SOCIAL MEDIA

Newsletter

PARTNER SITES
Select Language Select State

ಶಬರಿಮಲೆ ಯಾತ್ರೆಗೆ ಆರಂಭ : ಇಂದು ಸಂಜೆಯಿಂದ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಭಕ್ತರಿಗೆ ಅವಕಾಶ

Sabarimala pilgrimage begins: ಇಂದಿನಿಂದ ಶಬರಿಮಲೆ ಯಾತ್ರೆಗೆ ಚಾಲನೆ ದೊರತಿದ್ದು ಸಂಜೆಯಿಂದಲೇ ಭಕ್ತರಿಗೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಯಾತ್ರೆಯು ಡಿ. 27ರ ವರೆಗೆ ಇರಲಿದ್ದು, ಭಕ್ತರ ಸುರಕ್ಷತೆಗಾಗಿ ಕೇರಳ ಸರ್ಕಾರ ಹಾಗೂ ತಿರುವಾಂಕೂರು ದೇವಸ್ವಂ ಮಂಡಳಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

Written By Ramya. R. Gowda
Published: Nov 16, 2026, 20:30 IST | Updated: Nov 16, 2026, 20:33 IST
Join

Sabarimala pilgrimage begins: ಇಂದಿನಿಂದ ಶಬರಿಮಲೆ ಯಾತ್ರೆಗೆ ಚಾಲನೆ ದೊರತಿದ್ದು ಸಂಜೆಯಿಂದಲೇ ಭಕ್ತರಿಗೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಯಾತ್ರೆಯು ಡಿ. 27ರ ವರೆಗೆ ಇರಲಿದ್ದು, ಭಕ್ತರ ಸುರಕ್ಷತೆಗಾಗಿ ಕೇರಳ ಸರ್ಕಾರ ಹಾಗೂ ತಿರುವಾಂಕೂರು ದೇವಸ್ವಂ ಮಂಡಳಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಕೇರಳ :  ಲಕ್ಷಾಂತರ ಅಯ್ಯಪ್ಪ ಭಕ್ತರು ಕಾತರದಿಂದ ಎದುರು ನೋಡುತ್ತಿರುವ ಐತಿಹಾಸಿಕ ಶಬರಿಮಲೆ ವಾರ್ಷಿಕ ತೀರ್ಥಯಾತ್ರೆಗೆ ಇಂದು ಸಂಜೆ ಅಧಿಕೃತವಾಗಿ ಚಾಲನೆ ಸಿಗಲಿದೆ. ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಾನದ ಗರ್ಭಗುಡಿಯ ಬಾಗಿಲು ತೆರೆಯುವ ಮೂಲಕ ಸುಮಾರು ಎರಡು ತಿಂಗಳ ಕಾಲ ನಡೆಯುವ ಸುದೀರ್ಘ ಯಾತ್ರಾ ಋತು ಆರಂಭವಾಗಲಿದೆ. ಭಕ್ತರ ಸುಗಮ ದರ್ಶನಕ್ಕಾಗಿ ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಕೇರಳ ಸರ್ಕಾರ ಹಾಗೂ ತಿರುವಾಂಕೂರು ದೇವಸ್ವಂ ಮಂಡಳಿಯು (ಟಿಡಿಬಿ) ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.


ಇಂದು ಸಂಜೆ ದೇವಾಲಯದ ಬಾಗಿಲು ತೆರೆದ ನಂತರ, ನಾಳೆ ಮುಂಜಾನೆಯಿಂದ ಭಕ್ತರಿಗೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಅವಕಾಶ ಸಿಗಲಿದೆ. ಮೊದಲ ಹಂತದ ಮಂಡಲ ಪೂಜೆ ತೀರ್ಥಯಾತ್ರೆಯು ಇಂದಿನಿಂದ ಆರಂಭವಾಗಿ ಡಿಸೆಂಬರ್ 27ರವರೆಗೆ ಮುಂದುವರಿಯಲಿದೆ. ಮಂಡಲ ಪೂಜೆಯ ಬಳಿಕ ದೇವಾಲಯದ ಬಾಗಿಲನ್ನು ತಾತ್ಕಾಲಿಕವಾಗಿ ಮುಚ್ಚಲಾಗುವುದು. ಎರಡು ದಿನಗಳ ವಿರಾಮದ ನಂತರ, ಎರಡನೇ ಹಂತದ ಮಕರವಿಳಕ್ಕು ತೀರ್ಥ ಯಾತ್ರೆಗಾಗಿ ಡಿ. 30ರಂದು ಸನ್ನಿಧಾನದ ಬಾಗಿಲು ಮತ್ತೆ ತೆರೆಯಲಿದೆ. ಈ ಯಾತ್ರೆಯ ಅತ್ಯಂತ ಪ್ರಮುಖ ಹಾಗೂ ಪವಿತ್ರ ಘಟ್ಟವಾದ ಮಕರವಿಳಕ್ಕು ದರ್ಶನವು ಜನವರಿ 14ರಂದು  ನಡೆಯಲಿದ್ದು, ಅಂದು ಲಕ್ಷಾಂತರ ಭಕ್ತರು ಸೇರುವ ನಿರೀಕ್ಷೆಯಿದೆ.


ಈ ಬಾರಿಯ ಶಬರಿಮಲೆ ಯಾತ್ರೆಯನ್ನು ಮತ್ತಷ್ಟು ವ್ಯವಸ್ಥಿತ, ಸುರಕ್ಷಿತವಾಗಿಸುವ ನಿಟ್ಟಿನಲ್ಲಿ ರಾಜ್ಯದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ ಹಾಗೂ ತಿರುವಾಂಕೂರು ದೇವಸ್ವಂ ಮಂಡಳಿ ಮಹತ್ವದ ಹೆಜ್ಜೆ ಇಟ್ಟಿವೆ. ಯಾತ್ರೆಯ ಸಂದರ್ಭದಲ್ಲಿ ಅಯ್ಯಪ್ಪ ಸನ್ನಿಧಾನಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಭಕ್ತರಿಗೂ ಭದ್ರತೆ ಒದಗಿಸುವ ಉದ್ದೇಶದಿಂದ ವಿಶೇಷ ಜೀವ ವಿಮಾ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಕಾಲ್ನಡಿಗೆಯಲ್ಲಿ ಬರುವ ಯಾತ್ರಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಮಾರ್ಗದುದ್ದಕ್ಕೂ ತುರ್ತು ವೈದ್ಯಕೀಯ ಸೇವೆಗಳು ಹಾಗೂ ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ನಿಯೋಜಿಸಲಾಗಿದೆ.

ಕಳೆದ ವರ್ಷಗಳ ಅನುಭವವನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಜನದಟ್ಟಣೆ ನಿರ್ವಹಣೆಯಲ್ಲಿ ಅಗತ್ಯ ಸುಧಾರಣೆಗಳನ್ನು ತರಲಾಗಿದೆ. ವರ್ಚುವಲ್ ಕ್ಯೂ ಬುಕಿಂಗ್ ವ್ಯವಸ್ಥೆಯನ್ನು ಮತ್ತಷ್ಟು ಸರಳಗೊಳಿಸಲಾಗಿದ್ದು, ಸ್ಪಾಟ್ ಬುಕಿಂಗ್ ಕೌಂಟರ್‌ಗಳ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ. ಪಂಪಾ, ನಿಲಕ್ಕಲ್ ಮತ್ತು ಸನ್ನಿಧಾನದಲ್ಲಿ ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿ ಗೃಹಗಳು ಹಾಗೂ ಸ್ವಚ್ಛತಾ ಕಾರ್ಯಗಳಿಗೆ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಲಾಗಿದೆ. ಭದ್ರತೆಗಾಗಿ ಸಾವಿರಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿರಂತರ ನಿಗಾ ಇಡಲಾಗುತ್ತಿದೆ.

ಶಬರಿಮಲೆಯ ಪ್ರಮುಖ ಪ್ರಸಾದವಾದ ಅರವಣ ಪಾಯಸದ ಕೊರತೆ ಉಂಟಾಗಬಹುದು ಎಂಬ ಆತಂಕವನ್ನು ಟಿಡಿಬಿ ದೂರ ಮಾಡಿದೆ. ಸನ್ನಿಧಾನದಲ್ಲಿ ಪ್ರಸಾದ ತಯಾರಿಸುವ ಘಟಕದ ನವೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ಈ ಬಾರಿ ಪಾಯಸದ ಅಭಾವ ಸೃಷ್ಟಿಯಾಗಬಹುದು ಎಂಬ ಅನುಮಾನಗಳು ಭಕ್ತರಲ್ಲಿ ಮೂಡಿದ್ದವು. ಆದರೆ, ಈ ಕುರಿತು ಸ್ಪಷ್ಟನೆ ನೀಡಿರುವ ಟಿಡಿಬಿ ಅಧ್ಯಕ್ಷ ಕೆ. ಜಯಕುಮಾರ್, ಭಕ್ತರ ದರ್ಶನಕ್ಕೆ ದೇವಾಲಯ ತೆರೆಯುವ ಮುನ್ನವೇ 50 ಲಕ್ಷ ಟಿನ್‌ಗಳಷ್ಟು ಅರವಣ ಪಾಯಸವನ್ನು ಈಗಾಗಲೇ ತಯಾರಿಸಿ ದಾಸ್ತಾನು ಮಾಡಲಾಗಿದೆ. ಯಾತ್ರಾರ್ಥಿಗಳಿಗೆ ಪ್ರಸಾದ ವಿತರಣೆಯಲ್ಲಿ ಯಾವುದೇ ರೀತಿಯ ಕೊರತೆಯಾಗದಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಭರವಸೆ ನೀಡಿದ್ದಾರೆ. ಒಟ್ಟಾರೆಯಾಗಿ, ಶರಣು ಘೋಷಗಳೊಂದಿಗೆ ಶಬರಿಮಲೆ ಯಾತ್ರೆಗೆ ಭವ್ಯ ಸ್ವಾಗತ ಕೋರಲು ಆಡಳಿತ ಮಂಡಳಿ ಸಜ್ಜಾಗಿದೆ.

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ZEENEWS TRENDING STORIES