SOCIAL MEDIA

Newsletter

PARTNER SITES
Select Language Select State

ಅರ್ಷದೀಪ್‌ಗೆ ಗಾಯ, ಭುವಿಗೆ ಬುಲಾವ್‌! ಬೆಂಗಳೂರು ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಬದಲಾವಣೆ

ಅರ್ಷದೀಪ್ ಅವರ ಗಾಯದ ಹಿನ್ನೆಲೆಯಲ್ಲಿ ಭಾರತ ತಂಡದ ಆಯ್ಕೆ ಸಮಿತಿಯು ಭುವನೇಶ್ವರ್ ಕುಮಾರ್ ಅವರನ್ನ ತಂಡಕ್ಕೆ ಸೇರಿಸಿಕೊಂಡಿದೆ. ಹೊಸ ಚೆಂಡಿನೊಂದಿಗೆ ಸ್ವಿಂಗ್ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಭುವನೇಶ್ವರ್, ತಮ್ಮ ಅನುಭವದ ಮೂಲಕ ಭಾರತ ತಂಡದ ವೇಗದ ಬೌಲಿಂಗ್ ವಿಭಾಗಕ್ಕೆ ನೆರವಾಗುವ ನಿರೀಕ್ಷೆಯಿದೆ.

Written By Puttaraj K Alur
Published: Oct 16, 2026, 03:52 PM IST | Updated: Oct 16, 2026, 04:20 PM IST
Image Credit: Bhuvneshwar Kumar
Join

India vs West Indies T20: ವೆಸ್ಟ್ ಇಂಡೀಸ್ ವಿರುದ್ಧ ಬೆಂಗಳೂರಿನಲ್ಲಿ ನಡೆಯಲಿರುವ ನಿರ್ಣಾಯಕ ಟಿ20 ಪಂದ್ಯಕ್ಕೂ ಮುನ್ನ ಭಾರತ ತಂಡದಲ್ಲಿ ಮಹತ್ವದ ಬದಲಾವಣೆಯಾಗಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ವೇಗದ ಬೌಲರ್ ಅರ್ಷದೀಪ್ ಸಿಂಗ್ ಬದಲಿಗೆ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರನ್ನ ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಈ ಕುರಿತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧಿಕೃತ ಪ್ರಕಟಣೆ ಹೊರಡಿಸಿದೆ. 

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯ ಅಕ್ಟೋಬರ್ 17ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ಸರಣಿ 2-2ರಿಂದ ಸಮಬಲಗೊಂಡಿದ್ದು, ಕೊನೆಯ ಪಂದ್ಯದಲ್ಲಿ ಗೆಲ್ಲುವ ತಂಡ ಸರಣಿಯನ್ನ ತನ್ನದಾಗಿಸಿಕೊಳ್ಳಲಿದೆ. ಹೀಗಾಗಿ ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದಾಗಿದೆ.

ಅರ್ಷದೀಪ್ ಸಿಂಗ್‌ಗೆ ಭುಜದ ಗಾಯ

ಬಿಸಿಸಿಐ ಪ್ರಕಟಣೆಯ ಪ್ರಕಾರ, ಹೈದರಾಬಾದ್‌ನಲ್ಲಿ ನಡೆದ ಸರಣಿಯ ನಾಲ್ಕನೇ ಟಿ20 ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಅವರ ಬೌಲಿಂಗ್ ಭುಜಕ್ಕೆ ಪೆಟ್ಟು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಅವರ ಫಿಟ್‌ನೆಸ್‌ ಬಗ್ಗೆ ಅನಿಶ್ಚಿತತೆ ಎದುರಾಗಿದೆ. ಅರ್ಷದೀಪ್ ಚೇತರಿಸಿಕೊಳ್ಳಲು ಸಮಯ ನೀಡಲಾಗಿದ್ದು, ಬೆಂಗಳೂರಿನಲ್ಲಿ ನಡೆಯುವ ಅಂತಿಮ ಪಂದ್ಯದಲ್ಲಿ ಅವರು ಆಡಬಹುದೇ ಎಂಬುದನ್ನ ಪಂದ್ಯದ ಮೊದಲು ನಿರ್ಧರಿಸಲಾಗುತ್ತದೆ ಎಂದು ಬಿಸಿಸಿಐ ತಿಳಿಸಿದೆ. ಹೀಗಾಗಿ ಅವರನ್ನ ಸಂಪೂರ್ಣವಾಗಿ ತಂಡದಿಂದ ಹೊರಗಿಡಲಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಅವರ ಲಭ್ಯತೆಯ ಬಗ್ಗೆ ಅಂತಿಮ ನಿರ್ಧಾರ ಇನ್ನಷ್ಟೇ ಹೊರಬೀಳಬೇಕಿದೆ. 

ಭುವನೇಶ್ವರ್ ಕುಮಾರ್‌ಗೆ ಮಹತ್ವದ ಅವಕಾಶ

ಅರ್ಷದೀಪ್ ಅವರ ಗಾಯದ ಹಿನ್ನೆಲೆಯಲ್ಲಿ ಭಾರತ ತಂಡದ ಆಯ್ಕೆ ಸಮಿತಿಯು ಭುವನೇಶ್ವರ್ ಕುಮಾರ್ ಅವರನ್ನ ತಂಡಕ್ಕೆ ಸೇರಿಸಿಕೊಂಡಿದೆ. ಹೊಸ ಚೆಂಡಿನೊಂದಿಗೆ ಸ್ವಿಂಗ್ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಭುವನೇಶ್ವರ್, ತಮ್ಮ ಅನುಭವದ ಮೂಲಕ ಭಾರತ ತಂಡದ ವೇಗದ ಬೌಲಿಂಗ್ ವಿಭಾಗಕ್ಕೆ ನೆರವಾಗುವ ನಿರೀಕ್ಷೆಯಿದೆ. ಭುವನೇಶ್ವರ್ ಕುಮಾರ್ 36 ವರ್ಷದ ಅನುಭವಿ ವೇಗದ ಬೌಲರ್ ಆಗಿದ್ದು, ಭಾರತ ತಂಡದ ಪರ ಕೊನೆಯ ಬಾರಿ 2022ರ ನವೆಂಬರ್‌ನಲ್ಲಿ ಆಡಿದ್ದರು. ಇದೀಗ ಸುಮಾರು ನಾಲ್ಕು ವರ್ಷಗಳ ಬಳಿಕ ಮತ್ತೆ ಭಾರತ ತಂಡಕ್ಕೆ ಮರಳುವ ಅವಕಾಶ ಅವರ ಮುಂದಿದೆ. ಆದರೆ ತಂಡಕ್ಕೆ ಸೇರ್ಪಡೆಯಾಗಿರುವುದು ಮತ್ತು ಅಂತಿಮ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುವುದು ಎರಡೂ ವಿಭಿನ್ನವಾಗಿದ್ದು, ಪಂದ್ಯದಲ್ಲಿ ಅವರು ಆಡುತ್ತಾರೆಯೇ ಎಂಬುದು ತಂಡದ ನಿರ್ಧಾರವನ್ನ ಅವಲಂಬಿಸಿರುತ್ತದೆ.  

ಸರಣಿ ಗೆಲುವಿಗಾಗಿ ಭಾರತಕ್ಕೆ ನಿರ್ಣಾಯಕ ಪಂದ್ಯ

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಸರಣಿ ಈಗ 2-2ರಿಂದ ಸಮಬಲದಲ್ಲಿದೆ. ಹೀಗಾಗಿ ಬೆಂಗಳೂರಿನಲ್ಲಿ ನಡೆಯಲಿರುವ ಐದನೇ ಪಂದ್ಯ ಸರಣಿಯ ಫಲಿತಾಂಶವನ್ನ ನಿರ್ಧರಿಸಲಿದೆ. ತವರಿನ ಮೈದಾನದಲ್ಲಿ ಗೆದ್ದು ಸರಣಿ ಜಯಿಸುವುದು ಭಾರತ ತಂಡದ ಗುರಿಯಾಗಿದೆ. ವೇಗದ ಬೌಲಿಂಗ್ ವಿಭಾಗದಲ್ಲಿ ಅನುಭವ ಹೊಂದಿರುವ ಭುವನೇಶ್ವರ್ ಸೇರ್ಪಡೆಯು ತಂಡಕ್ಕೆ ಹೆಚ್ಚುವರಿ ಆಯ್ಕೆಯನ್ನ ಒದಗಿಸಿದೆ. ಮತ್ತೊಂದೆಡೆ ಅರ್ಷದೀಪ್ ಅವರ ಫಿಟ್‌ನೆಸ್‌ ಬಗ್ಗೆ ಸ್ಪಷ್ಟತೆ ಸಿಗಬೇಕಿದೆ. ಪಂದ್ಯಕ್ಕೂ ಮುನ್ನ ಅವರ ಸ್ಥಿತಿಗತಿಯನ್ನ ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.

ಟೀಂ ಇಂಡಿಯಾದ ಸ್ಕ್ವಾಡ್‌ ಈ ರೀತಿ ಇದೆ

ಬಿಸಿಸಿಐ ಪ್ರಕಟಿಸಿರುವ ಹೊಸ ಟಿ20 ತಂಡದ ಹೊಸ ಲಿಸ್ಟ್‌ನಲ್ಲಿ ನಾಯಕ ಶ್ರೇಯಸ್ ಅಯ್ಯರ್, ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಉಪನಾಯಕ ತಿಲಕ್ ವರ್ಮಾ, ಶಿವಂ ದುಬೆ, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ನಿತೀಶ್ ಕುಮಾರ್ ರೆಡ್ಡಿ, ಅರ್ಷದೀಪ್ ಸಿಂಗ್, ಪ್ರಿನ್ಸ್ ಯಾದವ್, ಮಯಾಂಕ್ ಯಾದವ್, ನಮನ್ ಧೀರ್ ಮತ್ತು ಭುವನೇಶ್ವರ್ ಕುಮಾರ್ ಇದ್ದಾರೆ.

ಒಟ್ನಲ್ಲಿ ಬೆಂಗಳೂರಿನ ನಿರ್ಣಾಯಕ ಟಿ20 ಪಂದ್ಯಕ್ಕೂ ಮುನ್ನ ಭಾರತ ತಂಡದಲ್ಲಿ ನಡೆದಿರುವ ಈ ಬದಲಾವಣೆ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ. ಅರ್ಷದೀಪ್ ಸಿಂಗ್ ಚೇತರಿಸಿಕೊಳ್ಳುತ್ತಾರೆಯೇ ಮತ್ತು ಭುವನೇಶ್ವರ್ ಕುಮಾರ್‌ಗೆ ಆಡುವ ಹನ್ನೊಂದರಲ್ಲಿ ಅವಕಾಶ ಸಿಗುತ್ತದೆಯೇ ಎಂಬುದು ಪಂದ್ಯದ ಮೊದಲು ತಿಳಿಯಲಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES