಾರಣರಾದರು. ವಿಶ್ವಕಪ್‌ನಲ್ಲಿ ಸಂಜು ಸ್ಯಾಮ್ಸನ್ ಅವರೇ ಭಾರತದ ವಿಜಯಯಾತ್ರೆಗೆ ಕಾರಣಕರ್ಥರಾದರು ಎನ್ನಬಹುದು. ಏಕೆಂದರೆ ಫೈನಲ್‌ನಲ್ಲೂ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಆರ್ಭಟ ಎದುರಾಳಿಗಳ ನಿದ್ದೆಗೆಡಿಸಿತ್ತು.
T20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ದೊಡ್ಡ ಮೊತ್ತದ ರನ್‌ಗಳನ್ನು ಕಲೆ ಹಾಕಿತು. ಭಾರತ ತಂಡಕ್ಕೆ ಉತ್ತಮ ಓಪನಿಂಗ್ ಪಡೆದುಕೊಂಡಿತು. ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಮೊದಲ ವಿಕೆಟ್‌ಗೆ 98 ರನ್‌ಗಳನ್ನು ಕಲೆ ಹಾಕಿದರು. ಇದು ಬೃಹತ್ ಸ್ಕೋರ್‌ಗೆ ಕಾರಣವಾಯಿತು. ಅಭಿಷೇಕ್ ಶರ್ಮಾ ಅರ್ಧಶತಕ ಬಾರಿಸಿ ವಿಕೆಟ್ ಒಪ್ಪಿಸಿ ಹೊರ ನಡೆದರೆ ಕ್ರೀಸ್‌ಗೆ ಬ್ಯಾಟ್ ಹಿಡಿದು ಬಂದ ಇಶಾನ್ ಕಿಶನ್ ಕಿವೀಸ್ ಪಡೆಯ ಬೌಲರ್‌ಗಳನ್ನ ಧೂಳೀಪಟ ಮಾಡಿದರು.
ಕೇವಲ 25 ಎಸೆತಗಳನ್ನು ಎದುರಿಸಿದ ಇಶಾನ್ ಕಿಶನ್ ಅವರು ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾದರು. ಫೈನಲ್ ಪಂದ್ಯದಲ್ಲಿ ಘರ್ಜನೆ ಮಾಡಿದ ಸಂಜು ಸ್ಯಾಮ್ಸನ್ ಅವರು ಕೇವಲ 46 ಎಸೆತಗಳಲ್ಲಿ 5 ಬೌಂಡರಿ ಮತ್ತು 8 ಸಿಕ್ಸರ್‌ಗಳನ್ನು ಸಿಡಿಸಿ 89 ರನ್‌ಗಳನ್ನು ಗಳಿಸಿದರು. ಇಡೀ ಟೂರ್ನಿಯುದ್ದಕ್ಕೂ ಬಲವಾದ ಬ್ಯಾಟಿಂಗ್ ಮಾಡಿದ ಸಂಜು ಸ್ಯಾಮ್ಸನ್ ಅವರು ಭಾರತಕ್ಕೆ ಟಿ20 ವಿಶ್ವಕಪ್ ಅನ್ನು ಗೆಲ್ಲಿಸಿಕೊಟ್ಟರು. ಇದರಂತೆ ಮುಂದಿನ ವಿಶ್ವಕಪ್ ಅನ್ನು ಗೆಲ್ಲಿಸಿಕೊಡ್ತಾರಾ?.