SOCIAL MEDIA

Newsletter

PARTNER SITES
Select Language Select State

ಜುರೇಲ್‌ ಶತಕ ಮಿಸ್‌: ಭಾರತದ ಬ್ಯಾಟಿಂಗ್‌ ವೈಫಲ್ಯಕ್ಕೆ ಬೆಲೆ ತೆತ್ತ ಟೀಂ ಇಂಡಿಯಾ; ನ್ಯೂಜಿಲೆಂಡ್‌ ಮೇಲುಗೈ!

ನ್ಯೂಜಿಲೆಂಡ್‌ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಭಾರತದ ಬ್ಯಾಟಿಂಗ್‌ ಪಡೆ ಮತ್ತೆ ವೈಫಲ್ಯ ಅನುಭವಿಸಿದೆ. ಧ್ರುವ್‌ ಜುರೇಲ್‌ 88 ರನ್‌ಗಳ ಹೋರಾಟ ನಡೆಸಿದರೂ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 246 ರನ್‌ಗಳಿಗೆ ಆಲೌಟ್‌ ಆಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 356 ರನ್‌ ಗಳಿಸಿದ್ದ ನ್ಯೂಜಿಲೆಂಡ್‌ ಇದೀಗ 110 ರನ್‌ಗಳ ಮುನ್ನಡೆ ಪಡೆದು ಮೇಲುಗೈ ಸಾಧಿಸಿದೆ.

Written By Puttaraj K Alur
Published: Nov 29, 2026, 08:00 IST | Updated: Nov 29, 2026, 08:25 IST
Image Credit: New Zealand vs India
Join

IND vs NZ 2nd Test: ನ್ಯೂಜಿಲೆಂಡ್‌ ವಿರುದ್ಧದ 2ನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ಕ್ರೈಸ್ಟ್‌ಚರ್ಚ್‌ನ ಹೇಗ್ಲಿ ಓವಲ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೂರನೇ ದಿನದಾಟದ ವೇಳೆ ಭಾರತದ ಮೊದಲ ಇನ್ನಿಂಗ್ಸ್‌ 246 ರನ್‌ಗಳಿಗೆ ಅಂತ್ಯಗೊಂಡಿದೆ. ಭಾರತದ ಪರ ಧ್ರುವ್‌ ಜುರೇಲ್‌ 88 ರನ್‌ಗಳ ಅಮೋಘ ಹೋರಾಟ ನಡೆಸಿದರೂ ತಂಡವನ್ನ ಸಂಕಷ್ಟದಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಪರಿಣಾಮ ನ್ಯೂಜಿಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 110 ರನ್‌ಗಳ ಮಹತ್ವದ ಮುನ್ನಡೆ ಪಡೆದುಕೊಂಡಿದೆ.

ಎರಡು ಪಂದ್ಯಗಳ ಟೆಸ್ಟ್‌ ಸರಣಿಯ ಎರಡನೇ ಹಾಗೂ ಅಂತಿಮ ಪಂದ್ಯದಲ್ಲಿ ಆರಂಭಿಕ ಹಂತದ ಆಟದ ಬಳಿಕ ನ್ಯೂಜಿಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 116.3 ಓವರ್‌ಗಳಲ್ಲಿ 356 ರನ್‌ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್‌ ಆರಂಭಿಸಿದ ಭಾರತ ತಂಡದ ಪ್ರಮುಖ ಬ್ಯಾಟರ್‌ಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು. ವಿಕೆಟ್‌ಗಳು ಒಂದರ ಹಿಂದೆ ಒಂದರಂತೆ ಪತನವಾಗುತ್ತಿದ್ದರೂ ಧ್ರುವ್‌ ಜುರೇಲ್‌ ಮಾತ್ರ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತು ಹೋರಾಟ ಮುಂದುವರಿಸಿದರು.

ಆರಂಭದಲ್ಲೇ ಕುಸಿದ ಭಾರತದ ಬ್ಯಾಟಿಂಗ್‌ ಪಡೆ

ನ್ಯೂಜಿಲೆಂಡ್‌ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 356 ರನ್‌ ಗಳಿಸಿತ್ತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್‌ ಆರಂಭಿಸಿದ ಭಾರತ ತಂಡ ಆರಂಭದಿಂದಲೇ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ ಶೂನ್ಯಕ್ಕೆ ಔಟಾದರು. ಕೆ.ಎಲ್‌.ರಾಹುಲ್‌ 25 ರನ್‌ ಗಳಿಸಿದರೆ, ದೇವದತ್‌ ಪಡಿಕ್ಕಲ್‌ 21 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಶುಭಮನ್‌ ಗಿಲ್‌ 17 ರನ್‌ ಗಳಿಸಿದರೆ, ರಿಷಭ್‌ ಪಂತ್‌ 23 ರನ್‌ ಗಳಿಸಲಷ್ಟೇ ಶಕ್ತರಾದರು. ವಾಷಿಂಗ್ಟನ್‌ ಸುಂದರ್‌ 10 ರನ್‌ ಗಳಿಸಿ ನಿರ್ಗಮಿಸಿದರು. ಪ್ರಮುಖ ಬ್ಯಾಟರ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಸಾಧ್ಯವಾಗದ ಕಾರಣ ಭಾರತ ತಂಡ ಒತ್ತಡಕ್ಕೆ ಸಿಲುಕಿತು.

ಜುರೇಲ್‌ ಏಕಾಂಗಿ ಹೋರಾಟ

ಒಂದೆಡೆ ಭಾರತದ ಪ್ರಮುಖ ಬ್ಯಾಟರ್‌ಗಳು ಪೆವಿಲಿಯನ್‌ ಸೇರಿಕೊಳ್ಳುತ್ತಿದ್ದರೂ ಧ್ರುವ್‌ ಜುರೇಲ್‌ ಮಾತ್ರ ನ್ಯೂಜಿಲೆಂಡ್‌ ಬೌಲರ್‌ಗಳನ್ನ ಸಮರ್ಥವಾಗಿ ಎದುರಿಸಿದರು. ತಾಳ್ಮೆಯ ಆಟದ ಮೂಲಕ ರನ್‌ ಗಳಿಸುತ್ತಾ ತಂಡದ ಮೊತ್ತ ಹೆಚ್ಚಿಸಲು ಪ್ರಯತ್ನಿಸಿದರು. ಅವರ ಬ್ಯಾಟಿಂಗ್‌ನಲ್ಲಿ ಆತ್ಮವಿಶ್ವಾಸ ಹಾಗೂ ಹೋರಾಟದ ಮನೋಭಾವ ಎದ್ದು ಕಾಣುತ್ತಿತ್ತು. ಜುರೇಲ್‌ 88 ರನ್‌ ಗಳಿಸಿ ಭಾರತದ ಪರ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಶತಕದತ್ತ ಸಾಗುತ್ತಿದ್ದ ಅವರ ಇನ್ನಿಂಗ್ಸ್‌ ಅಂತ್ಯಗೊಂಡಿದ್ದು, ಭಾರತಕ್ಕೆ ದೊಡ್ಡ ಹಿನ್ನಡೆಯಾಯಿತು.

ಕೇವಲ 12 ರನ್‌ಗಳಿಂದ ಶತಕ ವಂಚಿತರಾದ ಜುರೇಲ್‌ ಅವರ ಹೋರಾಟ ತಂಡಕ್ಕೆ ಆಸರೆಯಾಯಿತು. ಕೆಳ ಕ್ರಮಾಂಕದಲ್ಲಿಯೂ ಆಕಾಶ್‌ ದೀಪ್‌ ಉತ್ತಮ ಸಾಥ್‌ ನೀಡಿದರು. ಅವರು 29 ರನ್‌ ಗಳಿಸಿ ಜುರೇಲ್‌ ಅವರೊಂದಿಗೆ ತಂಡದ ಮೊತ್ತ ಹೆಚ್ಚಿಸಲು ನೆರವಾದರು. ಆದರೆ ಉಳಿದ ಬ್ಯಾಟರ್‌ಗಳಿಂದ ನಿರೀಕ್ಷಿತ ಬೆಂಬಲ ಸಿಗದ ಕಾರಣ ಭಾರತದ ಇನ್ನಿಂಗ್ಸ್‌ 246 ರನ್‌ಗಳಿಗೆ ಅಂತ್ಯಗೊಂಡಿತು.

ಕಿವೀಸ್‌ ಬೌಲರ್‌ಗಳ ಸಂಘಟಿತ ದಾಳಿ

ನ್ಯೂಜಿಲೆಂಡ್‌ ಬೌಲರ್‌ಗಳು ಭಾರತದ ಬ್ಯಾಟಿಂಗ್‌ ಪಡೆಯ ಮೇಲೆ ನಿರಂತರ ಒತ್ತಡ ಹೇರಿದರು. ಕೇಲ್‌ ಜೇಮಿಸನ್‌ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ನೀಡಿ ನಾಲ್ಕು ವಿಕೆಟ್‌ಗಳನ್ನ ಕಬಳಿಸಿದರು. ಜೇಕಬ್‌ ಡಫಿ, ಮ್ಯಾಟ್‌ ಹೆನ್ರಿ ಹಾಗೂ ನಾಥನ್‌ ಸ್ಮಿತ್‌ ತಲಾ ಎರಡು ವಿಕೆಟ್‌ ಪಡೆದು ಭಾರತದ ಬ್ಯಾಟಿಂಗ್‌ ಕುಸಿತಕ್ಕೆ ಕಾರಣರಾದರು. ಭಾರತದ ಬ್ಯಾಟರ್‌ಗಳಿಗೆ ದೊಡ್ಡ ಜೊತೆಯಾಟಗಳನ್ನ ನಿರ್ಮಿಸಲು ಅವಕಾಶ ನೀಡದ ಕಿವೀಸ್‌ ಬೌಲರ್‌ಗಳು ಮೊದಲ ಇನ್ನಿಂಗ್ಸ್‌ನಲ್ಲಿ ತಮ್ಮ ತಂಡಕ್ಕೆ ಮಹತ್ವದ ಮುನ್ನಡೆ ತಂದುಕೊಟ್ಟರು.

ನ್ಯೂಜಿಲೆಂಡ್‌ಗೆ 110 ರನ್‌ಗಳ ಮುನ್ನಡೆ

 

 ಭಾರತದ ಮೊದಲ ಇನ್ನಿಂಗ್ಸ್‌ 86.1 ಓವರ್‌ಗಳಲ್ಲಿ 246 ರನ್‌ಗಳಿಗೆ ಮುಕ್ತಾಯಗೊಂಡಿತು. ಇದರಿಂದ ನ್ಯೂಜಿಲೆಂಡ್‌ ತಂಡಕ್ಕೆ 110 ರನ್‌ಗಳ ಮೊದಲ ಇನ್ನಿಂಗ್ಸ್‌ ಮುನ್ನಡೆ ಲಭಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ 356 ರನ್‌ ಗಳಿಸಿದ್ದ ಆತಿಥೇಯ ತಂಡ ಇದೀಗ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ಆರಂಭಿಸಿದೆ. ಮೂರನೇ ದಿನದಾಟದಲ್ಲಿ ಭಾರತದ ಬ್ಯಾಟಿಂಗ್‌ ವೈಫಲ್ಯ ತಂಡದ ಮೇಲೆ ಒತ್ತಡ ಹೆಚ್ಚಿಸಿದೆ. ಅದರಲ್ಲೂ ಜುರೇಲ್‌ ಅವರ 88 ರನ್‌ಗಳ ಹೋರಾಟದ ಹೊರತಾಗಿಯೂ ತಂಡ 250ರ ಗಡಿ ದಾಟಲು ಸಾಧ್ಯವಾಗಲಿಲ್ಲ.

 

ಒಟ್ನಲ್ಲಿ ಎರಡನೇ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್‌ ತಂಡ ಉತ್ತಮ ಸ್ಥಿತಿಯಲ್ಲಿದ್ದು, ಭಾರತ ತಂಡಕ್ಕೆ ಪಂದ್ಯದಲ್ಲಿ ಮರಳಿ ಹಿಡಿತ ಸಾಧಿಸುವ ಸವಾಲು ಎದುರಾಗಿದೆ. 110 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿರುವ ನ್ಯೂಜಿಲೆಂಡ್‌ ಎದುರು ಭಾರತದ ಬೌಲರ್‌ಗಳು ಯಾವ ರೀತಿಯ ಪ್ರದರ್ಶನ ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಸದ್ಯದ ಮಾಹಿತಿ ಪ್ರಕಾರ, ಚಹಾ ವಿರಾಮಕ್ಕೂ ಮುನ್ನ ನ್ಯೂಜಿಲೆಂಡ್‌ 9 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು 36 ರನ್‌ ಗಳಿಸಿದ್ದು, 146 ರನ್‌ಗಳ ಮುನ್ನಡೆ ಸಾಧಿಸಿದೆ. 

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES