SOCIAL MEDIA

Newsletter

PARTNER SITES
Select Language Select State

ಅದ್ವೈತ ಸಾಮ್ರಾಟ ಶ್ರೀ ಸಿದ್ಧಾರೂಢರು : ಸಾಧನೆ, ಪವಾಡ ಹಾಗೂ ನಿರಂತರ ದಾಸೋಹದ ಪವಿತ್ರ ಚರಿತೆ

ಬೀದರ್‌ನ ಚಳಕಾಪುರದಲ್ಲಿ ಜನಿಸಿದ ‘ಸಿದ್ಧರು’ ಚಿಕ್ಕವಯಸ್ಸಿನಲ್ಲೇ ಗುರು ಶೋಧನೆಗೆ ಹೊರಟು, ಗಜದಂಡ ಸ್ವಾಮಿಗಳ ಶಿಷ್ಯರಾಗಿ ಜ್ಞಾನ ಸಂಪಾದಿಸಿ 'ಸಿದ್ಧಾರೂಢ ಭಾರತಿ' ಎಂದು ಹೆಸರು ಪಡೆದರು. ಅಸಂಖ್ಯ ಭಕ್ತರ ನಂಬಿಕೆ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠದ ದಿವ್ಯ ಚರಿತ್ರೆ ಇಲ್ಲಿದೆ.. ಓದಿ..

Reported By Krishna NK Written By Krishna NK
Published: Sep 14, 2026, 04:17 PM IST | Updated: Sep 17, 2026, 03:24 PM IST
Image Credit: History of Sri Siddharoodha math hubli
Join

History of Sri Siddharoodha Math : ಭಾರತೀಯ ಸನಾತನ ಪರಂಪರೆ ಮತ್ತು ಆಧ್ಯಾತ್ಮಿಕ ಲೋಕದಲ್ಲಿ ಕರುನಾಡಿನ ಹುಬ್ಬಳ್ಳಿ ನಗರವನ್ನು ಅತ್ಯಂತ ಪವಿತ್ರವಾದ ಪುಣ್ಯಭೂಮಿಯನ್ನಾಗಿ ಪರಿವರ್ತಿಸಿದ ಯುಗಪುರುಷರು, ಅದ್ವೈತ ಸಾಮ್ರಾಟ ಹಾಗೂ ವೇದಾಂತ ಸಾರ್ವಭೌಮ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿಗಳು. ಸರ್ವ ಧರ್ಮ, ಜಾತಿ, ಮತ ಹಾಗೂ ಪಂಥಗಳ ಗೆರೆಗಳನ್ನು ಮೀರಿ ಕೋಟ್ಯಂತರ ಭಕ್ತರ ಕಾಮಧೇನು ಮತ್ತು ಕಲ್ಪವೃಕ್ಷವಾಗಿ ಕಾಯುತ್ತಿರುವ ಶ್ರೀ ಸಿದ್ಧಾರೂಢ ಮಠವು ಇಂದು ದೇಶದಲ್ಲೇ ಅತ್ಯಂತ ಪ್ರಸಿದ್ಧ ಆಧ್ಯಾತ್ಮಿಕ ಕೇಂದ್ರವಾಗಿ ಬೆಳಗುತ್ತಿದೆ.

ಜನನ, ಬಾಲ್ಯ ಮತ್ತು ಗುರು ಶೋಧನೆ ಪಯಣ
ಶ್ರೀ ಸಿದ್ಧಾರೂಢರು 1836 ಮಾರ್ಚ್ 26 ರಂದು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಚಳಕಾಪುರ ಎಂಬ ಸಣ್ಣ ಗ್ರಾಮದಲ್ಲಿ ಶರಣ ದಂಪತಿಗಳಾದ ಗುರುಶಾಂತಪ್ಪ ಮತ್ತು ದೇವಮಲ್ಲಮ್ಮ ಅವರ ತೃತೀಯ ಪುತ್ರರಾಗಿ ಜನಿಸಿದರು. ಚಿಕ್ಕಂದಿನಿಂದಲೇ ವೈರಾಗ್ಯ ಮತ್ತು ಜ್ಞಾನದ ದಾಹ ಹೊಂದಿದ್ದ 'ಸಿದ್ಧರು' ತಮ್ಮ ಸದ್ಗುರುವಿನ ಶೋಧನೆಗಾಗಿ ಹೆಜ್ಜೆ ಇಟ್ಟರು. ಜ್ಞಾನಾನ್ವೇಷಣೆಯ ಈ ಹಾದಿಯಲ್ಲಿ ಸುರಪುರದ ಅಮರಕೊಂಡ ಮಲ್ಲಿಕಾರ್ಜುನ ಸ್ಪಟಿಕ ದೇವಾಲಯದ ಕಲ್ಪಮಠದ ಗಜದಂಡ ಸ್ವಾಮಿಗಳನ್ನು ತಲುಪಿದರು. ಸಿದ್ಧರ ಅಪಾರ ಜ್ಞಾನ, ಅಸಾಧಾರಣ ಪ್ರತಿಭೆ ಮತ್ತು ಸುದೀರ್ಘ ಪರಿಶ್ರಮ ಹಾಗೂ ನಿಷ್ಠೆಯನ್ನು ಮೆಚ್ಚಿದ ಗಜದಂಡ ಸ್ವಾಮಿಗಳು ಅವರಿಗೆ ‘ಸಿದ್ಧಾರೂಢ ಭಾರತಿ’ ಎಂದು ಪುನರ್ನಾಮಕರಣ ಮಾಡಿ ಆಧ್ಯಾತ್ಮಿಕ ಲೋಕಕ್ಕೆ ದೀಕ್ಷೆ ನೀಡಿದರು.

ದೇಶ ಸಂಚಾರ ಮತ್ತು ಹುಬ್ಬಳ್ಳಿಗೆ ಆಗಮ
ದೀಕ್ಷೆಯ ನಂತರ ಸಿದ್ಧಾರೂಢರು ಭಾರತದಾದ್ಯಂತ ವಿವಿಧ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತಾ, ಘನ ವಿದ್ವಾಂಸರು ಹಾಗೂ ಸಾಧು-ಸಂತರೊಂದಿಗೆ ಜ್ಞಾನ ವಿನಿಮಯ ಮಾಡಿಕೊಂಡರು. ಅಂತಿಮವಾಗಿ ತಮ್ಮ 41ನೇ ವಯಸ್ಸಿನಲ್ಲಿ (ಕ್ರಿ.ಶ. 1877) ಹುಬ್ಬಳ್ಳಿಗೆ ಆಗಮಿಸಿದರು. ಅಂದಿನ ಕಾಲಕ್ಕೆ ಹುಬ್ಬಳ್ಳಿಯ ಹಳೇ ಹುಬ್ಬಳ್ಳಿಯ ಹನ್ನೆರಡು ಮಠದ ಸ್ವಾಮಿಗಳು ಕೃಷ್ಣೇಂದ್ರ ಸ್ವಾಮಿಗಳ ನುಡಿಯಂತೆ ಇವರ ಮಹತ್ತ್ವವನ್ನು ಅರಿತು ಸಿದ್ಧಾರೂಢರನ್ನು ಅತ್ಯಂತ ಆದರದಿಂದ ಸ್ವಾಗತಿಸಿದರು. ನಿರಂತರ ಧ್ಯಾನ, ಶಾಸ್ತ್ರ ಪ್ರವಚನ ಮತ್ತು ನಿಜಗುಣ ಸಾಹಿತ್ಯದ ಬೋಧನೆಯ ಮೂಲಕ ಸಿದ್ಧಾರೂಢರು ಹುಬ್ಬಳ್ಳಿಯ ಜನರಲ್ಲಿ ಆಧ್ಯಾತ್ಮಿಕ ಅರಿವನ್ನು ಮೂಡಿಸಿದರು.

ಆಧ್ಯಾತ್ಮಿಕ ಕೇಂದ್ರವಾದ ಸಿದ್ಧಾಶ್ರಮ 
ಭಕ್ತರು ಸಿದ್ಧಾರೂಢರಿಗಾಗಿ ನಿರ್ಮಿಸಿದ ಸಿದ್ಧಾಶ್ರಮವು ಕಾಲಕ್ರಮೇಣ 10 ಎಕರೆ ವಿಸ್ತಾರದ ಬೃಹತ್ ಮಠವಾಗಿ ರೂಪುಗೊಂಡಿತು. ಸಿದ್ಧಾರೂಢರ ಸನ್ನಿಧಿಯಲ್ಲಿ ಅನೇಕ ಅದ್ಭುತ ಪವಾಡಗಳು ಜರುಗಿದವು. ಭಕ್ತರ ಕಷ್ಟ-ಕಾರ್ಪಣ್ಯಗಳು, ಶರಣಾಗಿ ಬಂದ ಭಕ್ತರಿಗೆ ಅನ್ನದಾಸೋಹದ ಮೂಲಕ ಹಸಿವು ನೀಗಿಸುವುದು ಮತ್ತು ತೊಂದರೆ ಕೊಟ್ಟವರಿಗೂ ಒಳಿತನ್ನೇ ಬಯಸಿ ಆಶೀರ್ವದಿಸುವ ಕರುಣೆ ಅವರದ್ದಾಗಿತ್ತು. 'ಓಂ ನಮಃ ಶಿವಾಯ' ಎಂಬ ಮಹಾ ಪಂಚಾಕ್ಷರಿ ಮಂತ್ರವನ್ನು ಯಾವುದೇ ಭೇದಭಾವವಿಲ್ಲದೆ ಸರ್ವರಿಗೂ ಬಹಿರಂಗವಾಗಿ ಬೋಧಿಸಿ ಮೋಕ್ಷಮಾರ್ಗವನ್ನು ತೋರಿಸಿದರು. ಗರಗದ ಮಡಿವಾಳಪ್ಪನವರು, ನವಲಗುಂದದ ನಾಗಲಿಂಗ ಸ್ವಾಮಿಗಳು, ಉಣಕಲ್ಲ ಸಿದ್ದಪ್ಪಜ್ಜ, ಸಂತ ಶಿಶುನಾಳ ಶರೀಫರು ಸೇರಿದಂತೆ ಮಹಾತ್ಮಾ ಗಾಂಧೀಜಿ ಹಾಗೂ ಲೋಕಮಾನ್ಯ ತಿಲಕರಂತಹ ರಾಷ್ಟ್ರೀಯ ನಾಯಕರು ಮಠಕ್ಕೆ ಭೇಟಿ ನೀಡಿ ಸಿದ್ಧಾರೂಢರ ಜೊತೆ ಸುದೀರ್ಘ ಆಧ್ಯಾತ್ಮಿಕ ಹಾಗೂ ವೈಚಾರಿಕ ಚರ್ಚೆಗಳನ್ನು ನಡೆಸಿದ್ದರು.

ನಿರಂತರ ದಿವ್ಯ ಜ್ಯೋತಿ, ತಂಬೂರಿ ನಾದ
1929 ಆಗಸ್ಟ್ 21 ರಂದು (94 ವರ್ಷಗಳ ಐಹಿಕ ಜೀವನದ ನಂತರ) ಶ್ರೀ ಸಿದ್ಧಾರೂಢರು ಶಿವಸಾನಿಧ್ಯ ಸೇರಿದರು. ಅವರ ಮಹಾಸಮಾಧಿಯ ನಂತರ, ಶ್ರೀ ಸಿದ್ಧಾರೂಢರ ಪ್ರಿಯ ಶಿಷ್ಯರಾದ ಗೋವಿಂದ ಸ್ವಾಮಿಗಳು 1929 ರ ಆಗಸ್ಟ್ 23 ರಿಂದ ಮಠದಲ್ಲಿ ನಿರಂತರವಾಗಿ ತಂಬೂರಿಯೊಂದಿಗೆ ‘ಓಂ ನಮಃ ಶಿವಾಯ’ ಮಂತ್ರ ಪಠಣವನ್ನು ಪ್ರಾರಂಭಿಸಿದರು. ಈ ಪವಿತ್ರ ನಾಮಸ್ಮರಣೆಯು ಕಳೆದ ಹಲವು ದಶಕಗಳಿಂದ 24 ಗಂಟೆಯೂ ಅವಿರತವಾಗಿ ನಡೆಯುತ್ತಲೇ ಬಂದಿದೆ. ಮಠದಲ್ಲಿ ಬೆಳಗುತ್ತಿರುವ 'ಆರೂಢ-ಜ್ಯೋತಿ' ನಂದಾದೀಪವು ಭಕ್ತರ ಬಾಳಿನಲ್ಲಿ ಎಂದೆಂದಿಗೂ ನಿರಂತರ ಬೆಳಕನ್ನು ನೀಡುತ್ತಿದೆ. ಅವರ ನಂತರ ಸಿದ್ಧಾರೂಢರ ಅಧಿಕೃತ ಉತ್ತರಾಧಿಕಾರಿಯಾಗಿ ಶ್ರೀ ಗುರುನಾಥಾರೂಢ ಸ್ವಾಮಿಗಳು (ಜನನ: 09-09-1909 ; ಲಿಂಗೈಕ್ಯ: 13-05-1962) ಮಠದ ಪೀಠವನ್ನು ಅಲಂಕರಿಸಿದರು. ಶ್ರೀ ಸಿದ್ಧಾರೂಢರು 'ಮಾತನಾಡುವ ದೇವರು' ಎನಿಸಿದರೆ, ಗುರುನಾಥಾರೂಢರು ತಮ್ಮ ಮೌನದ ಮೂಲಕವೇ ಅಭಯ ನೀಡುತ್ತ 'ಮೌನ ಬ್ರಹ್ಮ' ರೆನಿಸಿಕೊಂಡರು.

ಧಾರ್ಮಿಕ ಸೇವೆಗಳು ಮತ್ತು ಟ್ರಸ್ಟ್ ಚಟುವಟಿಕೆಗಳು
1950 ರಲ್ಲಿ ಧಾರವಾಡದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನೇತೃತ್ವದಲ್ಲಿ ಸಿದ್ಧಾರೂಢ ಮಠ ಟ್ರಸ್ಟ್ ಕಮೀಟಿ ಅಸ್ತಿತ್ವಕ್ಕೆ ಬಂದಿತು. ಇಂದು ಈ ಟ್ರಸ್ಟ್ ವತಿಯಿಂದ ತ್ರಿಕಾಲ ಅನ್ನದಾನ, ಜ್ಞಾನದಾನ ಹಾಗೂ ಆರೋಗ್ಯ ಸೇವೆಗಳು ನಿರಂತರವಾಗಿ ನಡೆಯುತ್ತಿವೆ. ವಾರ್ಷಿಕ ರಥೋತ್ಸವ, ಜಯಂತಿಗಳು, ತೆಪ್ಪದ ತೇರು, ಶಿವರಾತ್ರಿ ಮಹೋತ್ಸವ ಹಾಗೂ ಯೋಗ-ಆಧ್ಯಾತ್ಮಿಕ ಶಿಬಿರಗಳನ್ನು ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಗುತ್ತಿದೆ.

ಸಾಹಿತ್ಯಿಕ ಕೊಡುಗೆ ಮತ್ತು ಭಕ್ತರ ಶ್ರದ್ಧಾಭಕ್ತಿ
‘ಶ್ರೀ ಸಿದ್ಧಾರೂಢ ಕಥಾಮೃತ’, ‘ಕೈವಲ್ಯ ಪದ್ಧತಿ’, ‘ಸಿದ್ಧಲಕ್ಷಣ ಸಂಗ್ರಹ’, ‘ಕೈವಲ್ಯ ಕಲ್ಪವಲ್ಲರಿ’ ಮುಂತಾದ ಪ್ರಸಿದ್ಧ ಗ್ರಂಥಗಳನ್ನು ಕನ್ನಡ, ಇಂಗ್ಲಿಷ್ ಹಾಗೂ ಮರಾಠಿ ಭಾಷೆಗಳಲ್ಲಿ ಪ್ರಕಟಿಸಲಾಗಿದೆ. ಜೊತೆಗೆ ‘ಸಿದ್ಧರೂಢ ತತ್ತ್ವಾಮೃತ’ ಮಾಸಪತ್ರಿಕೆಯು ಭಕ್ತರಿಗೆ ಜ್ಞಾನದಾಸೋಹ ನೀಡುತ್ತಿದೆ. ಪ್ರತಿದಿನ ಮುಂಜಾನೆ 6:00 ಮತ್ತು ಸಾಯಂಕಾಲ 6:00 ಗಂಟೆಗೆ ಜರುಗುವ ಮಹಾಮಂಗಳಾರತಿ, ಉಭಯ ಗದ್ದುಗೆಗಳ ದರ್ಶನ, ಕೈಲಾಸ ಮಂಟಪ ಹಾಗೂ ಸಿದ್ಧಾರೂಢರು ಆಶೀರ್ವದಿಸುತ್ತಿದ್ದ ಪವಿತ್ರ ಖುರ್ಚಿಯ ದರ್ಶನದಿಂದ ಲಕ್ಷಾಂತರ ಭಕ್ತರು ಧನ್ಯತೆಯನ್ನು ಪಡೆಯುತ್ತಿದ್ದಾರೆ. ಸಿದ್ಧಾರೂಢರ ಕೃಪೆಯಿಂದ ಲಕ್ಷಾಂತರ ಕುಟುಂಬಗಳ ಬಾಳಿನಲ್ಲಿ ಶಾಂತಿ, ನೆಮ್ಮದಿ ಮತ್ತು ದಿವ್ಯ ಪ್ರಕಾಶ ಮೂಡಿದೆ.

ಒಟ್ಟಿನಲ್ಲಿ ಕರ್ನಾಟಕ ಹಲವಾರು ಸಾಧು ಸಂತರ ಪರಂಪರೆ ಮತ್ತು ಆಧ್ಯಾತ್ಮಿಕ ಕೇಂದ್ರಗಳಿಗೆ ತವರಾಗಿದೆ ಅಂದ್ರೆ  ತಪ್ಪಾಗಲ್ಲ. ಅನ್ನದಾಸೋಹ ಅಷ್ಟೇ ಅಲ್ಲದೆ, ಪ್ರಸ್ತುತ ಮಠ ಮಂದಿರಗಳು ಸಾಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ. ಉಚಿತವಾಗಿ ಶಿಕ್ಷಣ ನೀಡುವ ಮಹತ್ತರ ಕಾರ್ಯವನ್ನು ಕೈಗೊಂಡಿವೆ. ಈ ಮೂಲಕ ರಾಜ್ಯದಲ್ಲಿ ಅದೆಷ್ಟೋ ಗೌರವಾನ್ವಿತ ಹುದ್ದೆಗಳಲ್ಲಿ ಇಂದು ಮಠಗಳಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಕೆಲಸಮಾಡುತ್ತಿರುವುದೇ ಇದಕ್ಕೆ ಸಾಕ್ಷಿ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES