SOCIAL MEDIA

Newsletter

PARTNER SITES
Select Language Select State

ಗಣೇಶನ ಬೆನ್ನಲ್ಲೇ ಧರೆಗೆ 'ಜೋಕುಮಾರ'ನ ಆಗಮನ: ವೈಶಿಷ್ಟ್ಯಪೂರ್ಣ ಹಬ್ಬದ ಹಿನ್ನೆಲೆ ನಿಮ್ಗೆ ಗೊತ್ತೆ?

ಅದ್ಧೂರಿಯಾಗಿ ಗಣೇಶ ಚತುರ್ಥಿ ಮುಗಿದ ನಂತರ 'ಜೋಕುಮಾರಸ್ವಾಮಿ' ಪೂಜೆ ಪ್ರಾರಂಭವಾಗುತ್ತದೆ. ಗಣಪತಿಯ ವಿಸರ್ಜನೆಯ ಬಳಿಕ ಬರುವ ಜೋಕುಮಾರಸ್ವಾಮಿಯು ಧಾರಾಕಾರ ಮಳೆಯನ್ನು ತಂದು, ನಾಡಿನ ಕಷ್ಟ-ಕಾರ್ಪಣ್ಯಗಳನ್ನು ಹೋಗಲಾಡಿಸಿ ಸಮೃದ್ಧಿ ನೀಡುತ್ತಾನೆ ಎಂಬುದು ಜನಪದರ ನಂಬಿಕೆ.. ಹಾಗಿದ್ರೆ ಯಾರು ಈ ಜೋಕುಮಾರಸ್ವಾಮಿ.. ಇವರ ಹಿನ್ನೆಲೆ ಏನು..? ಬನ್ನಿ ತಿಳಿಯೋಣ..

Reported By Krishna NK Written By Krishna NK
Published: Sep 14, 2026, 06:11 PM IST | Updated: Sep 17, 2026, 03:21 PM IST
Image Credit: history of Jokumaraswamy festival
Join

History of Jokumaraswamy Festival : ಉತ್ತರ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಗಣೇಶ ಚತುರ್ಥಿಯ ಸಡಗರ ಮುಗಿಯುತ್ತಿದ್ದಂತೆಯೇ ಮತ್ತೊಂದು ಸಾಂಪ್ರದಾಯಿಕ ಹಾಗೂ ವೈಶಿಷ್ಟ್ಯಪೂರ್ಣ ಆಚರಣೆ ಪ್ರಾರಂಭವಾಗುತ್ತದೆ. ಅದೇ 'ಜೋಕುಮಾರಸ್ವಾಮಿ'ಯ ಪೂಜೆ. ವಿಘ್ನನಿವಾರಕ ಗಣಪತಿಯನ್ನು ವೈಭವದಿಂದ ವಿಸರ್ಜನೆ ಮಾಡಿದ ನಂತರ ಜನಪದರ ಮನೆಮನಗಳಲ್ಲಿ ಹುಟ್ಟುವ ಜೋಕುಮಾರ ಸ್ವಾಮಿಯು ಮಳೆಯನ್ನು ತರುವುದರ ಜೊತೆಗೆ, ಸಮಾಜದ ಕಷ್ಟ-ಕಾರ್ಪಣ್ಯಗಳನ್ನು ಮತ್ತು ಕೆಟ್ಟ ಶಕ್ತಿಗಳನ್ನು ಹೋಗಲಾಡಿಸಿ ನಾಡಿಗೆ ಸುಖ, ಶಾಂತಿ ಹಾಗೂ ಸಮೃದ್ಧಿಯನ್ನು ನೀಡುತ್ತಾನೆ ಎಂಬುದು ರೈತಾಪಿ ವರ್ಗ ಹಾಗೂ ಜನಪದರ ದೃಢ ನಂಬಿಕೆಯಾಗಿದೆ. ಪ್ರಕೃತಿ, ಕೃಷಿ ಮತ್ತು ಮಾನವ ಜೀವಸಂಕುಲದ ನಡುವಿನ ನಿಕಟ ಸಂಬಂಧವನ್ನು ಸಾರುವ ಈ ಹಬ್ಬವು ಉತ್ತರ ಕರ್ನಾಟಕದ ಜಾನಪದ ಸಂಸ್ಕೃತಿಯ ಅನನ್ಯ ಸಂಕೇತವಾಗಿದೆ.

ಪಾರ್ವತಿ ನಂದನ ಗಣೇಶನ ಜನನ 
ಈ ಆಚರಣೆಯ ಮೂಲವನ್ನು ಅರ್ಥೈಸಿಕೊಳ್ಳಲು ಶಿವ ಕುಟುಂಬದ ಪೌರಾಣಿಕ ಹಿನ್ನೆಲೆಯನ್ನು ತಿಳಿಯುವುದು ಅಗತ್ಯವಾಗಿದೆ. ಶಿವಪುರಾಣದ ಪ್ರಕಾರ, ಒಮ್ಮೆ ಪಾರ್ವತಿ ದೇವಿಯು ಸ್ನಾನಕ್ಕೆ ತೆರಳುವ ಮುನ್ನ ತನ್ನ ಶರೀರದಲ್ಲಿದ್ದ ಮಣ್ಣು ಹಾಗೂ ಗಂಧದ ಲೇಪನವನ್ನು (ಸ್ವೇದ) ಸಂಗ್ರಹಿಸಿ, ಅದಕ್ಕೊಂದು ಸುಂದರ ಬಾಲಕನ ಆಕಾರ ಕೊಟ್ಟು ಅದಕ್ಕೆ ಪ್ರಾಣಪ್ರತಿಷ್ಠೆ ಮಾಡಿದಳು. ಆ ಬಾಲಕನೇ ಗಣಪತಿ. ಪಾರ್ವತಿಯು ತಾನು ಸ್ನಾನಗೃಹದಲ್ಲಿದ್ದಾಗ ಯಾರನ್ನೂ ಒಳಗೆ ಬಿಡದಂತೆ ಬಾಲಕ ಗಣೇಶನಿಗೆ ಗೃಹಕಾವಲು ಕಾಯಲು ಆದೇಶಿಸಿದಳು. ಅದೇ ಸಮಯದಲ್ಲಿ ಅಲ್ಲಿಗೆ ಆಗಮಿಸಿದ ಪರಮೇಶ್ವರನನ್ನು ಗಣೇಶನು ಒಳಗೆ ಹೋಗದಂತೆ ತಡೆದು ನಿಲ್ಲಿಸಿದನು. ಇದರಿಂದ ತೀವ್ರ ಕೋಪಗೊಂಡ ಶಿವನು ತನ್ನ ತ್ರಿಶೂಲದಿಂದ ಬಾಲಕನ ಶಿರಚ್ಛೇದ ಮಾಡಿದನು. ತರುವಾಯ ಸತ್ಯವನ್ನರಿತ ಪಾರ್ವತಿಯು ಶೋಕಸಾಗರದಲ್ಲಿ ಮುಳುಗಿದಾಗ, ಅವಳನ್ನು ಸಮಾಧಾನಪಡಿಸಲು ಶಿವನು ಉತ್ತರಕ್ಕೆ ಶಿರವಿಟ್ಟು ಮಲಗಿದ್ದ ಆನೆಯ ಮರಿಯ ತಲೆಯನ್ನು ತರಿಸಿ ಬಾಲಕನ ಧಡಕ್ಕೆ ಜೋಡಿಸಿ ಪುನರ್ಜೀವನ ನೀಡಿದನು. ಹೀಗೆ 'ಗಜಾನನ'ನಾಗಿ ಹುಟ್ಟಿದ ಗಣೇಶನು ಸಕಲ ದೇವತೆಗಳಿಗಿಂತ ಮೊದಲು ಪೂಜಿಸಲ್ಪಡುವ ಅಗ್ರಪೂಜಿತನಾದನು.

ಕೈಲಾಸದಿಂದ ಧರೆಗೆ ಬಂದ ಶಿವಪುತ್ರ ಷಣ್ಮುಖ
ಪಾರ್ವತಿ ಪುತ್ರ ಗಣಪತಿಯು ಭಾದ್ರಪದ ಮಾಸದಲ್ಲಿ ಭೂಲೋಕಕ್ಕೆ ಬಂದು ಜನರ ಭಕ್ತಿ ಮತ್ತು ಚತುರ್ಥಿಯ ನೈವೇದ್ಯಗಳನ್ನು ಸ್ವೀಕರಿಸಿ ಕೈಲಾಸಕ್ಕೆ ಹಿಂತಿರುಗಿದ ಬಳಿಕ, ಶಿವನ ಕಿರಿಯ ಮಗ ಕುಮಾರಸ್ವಾಮಿ ಅಥವಾ ಷಣ್ಮುಖನು ಧರೆಗೆ ಇಳಿದು ಬರುತ್ತಾನೆ. ಈ ಶಿವಪುತ್ರನೇ ಜನಪದರ ಸಾಂಸ್ಕೃತಿಕ ಲೋಕದಲ್ಲಿ 'ಜೋಕುಮಾರ' ಎಂದು ಪ್ರಸಿದ್ಧನಾಗಿದ್ದಾನೆ. ಲೋಕಪ್ರಭುವಾದ ಶಿವನ ಹಿರಿಯ ಮಗ ಗಣೇಶನು ಪ್ರಭುತ್ವ ಹಾಗೂ ಶಿಷ್ಟ ದೇವತೆಯ ಪ್ರತೀಕವಾದರೆ, ಕಿರಿಯ ಮಗ ಕುಮಾರಸ್ವಾಮಿಯು ತನ್ನ ಜನಪ್ರಿಯ ಲೋಕಾನುಗ್ರಹ ಬುದ್ಧಿಯಿಂದ ಜನಪದರ ನೆಚ್ಚಿನ ದೈವವಾದನು. ಮನುಷ್ಯರ ಕಷ್ಟಗಳಿಗೆ ಕರಗಿ ಶಿವನ ಕಾರುಣ್ಯವನ್ನು ಧರೆಗೆ ಉಣಬಡಿಸಿದ ಈ ದೇವನನ್ನು ನಾಡಿನ ಜನಪದರು ಅತ್ಯಂತ ಪ್ರೀತಿಯಿಂದ 'ಮುದ್ದಿನ ಕುಮಾರಸ್ವಾಮಿ' ಅಥವಾ 'ಜೋಕುಮಾರ' ಎಂದು ಕರೆದು ಗೌರವಿಸುತ್ತಾರೆ.

ವಿಶಿಷ್ಟ ಆಹಾರ ಸಂಸ್ಕೃತಿ ಮತ್ತು ಆಚರಣೆಯ ಮಹಿಳೆಯರು
ಗಣಪತಿಯು ಕಡುಬು, ಮೋದಕ ಹಾಗೂ ಸ್ವಾದಿಷ್ಟ ಭೋಜನವನ್ನು ಸವಿದು ಹೋದರೆ, ಜೋಕುಮಾರಸ್ವಾಮಿ ಮನೆ ಮನೆಗೂ ಸುತ್ತಿ, ಜನರು ಅನುಭವಿಸುವ ನೋವು-ನಲವುಗಳನ್ನು ಸ್ವತಃ ಕಣ್ಣಾರೆ ಕಂಡು ಅದನ್ನು ತಂದೆಯಾದ ಶಿವನಿಗೆ ತಲುಪಿಸುವ ಕೆಲಸ ಮಾಡುತ್ತಾನೆ. ಆದ್ದರಿಂದ ಜೋಕುಮಾರನಿಗೆ ಯಾವುದೇ ವೈಭವದ ಪಕ್ವಾನ್ನಗಳು ಬೇಕಿಲ್ಲ. ಬದಲಿಗೆ ಗ್ರಾಮೀಣ ಭಾಗದ ದೈನಂದಿನ ಸರಳ ಆಹಾರವಾದ ನುಚ್ಚು, ಪುಂಡಿಪಲ್ಯ, ಕಟಕು ರೊಟ್ಟಿ, ಹಸಿಮೆಣಸಿನಕಾಯಿ ಹಾಗೂ ಉಪ್ಪು ಆತನಿಗೆ ಮುಖ್ಯ ನೈವೇದ್ಯವಾಗಿದೆ. ಈ ವಿಶಿಷ್ಟ ಆಚರಣೆಯನ್ನು ಮುಖ್ಯವಾಗಿ ವಾಲ್ಮೀಕಿ, ಕೋಲಕಾರ, ಕಬ್ಬಲಿಗ ಹಾಗೂ ಅಂಬಿಗರ ಜನಾಂಗದ ಮಹಿಳೆಯರು ಅತ್ಯಂತ ಭಕ್ತಿ-ಶ್ರದ್ಧೆಗಳಿಂದ ಉಸ್ತುವಾರಿ ವಹಿಸಿ ನಡೆಸಿಕೊಂಡು ಹೋಗುತ್ತಾರೆ.

ಮಣ್ಣಿನ ಮೂರ್ತಿಯ ನಿರ್ಮಾಣ ಮತ್ತು ಗೌಡರ ಮನೆ ಪ್ರವೇಶ
ಜೋಕುಮಾರಸ್ವಾಮಿಯ ಮೂರ್ತಿಯು ಮಣ್ಣಿನಿಂದ ಅತ್ಯಂತ ಚೆಲುವಿನಿಂದ ತಿದ್ದಿ ತೀಡಿದ ಸುಂದರ ವಿಗ್ರಹವಾಗಿರುತ್ತದೆ. ಮೂರ್ತಿಯನ್ನು ಸಿದ್ಧಪಡಿಸಿದ ಶಿಲ್ಪಿಗೆ ಸೂಕ್ತ ಗೌರವಧನ, ಎಲೆ-ಅಡಿಕೆ ಹಾಗೂ ಉಲುಪಿ ಅಂದರೆ ಅಕ್ಕಿ, ಬೇಳೆ, ಬೆಲ್ಲ ಮತ್ತು ಹಿಟ್ಟು ನೀಡಿ ಪೂಜಿಸಲಾಗುತ್ತದೆ. ನಂತರ ಆ ಮೂರ್ತಿಯನ್ನು ಬುಟ್ಟಿಯಲ್ಲಿಟ್ಟುಕೊಂಡು ಮೊದಲು ಊರಿನ ಗೌಡರ ಮನೆಗೆ ಕೊಂಡೊಯ್ಯಲಾಗುತ್ತದೆ. ಗೌಡರ ಮನೆಯಲ್ಲಿ ಸಾಂಪ್ರದಾಯಿಕ ಪೂಜೆ ನೆರವೇರಿದ ನಂತರ, ಅವರು ಕೊಡುವ ಬಿಳಿ ಬಟ್ಟೆಯನ್ನು ಮೂರ್ತಿಗೆ ಹೊದಿಸಿ, ಬಾಯಿಗೆ ಬೆಣ್ಣೆಯನ್ನು ಸವರಲಾಗುತ್ತದೆ. ಇಲ್ಲಿಂದ ಮುಂದಿನ ಏಳು ದಿನಗಳ ಕಾಲ ಜೋಕುಮಾರನು ಊರಿನ ಪ್ರತಿಯೊಂದು ಮನೆಗೂ ಪ್ರಯಾಣ ಬೆಳೆಸಿ ಜನರಿಗೆ ದರ್ಶನ ನೀಡುತ್ತಾನೆ.

ಜನಪದ ಗೀತೆಗಳ ಸಡಗರ ಮತ್ತು ಧಾನ್ಯ ನೀಡುವ ಸಂಪ್ರದಾಯ
ಬೇವಿನ ತಪ್ಪಲಿನಿಂದ ತುಂಬಿದ ಬುಟ್ಟಿಯಲ್ಲಿ ಜೋಕುಮಾರನ ಮೂರ್ತಿಯನ್ನು ಇಟ್ಟುಕೊಂಡು ಸಾಗುವ ಮಹಿಳೆಯರು, ಪ್ರತಿ ಮನೆಯ ಅಂಗಳ ಅಥವಾ ಕಟ್ಟೆಯ ಮೇಲೆ ಮೂರ್ತಿಯನ್ನಿಟ್ಟು ಜೋಕುಮಾರನಿಗೆ ಸಂಬಂಧಿಸಿದ ರಸವತ್ತಾದ ಜನಪದ ಹಾಡುಗಳನ್ನು ಹಾಡುತ್ತಾರೆ. ಈ ಹಾಡುಗಳಲ್ಲಿ ಜೋಕುಮಾರನ ಜನನ, ಆತನ ಸಾಹಸ, ಉಡಾಳತನ, ಆತನ ಕೊಲೆ ಹಾಗೂ ಕೊಲೆಯ ನಂತರ ಧರೆಗೆ ಪ್ರಾಪ್ತಿಯಾಗುವ ಸಮೃದ್ಧಿಯ ವಿಷಯಗಳು ಅಡಗಿರುತ್ತವೆ. ಹಾಡಿನ ಕೊನೆಯಲ್ಲಿ "ಅಡ್ಡಡ್ಡ ಮಳೆಯಾಗಿ, ಗೊಡ್ಡೆಮ್ಮೆ ಹೈನಾಗಿ" ಊರಿಗೆಲ್ಲಾ ಒಳಿತಾಗಲಿ ಎಂದು ಹಾರೈಸಲಾಗುತ್ತದೆ. ಮನೆಯವರು ನೀಡುವ ಜೋಳಕ್ಕೆ ಪ್ರತಿಯಾಗಿ ಮಹಿಳೆಯರು ತಮ್ಮ ಮೊರದಲ್ಲಿದ್ದ ಐದಾರು ಜೋಳದ ಕಾಳುಗಳು, ಬೇವಿನ ಸೊಪ್ಪು, ಸ್ವಲ್ಪ ನುಚ್ಚು ಮತ್ತು ಬೇವಿನ ಎಲೆಯಲ್ಲಿ ತಯಾರಿಸಿದ ಕಾಡಿಗೆಯನ್ನು (ಕಪ್ಪು) ನೀಡುತ್ತಾರೆ.

ರೈತರ ಕೃಷಿ ನಂಬಿಕೆಗಳು ಮತ್ತು ದೃಷ್ಟಿ ಪರಿಹಾರ
ಮನೆಯವರು ಪಡೆದ ಜೋಳದ ಕಾಳು ಮತ್ತು ಬೇವಿನ ಸೊಪ್ಪನ್ನು ತಮ್ಮ ಧಾನ್ಯದ ಸಂಗ್ರಹಾಗಾರದಲ್ಲಿ ಅತ್ಯಂತ ಭಕ್ತಿಯಿಂದ ಇಡುತ್ತಾರೆ. ಹೀಗೆ ಮಾಡುವುದರಿಂದ ಮುಂದಿನ ಬೆಳೆಗಳು ಹುಲುಸಾಗಿ ಬೆಳೆಯುತ್ತವೆ ಮತ್ತು ಧಾನ್ಯಗಳಿಗೆ ಯಾವುದೇ ರೀತಿಯ ಹುಳು-ಹುಪ್ಪಟೆಗಳ ಬಾಧೆ ತಗುಲುವುದಿಲ್ಲ ಎಂಬುದು ರೈತರ ಬಲವಾದ ನಂಬಿಕೆಯಾಗಿದೆ. ಇನ್ನು ಬೇವಿನ ಎಲೆಯ ಕಾಡಿಗೆಯನ್ನು ಮನೆಯ ಸಣ್ಣ ಮಕ್ಕಳ ಹಣೆಗೆ ಹಚ್ಚುವುದರಿಂದ ಕೆಟ್ಟ ದೃಷ್ಟಿ ಬೀಳುವುದಿಲ್ಲ ಮತ್ತು ಆರೋಗ್ಯ ವೃದ್ಧಿಯಾಗುತ್ತದೆ ಎಂಬುದು ಜನಪದರ ವಿಶ್ವಾಸವಾಗಿದೆ.

ಏಳು ದಿನಗಳ ಪೂಜೆಯ ನಂತರ ಮೂರ್ತಿಯನ್ನು ಹೊತ್ತ ಮಹಿಳೆಯರು ತಲೆಗೆ ನೀರು ಹಾಕಿಕೊಂಡು ಪವಿತ್ರ ಸ್ನಾನ ಮಾಡುತ್ತಾರೆ. ಜೋಕುಮಾರನ ವಿಸರ್ಜನೆಯ ನಂತರದ ಮೂರು ದಿನಗಳ ಕಾಲ ಊರಿನ ಯಾವ ಮಡಿವಾಳರೂ (ಅಗಸರು) ಬಟ್ಟೆಗಳನ್ನು ಒಗೆಯುವಂತಿಲ್ಲ ಎಂಬ ಕಟ್ಟುನಿಟ್ಟಿನ ನಿಯಮವಿದೆ. ಜೋಕುಮಾರನನ್ನು ವಿಸರ್ಜಿಸಿದ ಸ್ಥಳದಲ್ಲಿ ಕಲ್ಲನ್ನಿಟ್ಟು ಪೂಜಿಸಿ, ಎಡೆ ತೋರಿಸಿ 'ದಿನ' ಮಾಡುವ ಕಾರ್ಯ ಮುಗಿದ ನಂತರವೇ ಗ್ರಾಮಸ್ಥರು ತಮ್ಮ ದಿನನಿತ್ಯದ ಕಾಯಕಗಳನ್ನು ಪುನರಾರಂಭಿಸುತ್ತಾರೆ.

ಏಳು ದಿನಗಳ ಕಾಲ ಊರನ್ನೆಲ್ಲ ಸುತ್ತುವ ಜೋಕುಮಾರನಿಗೆ ಸಂಬಂಧಿಸಿದಂತೆ ಅನೇಕ ರೋಚಕ ಜನಪದ ಕಥೆಗಳು ಪ್ರಚಲಿತದಲ್ಲಿವೆ. ಹುಣ್ಣಿಮೆಯ ಹಿಂದಿನ ರಾತ್ರಿ ಜೋಕುಮಾರನ ತಲೆಯನ್ನು ಒಡೆದು ಹಳ್ಳ ಅಥವಾ ಊರಿನ ಗಡಿಯಲ್ಲಿ ಇಡುವ ವಿಶಿಷ್ಟ ಪದ್ಧತಿ ಇಂದಿಗೂ ಜಾರಿಯಲ್ಲಿದೆ. ಉತ್ತರ ಕರ್ನಾಟಕದ ಪ್ರಮುಖ ಭಾಗಗಳಲ್ಲಿ ಈ ಆಚರಣೆಯನ್ನು ಪ್ರತಿ ವರ್ಷ ಅತ್ಯಂತ ಸಂಭ್ರಮದಿಂದ ಮುಂದುವರಿಸಿಕೊಂಡು ಬರಲಾಗಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES