SOCIAL MEDIA

Newsletter

PARTNER SITES
Select Language Select State

ಇಂದ್ರನ ಅಹಂಕಾರ, ವಿಷ್ಣುವಿನ ಲೀಲೆ..! ಲಕ್ಷ್ಮಿ ದೇವಿಯ ಜನ್ಮದ ಹಿಂದಿದೆ ರೋಚಕ ಕಥೆ

ದೀಪಗಳ ಹಬ್ಬ ದೀಪಾವಳಿಗೆ ಕೆಲವೇ ದಿನಗಳು ಬಾಕಿ ಇವೆ. ಈ ಪವಿತ್ರ ದಿನದಂದು ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ಮಹಾಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಅಂದಹಾಗೆ.. ಶ್ರೀ ಲಕ್ಷ್ಮಿ ದೇವಿಯ ಜನ್ಮ ರಹಸ್ಯದ ಕುರಿತು ಅನೇಕ ಜನರಿಗೆ ತಿಳಿದಿಲ್ಲ. ಈ ತಾಯಿ ಹುಟ್ಟಿನ ಹಿಂದೆ ದೇವತೆಗಳ ರಾಜ ಇಂದ್ರನಿಗೆ ಒದಗಿದ ಶಾಪ, ವಿಷ್ಣುವಿನ ಲೀಲೆ ಅಡಗಿದೆ.. ಸಂಪೂರ್ಣ ವಿವರ ಇಲ್ಲಿದೆ ನೋಡಿ.

Written By Krishna NK
Published: Nov 05, 2026, 20:18 IST | Updated: Nov 05, 2026, 20:20 IST
Image Credit: goddes lakshmi birth
Join

Born for Goddess Mahalakshmi : ಹಿಂದೂ ಧರ್ಮದಲ್ಲಿ ಲಕ್ಷ್ಮಿ ದೇವಿಯನ್ನು ಧನ, ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾಗಿ ವಿಶೇಷವಾಗಿ ಪೂಜಿಸಲಾಗುತ್ತದೆ. ನಮ್ಮ ಜೀವನದಲ್ಲಿ ಸುಖ-ಶಾಂತಿ ನೆಲೆಸಲು ಆಕೆಯ ಕೃಪೆ ಬೇಕೆಬೇಕು. ಆದರೆ, ಈ ಧನದೇವತೆ ಲಕ್ಷ್ಮಿ ದೇವಿಯ ಜನನ ಹೇಗೆ ಆಯ್ತು ಎಂಬ ವಿಚಾರ ನಿಮಗೆ ತಿಳಿದಿದೆಯೇ? ಈ ಕಥೆಯ ಹಿಂದೆ ದೇವತೆಗಳ ರಾಜ ಇಂದ್ರನಿಗೆ ಸಿಕ್ಕ ಶಾಪ ಹಾಗೂ ಮಹಾವಿಷ್ಣುವಿನ ಲೀಲೆ ಅಡಗಿದೆ... ರೋಚಕ ಕಥೆ ಇಲ್ಲಿದೆ..

ದುರ್ವಾಸ ಮುನಿಗಳ ಶಾಪ ಮತ್ತು ದೇವಲೋಕದ ಸಂಕಷ್ಟ
ಒಮ್ಮೆ ದೂರ್ವಾಸ ಋಷಿಗಳು ಭಗವಾನ್ ಶಿವನ ದರ್ಶನ ಪಡೆದು ಕೈಲಾಸ ಪರ್ವತದಿಂದ ಹಿಂದಿರುಗುತ್ತಿದ್ದಾಗ, ಶಿವನು ಅವರಿಗೆ ದೈವಿಕ ಮಾಲೆಯನ್ನು ಉಡುಗೊರೆಯಾಗಿ ನೀಡಿದ್ದನು. ಮಾರ್ಗಮಧ್ಯೆ ದುರ್ವಾಸ ಮುನಿಗಳಿಗೆ ದೇವತೆಗಳ ರಾಜನಾದ ಇಂದ್ರದೇವ ಎದುರಾದ. ಮುನಿಗಳು ತಾವು ತಂದಿದ್ದ ಪವಿತ್ರ ಮಾಲೆಯನ್ನು ಇಂದ್ರನಿಗೆ ನೀಡಿದರು. ಆರಂಭದಲ್ಲಿ ಅದನ್ನು ಗೌರವದಿಂದ ಸ್ವೀಕರಿಸಿದ ಇಂದ್ರದೇವ, ನಂತರ ಆ ದೈವಿಕ ಮಾಲೆಯನ್ನು ತನ್ನ ಐರಾವತ ಆನೆಯ ತಲೆಯ ಮೇಲೆ ಇಟ್ಟನು. ಆದರೆ ಮದವೇರಿದ್ದ ಐರಾವತ ಆನೆಯು ಆ ಮಾಲೆಯನ್ನು ಕೆಳಗೆ ಹಾಕಿ ಮುರಿದುಹಾಕಿತು.

ಇದರಿಂದ ತೀವ್ರ ಕೋಪಗೊಂಡ ದುರ್ವಾಸ ಮುನಿಗಳು, "ನಿನ್ನ ಅಹಂಕಾರದಿಂದ ದೈವಿಕ ಮಾಲೆಗೆ ಅಪಮಾನ ಮಾಡಿದೆ. ಹೀಗಾಗಿ ನಿನ್ನ ಸಮೃದ್ಧಿ, ಸಂಪತ್ತು ಆದಷ್ಟು ಬೇಗ ನಾಶವಾಗಲಿ ಮತ್ತು ಲಕ್ಷ್ಮಿ ದೇವಿಯು ನಿನ್ನಿಂದ ದೂರಾಗಲಿ" ಎಂದು ಇಂದ್ರನಿಗೆ ಉಗ್ರ ಶಾಪವನ್ನು ನೀಡಿದರು.

ದೇವಲೋಕವನ್ನು ತೊರೆದ ಲಕ್ಷ್ಮಿ ದೇವಿ
ಮುನಿಗಳ ಶಾಪದ ಪ್ರಭಾವದಿಂದ ಲಕ್ಷ್ಮಿ ದೇವಿಯು ದೇವಲೋಕದಿಂದ ಮರೆಯಾಗಿ ಸಾಗರ ಸೇರಿದಳು. ಲಕ್ಷ್ಮಿ ದೇವಿ ಕಣ್ಮರೆಯಾಗುತ್ತಿದ್ದಂತೆ ದೇವರು ಮತ್ತು ದೇವತೆಗಳ ಶಕ್ತಿಯು ಸಂಪೂರ್ಣವಾಗಿ ಕುಂದಿತು. ಈ ದುಸ್ಥಿತಿಯ ಲಾಭ ಪಡೆದ ರಾಕ್ಷಸರು ದೇವತೆಗಳ ಮೇಲೆ ಯುದ್ಧ ಸಾರಿ, ಸ್ವರ್ಗದ ಮೇಲೆ ತಮ್ಮ ಹಿಡಿತ ಸಾಧಿಸಿದರು. ಅಸಹಾಯಕರಾದ ದೇವತೆಗಳು ಬ್ರಹ್ಮ ದೇವರ ಬಳಿಗೆ ತೆರಳಿ ತಮ್ಮ ಸಮಸ್ಯೆಯನ್ನು ತೋಡಿಕೊಂಡರು. ಆಗ ಬ್ರಹ್ಮದೇವನು, ಕಳೆದುಕೊಂಡ ಶಕ್ತಿಯನ್ನು ಮರಳಿ ಪಡೆಯಲು ಸಮುದ್ರ ಮಂಥನ ಮಾಡುವುದೊಂದೇ ಮಾರ್ಗ ಎಂದು ಸಲಹೆ ನೀಡಿದನು.

ಸಮುದ್ರ ಮಂಥನ ಮತ್ತು ಲಕ್ಷ್ಮಿ ದೇವಿ ಜನನ
ಬ್ರಹ್ಮ ದೇವರ ಸಲಹೆಯಂತೆ ದೇವರು ಮತ್ತು ರಾಕ್ಷಸರು ಒಟ್ಟಾಗಿ ಸಮುದ್ರ ಮಂಥನ ಮಾಡಲು ನಿರ್ಧರಿಸಿದರು. ವಾಸುಕಿ ನಾಗನನ್ನು ಹಗ್ಗವನ್ನಾಗಿ ಮತ್ತು ಮಂದರಾಚಲ ಪರ್ವತವನ್ನು ಕಡಗೋಲಾಗಿ ಬಳಸಿಕೊಂಡು ಸಮುದ್ರವನ್ನು ಕಡೆಯಲು ಆರಂಭಿಸಿದರು. ಪರ್ವತವು ಸಮುದ್ರದಲ್ಲಿ ಮುಳುಗದಂತೆ ತಡೆಯಲು ಮಹಾವಿಷ್ಣುವು ಕೂರ್ಮ (ಆಮೆ) ಅವತಾರ ತಾಳಿ ತನ್ನ ಬೆನ್ನಿನ ಮೇಲೆ ಪರ್ವತವನ್ನು ಹೊತ್ತುಕೊಂಡನು.

ಹೀಗೆ ಸಾಗರ ಮಂಥನ ಮುಂದುವರಿದಂತೆ ಚಂದ್ರ, ಕಾಮಧೇನು, ಐರಾವತ ಮತ್ತು ಕೊನೆಗೆ ಅಮೃತ ಸೇರಿದಂತೆ ಅನೇಕ ದಿವ್ಯ ವಸ್ತುಗಳು ಹೊರಬಂದವು. ಇವುಗಳ ಜೊತೆಜೊತೆಗೆ ಅದ್ಭುತ ಸೌಂದರ್ಯದ ಗಣಿಯಾದ ಲಕ್ಷ್ಮಿ ದೇವಿಯು ಸಮುದ್ರದಿಂದ ಹೊರಬಂದಳು. ಅವಳ ದಿವ್ಯ ಕಾಂತಿ ಮತ್ತು ಸೌಂದರ್ಯವು ಅಲ್ಲಿ ಸೇರಿದ್ದ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿತು. ಮಂಥನದ ವೇಳೆ ಪ್ರತ್ಯಕ್ಷಳಾದ ಲಕ್ಷ್ಮಿಯು ಮಹಾವಿಷ್ಣುವಿನ ದೈವಿಕ ರೂಪದಿಂದ ಆಕರ್ಷಿತಳಾಗಿ, ಅಲ್ಲೇ ಅವನನ್ನು ತನ್ನ ಪತಿಯಾಗಿ ಆರಿಸಿಕೊಂಡಳು. ತಾನೇ ಸ್ವತಃ ವಿಷ್ಣುವಿಗೆ ಮಾಲೆ ಹಾಕಿ ವರಿಸಿದಳು.

'ಲಕ್ಷ್ಮಿ' ಪದದ ಅರ್ಥವೇನು?
ಸಂಸ್ಕೃತದ "ಲಕ್ಷ್ಯ" ಎಂಬ ಪದದಿಂದ 'ಲಕ್ಷ್ಮಿ' ಎಂಬ ಹೆಸರು ಬಂದಿದೆ. ಇದರರ್ಥ ಸ್ಪಷ್ಟ ಗುರಿ ಮತ್ತು ಸಮೃದ್ಧಿ ಎಂದಾಗುತ್ತದೆ. ಕೇವಲ ಹಣಕಾಸಷ್ಟೇ ಅಲ್ಲದೆ, ಶುದ್ಧತೆ, ಔದಾರ್ಯ, ಸೌಂದರ್ಯ ಮತ್ತು ಅನುಗ್ರಹದ ಪ್ರತೀಕವಾಗಿ ಲಕ್ಷ್ಮಿ ದೇವಿಯನ್ನು ಕಾಣಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ಈಕೆಯನ್ನು ಕೇವಲ ದೇವತೆಯಾಗಿ ನೋಡದೆ ಜಗತ್ತಿನ ತಾಯಿಯಂತೆ ಭಾವಿಸಿ "ಲಕ್ಷ್ಮಿ ಮಾತಾ" ಎಂದು ಭಕ್ತಿಯಿಂದ ಪೂಜಿಸಲಾಗುತ್ತದೆ. ಈಕೆಯ ಆರಾಧನೆಯು ಪ್ರಾಚೀನ ಕಾಲದಿಂದಲೂ ಭಾರತೀಯ ಸಂಸ್ಕೃತಿಯ ಅತ್ಯಂತ ಪ್ರಮುಖ ಭಾಗವಾಗಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES