SOCIAL MEDIA

Newsletter

PARTNER SITES
Select Language Select State

ಚಂಡಿ ಮಾತೆಯ ವಿಸ್ಮಯಕಾರಿ ದೇವಸ್ಥಾನದಲ್ಲಿ ಪ್ರತಿದಿನ ಆರತಿ ಸಮಯಕ್ಕೆ ಹಾಜರ್‌ ಆಗ್ತಾವೆ ಕರಡಿಗಳು! ರಹಸ್ಯವೇನು?

ದೇವಸ್ಥಾನ ಅಂದ ತಕ್ಷಣ ನಮಗೆ ನೆನಪಾಗೋದು ದೇವರ ಮೂರ್ತಿ, ಗಂಟೆಗಳ ಸದ್ದು, ಮಂತ್ರಘೋಷ ಮತ್ತು ಭಕ್ತರ ದಂಡು. ಆದರೆ ಒಂದು ದೇವಸ್ಥಾನಕ್ಕೆ ಪ್ರತಿದಿನ ದೇವರ ದರ್ಶನಕ್ಕೆ ಬರೋದು ಮನುಷ್ಯರಲ್ಲ… ಬದಲಾಗಿ ಕಾಡಿನಲ್ಲಿ ವಾಸಿಸುವ ಕರಡಿಗಳು!

Written By Yashaswini V
Published: Nov 14, 2026, 07:53 IST | Updated: Nov 14, 2026, 07:58 IST
Join

ಇದು ಭಾರತದ ವಿಸ್ಮಯಕಾರಿ ದೇವಸ್ಥಾನ. ಚಂಡಿ ಮಾತೆಯ ದೇವಾಲಯದಲ್ಲಿ ಪ್ರತಿ ದಿನ ಆರತಿ ವೇಳೆಗೆ ಸರಿಯಾಗಿ ದೇವಸ್ಥಾನಕ್ಕೆ ಎಂಟ್ರಿ ಕೊಡ್ತಾವೆ ಕಾಡಿನ ಕರಡಿಗಳು. ಯಾವುದೀ ದೇವಸ್ಥಾನ? ಈ ದೇವಾಲಯದ ವಿಶೇಷತೆಗಳೇನು? ಇಲ್ಲಿನ ರಹಸ್ಯವೇನು ಎಂಬ ಕುತೂಹಲಕರ ಮಾಹಿತಿ ಇಲ್ಲಿದೆ.

ದೇವಸ್ಥಾನ ಎಂದರೆ ದೇವರ ಮೂರ್ತಿ, ಗಂಟೆಗಳ ಸದ್ದು, ಮಂತ್ರಘೋಷ ಮತ್ತು ಭಕ್ತರ ದಂಡು ನೆನಪಾಗುತ್ತದೆ. ಆದರೆ, ಈ ವಿಸ್ಮಯಕಾರಿ ದೇವಾಲಯದಲ್ಲಿ ಚಂಡಿ ದೇವಿಗೆ ಆರತಿ ನಡೆಯುವ ಸಮಯದಲ್ಲಿ ಕರಡಿಗಳು ದೇವಾಲಯಕ್ಕೆ ಎಂಟ್ರಿ ಕೊಡುತ್ತವೆ. ಅಷ್ಟೇ ಅಲ್ಲ ಪ್ರಸಾದವನ್ನು ಸ್ವೀಕರಿಸಿ, ದೇವಸ್ಥಾನದ ಸುತ್ತಲೂ ಓಡಾಡಿಕೊಂಡು ಮತ್ತೆ ಕಾಡಿಗೆ ವಾಪಸ್ ಹೋಗುತ್ತವೆ ಎಂದು ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಕಾಡಿನಲ್ಲಿರಬೇಕಾದ ಕರಡಿಗಳು ದೇವಸ್ಥಾನಕ್ಕೆ ಯಾಕೆ ಬರುತ್ತವೆ? ಅವುಗಳಿಗೆ ಈ ದೇವಸ್ಥಾನದ ಜೊತೆ ಇರುವ ಸಂಬಂಧವಾದರೂ ಏನು? ಈ ಕರಡಿಗಳು ನಿಜವಾಗಿಯೂ ದೇವಿಯ ಭಕ್ತರಾ? ಇಂತಹ ಹಲವು ಕುತೂಹಲಕಾರಿ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಯಾವುದು ಈ ವಿಸ್ಮಯಕಾರಿ ದೇವಸ್ಥಾನ?
ಭಾರತದ ಛತ್ತೀಸ್‌ಗಢ ರಾಜ್ಯದ ಮಹಾಸಮುಂದ್ ಜಿಲ್ಲೆಯ ಬಾಗ್‌ಬಹರಾ ಸಮೀಪವಿರುವ ಘುಂಚಾಪಾಲಿ ಗ್ರಾಮದಲ್ಲಿ ಈ ಚಂಡಿ ಮಾತಾ ದೇವಸ್ಥಾನವಿದೆ. ಸ್ಥಳೀಯವಾಗಿ ಈ ದೇವಸ್ಥಾನವನ್ನು ಕರಡಿ ದೇವಸ್ಥಾನ ಎಂದೇ ಕರೆಯಲಾಗುತ್ತದೆ.

ಸುಮಾರು 150 ವರ್ಷಗಳಷ್ಟು ಹಳೆಯದಾದ ಪ್ರಸಿದ್ಧ ಚಂಡಿ ಮಾತಾ ದೇವಸ್ಥಾನದ ಬೆಟ್ಟದ ಮೇಲೆ ನೆಲೆಸಿದೆ. ಇಲ್ಲಿಗೆ ದೇವಿಯ ದರ್ಶನ ಪಡೆಯಲು ಸಾಕಷ್ಟು ಭಕ್ತರು ಬರುತ್ತಾರೆ. ಆದರೆ ಈ ದೇವಸ್ಥಾನ ದೇಶಾದ್ಯಂತ ಪ್ರಸಿದ್ಧಿಯಾಗಿರುವುದಕ್ಕೆ ಕೇವಲ ದೇವಿಯ ಮಹಿಮೆ ಮಾತ್ರ ಕಾರಣವಲ್ಲ. ಈ ಅಪರೂಪದ ದೇವಾಲಯದ ಪ್ರಮುಖ ಆಕರ್ಷಣೆ ಎಂದರೆ ಆರತಿ ಸಮಯಕ್ಕೆ ಸರಿಯಾಗಿ ದೇವಸ್ಥಾನಕ್ಕೆ ಎಂಟ್ರಿ ಕೊಡುವ ಅತಿಥಿಗಳು. ಅವುಗಳೇ ಕಾಡಿನ ಕರಡಿಗಳು!

ಸ್ಥಳೀಯರ ಪ್ರಕಾರ, ಹತ್ತಿರದ ಅರಣ್ಯ ಪ್ರದೇಶಗಳಿಂದ ಕರಡಿಗಳು ದೇವಸ್ಥಾನದ ಕಡೆಗೆ ಬರುತ್ತವೆ. ಅದರಲ್ಲೂ ಸಂಜೆ ಆರತಿಯ ಸಮಯದಲ್ಲಿ ಅವು ಕಾಣಿಸಿಕೊಳ್ಳುವುದು ಇಲ್ಲಿನ ವಿಶೇಷತೆ ಎನ್ನಲಾಗಿದೆ.

* ಕಾಡಿನ ಕರಡಿಗಳಿಗೂ ದೇವಿಗೂ ಏನು ಸಂಬಂಧ?
ಪ್ರಸಿದ್ಧ ಚಂಡಿ ಮಾತಾ ದೇವಸ್ಥಾನಕ್ಕೆ ಬರುವ ಕರಡಿಗಳನ್ನು ನೋಡಲು ಜನರು ದೂರದ ಊರುಗಳಿಂದಲೂ ಬರುತ್ತಾರೆ. ಸ್ಥಳೀಯರ ನಂಬಿಕೆಯ ಪ್ರಕಾರ, ಈ ಕರಡಿಗಳು ದೇವಿ ಚಂಡಿ ಮಾತೆಯ ಭಕ್ತರು. ಇವುಗಳನ್ನು ಜಾಂಬವಂತನ ಕುಟುಂಬಕ್ಕೆ ಸೇರಿದವುಗಳೆಂದೂ ಕೆಲವರು ನಂಬುತ್ತಾರೆ.

ರಾಮಾಯಣದಲ್ಲಿ ಬರುವ ಜಾಂಬವಂತನ ಬಗ್ಗೆ ನಿಮಗೆ ಗೊತ್ತಿರಬಹುದು. ರಾಮನಿಗೆ ಸಹಾಯ ಮಾಡಿದ ಕರಡಿ ರಾಜ ಎಂದೇ ಜಾಂಬವಂತನನ್ನು ಪರಿಚಯಿಸಲಾಗುತ್ತದೆ. ಹೀಗಾಗಿ ದೇವಸ್ಥಾನಕ್ಕೆ ಬರುವ ಕರಡಿಗಳನ್ನು ಜಾಂಬವಂತನ ವಂಶದವರು ಎಂದು ಸ್ಥಳೀಯರು ನಂಬುತ್ತಾರೆ.

ಇನ್ನು ಈ ಕರಡಿಗಳು ದೇವಸ್ಥಾನಕ್ಕೆ ಬಂದಾಗ ಭಕ್ತರು ಅವುಗಳನ್ನು ನೋಡಿ ಆಶ್ಚರ್ಯಪಡುತ್ತಾರೆ. ದೇವಿಯ ದರ್ಶನಕ್ಕೆ ಬಂದಿರುವಂತೆ ಅವು ದೇವಸ್ಥಾನದ ಆವರಣದಲ್ಲಿ ಓಡಾಡುತ್ತವೆ ಎಂಬುದು ಸ್ಥಳೀಯರ ನಂಬಿಕೆ. ಆದರೆ, ಗಮನಾರ್ಹವಾಗಿ ಕರಡಿಗಳು ದೇವಿಯನ್ನು ಪೂಜಿಸಲು ಬರುತ್ತವೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಈ ಕರಡಿಗಳು ಆಹಾರಕ್ಕಾಗಿ ದೇವಸ್ಥಾನದ ಕಡೆಗೆ ಬರುತ್ತಿರಬಹುದು ಎಂತಲೂ ಕೆಲವರು ಹೇಳುತ್ತಾರೆ.

* ಪ್ರಸಾದಕ್ಕಾಗಿ ಕಾಯುವ ಕರಡಿಗಳು!
ಈ ದೇವಸ್ಥಾನದ ಅತ್ಯಂತ ಕುತೂಹಲಕಾರಿ ಸಂಗತಿಯೇ ಪ್ರಸಾದ. ದೇವಸ್ಥಾನದಲ್ಲಿ ಆರತಿ ಮುಗಿದ ನಂತರ ಕರಡಿಗಳಿಗೆ ಆಹಾರ ನೀಡಲಾಗುತ್ತದೆ ಎಂಬ ವರದಿಗಳಿವೆ. ಕರಡಿಗಳು ದೇವಸ್ಥಾನದ ಆವರಣಕ್ಕೆ ಬಂದು ಆಹಾರ ಸ್ವೀಕರಿಸಿ ಅಲ್ಲಿಂದ ಹೊರಡುತ್ತವೆ. ಕೆಲವು ವರದಿಗಳಲ್ಲಿ ಕರಡಿಗಳು ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕುತ್ತವೆ ಎಂಬ ಸ್ಥಳೀಯರ ಹೇಳಿಕೆಯೂ ಉಲ್ಲೇಖವಾಗಿದೆ.

* ಇದನ್ನು ನೋಡಲು ಬರುವ ಭಕ್ತರಿಗೆ ಇದು ನಿಜಕ್ಕೂ ವಿಭಿನ್ನ ಅನುಭವ: 
ಸಾಮಾನ್ಯವಾಗಿ ಕರಡಿಗಳನ್ನು ಕಂಡರೆ ಜನರು ಭಯದಿಂದ ದೂರ ಓಡುತ್ತಾರೆ. ಆದರೆ ಈ ದೇವಸ್ಥಾನದ ಕರಡಿಗಳ ಬಗ್ಗೆ ಸ್ಥಳೀಯರಲ್ಲಿ ಒಂದು ರೀತಿಯ ಆತ್ಮೀಯ ಭಾವನೆ ಬೆಳೆದಿದೆ. ಆದರೆ ಕರಡಿಗಳು ಕಾಡುಪ್ರಾಣಿಗಳು ಎನ್ನುವುದನ್ನು ಮರೆಯಬಾರದು. ಅವುಗಳ ವರ್ತನೆ ಯಾವಾಗ ಬೇಕಾದರೂ ಬದಲಾಗಬಹುದು. ಆದ್ದರಿಂದ ಅವುಗಳ ಹತ್ತಿರ ಹೋಗುವುದು ಅಥವಾ ನಾವೇ ಆಹಾರ ನೀಡಲು ಪ್ರಯತ್ನಿಸುವುದು ಅಪಾಯಕಾರಿ.

* ಕರಡಿಗಳ ಆಗಮನದ ಹಿಂದಿರುವ ಮತ್ತೊಂದು ಕಥೆ:
ಪ್ರಸಿದ್ಧ ಚಂಡಿ ಮಾತಾ ದೇವಸ್ಥಾನದ ಕರಡಿಗಳ ಕಥೆಯಲ್ಲಿ ಮತ್ತೊಂದು ಆಸಕ್ತಿದಾಯಕ ವಿಚಾರವಿದೆ. ಇವು ಸ್ಲಾತ್ ಬೇರ್ ಅಥವಾ ಕರಡಿ ಜಾತಿಗೆ ಸೇರಿದ ಪ್ರಾಣಿಗಳು. ಭಾರತದಲ್ಲಿ ಕಂಡುಬರುವ ಈ ಕರಡಿಗಳು ಮುಖ್ಯವಾಗಿ ಕಾಡು ಪ್ರದೇಶಗಳಲ್ಲಿ ವಾಸಿಸುತ್ತವೆ. ಹಣ್ಣುಗಳು, ಗೆದ್ದಲು ಹುಳುಗಳು, ಇರುವೆಗಳು ಮತ್ತು ಇತರ ಆಹಾರಗಳನ್ನು ಸೇವಿಸುತ್ತವೆ. ಆದರೆ ದೇವಸ್ಥಾನಕ್ಕೆ ಬರುವ ಕರಡಿಗಳಿಗೆ ಭಕ್ತರು ಆಹಾರ ನೀಡುವ ಪದ್ಧತಿ ಬೆಳೆದಿರುವುದರಿಂದ ಅವು ಮನುಷ್ಯರು ಇರುವ ಪ್ರದೇಶಕ್ಕೂ ಬರುತ್ತವೆ.

2020ರಲ್ಲಿ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಜಾರಿಯಾಗಿದ್ದ ಸಂದರ್ಭದಲ್ಲಿ ದೇವಸ್ಥಾನಗಳು ಮುಚ್ಚಿದ್ದವು. ಆಗಲೂ ಈ ದೇವಸ್ಥಾನಕ್ಕೆ ಬರುತ್ತಿದ್ದ ಕರಡಿಗಳು ಆಹಾರಕ್ಕಾಗಿ ಕಸದ ಬುಟ್ಟಿಗಳಲ್ಲಿ ಹುಡುಕಾಡುತ್ತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು ಎಂಬುದು ಗಮನಾರ್ಹ.

ಭಕ್ತಿ ಮತ್ತು ವನ್ಯಜೀವಿ ಸಂರಕ್ಷಣೆಯ ನಡುವಿನ ಪ್ರಶ್ನೆ?
ಪ್ರಸಿದ್ಧ ಚಂಡಿ ಮಾತಾ ದೇವಸ್ಥಾನದ ಕಥೆ ಎಷ್ಟು ಕುತೂಹಲಕಾರಿಯೋ, ಅಷ್ಟೇ ಮುಖ್ಯವಾದ ಒಂದು ಪ್ರಶ್ನೆಯನ್ನೂ ಮುಂದಿಡುತ್ತದೆ. ಅದುವೇ ಮನುಷ್ಯರು ಮತ್ತು ಕಾಡುಪ್ರಾಣಿಗಳ ನಡುವಿನ ಸಂಬಂಧ ಹೇಗಿರಬೇಕು?

ಒಂದೆಡೆ, ಸ್ಥಳೀಯರು ಈ ಕರಡಿಗಳನ್ನು ದೇವಿಯ ಭಕ್ತರೆಂದು ಗೌರವಿಸುತ್ತಾರೆ. ಮತ್ತೊಂದೆಡೆ, ವನ್ಯಜೀವಿ ತಜ್ಞರ ಪ್ರಕಾರ ಕಾಡುಪ್ರಾಣಿಗಳಿಗೆ ಮನುಷ್ಯರು ಆಹಾರ ನೀಡುವುದು ಅವುಗಳ ಸಹಜ ಜೀವನಕ್ಕೆ ತೊಂದರೆಯಾಗಬಹುದು ಎಂದು ಎಚ್ಚರಿಕೆ ನೀಡುತ್ತಾರೆ. ಕರಡಿಗಳು ಆಹಾರಕ್ಕಾಗಿ ಮನುಷ್ಯರನ್ನೇ ಅವಲಂಬಿಸಲು ಆರಂಭಿಸಿದರೆ ಮುಂದೆ ಅವು ಜನವಸತಿ ಪ್ರದೇಶಗಳಿಗೆ ಬರುವ ಸಾಧ್ಯತೆಯೂ ಹೆಚ್ಚಾಗಬಹುದು. ಹೀಗಾಗಿ ಭಕ್ತಿ ಮತ್ತು ಪ್ರಾಣಿಗಳ ಮೇಲಿನ ಪ್ರೀತಿ ಇರಲಿ. ಆದರೆ ಅವುಗಳ ಸಹಜ ಬದುಕಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಕೂಡ ನಮ್ಮ ಜವಾಬ್ದಾರಿ ಎನ್ನುತ್ತಾರೆ ವನ್ಯಜೀವಿ ತಜ್ಞರು.

ಈ ನಿಟ್ಟಿನಲ್ಲಿ ಪ್ರಸಿದ್ಧ ಚಂಡಿ ಮಾತಾ ದೇವಸ್ಥಾನಕ್ಕೆ ಭೇಟಿ ನೀಡುವವರು ಅರಣ್ಯ ಇಲಾಖೆ ಮತ್ತು ಸ್ಥಳೀಯ ಆಡಳಿತದ ಸುರಕ್ಷತಾ ಸೂಚನೆಗಳನ್ನು ಪಾಲಿಸಬೇಕು. ಕರಡಿಗಳ ಬಳಿ ಹೋಗಬಾರದು, ಅವುಗಳನ್ನು ಮುಟ್ಟಬಾರದು ಅಥವಾ ಸ್ವತಃ ಆಹಾರ ನೀಡಬಾರದು ಎಂಬ ಎಚ್ಚರಿಕೆಗಳನ್ನು ಸಹ ನೀಡಲಾಗಿದೆ.

ಒಟ್ಟಿನಲ್ಲಿ, ಛತ್ತೀಸ್‌ಗಢದ ಈ ಚಂಡಿ ಮಾತಾ ದೇವಸ್ಥಾನ ಭಾರತದ ಅತ್ಯಂತ ವಿಭಿನ್ನ ಹಾಗೂ ಕುತೂಹಲಕಾರಿ ಸ್ಥಳಗಳಲ್ಲಿ ಒಂದಾಗಿದೆ. ದೇವಿಯ ದರ್ಶನಕ್ಕೆ ಬರುವ ಭಕ್ತರ ನಡುವೆ ಕಾಡಿನ ಕರಡಿಗಳೂ ಕಾಣಿಸಿಕೊಳ್ಳುವುದು ಇಲ್ಲಿನ ವಿಶೇಷತೆ.

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

ZEENEWS TRENDING STORIES